More

    ವೈಮನಸ್ಸಿನ ಕಂದರ ತೊಡೆವ ಸೌಹಾರ್ದ ಕೇಂದ್ರ: ಮುಗ್ಧ ಮನಸ್ಸುಗಳ ವಿಭಿನ್ನತೆಗೆ ಸಾಕ್ಷಿ

    ಅನ್ಸಾರ್ ಇನೋಳಿ ಉಳ್ಳಾಲ

    ಪ್ರಸ್ತುತ ಮಸೀದಿ, ಮಂದಿರಗಳ ವಿಷಯಗಳೇ ಧರ್ಮಗಳ ಮಧ್ಯೆ ಕಂದರ ಉಂಟು ಮಾಡುವ ಸನ್ನಿವೇಶದಲ್ಲಿ ಇಲ್ಲೊಂದು ಮಸೀದಿ ಸರ್ವ ಧರ್ಮೀಯರ ಮಧ್ಯೆ ಸ್ನೇಹಭಾವ ಮೂಡಿಸಿ ಧರ್ಮಗಳ ನಡುವಿನ ವೈಮನಸ್ಸು ತೊಡೆದು ಸೌಹಾರ್ದದ ವಾತಾವರಣ ಮೂಡಿಸುತ್ತಿದೆ. ಎಲ್ಲರೂ ನಮ್ಮವರೇ ಎನ್ನುವ ಜಮಾಅತರ ಮುಗ್ಧ ಮನಸ್ಸಿಗೆ ಸಾಕ್ಷಿ ಹೇಳುತ್ತಿದೆ.

    ಇಂಥ ಜಮಾಅತ್ ಇರುವುದು ಮುಡಿಪು ಸಮೀಪದ ಸಾಂಬಾರತೋಟ ಎಂಬಲ್ಲಿ. ರಸ್ತೆ ಬದಿ ಇರುವ ಈ ಮಸೀದಿ ಪಜೀರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿದೆ. ಸೌಹಾರ್ದ ವಾತಾವರಣಕ್ಕೆ ಸಾಕ್ಷಿ ಹೇಳುವ ಸಾಂಬಾರತೋಟ ಜಮಾಅತ್ ವಿಭಿನ್ನತೆಗೆ ಸಾಕ್ಷಿಯಾಗಿದೆ.

    ಇಲ್ಲಿನ ಯುವ ಸಮುದಾಯ ಎಂಥದೇ ಕಠಿನ ಸಂದರ್ಭದಲ್ಲೂ ಹಿರಿಯರ ಮಾರ್ಗದರ್ಶನ ಪಾಲಿಸುತ್ತ ಬಂದಿದೆ. ಕೆಲವು ವರ್ಷಗಳ ಹಿಂದೆ ಮಂಗಳೂರಿನಲ್ಲಿ ಕೋಮುಗಲಭೆ ನಡೆದಾಗ ಈ ಮಸೀದಿಗೆ ಕಲ್ಲು ಹೊಡೆದು ಗಾಜುಗಳು ಪುಡಿಯಾಗಿತ್ತು. ಆ ಸಂದರ್ಭದಲ್ಲೂ ಜಮಾಅತರು ಪರಿಸರದಲ್ಲಿ ಶಾಂತಿಯ ವಾತಾವರಣಕ್ಕೆ ಆದ್ಯತೆ ನೀಡಿ ಪೊಲೀಸ್ ತನಿಖೆಗೆ ಸಹಕಾರ ನೀಡಿದ್ದರು. ಈಗ ಮತ್ತೂ ಒಂದು ಹೆಜ್ಜೆ ಮುಂದೆ ಹೋಗಿರುವ ಜಮಾಅತ್ ಸಮಿತಿ, ಮಸೀದಿಯ ಮುಂಭಾಗದಲ್ಲಿ ಧಾರ್ಮಿಕ, ಶೈಕ್ಷಣಿಕ ಅಥವಾ ಸಾಮಾಜಿಕ ಕಾರ್ಯಕ್ರಮಗಳ ಮೆರವಣಿಗೆ ಹಾದುಹೋದರೆ ತಂಪುಪಾನೀಯ ಮತ್ತು ಖರ್ಜೂರ ವಿತರಿಸುವ ತೀರ್ಮಾನ ಕೈಗೊಂಡಿದೆ.

    ಈಗಾಗಲೇ ಹಿಂದು ಮತ್ತು ಕ್ರೈಸ್ತ ಧರ್ಮಕ್ಕೆ ಸಂಬಂಧಿಸಿದ ಎರಡು ಧಾರ್ಮಿಕ ಮತ್ತೊಂದು ಶೈಕ್ಷಣಿಕ ಜಾಥಾ ಮಸೀದಿಯ ಮುಂಭಾಗ ಹಾದುಹೋಗಿದ್ದು ಜಮಾಅತ್ ನಿರ್ಧಾರದಂತೆ ತಂಪು ಪಾನೀಯ, ಖರ್ಜೂರ ವಿತರಿಸಲಾಗಿದೆ. ಜಾಥಾ ಬಗ್ಗೆ ಮಾಹಿತಿ ಪಡೆಯುವ ಜಮಾಅತ್ ಪದಾಧಿಕಾರಿಗಳು, ಸದಸ್ಯರು ಸಮಯಕ್ಕಿಂತ ಮೊದಲೇ ಅಗತ್ಯ ವಸ್ತುಗಳೊಂದಿಗೆ ಸಿದ್ಧರಾಗಿ, ಮೆರವಣಿಗೆಯಲ್ಲಿ ಬರುವ ಪ್ರತಿಯೊಬ್ಬರಿಗೂ ಪಾನೀಯ, ಖರ್ಜೂರ ಕೊಟ್ಟು ಬೀಳ್ಕೊಡುತ್ತಾರೆ.

    ನಮ್ಮದು ಗ್ರಾಮೀಣ ಪ್ರದೇಶವಾಗಿದ್ದರೂ ನಗರ ಸ್ವರೂಪ ಪಡೆದಿದೆ. ನಾವು ಹಿಂದಿನಿಂದಲೂ ಪರಿಸರದಲ್ಲಿ ಎಲ್ಲ ಜಾತಿ, ಧರ್ಮದವರೊಂದಿಗೆ ಬೆರೆಯುತ್ತ ಬಂದವರು. ಆ ಸಂಸ್ಕೃತಿ ಸದಾ ಜೀವಂತ ಇರಬೇಕಾದರೆ ಇಂಥ ಕಾರ್ಯ ಅಗತ್ಯವಿದ್ದು ಯುವಕರೂ ಮುಂಚೂಣಿಯಲ್ಲಿರುವುದು ಸಂತಸ ತಂದಿದೆ.

    -ಎಂ.ಇಬ್ರಾಹಿಂ
    ಅಧ್ಯಕ್ಷ, ನೂರಾನಿಯಾ ಜುಮಾ ಮಸೀದಿ

    ನಮ್ಮ ಪರಿಸರದಲ್ಲಿ ಇದುವರೆಗೆ ಧರ್ಮಗಳ ಮಧ್ಯೆ ಯಾವುದೇ ವೈಮನಸ್ಸು ಸೃಷ್ಟಿಯಾಗಿಲ್ಲ. ಕಹಿ ಘಟನೆ ಆದಾಗಲೂ ಇಲಾಖಾ ತನಿಖೆಗೆ ಬಿಟ್ಟು ಸೌಹಾರ್ದ ಕೆಡದಂತೆ ನೋಡಲಾಗಿತ್ತು. ಮಸೀದಿ ಮುಂದೆ ಯಾವುದೇ ಜಾಥಾ ಹೋದರೂ ತಂಪುಪಾನೀಯ, ಖರ್ಜೂರ ವಿತರಿಸಿ ಮನಸ್ಫೂರ್ತಿಯಾಗಿ ಎಲ್ಲರೂ ನಮ್ಮವರು ಎನ್ನುವ ಸಂದೇಶ ಸಾರಲಾಗಿದೆ.

    -ಅಸ್ಗರ್ ಸಾಂಬಾರತೋಟ
    ಜಮಾಅತ್ ಸದಸ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts