More

    ದೇಶ ಅಭಿವೃದ್ಧಿಯಾಗಲು ಮೂಲ ಸೌಕರ್ಯ ಅಗತ್ಯ

    ಬೆಳಗಾವಿ: ಕೆಎಲ್‌ಇ ಸಂಸ್ಥೆಯ ಡಾ.ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದಲ್ಲಿ ನೂತನವಾಗಿ ನಿರ್ಮಿಸಿರುವ ಅತ್ಯಾಧುನಿಕ ನರ ಶಸ್ತ್ರಚಿಕಿತ್ಸಾ ಕೊಠಡಿಯನ್ನು ಯುನಿಯನ್ ಬ್ಯಾಂಕ್ ಕಾರ್ಯಕಾರಿ ನಿರ್ದೇಶಕ, ಸಿಇಒ ರಾಜಕಿರಣ ರಾಯ್ ಸೋಮವಾರ ಲೋಕಾರ್ಪಣೆ ಮಾಡಿದರು.

    ಬಳಿಕ ಮಾತನಾಡಿದ ಅವರು, ದೇಶ ಪ್ರಗತಿ ಪಥದಲ್ಲಿ ಸಾಗಬೇಕಾದರೆ ಮೂಲ ಸೌಲಭ್ಯಗಳು ಉನ್ನತೀಕರಣ ಹೊಂದಬೇಕು. ರಾಷ್ಟ್ರದ ಬೆಳವಣಿಗೆಯಲ್ಲಿ ಮೂಲ ಸೌಕರ್ಯಗಳ ಪಾತ್ರ ಪ್ರಮುಖವಾಗಿದೆ ಎಂದರು. ಕೋವಿಡ್ ಸಮಯದಲ್ಲಿ ಆರೋಗ್ಯ ಸೇವೆಯ ಕಾರ್ಯ ಅತ್ಯಂತ ಪ್ರಶಂಸನೀಯ. ವಿಶ್ವವೇ ಸ್ಥಬ್ದಗೊಂಡರೂ ಸಹ ಆರೋಗ್ಯ ಕಾರ್ಯಕರ್ತರು ಸೇವೆಯಲ್ಲಿ ನಿರತರಾಗಿದ್ದರು. ದುರ್ಬಲ ಪ್ರದೇಶದ ಜನರಿಗೂ ಕೂಡ ಆರೋಗ್ಯ ಸೇವೆ ಕಲ್ಪಿಸಲು ಆರೋಗ್ಯ ಸಂಸ್ಥೆಗಳು ಪರಿಣಾಮಕಾರಿ ಯೋಜನೆಗಳನ್ನು ರೂಪಿಸಬೇಕು ಎಂದರು. ಕೆಎಲ್‌ಇ ಸಂಸ್ಥೆ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಮಾತನಾಡಿ, 20 ವರ್ಷದ ಹಿಂದೆ ಅತ್ಯಂತ ಕ್ಲಿಷ್ಟಕರವಾದ ಶಸ್ತ್ರಚಿಕಿತ್ಸೆಗಾಗಿ ಈ ಭಾಗದ ಜನತೆ ಮಹಾರಾಷ್ಟ್ರದ ಮಿರಜ್, ಮುಂಬೈ ಅಥವಾ ಬೆಂಗಳೂರು ಅನ್ನು ಆಶ್ರಯಿಸಬೇಕಾಗಿತ್ತು. ಆದರೆ, 15 ವರ್ಷದಿಂದ ಎಲ್ಲ ಸೌಲಭ್ಯ ಒಂದೇ ಸೂರಿನಡಿ ಸಿಗುವಂತೆ ವ್ಯವಸ್ಥೆ ಕಲ್ಪಿಸಲಾಗಿದೆ. ಹೃದಯ, ನರರೋಗ, ನರ ಶಸ್ತ್ರಚಿಕಿತ್ಸೆ ಸೇರಿ ಎಲ್ಲ ಸೇವೆ ನೀಡಲಾಗುತ್ತಿದೆ ಎಂದು ವಿವರಿಸಿದರು. ಆಡಳಿತ ಮಂಡಳಿ ನಿರ್ದೇಶಕ ಡಾ.ವಿ.ಎಸ್.ಸಾಧುನವರ, ಡಾ.ವಿ.ಐ.ಪಾಟೀಲ, ಅಮಿತ ಕೋರೆ, ಡಾ.ಆರ್.ಬಿ.ನೇರ್ಲಿ, ಕಾಹೇರ್ ಕುಲಪತಿ ಡಾ. ವಿವೇಕ ಸಾವೋಜಿ, ಡಾ. ಎಚ್.ಬಿ. ರಾಜಶೇಖರ, ಡಾ.ವಿ.ಡಿ.ಪಾಟೀಲ, ಡಾ.ಎ.ಎಸ್.ಗೋಗಟೆ, ಡಾ.ರಾಜೇಶ ಪವಾರ, ಡಾ.ವಿ.ಎಂ.ಪಟ್ಟಣಶೆಟ್ಟಿ, ಡಾ.ಪ್ರಕಾಶ ಮಹಾಂತಶೆಟ್ಟಿ, ಡಾ.ರಾಜೇಶ ಶೆಣೈ, ಡಾ.ಅಭಿಷೇಕ ಪಾಟೀಲ, ಡಾ.ವಿಕ್ರಮ, ಡಾ.ಪ್ರಕಾಶ ರಾಥೋಡ್ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts