More

    ರೇವಣ್ಣ ಮಧ್ಯಂತರ ಜಾಮೀನು ಆದೇಶ ಕಾಯ್ದಿರಿಸಿದ ಕೋರ್ಟ್

    ಬೆಂಗಳೂರು: ಮಹಿಳೆಯೊಬ್ಬರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಆರೋಪಿಯಾಗಿರುವ ಶಾಸಕ ಎಚ್.ಡಿ ರೇವಣ್ಣ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯ ಆದೇಶವನ್ನು ಜನಪ್ರತಿನಿಧಿಗಳ ವಿಶೇಷ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಮೇ ೨೦ಕ್ಕೆ ಕಾಯ್ದಿರಿಸಿದೆ. ಅಲ್ಲಿಯವರೆಗೆ ಮಧ್ಯಂತರ ಜಾಮೀನು ಆದೇಶವನ್ನು ಮುಂದುವರಿಸಿದೆ.
    ಎಚ್.ಡಿ ರೇವಣ್ಣ ಜಾಮೀನು ಅರ್ಜಿ ವಿಚಾರಣೆಯನ್ನು ಜನಪ್ರತಿನಿಧಿಗಳ ನ್ಯಾಯಾಲಯದ ನ್ಯಾಯಾಧೀಶೆ ಜೆ.ಪ್ರೀತ್ ಅವರು ನಡೆಸಿದರು. ಶುಕ್ರವಾರ ಮಂಜೂರು ಮಾಡಿರುವ ಮಧ್ಯಂತರ ಜಾಮೀನು ಮೇ ೨೦ರವರೆಗೆ ಮುಂದುವರಿಯಲಿದ್ದು, ಸೋಮವಾರ ಜಾಮೀನು ಆದೇಶ ಪ್ರಕಟಿಸಲಾಗುವುದು ಎಂದು ನ್ಯಾಯಾಲಯ ಹೇಳಿದೆ.
    ಅರ್ಜಿದಾರ ರೇವಣ್ಣ ಪರವಾಗಿ ವಾದಿಸಿದ ಹಿರಿಯ ವಕೀಲ ಸಿ.ವಿ ನಾಗೇಶ್ ಅವರು, ಹೊಳೆನರಸೀಪುರದಲ್ಲಿ ದಾಖಲಿಸಿರುವ ದೂರು ಕ್ರಮಬದ್ಧವಾಗಿಲ್ಲ. ಸಿಆರ್‌ಪಿಸಿ ಸೆಕ್ಷನ್ ೧೫೪ರ ಅಡಿ ಮಹಿಳಾ ಅಧಿಕಾರಿ ದೂರು ದಾಖಲಿಸಿಕೊಳ್ಳಬೇಕು. ಸಂತ್ರಸ್ತೆಯ ಹೇಳಿಕೆಯನ್ನು ವಿಡಿಯೋ ಮಾಡಬೇಕಿತ್ತು. ಮಹಿಳೆಯ ಘನತೆ ಕಾಪಾಡುವ ನಿಟ್ಟಿನಲ್ಲಿ ಕಾಯಿದೆಗೆ ೨೦೧೩ರಲ್ಲಿ ತಿದ್ದುಪಡಿ ತರಲಾಗಿದೆ. ಆದರೆ, ಇದನ್ನು ಪಾಲಿಸಲಾಗಿಲ್ಲ ಎಂದರು.
    ಟೈಪ್ ಮಾಡಿರುವ ದೂರಿನ ಪ್ರತಿಗೆ ಸಂತ್ರಸ್ತೆಯು ಸಹಿ ಮಾಡಿ ನೀಡಿದ್ದಾರೆ. ಇಲ್ಲಿ ತಪ್ಪಾಗಿ ಐಪಿಸಿ ಸೆಕ್ಷನ್ ೩೭೬ (ಅತ್ಯಾಚಾರ ಆರೋಪ) ಅನ್ವಯಿಸಲಾಗಿದೆ. ಮೊದಲಿಗೆ ಜಾಮೀನುಸಹಿತ ಆರೋಪಗಳನ್ನು ಒಳಗೊಂಡ ಎಫ್‌ಐಆರ್ ದಾಖಲಿಸಲಾಗಿತ್ತು. ಆನಂತರ ಅತ್ಯಾಚಾರ ಆರೋಪ ಸೇರಿಸಲಾಗಿದೆ. ಲೋಕಸಭೆ ಎರಡನೇ ಹಂತದ ಮತದಾನ ಇರುವ ಸಂದರ್ಭದಲ್ಲಿ ಹೀಗೆಲ್ಲಾ ಮಾಡಲಾಗಿದೆ. ಇದರ ಹಿಂದೆ ರಾಜಕೀಯ ದುರುದ್ದೇಶವಿದೆ ಎಂದು ಆಕ್ಷೇಪಿಸಿದರು.
    ಹೆಚ್ಚುವರಿ ವಿಶೇಷ ಸರ್ಕಾರಿ ಅಭಿಯೋಜಕರಾದ ಅಶೋಕ್ ನಾಯ್ಕ ಮತ್ತು ಜಯ್ನ ಕೊಠಾರಿ ಅವರು ಅರ್ಜಿದಾರರ ವಿರುದ್ಧ ಗಂಭೀರ ಆರೋಪಗಳಿವೆ. ಜಾಮೀನು ಮಂಜೂರು ಮಾಡಿದರೆ ಸಾಕ್ಷ್ಯ ನಾಶ ಮಾಡುವ ಸಂಭವವಿದೆ. ಹೀಗಾಗಿ, ಜಾಮೀನು ನೀಡಬಾರದು ಎಂದು ವಾದಿಸಿದ್ದರು.
    ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯವು ಮೇ ೨೦ಕ್ಕೆ ಆದೇಶ ಕಾಯ್ದಿರಿಸಿದೆ. ಅಲ್ಲಿಯವರೆಗೆ ರೇವಣ್ಣಗೆ ಮಧ್ಯಂತರ ಜಾಮೀನು ಆದೇಶ ಮುಂದುವರಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts