More

    ಕಾಫಿ ನಾಡಿಗೆ ಒಲಿದ ನಿಗಮ-ಮಂಡಳಿ

    ಚಿಕ್ಕಮಗಳೂರು: ಜಿಲ್ಲೆಯ ಐದಕ್ಕೆ ಐದು ವಿಧಾನಸಭಾ ಕ್ಷೇತ್ರಗಳಲ್ಲಿಯೂ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದರೂ ಯಾರೊಬ್ಬರಿಗೂ ಸಚಿವರಾಗುವ ಅದೃಷ್ಟ ಒಲಿದಿರಲಿಲ್ಲ. ಐವರು ಶಾಸಕರ ಪೈಕಿ ಮೂರು ಮಂದಿ ಮೊದಲ ಪ್ರಯತ್ನದಲ್ಲೇ ಶಾಸಕರಾಗಿದ್ದರು. ಇನ್ನಿಬ್ಬರು ಎರಡನೇ ಬಾರಿ ಶಾಸಕರಾಗಿದ್ದರೂ ಸಚಿವ ಸ್ಥಾನ ಒಲಿದಿರಲಿಲ್ಲ. ನಿಗಮ-ಮಂಡಳಿ ಹಂಚಿಕೆ ವೇಳೆ ಕಾಫಿನಾಡನ್ನು ಪರಿಗಣನೆಗೆ ತೆಗೆದುಕೊಳ್ಳಲಾಗಿದ್ದು, ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ ಅವರಿಗೆ ಅದೃಷ್ಟ ಒಲಿದು ಬಂದಿದೆ.

    ಸತತ ಎರಡನೇ ಬಾರಿ ಜಯಗಳಿಸಿದ ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ ಅವರಿಗೆ ಸಚಿವ ಸಂಪುಟದಲ್ಲಿ ಸ್ಥಾನ ಸಿಗಲಿದೆ ಎನ್ನಲಾಗುತ್ತಿತ್ತು. ಆದರೆ ಕೊನೇ ಕ್ಷಣದಲ್ಲಿ ಸಚಿವ ಸ್ಥಾನ ಕೈತಪ್ಪಿತ್ತು. ಹೀಗಾಗಿಯೇ ನಿಗಮ-ಮಂಡಳಿ ಹಂಚಿಕೆ ವೇಳೆ ರಾಜೇಗೌಡ ಅವರಿಗೆ ಪ್ರಮುಖ ನಿಗಮದ ಜವಾಬ್ದಾರಿ ನೀಡಲಾಗುತ್ತದೆ ಎಂದು ಪಕ್ಷದ ನಾಯಕರು ಭರವಸೆ ನೀಡಿದ್ದರು. ಅದರಂತೆ ಇದೀಗ ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮದ ಅಧ್ಯಕ್ಷರನ್ನಾಗಿ ನೇಮಕ ಮಾಡಿ ಸಿಎಂ ಆದೇಶ ಹೊರಡಿಸಿದ್ದಾರೆ.
    ಮೊದಲ ಬಾರಿಗೆ ಶಾಸಕರಾಗಿರುವ ಮೂಡಿಗೆರೆಯ ನಯನಾ ಮೋಟಮ್ಮ, ಚಿಕ್ಕಮಗಳೂರಿನ ಎಚ್.ಡಿ.ತಮ್ಮಯ್ಯ ಹಾಗೂ ಕಡೂರಿನ ಆನಂದ್ ಅವರು ತಮಗೆ ಯಾವುದೇ ಸ್ಥಾನಮಾನ ಬೇಡ ಎಂದು ಪಕ್ಷದ ಮುಖಂಡರ ಬಳಿ ಹೇಳಿಕೊಂಡಿದ್ದರು. ತಾವು ಶಾಸಕರಾಗಿ ಕ್ಷೇತ್ರದ ಅಭಿವೃದ್ಧಿಯತ್ತ ಗಮನ ನೀಡುತ್ತೇವೆ. ಕ್ಷೇತ್ರದಲ್ಲಿರುವ ಜ್ವಲಂತ ಸಮಸ್ಯೆಗಳ ಪರಿಹಾರಕ್ಕೆ ಶ್ರಮಿಸುತ್ತೇವೆ ಎಂದು ಹೇಳಿದ್ದರು. ಜತೆಗೆ ಹಿರಿಯ ಶಾಸಕರಾಗಿರುವ ಟಿ.ಡಿ.ರಾಜೇಗೌಡ ಅವರ ಜತೆಗೆ ತರೀಕೆರೆ ಶಾಸಕ ಶ್ರೀನಿವಾಸ್ ಅವರನ್ನೂ ನಿಗಮ-ಮಂಡಳಿಗೆ ಪರಿಗಣಿಸುವಂತೆ ಒತ್ತಾಯಿಸಿದ್ದರು.
    ಹೀಗಾಗಿ ಚಿಕ್ಕಮಗಳೂರು ಜಿಲ್ಲೆಗೆ ಸಚಿವ ಸಂಪುಟದಲ್ಲಿ ಸ್ಥಾನ ಮಾನ ದೊರೆಯದೇ ಇದ್ದುದರಿಂದಾಗಿ ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ ಹಾಗೂ ತರೀಕೆರೆ ಶಾಸಕ ಶ್ರೀನಿವಾಸ್ ಅವರಿಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಒಲಿಯಬಹುದು ಎಂದು ಸ್ಥಳೀಯ ನಾಯಕರು ಭಾವಿಸಿದ್ದರು. ಆದರೆ ಇದೀಗ ಟಿ.ಡಿ.ರಾಜೇಗೌಡ ಅವರಿಗೆ ಮಾತ್ರ ಸಚಿವ ಸಂಪುಟ ದರ್ಜೆಯ ನಿಗಮ-ಮಂಡಳಿ ಸ್ಥಾನ ಸಿಕ್ಕಿದೆ.
    ಮುಂಬರುವ ಚುನಾವಣೆ ಗೆಲ್ಲುವ ಹೊಣೆ:
    ಟಿ.ಡಿ.ರಾಜೇಗೌಡ ಅವರನ್ನು ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮದ ಅಧ್ಯಕ್ಷರನ್ನಾಗಿ ನೇಮಕ ಮಾಡುವ ಮೂಲಕ ಜಿಲ್ಲೆಯಲ್ಲಿ ಕಾಂಗ್ರೆಸನ್ನು ಇನ್ನಷ್ಟು ಬಲಪಡಿಸಲು ಪಕ್ಷದ ಮುಖಂಡರು ಯೋಜನೆ ರೂಪಿಸಿದ್ದಾರೆ. ರಾಜೇಗೌಡ ಅವರಿಗೆ ಅಧಿಕಾರ ನೀಡುವ ಬಗ್ಗೆ ಯಾರೊಬ್ಬರೂ ವಿರೋಧ ವ್ಯಕ್ತಪಡಿಸಿರಲಿಲ್ಲ. ಅವರಿಗೆ ಅಧಿಕಾರ ನೀಡಿ ಎಂದು ಒತ್ತಾಯಿಸಿದವರೇ ಹೆಚ್ಚಿನ ಸಂಖ್ಯೆಯಲ್ಲಿದ್ದರು. ಹೀಗಾಗಿ ಅವರಿಗೆ ಸ್ಥಾನಮಾನ ನೀಡುವ ಮೂಲಕ ಮುಂಬರುವ ತಾಪಂ, ಜಿಪಂ ಹಾಗೂ ಲೋಕಸಭಾ ಚುನಾವಣೆಯಲ್ಲಿ ಕಮಾಲ್ ಮಾಡಲು ಕಾಂಗ್ರೆಸ್ ಮುಂದಾಗಿದೆ. ರಾಜೇಗೌಡ ಅವರು ಪಕ್ಷದ ತಳಮಟ್ಟದ ಕಾರ್ಯಕರ್ತರಿಂದ ಹಿಡಿದು ಜಿಲ್ಲಾ ಮಟ್ಟದ ನಾಯಕರೊಂದಿಗೂ ಉತ್ತಮ ವಿಶ್ವಾಸ ಹೊಂದಿದ್ದಾರೆ.
    ಕೇಂದ್ರ ಹಾಗೂ ರಾಜ್ಯ ನಾಯಕರು ನನ್ನನ್ನು ಗುರುತಿಸಿ ಅಧಿಕಾರ ನೀಡಿದ್ದಾರೆ. ಅವರಿಗೆ ಮುಜುಗರವಾಗದಂತೆ ಹಾಗೂ ನಿಗಮಕ್ಕೆ ಒಳ್ಳೆಯ ಹೆಸರು ಬರುವ ರೀತಿ ಕೆಲಸ ಮಾಡುತ್ತೇನೆ. ರಾಜ್ಯದಲ್ಲಿ ಬರ ಸ್ಥಿತಿಯಿದ್ದು, ನನ್ನ ನಿಗಮದ ಮೇಲೆ ಹೆಚ್ಚಿನ ಜವಾಬ್ದಾರಿಯಿದೆ. ಸೋಲಾರ್ ಸದ್ಬಳಕೆ ಮಾಡುವ ಜತೆಗೆ ನವೀಕರಿಸಬಹುದಾದ ಇಂಧನಗಳ ಬಳಕೆಗೆ ಹೆಚ್ಚಿನ ಒತ್ತು ನೀಡುವ ಮೂಲಕ ಬರ ನಿರ್ವಹಣೆಗೆ ಕ್ರಮ ಕೈಗೊಳ್ಳುತ್ತೇನೆ ಎನ್ನುತ್ತಾರೆ ಟಿ.ಡಿ.ರಾಜೇಗೌಡ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts