More

    ಕರೊನಾ ಸೋಂಕು, ಕವಿಯಿತು ಮಂಕು

    ಮೃತ್ಯುಂಜಯ ಕಲ್ಮಠ ಗದಗ

    2020ರಲ್ಲಿ ಜನಜೀವನವೇ ಬಹುತೇಕವಾಗಿ ಸ್ಥಗಿತಗೊಂಡಿತು. ಕಾರಣ ಕರೊನಾ ಹೆಮ್ಮಾರಿಯ ಕರಿಛಾಯೆ. ಮದುವೆಯಂತಹ ಸಂಭ್ರಮಕ್ಕೂ, ಅಂತ್ಯಸಂಸ್ಕಾರದಂತಹ ಅನಿವಾರ್ಯತೆ ನೆರವೇರಿಸಲೂ ಅಡಚಣೆ ತಂದಿತು. ಕೆಲ ತಿಂಗಳವರೆಗೆ ಮನೆಯಿಂದ ಹೊರಗೆ ಕಾಲಿಡದಂತಹ ಸ್ಥಿತಿ. ಮುಖಕ್ಕೆ ಮಾಸ್ಕ್ ಧರಿಸಿ, ಪದೇಪದೆ ಕೈಗೆ ಸ್ಯಾನಿಟೈಸರ್ ಹಾಕಿ ಸುರಕ್ಷತೆ ಮತ್ತು ಶುಚಿತ್ವ ಕಾಯ್ದುಕೊಂಡರೂ ಸೋಂಕು ತಗಲುವ ಆತಂಕ ಬೆಂಬಿಡದೆ ಕಾಡಿತು.

    ಜಿಲ್ಲೆಯಲ್ಲಿ ಕರೊನಾ ರುದ್ರನರ್ತನ ಕಡಿಮೆಯದ್ದೇನಲ್ಲ. ಜಿಲ್ಲಾಸ್ಪತ್ರೆ ಆವರಣದಲ್ಲಿನ 100 ಹಾಸಿಗೆ ಸಾಮರ್ಥ್ಯದ ಜಿಲ್ಲಾ ಆಯುಷ್ ಆಸ್ಪತ್ರೆಯನ್ನು ಕೋವಿಡ್ ಆಸ್ಪತ್ರೆಯನ್ನಾಗಿ ಪರಿವರ್ತಿಸಿ ಸೋಂಕಿತರಿಗೆ ಚಿಕಿತ್ಸೆ ನೀಡಲಾಯಿತು. ಆದರೂ, ಕರೊನಾ ಸೇನಾನಿಗಳು, ಶಿಕ್ಷಕರು, ಆಂಬುಲೆನ್ಸ್ ಚಾಲಕರು, ಅನೇಕ ವೃದ್ಧರು, ಮಕ್ಕಳು ಸೋಂಕಿಗೆ ಬಲಿಯಾದರು. ಏಪ್ರಿಲ್, ಮೇ ತಿಂಗಳಲ್ಲಿ ದಿನಕ್ಕೆ ಒಬ್ಬಿಬ್ಬರಲ್ಲಿ ಮಾತ್ರ ಸೋಂಕು ದೃಢಪಟ್ಟಿತ್ತು. ತದನಂತರ ಸಮುದಾಯಕ್ಕೆ ವೈರಸ್ ಹಬ್ಬಿದ್ದರಿಂದ ಜೂನ್, ಜುಲೈ, ಆಗಸ್ಟ್​ನಲ್ಲಿ ಸೋಂಕಿತರ ಸಂಖ್ಯೆ ಪ್ರತಿದಿನಕ್ಕೆ 100- 150ರ ಗಡಿ ದಾಟಿತು. ಗದಗ ರಂಗನವಾಡಿ ಗಲ್ಲಿಯ 80 ವರ್ಷದ ವೃದ್ಧೆಯೊಬ್ಬರಿಗೆ ಏಪ್ರಿಲ್ 6ಕ್ಕೆ ಕರೊನಾ ತಗುಲಿತು. ಅಲ್ಲಿಂದ ಇಲ್ಲಿಯವರೆಗೆ 141 ಜನರು ಮೃತಪಟ್ಟಿದ್ದಾರೆ. ಮುಂಡರಗಿ ತಾಲೂಕಾಸ್ಪತ್ರೆ ವೈದ್ಯಾಧಿಕಾರಿ ಬಸವರಾಜ (42) ಸೋಂಕಿನಿಂದ ಮೃತಪಟ್ಟರು. ಇದರಿಂದ ಜಿಲ್ಲೆಯ ವೈದ್ಯರು ತಲ್ಲಣಗೊಂಡರು. ಕರೊನಾದಿಂದ ಗದಗ ಗ್ರಾಮೀಣ ವಲಯದಲ್ಲಿ 1, ರೋಣ ವಲಯದಲ್ಲಿ 1, ಶಿರಹಟ್ಟಿ ವಲಯದಲ್ಲಿ 1 ಮತ್ತು ನರಗುಂದ ವಲಯದಲ್ಲಿ 1 ಸೇರಿ ನಾಲ್ವರು ಶಿಕ್ಷಕರು ಮೃತಪಟ್ಟಿದ್ದಾರೆ.

    ಕೋವಿಡ್ ಆಸ್ಪತ್ರೆಯಾದ ಶಾಲೆ: ಗದಗ ನಂತರ ಮುಂಡರಗಿಯಲ್ಲಿ ಸೋಂಕು ತೀವ್ರವಾಗಿ ಕಾಣಿಸಿತು. ಬೆಂಗಳೂರಿಗೆ ಹೋಗಿ ಬಂದಿದ್ದ ಇಲ್ಲಿನ ಇಲಾಖೆಯೊಂದರ ನೌಕರನಿಗೆ ಸೋಂಕು ದೃಢಪಟ್ಟಿತು. ಇವರ ಸಂಪರ್ಕಕ್ಕೆ ಬಂದ 50ಕ್ಕೂ ಹೆಚ್ಚು ಜನರಿಗೆ ಸೋಂಕು ತಗುಲಿ ಆತಂಕ ಸೃಷ್ಟಿಸಿತು. ಜಿಮ್ಸ್​ನಲ್ಲಿ ಕೋವಿಡ್ ಹಾಸಿಗೆ ಭರ್ತಿ ಆಗಿದ್ದರಿಂದ ಮುಂಡರಗಿ ತಾಲೂಕಿನ ಹಿರೇವಡ್ಡಟ್ಟಿಯ ಮುರಾರ್ಜಿ ಶಾಲೆಯನ್ನೇ ಕೋವಿಡ್ ಆಸ್ಪತ್ರೆಯನ್ನಾಗಿ ಪರಿವರ್ತಿಸಿ ಚಿಕಿತ್ಸೆ ನೀಡಿದ್ದು ರಾಜ್ಯದಲ್ಲಿ ಪ್ರಥಮ ಎನಿಸಿತು. ಜಿಮ್್ಸ ನಿರ್ದೇಶಕ ಡಾ. ಪಿ.ಎಸ್. ಭೂಸೆರಡ್ಡಿ ಸೇರಿ ಅನೇಕ ವೈದ್ಯರು ಸೋಂಕಿಗೆ ತುತ್ತಾದರು. ಅವರೆಲ್ಲರೂ ಚಿಕಿತ್ಸೆ ಪಡೆದು ಗುಣವಾದರು.

    ಶಾಲೆ-ಕಾಲೇಜ್​ಗಳು ಬಂದ್: ಕರೊನಾ ಸೋಂಕು ವ್ಯಾಪಿಸಿದ ನಂತರ ಶಾಲೆ-ಕಾಲೇಜ್​ಗಳು ನಡೆಯಲಿಲ್ಲ. ಅನೇಕ ಖಾಸಗಿ ಶಾಲೆ-ಕಾಲೇಜ್​ಗಳು ಮಕ್ಕಳಿಗೆ ಆನ್​ಲೈನ್ ಮೂಲಕ ಶಿಕ್ಷಣ ನೀಡುತ್ತಿವೆ. ಸರ್ಕಾರಿ ಶಾಲೆಗಳ ಮಕ್ಕಳಿಗೆ ಸರ್ಕಾರವು ವಿದ್ಯಾಗಮ ಯೋಜನೆ ಆರಂಭಿಸಿತಾದರೂ ಸೋಂಕಿನ ಭಯದಿಂದ ತರಗತಿಗಳು ಸಮರ್ಪಕವಾಗಿ ನಡೆಯಲಿಲ್ಲ.

    ನಿರಾಸೆ ಮೂಡಿಸಿದ ಎಸ್ಸೆಸ್ಸೆಲ್ಸಿ ಫಲಿತಾಂಶ: ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶದಲ್ಲಿ ಜಿಲ್ಲೆ 32ನೇ ಸ್ಥಾನ ಪಡೆದು ನಿರಾಸೆ ಮೂಡಿಸಿತು. ಓದಿನ ಮನೆ ಎಂಬ ವಿನೂತನ ಪ್ರಯೋಗದ ಮೂಲಕ ಶಾಲೆ ಅವಧಿ ನಂತರವೂ ಮಕ್ಕಳಿಗೆ ಪಾಠ ಮಾಡಲಾಯಿತು. ಗುಂಪು ಚರ್ಚೆ, ರಸಪ್ರಶ್ನೆ, ಸಂವಾದ, ವ್ಯಕ್ತಿತ್ವ ವಿಕಸನ, ಪಾಲಕರ ಸಭೆ, ರಜೆ ದಿನಗಳಲ್ಲಿ ವಿಶೇಷ ತರಗತಿಗಳ ಮೂಲಕ ತರಬೇತಿ ನೀಡಿದರೂ ಫಲಿತಾಂಶ ಕುಸಿತ ಕಂಡಿತು. ದ್ವಿತೀಯ ಪಿಯುಸಿ ಫಲಿತಾಂಶ ಕೊಂಚ ಸಮಾಧಾನ ತಂದಿದ್ದು, ರಾಜ್ಯದಲ್ಲಿ 26ನೇ ಸ್ಥಾನದಲ್ಲಿದ್ದ ಜಿಲ್ಲೆ 22ನೇ ಸ್ಥಾನ ಗಳಿಸಿತು.

    ನನಸಾಗದ ಶಾಶ್ವತ ಪರಿಹಾರದ ಕನಸು: ಮಲಪ್ರಭಾ ನದಿಯ ಪ್ರವಾಹದಿಂದ ಸರ್ವಸ್ವವನ್ನೂ ಕಳೆದುಕೊಳ್ಳುವ ಜಿಲ್ಲೆಯ ಗ್ರಾಮಸ್ಥರಿಗೆ ಶಾಶ್ವತ ಪರಿಹಾರದ ಕನಸು ಮರೀಚಿಕೆಯಾಯಿತು. ನರಗುಂದ, ರೋಣ ತಾಲೂಕಿನ 15 ಕ್ಕೂ ಹೆಚ್ಚು ಗ್ರಾಮಗಳು ಪ್ರವಾಹಕ್ಕೆ ತುತ್ತಾಗುತ್ತಿವೆ. ನರಗುಂದ ತಾಲೂಕಿನ ಲಕಮಾಪುರ ಗ್ರಾಮವಂತೂ ಪ್ರತಿವರ್ಷ ನಡುಗಡ್ಡೆಯಂತಾಗುತ್ತದೆ. ಗ್ರಾಮ ಸ್ಥಳಾಂತರಿಸಿ ಬೇರೆಡೆ ಸೂರು ಕಲ್ಪಿಸಬೇಕೆಂಬ ಗ್ರಾಮಸ್ಥರ ಬೇಡಿಕೆ ಮಾತ್ರ ಈಡೇರಲಿಲ್ಲ.

    ಬಡವರಿಗಾಗಿ ಅಭಿಯಾನ: ಲಾಕ್​ಡೌನ್​ನಿಂದ ಅತಂತ್ರರಾದ ಕೂಲಿ ಕಾರ್ವಿುಕರು, ಬಡವರಿಗೆ ದಾನಿಗಳು ರೇಷನ್ ಕಿಟ್ ವಿತರಿಸಿ ನೆರವಾದರು. ಬಿಜೆಪಿ ಮುಖಂಡ ಅನಿಲ ಮೆಣಸಿನಕಾಯಿ ಜನರಿಗಾಗಿ ದವಸ ಧಾನ್ಯಗಳ ಭಿಕ್ಷೆ ಅಭಿಯಾನ ಆರಂಭಿಸಿದರು. ಸಂಗ್ರಹವಾದ ದವಸ ಧಾನ್ಯವನ್ನು ಪ್ಯಾಕ್ ಮಾಡಿ ಗದಗ ವಿಧಾನಸಭೆ ಕ್ಷೇತ್ರದ 15 ಸಾವಿರ ಬಡವರಿಗೆ ಹಂಚಿದರು. ವ್ಯಾಪಾರಸ್ಥರು, ಶ್ರೀಮಂತರು ತಂಡ ಮಾಡಿಕೊಂಡು ಬಡವರಿಗೆ ಸಹಾಯಹಸ್ತ ಚಾಚಿದರು.

    ಸಿಎಂ ಸಾಂತ್ವನ, ಪರಿಹಾರ: 108ರ ಆಂಬುಲೆನ್ಸ್ ಚಾಲಕ ನರಗುಂದ ತಾಲೂಕಿನ ಕೊಣ್ಣೂರು ಗ್ರಾಮದ ಉಮೇಶ ಹಡಗಲಿ (37) ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತದಿಂದ ಮೃತಪಟ್ಟರು. ಆಗ ಅವರ ಪತ್ನಿ ಜ್ಯೋತಿ ಅವರಿಗೆ ಮುಖ್ಯಮಂತ್ರಿ ಯಡಿಯೂರಪ್ಪ ದೂರವಾಣಿ ಕರೆ ಮಾಡಿ ಸಾಂತ್ವನ ಹೇಳಿದ್ದಲ್ಲದೆ, 5 ಲಕ್ಷ ರೂ. ಪರಿಹಾರ ಘೋಷಿಸಿದರು.

    ವಾರ್ ರೂಂ ಆರಂಭ: ಜಿಮ್ಸ್​ನಲ್ಲಿ ಕೋವಿಡ್ ವಾರ್ ರೂಂ ಸ್ಥಾಪನೆಗೊಂಡಿತು. ಕೋವಿಡ್ ಪರೀಕ್ಷೆಗಾಗಿ ವ್ಯಕ್ತಿಯಿಂದ ತೆಗೆದುಕೊಂಡ ಗಂಟಲ ದ್ರವ ಮಾದರಿಯನ್ನು ಬೆಂಗಳೂರು, ಬಳ್ಳಾರಿ, ಶಿವಮೊಗ್ಗಕ್ಕೆ ಕಳುಹಿಸಬೇಕಿತ್ತು. ಹೀಗಾಗಿ, ಅದರ ವೈದ್ಯಕೀಯ ವರದಿ ಬರುವುದು 2-3 ದಿನವಾಗುತ್ತಿತ್ತು. ಈ ಸಮಸ್ಯೆ ನಿವಾರಣೆಗಾಗಿ ಜಿಲ್ಲಾಡಳಿತವು ಜಿಮ್್ಸ ಆಸ್ಪತ್ರೆಯಲ್ಲಿ 1 ಕೋಟಿ ರೂಪಾಯಿ ವೆಚ್ಚದಲ್ಲಿ ಏ. 22 ರಂದು ಟ್ರೂನಾಟ್ ಮಷಿನ್​ವುಳ್ಳ ಕೋವಿಡ್- 19 ಪ್ರಯೋಗಾಲಯ ಆರಂಭಿಸಿತು. ಇಲ್ಲಿ ಒಂದೇ ಸಲಕ್ಕೆ 60ರಂತೆ ದಿನಕ್ಕೆ 300 ರೋಗಿಗಳ ಕೋವಿಡ್-19 ಸ್ಯಾಂಪಲ್​ಗಳನ್ನು ಪರೀಕ್ಷೆಗೆ ಒಳಪಡಿಸಬಹುದು.

    ಲಾಕ್​ಡೌನ್​ನಿಂದ ಗೋವಾಕ್ಕೆ ವಲಸೆ ಹೋಗಿದ್ದ ಜಿಲ್ಲೆಯ ನಾಗಾವಿತಾಂಡಾ, ಬೆಳದಡಿ, ಅಡವಿಸೋಮಾಪುರ ತಾಂಡಾ, ಕಳಸಾಪುರತಾಂಡಾ ಜನರು ಸ್ವಗ್ರಾಮಕ್ಕೆ ಬರಲಾಗಲಿಲ್ಲ. ಲಾಕ್​ಡೌನ್ ಸಡಿಲಿಕೆ ಬಳಿಕ ಅವರು ಸ್ವಗ್ರಾಮಕ್ಕೆ ವಾಪಸಾಗಲು ಜಿಲ್ಲಾಡಳಿತ ನೆರವಾಯಿತು.

    ಸುಂದರೇಶಬಾಬು ನೂತನ ಡಿಸಿ: ಮಾರ್ಚ್​ನಲ್ಲಿ ಎಂ. ಸುಂದರೇಶಬಾಬು ನೂತನ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದರು. ಮೂರು ವರ್ಷಗಳಿಂದ ಜಿಲ್ಲಾಧಿಕಾರಿಯಾಗಿದ್ದ ಎಂ.ಜಿ. ಹಿರೇಮಠ ಬೆಳಗಾವಿ ಜಿಲ್ಲಾಧಿಕಾರಿಯಾಗಿ ವರ್ಗಾವಣೆಗೊಂಡರು. ಗದಗ ವಾರ್ತಾಧಿಕಾರಿ ವೆಂಕಟೇಶ ನವಲೆ ಸೇವಾ ನಿವೃತ್ತಿ ಹೊಂದಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts