More

    45 ವರ್ಷ ಮೇಲ್ಪಟ್ಟವರಿಗೆ ಕೋವ್ಯಾಕ್ಸಿನ್

    ಶಿರಹಟ್ಟಿ: ರಾಜ್ಯದಲ್ಲಿ ಕರೊನಾ ಎರಡನೇ ಅಲೆ ತೀವ್ರತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಮುಂಜಾಗ್ರತೆ ಕ್ರಮ ಕೈಗೊಂಡಿದೆ. ಪಟ್ಟಣ ಹಾಗೂ ಗ್ರಾಮಾಂತರ ಪ್ರದೇಶದ 45 ವರ್ಷ ಮೇಲ್ಪಟ್ಟ ಪ್ರತಿ ನಾಗರಿಕನಿಗೆ ಕರೊನಾ ಲಸಿಕೆ ನೀಡಲಾಗುತ್ತಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ಸುಭಾಸ ದೈಗೊಂಡ ಹೇಳಿದರು.

    ಪಟ್ಟಣದ ತಾಪಂ ಸಭಾ ಭವನದಲ್ಲಿ ಗುರುವಾರ ಆಯೋಜಿಸಿದ್ದ ಸಾಮಾನ್ಯ ಸಭೆಯಲ್ಲಿ ಮಾಹಿತಿ ನೀಡಿದ ಅವರು, ‘ಕರೊನಾ 2ನೇ ಅಲೆ ಪ್ರಾರಂಭವಾದ ಮೇಲೆ ತಾಲೂಕಿನಲ್ಲಿ 2 ಪ್ರಕರಣಗಳು ಪತ್ತೆಯಾಗಿದ್ದು, ಸೋಂಕಿತರು ಗುಣವಾಗಿದ್ದಾರೆ. ಇದುವರೆಗೆ ಗ್ರಾಮಾಂತರ ಪ್ರದೇಶದಲ್ಲಿ 45 ರಿಂದ 59 ವರ್ಷದೊಳಗಿನ 1818 ನಾಗರಿಕರು ಹಾಗೂ 60 ವರ್ಷ ಮೇಲ್ಪಟ್ಟ 4685 ನಾಗರಿಕರಿಗೆ ಲಸಿಕೆ ನೀಡಲಾಗಿದೆ. ಅದರಂತೆ ಶಿರಹಟ್ಟಿ ಪಟ್ಟಣದಲ್ಲಿ 45 ರಿಂದ 59 ವರ್ಷದೊಳಗಿನ 120 ನಾಗರಿಕರು ಮತ್ತು 60 ವರ್ಷ ಮೇಲ್ಪಟ್ಟ 358 ಜನರಿಗೆ ಲಸಿಕೆ ನೀಡಲಾಗಿದೆ. ಲಸಿಕೆ ಪಡೆಯಲು ಪಟ್ಟಣ ಪ್ರದೇಶದ ನಾಗರಿಕರು ಹೆಚ್ಚಿನ ಆಸಕ್ತಿ ತೋರಿಸುವ ಅಗತ್ಯವಿದೆ. ಪಪಂ ಮುಖ್ಯಾಧಿಕಾರಿ ವಾರ್ಡ್ ಸದಸ್ಯರೊಂದಿಗೆ ಹೆಚ್ಚಿನ ಪ್ರಚಾರ ಕೈಗೊಂಡು ಆರೋಗ್ಯ ಇಲಾಖೆಯೊಂದಿಗೆ ಸಹಕರಿಸಬೇಕು’ ಎಂದರು.

    ಸಭೆಯಲ್ಲಿ ವಿವಿಧ ಇಲಾಖೆಗಳ ಪ್ರಗತಿ ಕುರಿತು ರ್ಚಚಿಸಲಾಯಿತು. ತಾಪಂ. ಉಪಾಧ್ಯಕ್ಷೆ ಪವಿತ್ರಾ ಶಂಕಿನದಾಸರ, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಮಂಜುನಾಥ ಜೋಗಿ ಇದ್ದರು.

    ಮೆನು ಚಾರ್ಟ್ ಹಾಕಿ

    ಬಹುತೇಕ ಹಳ್ಳಿಗಳಲ್ಲಿ ಗರ್ಭಿಣಿಯರು, ಬಾಣಂತಿಯರಿಗೆ ಸರಿಯಾಗಿ ಪೌಷ್ಟಿಕ ಆಹಾರ, ಮೊಟ್ಟೆ ನೀಡುತ್ತಿಲ್ಲ. ಅವರಿಗೆ ಸರ್ಕಾರದ ಸೌಲಭ್ಯ ಕುರಿತು ಸಮರ್ಪಕ ಮಾಹಿತಿಯೇ ಇಲ್ಲ ಎಂದು ಉಮಾ ಹೊನಗಣ್ಣವರ ಸಿಡಿಪಿಒ ಮೃತ್ಯುಂಜಯ ಅವರ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ತಾಪಂ ಇಒ ಡಾ. ಎನ್.ಎಚ್. ಓಲೇಕಾರ ಮಧ್ಯಪ್ರವೇಶಿಸಿ, ‘ಪ್ರತಿ ಅಂಗನವಾಡಿ ಕೇಂದ್ರದಲ್ಲಿ ಒಂದು ವಾರದ ಮೆನು ಚಾರ್ಟ್ ಹಾಕಿ’ ಎಂದು ಸಿಡಿಪಿಒಗೆ ಸೂಚಿಸಿದರು.

    ಅನುದಾನ ದುರ್ಬಳಕೆ ಬೇಡ

    ಸಾಮಾಜಿಕ ಅರಣ್ಯ ಇಲಾಖೆ ಅಧಿಕಾರಿ ಎಸ್.ಪಿ. ಹೊಸಳ್ಳಿ ಅವರು ತಾಲೂಕಿನ ವಿವಿಧೆಡೆ ನೆಡಲಾದ ಸಸಿಗಳ ಬಗ್ಗೆ ಮಾಹಿತಿ ನೀಡಿದರು. ದೇವಪ್ಪ ಲಮಾಣಿ ಮಾತನಾಡಿ, ‘ಸಸಿನೆಟ್ಟ ಬಗ್ಗೆ ಅಂಕಿ ಸಂಖ್ಯೆಗಳ ಮಾಹಿತಿ ನೀಡಿದರೆ ಸಾಲದು. ಅವುಗಳ ನಿರ್ವಹಣೆ ಮುಖ್ಯ. ನಿಮ್ಮ ಹೇಳಿಕೆ ಸತ್ಯಕ್ಕೆ ದೂರವಾಗಿದೆ. ಸಸಿಗಳನ್ನು ನೆಡಲಾದ ಸ್ಥಳ ಪರಿಶೀಲಿಸಿದರೆ ವಾಸ್ತವ ಸಂಗತಿ ತಿಳಿಯುತ್ತದೆ. ಸರ್ಕಾರದ ಅನುದಾನ ನೀರಿನಲ್ಲಿ ಹೋಮ ಮಾಡಿದಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

    ವಯಸ್ಕರ ಶಿಕ್ಷಣ ಎಲ್ಲಿ ನಡೀತಿದೆ?

    ನಿರಕ್ಷರಿಗಳಿಗೆ ಅಕ್ಷರ ಕಲಿಸುವ ಹಳ್ಳಿಗಳಲ್ಲಿನ ರಾತ್ರಿ ಶಾಲೆ ಬಂದ್ ಆಗಿ ಹಳೆಯ ಮಾತಾಗಿದೆ. ಆದರೆ ವಯಸ್ಕರ ಶಿಕ್ಷಣ ಎಂಬ ಹೆಸರಿನಲ್ಲಿ ಶಿಕ್ಷಕನೊಬ್ಬ ಈಗಲೂ ತಾಲೂಕು ಸಂಯೋಜಕ ಪದನಾಮದೊಂದಿಗೆ ಕೆಲಸ ಮಾಡುತ್ತಿರುವುದು ಸಮಂಜಸವೇ? ಎಂದು ತಿಪ್ಪಣ್ಣ ಕೊಂಚಿಗೇರಿ ಬಿಇಒ ಆರ್.ಎಸ್. ಬುರಡಿ ಅವರನ್ನು ಪ್ರಶ್ನಿಸಿದರು. ಬಿಒ ಅವರು ಸಮರ್ಪಕವಾಗಿ ಉತ್ತರಿಸದ ಕಾರಣ ಮಧ್ಯಪ್ರವೇಶಿಸಿದ ಇಒ, ‘ಸದಸ್ಯರ ಹೇಳಿಕೆ ಸರಿಯಾಗಿದೆ. ತಾಲೂಕಿನಲ್ಲಿ ಎಲ್ಲಿಯೂ ರಾತ್ರಿ ಶಾಲೆಗಳಿಲ್ಲ. ಈ ಬಗ್ಗೆ ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ’ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts