More

    160ಕಿ.ಮೀ ನಡೆದು ಬಂದ್ರೆ ಊರವರು ಮರ ಹತ್ತಿಸೋದಾ?

    ಭಿಲ್ವಾರಾ (ರಾಜಸ್ಥಾನ): ಲಾಕ್​ಡೌನ್​ ಅವಧಿಯಲ್ಲಿ ತನ್ನವರು, ತನ್ನ ಕುಟುಂಬದವರು ಎಲ್ಲರಿಂದಲೂ ದೂರವಾಗಿ ತಿಂಗಳಾನುಗಟ್ಟಲೆ ಒಬ್ಬಂಟಿಯಾಗಿದ್ದ ಯುವ ಕಾರ್ಮಿಕನೊಬ್ಬ ಬಲು ಆಸೆಯಿಂದ ತನ್ನೂರಿಗೆ 160 ಕಿ.ಮೀ ನಡೆದುಕೊಂಡು ಬಂದ. ಇನ್ನೇನು ತನ್ನ ಕುಟುಂಬದರ ಜತೆ ಕಾಲ ಕಳೆಯಬೇಕು ಎಂದರೆ ಊರವರೆಲ್ಲಾ ಸೇರಿ ಅವನನ್ನು ಮರ ಹತ್ತಿಸೋದಾ?

    ಹೌದು. ಇಂಥದ್ದೊಂದು ವಿಚಿತ್ರ ಆದರೂ ಅನಿವಾರ್ಯ ಎನಿಸಿರುವ ಘಟನೆ ರಾಜಸ್ಥಾನದ ಭಿಲ್ವಾರಾ ಗ್ರಾಮದಲ್ಲಿ ನಡೆದಿದೆ. 24 ವರ್ಷದ ಈ ಯುವಕನ ಹೆಸರು ಕಮಲೇಶ್​ ಮೀನಾ. ಈತ ತನ್ನೂರಿನಿಂದ ಸುಮಾರು 160 ಕಿ,ಮೀ ದೂರ ಇರುವ ಅಜ್ಮೀರ್​ದ ಕಿಷನ್​ಗಡದಲ್ಲಿ ಕೆಲಸಕ್ಕೆ ಹೋಗಿದ್ದ. ಕಾರ್ಮಿಕನಾಗಿ ಅಲ್ಲಿ ದುಡಿಯುತ್ತಿದ್ದ.

    ಇದನ್ನೂ ಓದಿ: ಚೀನಾ ಕೊಟ್ಟಿದೆ ಇನ್ನೊಂದು ಆಘಾತ… ಭಾರತಕ್ಕೂ ಕಾಲಿಟ್ಟಿದೆ ಈ ಜ್ವರ!
    ಅವನು ಅಲ್ಲಿ ಇರುವಾಗಲೇ ಲಾಕ್​ಡೌನ್​ ಘೋಷಣೆಯಾಗಿಬಿಟ್ಟಿತು. ಒಂಟಿಯಾಗಿದ್ದ ಕಮಲೇಶ್​ ತನ್ನೂರಿಗೆ ಮರಳು ಸಾಧ್ಯವಾಗಲೇ ಇಲ್ಲ. ಯಾವುದೇ ವಾಹನ ಸೌಕರ್ಯ ಇಲ್ಲದ ಕಾರಣ, ಹೇಗೆ ಬರುವುದೋ ತಿಳಿಯದಾಯಿತು. ಇದ್ದ ಊರಿನಲ್ಲಿ ಕೆಲಸವಿರಲಿಲ್ಲ. ಕೈಯಲ್ಲಿ ಇದ್ದ ದುಡ್ಡೆಲ್ಲಾ ಖಾಲಿಯಾಯಿತು. ಮನೆಗೆ ಬರೋಣ ಎಂದರೆ ವಾಹನವಿಲ್ಲ. ಇಂಥ ಸಂದಿಗ್ಧ ಪರಿಸ್ಥಿತಿಯಲ್ಲಿ ಇದ್ದ ಕಮಲೇಶ್​.

    ಹೇಗಾದರೂ ಸರಿ. ಊರಿಗೆ ವಾಪಸಾಗುವ ಮನಸ್ಸು ಮಾಡಿದ್ದ ಆತ ಅದೊಂದು ದಿನ ನಡೆದೇ ಹೋಗುವ ತೀರ್ಮಾನಕ್ಕೆ ಬಂದು ಬಿಟ್ಟ, ಅದೂ ಒಂದಲ್ಲ… ಎರಡಲ್ಲ… 160 ಕಿ.ಮೀ! ಹೇಳಿ ಕೇಳಿ ಕಾರ್ಮಿಕ, ದೇಹದಲ್ಲಿ ಬಲ ಜಾಸ್ತಿಯಲ್ಲವೆ? ಮೇಲಾಗಿ ತವರಿನ ಹಂಬಲ. ಇವೆಲ್ಲವೂ ಸೇರಿ ಹೊರಡುವ ಧೈರ್ಯ ಮಾಡಿದ.

    ಇದನ್ನೂ ಓದಿ: ಒಬ್ಬನಿಂದ 13 ಮಂದಿ ಜೀವಹಿಂಡುತಿದೆ ಕರೊನಾ! ನಿಮ್ಮೂರಿಗೂ ಬಂದಿದ್ಯಾ? ಇಲ್ಲಿದೆ ವಿವರ

    ಸರಿ. ಹೊರಟೇ ಬಿಟ್ಟ. ಅದೆಷ್ಟು ದಿನ ನಡೆದನೋ ಗೊತ್ತಿಲ್ಲ. ಒಟ್ಟಿನಲ್ಲಿ 160 ಕಿ.ಮೀ ನಡೆದು ತನ್ನ ಗ್ರಾಮ ತಲುಪಿದ. ಇನ್ನೇನು ತನ್ನ ಸ್ನೇಹಿತನ್ನು ಭೇಟಿ ಮಾಡಿ, ತನ್ನ ಪಾಲಕರನ್ನು ಅಪ್ಪಿಕೊಂಡು ತನ್ನ ವೇದನೆಯನ್ನು ಹೇಳಬೇಕು ಎಂದುಕೊಂಡಿದ್ದ ಈತ. ಆದರೆ ಕರೊನಾ ವೈರಸ್​ ದಿನಗಳಲ್ಲವೆ? ಯಾರನ್ನೂ ಯಾರೂ ನಂಬುವಂತಿಲ್ಲ. ಅದೂ ಮೇಲಾಗಿ ಅಷ್ಟು ದೂರ ನಡೆದು ಬಂದಿದ್ದಾನೆ. ಯಾರ್ಯಾರ ಸಂಪರ್ಕಕ್ಕೆ ಬಂದಿದ್ದಾನೋ ಗೊತ್ತಿಲ್ಲ.

    ಆದ್ದರಿಂದ ಊರವರೆಲ್ಲಾ ಆತನನ್ನು ಗ್ರಾಮದ ಬಾಗಿಲಿನಲ್ಲಿಯೇ ತಡೆದುಬಿಟ್ಟರು. ಮೊದಲು ನೀನು 14 ದಿನ ಕ್ವಾರಂಟೈನ್​ನಲ್ಲಿ ಇರು. ಕರೊನಾ ಸೋಂಕು ಪತ್ತೆಯಾಗದಿದ್ದರೆ ಒಟ್ಟಿಗೆ ಇರುವೆಯಂತಿ ಎಂದರು. ಆದರೆ ಕ್ವಾರಂಟೈನ್​ಗೆ ಪ್ರತ್ಯೇಕ ಮನೆ ಎಲ್ಲಿ? ಎಲ್ಲರೂ ಯೋಚನೆ ಮಾಡಿ ಕೊನೆಗೊಂದು ನಿರ್ಧಾರಕ್ಕೆ ಬಂದರು. ಅದು ಆತನನ್ನು ಮರದ ಮೇಲೆ ಮನೆ ಮಾಡಿಕೊಡುವುದು ಎಂದು!

    ಇದನ್ನೂ ಓದಿ: ಮದ್ಯ ಪ್ರೇಮಿಗಳಿಗೆ ಹೂವು ಹಾಕಿ ಸ್ವಾಗತ- ವೀಡಿಯೋ ವೈರಲ್

    ಕೊನೆಗೂ ಮನೆ ಸಮೀಪದ ಮರದ ಮೇಲೆ ಅವನು ಕುಳಿತುಕೊಳ್ಳಲು ಜಾಗ ಸಿದ್ಧವಾಗಿದೆ. ಈ ನಡುವೆಯೇ ಆತನನ್ನು ವೈದ್ಯರು ತಪಾಸಣೆಗೆ ಒಳಪಡಿಸಿದ್ದಾರೆ. ಯಾವುದೇ ಸೋಂಕು ಪತ್ತೆಯಾಗಿಲ್ಲ. ಆದರೂ ರಿಸ್ಕ್​ ತೆಗೆದುಕೊಳ್ಳಲು ಗ್ರಾಮಸ್ಥರು ಸಿದ್ಧರಿಲ್ಲ. ಆದ್ದರಿಂದ ಮರದ ಮೇಲೆ ಮನೆಯನ್ನು ನಿರ್ಮಿಸಿಕೊಟ್ಟು, ಅಲ್ಲಿಯೇ ಆಹಾರ ಪೂರೈಕೆ ಮಾಡುತ್ತಿದ್ದಾರೆ. ಜತೆಗೆ, ವೈದ್ಯರು ಕೂಡ ಈತನ ತಪಾಸಣೆ ನಡೆಸುತ್ತಿದ್ದಾರೆ.

    ಒಬ್ಬ ವ್ಯಕ್ತಿಯಿಂದ ಊರಿನವರಿಗೆಲ್ಲಾ ಸೋಂಕು ಹರಡುವ ಸಾಧ್ಯತೆ ಇರುವ ಕಾರಣ, ವೈದ್ಯರ ತಪಾಸಣೆಯನ್ನೂ ಗ್ರಾಮಸ್ಥರು ಅಚ್ಚುಕಟ್ಟಾಗಿ ಮಾಡಿಸುತ್ತಿದ್ದಾರೆ. ಅಂತೂ ಪಾಪ ಸದ್ಯ ಈತ ಮರದ ಮೇಲೆ ಕ್ವಾರಂಟೈನ್​ನಲ್ಲಿ ಇದ್ದಾನೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts