More

    ಚಿಕ್ಕಬಳ್ಳಾಪುರ ಉತ್ಸವಕ್ಕೆ ಕ್ಷಣಗಣನೆ

    ಚಿಕ್ಕಬಳ್ಳಾಪುರ: ವಿವಿಧ ಸ್ಪರ್ಧೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು, ಖ್ಯಾತ ಕಲಾವಿದರ ಝಲಕ್‌ದೊಂದಿಗೆ ಜಿಲ್ಲಾ ಕೇಂದ್ರದಲ್ಲಿ ಒಂದು ವಾರ ನಡೆಯಲಿರುವು ಚಿಕ್ಕಬಳ್ಳಾಪುರ ಉತ್ಸವಕ್ಕೆ ಕ್ಷಣಗಣನೆ ಪ್ರಾರಂಭವಾಗಿದೆ. ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಡಾ.ಕೆ.ಸುಧಾಕರ್ ಫೌಂಡೇಷನ್ ವತಿಯಿಂದ ಜ.7ರಿಂದ 14 ರವರೆಗೆ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮ ನಗರದ ಮರಳು ಸಿದ್ದೇಶ್ವರ ದೇವಸ್ಥಾನದ ಆವರಣದಲ್ಲಿ ಬೃಹತ್ ಮೆರವಣಿಗೆಯೊಂದಿಗೆ ಪ್ರಾರಂಭವಾಗಲಿದೆ. ಜ.7ರಂದು ಮಧ್ಯಾಹ್ನ 2ಕ್ಕೆ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಚಾಲನೆ ನೀಡಲಿದ್ದಾರೆ. ನಗರದ ಸರ್.ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಸಂಜೆ 5ಕ್ಕೆ ಉತ್ಸವದ ವೇದಿಕೆ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಲಿದ್ದಾರೆ. ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ದಿವ್ಯ ಸಾನ್ನಿಧ್ಯ ವಹಿಸಲಿದ್ದಾರೆ.

    ವೈಭವದ ವೇದಿಕೆ ನಿರ್ಮಾಣ
    ಮೈಸೂರು ದಸರಾ, ಹಂಪಿ ಉತ್ಸವ, ಕರಾವಳಿ ಮತ್ತು ಕಾರ್ಕಳ ಉತ್ಸವ ಮಾದರಿಯಲ್ಲಿ ಚಿಕ್ಕಬಳ್ಳಾಪುರ ಉತ್ಸವ ನಡೆಯುತ್ತಿದೆ. ಈಗಾಗಲೇ ವಿದ್ಯುದೀಪಾಲಂಕಾರದಿಂದ ಎಂ.ಜಿ.ರಸ್ತೆ ಮತ್ತು ಬಿ.ಬಿ.ರಸ್ತೆ ಸೇರಿದಂತೆ ನಗರದ ಪ್ರಮುಖ ಭಾಗಗಳು ಝಗಮಗಿಸುತ್ತಿವೆ. ನಗರದ ಸರ್ ಎಂ.ವಿ.ಜಿಲ್ಲಾ ಕ್ರೀಡಾಂಗಣದಲ್ಲಿ ರಂಗಸ್ಥಳದ ರಂಗನಾಥಸ್ವಾಮಿ ದೇವಾಲಯ ಗೋಪುರ, ನಂದಿಯ ಭೋಗ ನಂದೀಶ್ವರ, ಪಂಚಗಿರಿಗಳ ಸಾಲು ಸೇರಿದಂತೆ ಮನಮೋಹಕ ದೃಶ್ಯಗಳನ್ನು ಹೊಂದಿರುವ ವೈಭವದ ವೇದಿಕೆಯನ್ನು ಕಲಾವಿದರು ನಿರ್ಮಿಸಿದ್ದಾರೆ. ಕಾರ್ಯಕ್ರಮಕ್ಕೆ ಮೆರುಗು ನೀಡುವ ರೀತಿಯಲ್ಲಿ ಲೈಟಿಂಗ್ ವ್ಯವಸ್ಥೆ ಇದೆ. ಈಗಾಗಲೇ ಸಚಿವ ಡಾ ಕೆ.ಸುಧಾಕರ್ ನೇತೃತ್ವದಲ್ಲಿ ಪೂರ್ವ ಸಿದ್ಧತಾ ಕಾರ್ಯಗಳು ಮುಗಿದಿವೆ.

    ಬೃಹತ್ ಮೆರವಣಿಗೆ
    ನಗರದ ಎಂ.ಜಿ.ರಸ್ತೆಯ ಮರಳುಸಿದ್ದೇಶ್ವರ ದೇವಾಲಯದಿಂದ ಪ್ರಾರಂಭವಾಗಲಿರುವ ಮೆರವಣಿಗೆಯಲ್ಲಿ ಬರೋಬ್ಬರಿ 3 ಸಾವಿರಕ್ಕೂ ಹೆಚ್ಚು ಕಲಾ ತಂಡಗಳು, ಸರ್ಕಾರದ ಸಾಧನೆಗಳು ಮತ್ತು ಯೋಜನೆಗಳನ್ನು ಬಿಂಬಿಸುವ 21 ಸ್ತಬ್ಧ ಚಿತ್ರಗಳ ಪ್ರದರ್ಶನ ಗಮನಸೆಳೆಯಲಿದೆ.

    ಇಂದಿನ ಕಾರ್ಯಕ್ರಮಗಳು
    ಸಂಜೆ 7ರಿಂದ ಖ್ಯಾತ ಕಲಾವಿದರ ನೇತೃತ್ವದಲ್ಲಿ ನೃತ್ಯ ವೈಭವ, ವಿಶೇಷ ಫ್ಯೂಷನ್ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಗಾಯಕ ಪದ್ಮಶ್ರೀಶಂಕರ್ ಮಹದೇವನ್ ತಂಡದಿಂದ ಗಾನ ತಾಂಡವ, ಕಲಾವಿದರಾದ ನಿರುಪಮಾ ಹಾಗೂ ರಾಜೇಂದ್ರ ಅವರಿಂದ ನೃತ್ಯ ವೈಭವ, ಕಲಾವಿದ ಪ್ರವೀಣ್ ಗೋಡ್ಖಿಂಡಿ ಅವರಿಂದ ವಿಶೇಷ ಪ್ಯೂಷನ್ ಕಾರ್ಯಕ್ರಮ ನಡೆಯಲಿದೆ.

    ರಸ್ತೆ ಮಾರ್ಗ ಬದಲಾವಣೆ
    ಜ.7ರಿಂದ ಜ.14 ರವರೆಗೆ ಉತ್ಸವದ ಹಿನ್ನೆಲೆಯಲ್ಲಿ ಸಂಚಾರ ದಟ್ಟಣೆ ನಿಯಂತ್ರಣದ ಉದ್ದೇಶದಿಂದ ಭಾರಿ ವಾಹನಗಳ ರಸ್ತೆ ಸಂಚಾರ ಮಾರ್ಗ ಬದಲಾಯಿಸಲಾಗಿದೆ. ಜಿಲ್ಲಾ ಕೇಂದ್ರ ಪ್ರವೇಶಿಸದೆ ಚಿಕ್ಕಬಳ್ಳಾಪುರದಿಂದ ಬೆಂಗಳೂರಿಗೆ ರಾಷ್ಟ್ರೀಯ ಹೆದ್ದಾರಿ ಬೈಪಾಸ್ ರಸ್ತೆಯಲ್ಲಿ ಸಾಗಬೇಕು. ಜ.7ರಂದು ಗೌರಿಬಿದನೂರು ಕಡೆಗೆ ಸಂಚರಿಸುವ ವಾಹನಗಳು ವಾಪಸಂದ್ರ ಬ್ರಿಡ್ಜ್ ಮೂಲಕ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗಿ ನಂದಿ ಕ್ರಾಸ್, ನಂದಿ, ತಿರ‌್ನಕ್ರಾಸ್, ಮುದ್ದೇನಹಳ್ಳಿ, ಕಳವಾರ, ಕಣಜೇನಹಳ್ಳಿ ಬಳಿ ಎಡ ತಿರುವಿನ ದಾರಿಯಲ್ಲಿ ಮತ್ತು ಗೌರಿಬಿದನೂರು ಕಡೆಯಿಂದ ಚಿಕ್ಕಬಳ್ಳಾಪುರಕ್ಕೆ ಬರುವಂತಹ ವಾಹನಗಳು ಕಣಜೇನಹಳ್ಳಿಯಲ್ಲಿ ತಿರುವು ಪಡೆದು ಕಳವಾರ, ಮುದ್ದೇನಹಳ್ಳಿ, ತಿರ‌್ನಹಳ್ಳಿ, ನಂದಿ ಕ್ರಾಸ್ ಮೂಲಕ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗಬೇಕು.

    ಕ್ರೀಡಾ ಚಟುವಟಿಕೆ
    ಚಿಕ್ಕಬಳ್ಳಾಪುರ ಉತ್ಸವದ ಹಿನ್ನೆಲೆಯಲ್ಲಿ ಹೊನಲು ಬೆಳಕಿನ ಕಬಡ್ಡಿ, ವಾಲಿಬಾಲ್, ಥ್ರೋಬಾಲ್, ಕ್ರಿಕೆಟ್, ಹಗ್ಗಜಗ್ಗಾಟ, ಈಜು ಸೇರಿದಂತೆ ಹಲವು ಕ್ರೀಡೆಗಳು ನಡೆಯುತ್ತಿದ್ದು, ಕ್ರೀಡಾಪಟುಗಳ ಜತೆಗೆ ಮಹಿಳೆಯರು, ಮಕ್ಕಳು ಪೈಪೋಟಿಯಲ್ಲಿ ಭಾಗವಹಿಸುತ್ತಿದ್ದಾರೆ. ಸೋಲು ಗೆಲುವಿನ ನಡುವೆ ಉತ್ಸಾಹದಲ್ಲಿ ಮಿಂದೇಳುತ್ತಿದ್ದಾರೆ. ಗ್ರಾಪಂ ಮತ್ತು ಜಿಪಂ, ವಾರ್ಡ್‌ವಾರು ಮಟ್ಟದಲ್ಲಿ ಕ್ರೀಡೆಗಳನ್ನು ಕೈಗೊಳ್ಳುತ್ತಿದ್ದು, 325 ಕ್ರಿಕೆಟ್ ತಂಡಗಳು, 90 ಥ್ರೋಬಾಲ್ ತಂಡಗಳು, 166 ವಾಲಿಬಾಲ್ ತಂಡಗಳು, 283 ಕಬಡ್ಡಿ ತಂಡಗಳು, 288 ಹಗ್ಗಜಗ್ಗಾಟ ತಂಡಗಳು, 134 ಮಹಿಳಾ ತಂಡಗಳು ಸೇರಿದಂತೆ 1,301 ಕ್ರೀಡಾ ತಂಡಗಳು ಹೆಸರು ನೋಂದಾಯಿಸಿಕೊಂಡಿದ್ದು, ಹತ್ತು ಸಾವಿರಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗಿಯಾಗಿದ್ದಾರೆ. ಕಲೋತ್ಸವ, ಯುವೋತ್ಸವ, ಸಂಗೀತೋತ್ಸವ, ಕ್ರೀಡೋತ್ಸವ ಸೇರಿದಂತೆ ಎಲ್ಲ ಉತ್ಸವಗಳ ಸಮ್ಮಿಲನವಾಗಿರುವ ಚಿಕ್ಕಬಳ್ಳಾಪುರ ಉತ್ಸವದಲ್ಲಿ ಎಲ್ಲ ವಯೋಮಾನದವರೂ ಪಕ್ಷಾತೀತ ಮತ್ತು ಜಾತ್ಯತೀತವಾಗಿ ಭಾಗವಹಿಸುತ್ತಿರುವುದು ಖುಷಿಯ ವಿಚಾರ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts