More

    ಕರಾವಳಿ ಅವಕಾಶದ ಬಾಗಿಲು ತೆರೆದ ಬಜೆಟ್

    ಮಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೋಮವಾರ ಮಂಡಿಸಿದ ರಾಜ್ಯ ಬಜೆಟ್ ಕರಾವಳಿಯಲ್ಲಿ ಹಲವು ಅಭಿವೃದ್ಧಿ, ಅವಕಾಶಗಳ ಬಾಗಿಲು ತೆರೆದಿದೆ.
    ಮುಖ್ಯವಾಗಿ ಮೀನುಗಾರರು ಮತ್ತು ಅಡಕೆ ಬೆಳೆಗಾರರ ಹಿತ ಕಾಪಾಡುವತ್ತ ಬಜೆಟ್ ದೃಷ್ಟಿನೆಟ್ಟಿದೆ. ಕರಾವಳಿಯ ಅಡಕೆ ಬೆಳೆಗಾರರನ್ನು ಕಾಡುತ್ತಿರುವ ಹಳದಿ ಎಲೆ ರೋಗ ಕುರಿತು ವೈಜ್ಞಾನಿಕ ಸಂಶೋಧನೆಗೆ 25 ಕೋಟಿ ರೂ.ಮೀಸಲಿರಿಸಿದೆ. ಬಹುನಿರೀಕ್ಷಿತ ಕುಮ್ಕಿ ಜಮೀನು, ಕಾನ್, ಬಾಣೆ, ಡೀಮ್ಡ್ ಅರಣ್ಯ ಸಾಗುವಳಿದಾರರ ಹಾಗೂ ಮೂಲಗೇಣಿದಾರರ ಸಮಸ್ಯೆಗಳ ಅಧ್ಯಯನಕ್ಕೆ ಪ್ರತ್ಯೇಕ ಸಮಿತಿ ರಚನೆಯನ್ನು ಸಿಎಂ ಬಜೆಟ್ ಭಾಷಣದಲ್ಲಿ ಉಲ್ಲೇಖಿಸಿದ್ದಾರೆ.

    ಮಂಗಳೂರಿನಲ್ಲಿ ಉದ್ಯಮದ ಅವಕಾಶ ಇರುವ ಸಮುದ್ರ ಕಳೆ (ಸೀ ವೀಡ್) ಮತ್ತು ಮೀನಿನಿಂದ ಲಭ್ಯವಾಗುವ ಬಯೋ ಆಕ್ಟಿವ್ ವಸ್ತುಗಳನ್ನು ಬಳಸಿ ಲಘು ಆಹಾರ ತಯಾರಿಗೆ ಉತ್ತೇಜನ ನೀಡುವ ಕೆಲಸಕ್ಕಾಗಿ ಅತ್ಯಾಧುನಿಕ ಬಯೋಟೆಕ್ ಇನವೇಶನ್ ಕೇಂದ್ರ ಸ್ಥಾಪನೆ, ಮಂಗಳೂರು ಹಾಗೂ ಗೋವಾದ ಪಣಜಿ ಮಧ್ಯೆ ಜಲಮಾರ್ಗ ಅಭಿವೃದ್ಧಿ, ಕೇಂದ್ರದ ರಾಷ್ಟ್ರೀಯ ಜಲಮಾರ್ಗ ಪ್ರಾಧಿಕಾರದ ನೆರವಿನಲ್ಲಿ ನೇತ್ರಾವತಿ ನದಿಯೂ ಸೇರಿದಂತೆ ಐದು ನದಿಗಳಲ್ಲಿ ಜಲಮಾರ್ಗ ಅಭಿವೃದ್ಧಿ ಬಜೆಟ್‌ನಲ್ಲಿ ಪ್ರಕಟಿಸಿರುವ ಪ್ರಮುಖ ಅಂಶಗಳು.
    ಗಂಜಿಮಠದ 100 ಎಕರೆ ಪ್ರದೇಶದಲ್ಲಿ ರಾಜ್ಯ-ಕೇಂದ್ರ ಸಹಭಾಗಿತ್ವದ ಪ್ಲಾಸ್ಟಿಕ್ ಪಾರ್ಕ್ ಈಗಾಗಲೇ ಘೋಷಿತವಾದ ಯೋಜನೆ. ಆದರೆ ಅದಕ್ಕೆ 66 ಕೋಟಿ ರೂ.ರಾಜ್ಯದ ಕೊಡುಗೆಯನ್ನು ಘೋಷಿಸಿರುವುದರಿಂದ ಯೋಜನೆ ಅನುಷ್ಠಾನಕ್ಕೆ ವೇಗ ಸಿಗುವ ನಿರೀಕ್ಷೆ ಇರಿಸಲಾಗಿದೆ.

    ಮೀನುಗಾರರಿಗೆ ಲಾಭ: ಯಾಂತ್ರೀಕೃತ ದೋಣಿಗಳಿಗೆ 1.5 ಲಕ್ಷ ಕಿ.ಲೀ ಡೀಸೆಲ್ ಮೇಲೆ ಮಾರಾಟ ಕರ ಮರುಪಾವತಿ ಬದಲು ಡೀಸೆಲ್ ಡೆಲಿವರಿ ಪಾಯಿಂಟ್‌ನಲ್ಲೇ ವಿನಾಯಿತಿ ಸಹಿತ ಡೀಸೆಲ್ ವಿತರಣೆ ಮೀನುಗಾರರಿಗೆ ಖುಷಿ ತರಬಹುದು. ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆ ಅನುಷ್ಠಾನಕ್ಕೆೆ ರಾಜ್ಯ ಸರ್ಕಾರದಿಂದ 62 ಕೋಟಿ ರೂ.ಅನುದಾನ ಮೀಸಲಿಡಲಾಗಿದೆ. ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮದಿಂದ 6 ಕೋಟಿ ರೂ.ವೆಚ್ಚದಲ್ಲಿ ಮೀನು ಉತ್ಪನ್ನಗಳ ಸಂಸ್ಕರಣೆಗೆ ಆಧುನಿಕ ಸಂಸ್ಕರಣಾ ಮತ್ತು ಮೌಲ್ಯವರ್ಧಿತ ಕೇಂದ್ರ ಸ್ಥಾಪನೆಯ ಪ್ರಸ್ತಾಪವೂ ಇದೆ.

    ಪ್ರಾಧಿಕಾರದಿಂದ ಮಂಡಳಿಗೆ ಬಡ್ತಿ: ಅನುದಾನದ ಕೊರತೆ ಅನುಭವಿಸುತ್ತಿರುವ ಕರಾವಳಿ ಅಭಿವೃದ್ಧಿ ಪ್ರಾಧಿಕಾರವನ್ನು ಕರಾವಳಿ ಅಭಿವೃದ್ಧಿ ಮಂಡಳಿಯಾಗಿ ಪುನಾರಚನೆ ಮಾಡಲು ಬೇಕಾದ ವಿಧೇಯಕ ತರಲಾಗುವುದು ಎಂದು ಬಜೆಟ್‌ನಲ್ಲಿ ತಿಳಿಸಲಾಗಿದೆ. ಆದರೆ ಪಿಲಿಕುಳ ಪ್ರಾಧಿಕಾರ ಮಂಡಳಿಯಾಗಿ ಪುನಾರಚನೆ ಘೋಷಣೆ ಆಗಿಲ್ಲ.

    ಗ್ರಾಮಬಂಧ ಅನುಷ್ಠಾನ: ಮಲೆನಾಡು, ಕರಾವಳಿ ಭಾಗದಲ್ಲಿ 100 ಕೋಟಿ ರೂ.ವೆಚ್ಚದಲ್ಲಿ ಕಾಲು ಸಂಕ ನಿರ್ಮಿಸುವ ‘ಗ್ರಾಮಬಂಧ’ ಯೋಜನೆಯ ಅನುಷ್ಠಾನ ಮಾಡಲಾಗುವುದು. ದುರ್ಗಮ ಪ್ರದೇಶಗಳಲ್ಲಿ ಜನರ ಸಂಪರ್ಕ ವ್ಯವಸ್ಥೆಯನ್ನು ಸುಧಾರಿಸುವ ನಿರೀಕ್ಷೆ ಇರಿಸಲಾಗಿದೆ. ಮಂಗಳೂರು ಸೇರಿದಂತೆ 5 ಮಹಾನಗರ ಪಾಲಿಕೆಗಳಲ್ಲಿ 11 ಕೋಟಿ ರೂ.ವೆಚ್ಚದಲ್ಲಿ ದಿನಕ್ಕೆೆ ಕನಿಷ್ಠ 10 ಟನ್ ಸಾಮರ್ಥ್ಯದ ಮೆಟೀರಿಯಲ್ ರಿಕವರಿ ಸೌಲಭ್ಯಗಳ ಅಭಿವೃದ್ಧಿ, 10 ಮಹಾನಗರ ಪಾಲಿಕೆಗಳು ಮತ್ತು 59 ನಗರಸಭೆಗಳಲ್ಲಿ 2.50 ಕೋಟಿ ರೂ.ವೆಚ್ಚದಲ್ಲಿ ಒಟ್ಟು 89 ಸಮುದಾಯ ಮಿಶ್ರಗೊಬ್ಬರ ಘಟಕಗಳ ಅಭಿವೃದ್ಧಿ ಪ್ರಸ್ತಾಪಿಸಲಾಗಿದೆ. ಆಧುನಿಕ ತಂತ್ರಜ್ಞಾನದೊಂದಿಗೆ ಕರಾವಳಿ ಕಾವಲು ಪಡೆಯನ್ನು ಹಂತಹಂತವಾಗಿ ಬಲಪಡಿಸಲು ಕ್ರಮ, ಪ್ರಸಕ್ತ ಸಾಲಿನಲ್ಲಿ 2 ಕೋಟಿ ರೂ. ಅನುದಾನ ಇರಿಸಲಾಗಿದೆ. ಗೋಸಂರಕ್ಷಣೆಗಾಗಿ ಜಿಲ್ಲೆೆಗೆ ಒಂದರಂತೆ ಗೋಶಾಲೆ ಸ್ಥಾಪನೆಯ ಪ್ರಸ್ತಾವನೆಯೂ ಬಜೆಟ್‌ನಲ್ಲಿದೆ.

    ಇತರ ಪ್ರಮುಖಾಂಶಗಳು: ರಾಜ್ಯಾದ್ಯಂತ 30 ಕೋಟಿ ರೂ. ವೆಚ್ಚದಲ್ಲಿ ಮೀನು ಮಾರಾಟ ಘಟಕ ಹಾಗೂ ಮತ್ಸೃ ದರ್ಶಿನಿಗಳ ಸ್ಥಾಪನೆ, ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ಗಳಿಗೆ ಗರಿಷ್ಠ 10 ಲಕ್ಷ ರೂ.ವರೆಗೆ, ಶೇ.25ರಷ್ಟು ಷೇರು ಬಂಡವಾಳ ಒದಗಿಸಲು ಕ್ರಮ, ರಾಜ್ಯದ ನೀರಾವರಿ ಯೋಜನೆಗಳ ಜಾರಿಗೆ ಕ್ರಮ. ಎತ್ತಿನಹೊಳೆ ಯೋಜನೆಯ ತ್ವರಿತ ಅನುಷ್ಠಾನಕ್ಕೆ ಆದ್ಯತೆ, ಪಶ್ಚಿಮ ವಾಹಿನಿ ಯೋಜನೆ ಕುರಿತ ಮಾಸ್ಟರ್ ಪ್ಲಾೃನ್ ಅಡಿ ಮುಂದಿನ 5 ವರ್ಷಗಳಲ್ಲಿ 3986 ಕೋಟಿ ರೂ. ವೆಚ್ಚದಲ್ಲಿ 1348ಕಿಂಡಿ ಅಣೆಕಟ್ಟು ನಿರ್ಮಾಣ. 2021-22ನೇ ಸಾಲಿನಲ್ಲಿ 500 ಕೋಟಿ ರೂ. ಅನುದಾನ, ಅಲ್ಪಸಂಖ್ಯಾತರ ಏಳಿಗೆಗೆ 1,500 ಕೋಟಿ ರೂ. ಮೀಸಲು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts