More

    ಟ್ರಾಫಿಕ್​ ದಂಡದ ಮೊತ್ತ ಜೇಬಿಗೆ ಇಳಿಸಿದ ಪೊಲೀಸ್!; ಆರೋಪ ಸಾಬೀತು..

    ಬೆಂಗಳೂರು: ಸಂಚಾರ ನಿಯಮ ಉಲ್ಲಂಘಿಸುವ ವಾಹನ ಸವಾರ/ಚಾಲಕರಿಂದ ದಂಡ ವಸೂಲಿ ವೇಳೆ ಪೊಲೀಸರು ರಸೀದಿ ಕೊಡದೆ ಜೇಬಿಗೆ ಇಳಿಸುವುದು ಗೊತ್ತಿರುವ ವಿಚಾರ. ಇಲ್ಲೊಂದು ಠಾಣೆ ಪೊಲೀಸರು ಲೆಕ್ಕ ತೋರಿಸಿ ಸರ್ಕಾರಕ್ಕೆ ಪಾವತಿಸಬೇಕಾದ ಹಣದಲ್ಲಿಯೂ ಮೋಸ ಮಾಡಿದ್ದಾರೆ.

    ಮಡಿಕೇರಿ ಗ್ರಾಮಾಂತರ ಠಾಣೆ ಪೊಲೀಸರು ಆರೋಪಕ್ಕೆ ಗುರಿಯಾದವರು. ಸಂಚಾರ ನಿಯಮ ಉಲ್ಲಂಘನೆ ವೇಳೆ ಸಂಗ್ರಹಿಸಿದ ದಂಡದ ಹಣವನ್ನು ಸರ್ಕಾರಕ್ಕೆ ಪಾವತಿ ಮಾಡದೆ ಸ್ವಂತಕ್ಕೆ ಬಳಸಿರುವ ಕುರಿತು ಆರೋಪ ಕೇಳಿಬಂದಿತ್ತು. ರಾಜ್ಯ ಪೊಲೀಸ್ ಪ್ರಧಾನ ಕಚೇರಿ ಆಂತರಿಕ ಲೆಕ್ಕ ಪರಿಶೋಧನ ಅಧೀಕ್ಷಕರು ತನಿಖೆ ನಡೆಸಿದಾಗ ಹಣ ದುರುಪಯೋಗ ಬೆಳಕಿಗೆ ಬಂದಿದೆ.

    2013ರ ಜನವರಿ-3 ರಿಂದ ಡಿಸೆಂಬರ್ 31ವರೆಗೆ ಸಂಚಾರ ನಿಯಮ ಉಲ್ಲಂಘಿಸಿದವರಿಂದ 3,52,300 ರೂ. ದಂಡ ವಸೂಲಿ ಮಾಡಿದ್ದಾರೆ. ಇದರಲ್ಲಿ 3,14,000 ರೂ. ಮಾತ್ರ ಸರ್ಕಾರಕ್ಕೆ ಜಮೆ ಮಾಡಿದ್ದಾರೆ. ಉಳಿಕೆ 38 ಸಾವಿರ ರೂ. ಸ್ವಂತಕ್ಕೆ ಬಳಸಿಕೊಂಡಿದ್ದು, ಸರ್ಕಾರಕ್ಕೆ ನಷ್ಟು ಉಂಟು ಮಾಡಿದ್ದಾರೆ ಎಂದು ಲೆಕ್ಕ ಪರಿಶೋಧನಾ ಅಧೀಕ್ಷಕರು ವರದಿಯಲ್ಲಿ ಉಲ್ಲೇಖಿಸಿದ್ದಾರೆ.

    ಪ್ರತಿದಿನ ಸಂಗ್ರಹಿಸಿದ ದಂಡದ ಮೊತ್ತವನ್ನು ಇನ್‌ಸ್ಪೆಕ್ಟರ್, ಎಸ್‌ಪಿ ಗಮನಕ್ಕೆ ತರಬೇಕು. ಜತೆಗೆ 24 ಗಂಟೆ ಒಳಗಾಗಿ ಸರ್ಕಾರಕ್ಕೆ ಜಮೆ ಮಾಡಬೇಕು. ಈ ಪೊಲೀಸರು ಇದ್ಯಾವುದೇ ನಿಯಮವನ್ನು ಪಾಲನೆ ಮಾಡಿಲ್ಲ. ಇದೇ ರೀತಿ ಪ್ರತಿವರ್ಷ ಸರ್ಕಾರಕ್ಕೆ ಜಮೆ ಮಾಡಬೇಕಾಗಿದ್ದ ಹಣವನ್ನು ದುರುಪಯೋಗ ಪಡಿಸಿಕೊಂಡಿರುವ ಅನುಮಾನ ವ್ಯಕ್ತವಾಗಿದೆ. ಎಲ್ಲ ದಾಖಲೆಗಳನ್ನು ಪರಿಶೀಲನೆ ನಡೆಸಲು ಸಾಧ್ಯವಾಗಿಲ್ಲ. ಮಡಿಕೇರಿ ಗ್ರಾಮಾಂತರ ಠಾಣೆ ಪೊಲೀಸರಿಂದ ಸರ್ಕಾರಕ್ಕೆ ನಷ್ಟ ಆಗಿರುವ ಮೊತ್ತ ಮತ್ತು ಅದಕ್ಕೆ ಶೇ.8 ಬಡ್ಡಿ ವಿಧಿಸಿ ಒಂದೇ ಕಂತಿನಲ್ಲಿ ವಸೂಲಿ ಮಾಡಬೇಕು ಎಂದು ವರದಿಯಲ್ಲಿ ಅಧೀಕ್ಷಕರು ಸರ್ಕಾರಕ್ಕೆ ವರದಿ ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts