More

    ಆಂಬುಲೆನ್ಸ್ ಟೆಂಡರ್ ಬ್ಲಂಡರ್; ನಿಯಮಗಳನ್ನೇ ಬದಲಾಯಿಸಿದ ಆರೋಗ್ಯ ಇಲಾಖೆ ಅಧಿಕಾರಿ

    | ಹರೀಶ್ ಬೇಲೂರು
    ಬೆಂಗಳೂರು: ಆರೋಗ್ಯ ಇಲಾಖೆಯಲ್ಲಿ ಹೊಸ ಆಂಬುಲೆನ್ಸ್ ಹಾಗೂ ವೈದ್ಯಕೀಯ ಉಪಕರಣಗಳ ಖರೀದಿ ಟೆಂಡರ್​ನಲ್ಲಿ ಭಾರಿ ಭ್ರಷ್ಟಾಚಾರ ನಡೆಯುತ್ತಿದ್ದು, ತಮಗಿಷ್ಟವಾದವರಿಗೆ ಟೆಂಡರ್ ನೀಡಲು ನಿಯಮಗಳನ್ನೇ ತಿರುಚಲಾಗುತ್ತಿದೆ ಎಂಬ ಗುರುತರ ಆರೋಪಗಳು ಕೇಳಿಬಂದಿವೆ.

    ಟೆಂಡರ್ ಪ್ರಕ್ರಿಯೆಗೆ ಸಂಬಂಧಿಸಿದಂತೆ ಅಗತ್ಯವಾದ ಮೌಲ್ಯಮಾಪನ ಸಮಿತಿ ಸಭೆ ಹಾಗೂ ತಾಂತ್ರಿಕ ಸಮಿತಿ ಸಭೆ ನಡೆದಿಲ್ಲ. ಆದರೂ, ನಿರ್ದಿಷ್ಟ ಕಂಪನಿಗೆ ಅನುಕೂಲ ಮಾಡಲು ಇಲಾಖೆ ಅಧಿಕಾರಿಗಳು, 90 ಕೋಟಿ ರೂ. ವೆಚ್ಚದ ಯೋಜನೆಯನ್ನು ಎರಡು ಭಾಗಗಳಾಗಿ ವಿಂಗಡಿಸಿದ್ದಾರೆ. ಈಗಾಗಲೇ ಜಿಮ್ ಪೋರ್ಟಲ್​ನಲ್ಲಿ ಟೆಂಡರ್ ಪ್ರಕ್ರಿಯೆ ಶುರುವಾಗಿದೆ.

    ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ (ಕೆಟಿಟಿಪಿ) ಕಾಯ್ದೆ ಅನ್ವಯ ಟೆಂಡರ್ ನಡೆಸುವ ಬದಲು ಅಧಿಕಾರಿಗಳು ನಿಯಮವನ್ನೇ ಬದಲಾಯಿಸಿದ್ದಾರೆ. ಇಲಾಖೆ ಆಯುಕ್ತರು ಸೇರಿ ಮೇಲಧಿಕಾರಿಗಳಿಗೆ ಟೆಂಡರ್ ಬಗ್ಗೆ ಸಮರ್ಪಕವಾಗಿ ಮಾಹಿತಿ ಕೊಡುವ ಬದಲು ತಪು್ಪ ಮಾಹಿತಿ ನೀಡಿ ಅಧಿಕಾರಿಗಳು ಯಾಮಾರಿಸಿದ್ದಾರೆ. ಜತೆಗೆ, ತರಾತುರಿಯಲ್ಲಿ ಟೆಂಡರ್ ಪ್ರಕ್ರಿಯೆ ಮುಗಿಸಲು ಹುನ್ನಾರ ನಡೆಸಿದ್ದಾರೆ.

    90 ಕೋಟಿ ರೂ. ವೆಚ್ಚದಲ್ಲಿ ಆಂಬುಲೆನ್ಸ್ ಹಾಗೂ ವೈದ್ಯಕೀಯ ಉಪಕರಣಗಳ ಖರೀದಿಗೆ ಹಿಂದಿನ ಸರ್ಕಾರ ಸಚಿವ ಸಂಪುಟದಲ್ಲಿ ಅನುಮೋದನೆ ನೀಡಿತ್ತು. ಬಳಿಕ ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಘೋಷಣೆಯಾಗಿತ್ತು. ನೀತಿಸಂಹಿತೆ ಜಾರಿಯಾದ ಕಾರಣಕ್ಕೆ ಯಾವುದೇ ಹೊಸ ಯೋಜನೆಗಳಿಗೆ ಟೆಂಡರ್ ನಡೆಸದಂತೆ ಆದೇಶಿಸಲಾಗಿತ್ತು. ಆದರೆ, ಈಗ ನಿಯಮ ಉಲ್ಲಂಘಿಸಿ ಟೆಂಡರ್ ಪೂರ್ಣಗೊಳಿಸಲು ಅಧಿಕಾರಿಗಳು ಮುಂದಾಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

    ಏನೇನು ದಾಖಲೆ ಸಲ್ಲಿಸಬೇಕಿತ್ತು?

    ಬಿಡ್​ದಾರರ ಅನುಭವದ ಮಾನದಂಡ ಪತ್ರ, ಕಾರ್ಯಕ್ಷಮತೆ ಪತ್ರ, ಕಂಪನಿ ವಹಿವಾಟು ಮತ್ತು ವಾರ್ಷಿಕ ವಹಿವಾಟು ಪ್ರಮಾಣಪತ್ರ ಸೇರಿ ಟೆಂಡರ್​ಗೆ ಸಂಬಂಧಪಟ್ಟ ದಾಖಲೆಗಳನ್ನು ಸಲ್ಲಿಸಬೇಕು. 90 ಕೋಟಿ ರೂ. ಮೌಲ್ಯದ ಟೆಂಡರ್​ನಲ್ಲಿ ವಾರ್ಷಿಕ 75 ಕೋಟಿ ರೂ. ವಹಿವಾಟು ನಡೆಸುವ ಕಂಪನಿಗಳು ಬಿಡ್ ಸಲ್ಲಿಸಲು ಅರ್ಹತೆ ಹೊಂದಿರುತ್ತವೆ. ಆದರೆ, ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಕೆಟಿಟಿಪಿ ನಿಯಮವನ್ನು ಗಾಳಿಗೆ ತೂರಿ ಟೆಂಡರನ್ನು ಎರಡು ಭಾಗಗಳಾಗಿ ವಿಂಗಡಿಸಿ 38 ಕೋಟಿ ರೂ. ಕಂಪನಿ ವಾರ್ಷಿಕ ವಹಿವಾಟಿಗೆ ಮಿತಿಗೊಳಿಸಿದ್ದಾರೆ. ಈ ಅಂಶವನ್ನು ಉದ್ದೇಶಪೂರ್ವಕವಾಗಿ ಅಧಿಕಾರಿ ಸೇರಿಸಿದ್ದಾರೆ ಎಂದು ಆರೋಪಿಸಲಾಗಿದೆ.

    ಏನೇನು ಖರೀದಿ?

    ಆಂಬುಲೆನ್ಸ್​ಗೆ ಸಂಬಂಧಪಟ್ಟಂತೆ ವೈದ್ಯಕೀಯ ಉಪಕರಣಗಳ ಖರೀದಿಗೆ ಈ ಯೋಜನೆ ರೂಪಿಸಲಾಗಿದೆ. ಆಂಬುಲೆನ್ಸ್ ಫ್ಯಾಬ್ರಿಕೇಷನ್, ಸಕ್ಷನ್ ಪಂಪ್, ಲಾರಿಂಗೋಸ್ಕೋಪ್ (ಧ್ವನಿಪೆಟ್ಟಿಗೆ ಪರೀಕ್ಷೆ ಸಾಧನ), ಆಕ್ಸಿಜನ್ ಸಿಲಿಂಡರ್, ಪೋರ್ಟಬಲ್ ಆಕ್ಸಿಜನ್ ಸಿಲಿಂಡರ್, ಕೃತಕ ಉಸಿರಾಟ ಘಟಕ ಸಲಕರಣೆ, ಟ್ರಾಲಿ ಸ್ಟ್ರೆಚರ್, ಸ್ಟ್ರೆಚರ್ ಸ್ಕೂಪ್, ವ್ಹೀಲ್ ಚೇರ್, ಬಿಪಿ ಉಪಕರಣ, ಸ್ಟೆಥೋಸ್ಕೋಪ್, ಗರ್ಭಕಂಠದ ಕಾಲರ್, ಡಿಫಿಬ್ರಿಲೇಟರ್ (ಹೃದಯ ಬಡಿತ ಸರಿಪಡಿಸುವ ಸಾಧನ), ಸಿರಿಂಜ್ ಪಂಪ್, ಎಕ್ಸ್​ಟ್ರಿಕೇಷನ್ ಟೂಲ್ ಕಿಟ್ ಇತ್ಯಾದಿ ಉಪಕರಣಗಳನ್ನು ಖರೀದಿಸಲಾಗುತ್ತದೆ.

    ಕಾಯ್ದೆ ಉಲ್ಲಂಘನೆ

    • ಅಧಿಕ ಮೊತ್ತದ ಟೆಂಡರ್ ಹಿನ್ನೆಲೆಯಲ್ಲಿ ಜೆಮ್ ಬದಲು ಇ-ಪೋರ್ಟಲ್​ನಲ್ಲಿ ಆಹ್ವಾನಿಸಬೇಕು
    • ಜಿಮ್ಲ್ಲಿ ಕರೆದಿರುವ ಟೆಂಡರ್​ನಲ್ಲಿ ಅಧಿಕಾರಿಗಳು ತಮಗೆ ಬೇಕಾದ ಕಂಪನಿಗೆ ನೀಡಲು ನಿಯಮ ರೂಪಿಸಿದ ಆರೋಪ
    • ಕಚೇರಿ ಮುಚ್ಚುವ ಸಮಯದಲ್ಲಿ ಜೆಮ್ಲ್ಲಿ ಟೆಂಡರ್ ಷರತ್ತು ಮಾರ್ಪಾಡು ದೂರು
    • ಇಡೀ ಟೆಂಡರ್ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಅನುಸರಿಸಿಲ್ಲ ಎಂಬ ಆರೋಪ
    • ಪ್ರಮುಖ ತಯಾರಕರು ಭಾಗವಹಿಸದಂತೆ ಟೆಂಡರ್ ವಿನ್ಯಾಸಗೊಳಿಸಿರುವ ಶಂಕೆ
    • ಕೆಟಿಟಿಪಿ ಕಾಯ್ದೆಯಲ್ಲಿ ಎಲ್ಲ ಬಿಡ್​ದಾರರಿಗೆ ಸಮಾನ ಅವಕಾಶ ಹಾಗೂ ಪಾಲ್ಗೊಳ್ಳಲು ಕನಿಷ್ಠ 7 ಕೆಲಸ ದಿನಗಳ ಕಾಲಾವಕಾಶ ಲಭ್ಯ
    • ಜೆಮ್ಲ್ಲಿ ಬಿಡ್​ದಾರರ ಭಾಗಿಯಾಗುವಿಕೆ ಮತ್ತು ಟೆಂಡರ್ ಸಲ್ಲಿಕೆಗೆ ಕೇವಲ ಮೂರು ದಿನವಷ್ಟೇ ಸಮಯ ಇರಲಿದೆ.

    ಹಳ್ಳಹಿಡಿದ ಆರೋಗ್ಯ ಕವಚ

    ರಾಜ್ಯದಲ್ಲಿ ತುರ್ತು ಆರೋಗ್ಯ ಸೇವೆಗೆ ಹೊಸ ರೂಪ ನೀಡಲು ಹಾಗೂ ಜನರ ಜೀವ ರಕ್ಷಣೆಗಾಗಿ ಆರೋಗ್ಯ ಕವಚ ಯೋಜನೆಯನ್ನು ಮೇಲ್ದರ್ಜೆಗೇರಿಸಲಾಗಿದೆ. ಆಧುನಿಕ ಸಾಧನಗಳನ್ನು ಬಳಸಿ ಉತ್ತಮ ಆರೋಗ್ಯ ಸೇವೆ ನೀಡುವುದು ಯೋಜನೆ ಉದ್ದೇಶವಾಗಿದೆ. ಆಂಬುಲೆನ್ಸ್ ಸೇವೆ ಉನ್ನತೀಕರಿಸಲಾಗುತ್ತಿದೆ. ಸಾವಿರಾರು ಕೋಟಿ ರೂ. ಮೌಲ್ಯದ ಟೆಂಡರನ್ನು ನಿರ್ದಿಷ್ಟ ಕಂಪನಿಗೆ ಕೊಡಿಸಲು ಕೆಲ ಅಧಿಕಾರಿಗಳು ಹುನ್ನಾರ ನಡೆಸಿದ್ದಾರೆ ಎನ್ನಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts