More

    ವಿಷ ಕಾರುವವರ ಮಧ್ಯೆ ಸಿಎಂ ಯಡಿಯೂರಪ್ಪ ಸತ್ಯದ ಪರ ನಿಂತಿದ್ದಾರೆ, ಅವರಿಗೆ ಮನದಾಳದ ಧನ್ಯವಾದ ಎಂದ ಮಾಜಿ ಸಿಎಂ ಎಚ್​.ಡಿ.ಕುಮಾರಸ್ವಾಮಿ

    ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿಯವರು ಮಗ ನಿಖಿಲ್​ ಮದುವೆಯನ್ನು ಅದ್ಧೂರಿಯಾಗಿ ಮಾಡಲು ನಿರ್ಧಾರ ಮಾಡಿದ್ದರು. ಆದರೆ ಕರೊನಾ ವೈರಸ್​, ಲಾಕ್​ಡೌನ್​ನಿಂದಾಗಿ ರಾಮನಗರದ ಕೇತಗಾನಹಳ್ಳಿಯಲ್ಲಿರುವ ತೋಟದ ಮನೆಯಲ್ಲಿ ಸರಳವಾಗಿ ನಡೆದಿತ್ತು.

    ಆದರೆ ಎಚ್​.ಡಿ.ಕುಮಾರಸ್ವಾಮಿಯವರ ಮನೆ ಮದುವೆಯಲ್ಲಿ ಲಾಕ್​ಡೌನ್ ನಿಯಮ ಉಲ್ಲಂಘನೆ ಆಗಿದೆ. ಸಾಮಾಜಿಕ ಅಂತರ ಪಾಲನೆಯಾಗಿಲ್ಲ ಎಂಬ ಆರೋಪ ಕೇಳಿಬರುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲೂ ಸಿಕ್ಕಾಪಟೆ ಚರ್ಚೆಯಾಗುತ್ತಿದೆ. ಮದುವೆಯಲ್ಲಿ ಭಾಗವಹಿಸಿದ್ದವರು ಮಾಸ್ಕ್​ ಧರಿಸಿಲ್ಲ ಎಂಬ ಮಾತೂ ಕೇಳಿಬಂದಿತ್ತು.

    ಅದಕ್ಕೆಲ್ಲ ತೆರೆ ಎಳೆಯುವಂತೆ ಮುಖ್ಯಮಂತ್ರಿ ಯಡಿಯೂರಪ್ಪನವರು ನಿನ್ನೆ ಸುದ್ದಿಗೋಷ್ಠಿಯಲ್ಲಿ ಕುಮಾರಸ್ವಾಮಿಯವರ ಪರ ಮಾತನಾಡಿದ್ದರು. ಅನುಮತಿ ಪಡೆದೇ ನಿಖಿಲ್​ ಮತ್ತು ರೇವತಿ ಮದುವೆ ಮಾಡಿದ್ದಾರೆ. ಕರೊನಾ ನಿಯಂತ್ರಣಕ್ಕಾಗಿ ವಿಧಿಸಿದ ನಿಯಮಗಳನ್ನು ಪಾಲನೆ ಮಾಡಿದ್ದಾರೆ. ಕಡಿಮೆ ಜನರನ್ನು ಸೇರಿಸಿ ಮದುವೆ ನೆರವೇರಿಸಿದ್ದಕ್ಕೆ ಧನ್ಯವಾದ ಸಲ್ಲಿಸುತ್ತೇನೆ ಎಂದಿದ್ದರು.
    ಹಾಗೇ ಇಂದು ಎಚ್​.ಡಿ.ಕುಮಾರಸ್ವಾಮಿಯವರು ಇಂದು ಟ್ವೀಟ್ ಮಾಡಿ ಕೆಲವು ವಿಚಾರಗಳ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

    ನಿಖಿಲ್​ ವಿವಾಹದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡಿದ್ದೇವೆ. ನಿಯಮ ಪಾಲನೆ ಮಾಡಿದ್ದೇವೆ. ಆದರೂ ಇದ್ಯಾವುದೂ ಆಗೇ ಇಲ್ಲ ಎಂಬಂತಹ ಚರ್ಚೆಗಳು ನಡೆದವು. ರಾಜಕೀಯ ದ್ವೇಷಕ್ಕಾಗಿ ಕೆಲವರು ಶುಭ ಸಮಾರಂಭದಲ್ಲೂ ವಿಷಕಾರಿದರು. ಆದರೆ ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪನವರು ಇವೆಲ್ಲವನ್ನೂ ನಿರಕಾರಿಸುವ ಮೂಲಕ ಸತ್ಯದ ಪರ ನಿಂತಿದ್ದಾರೆ. ರಾಜ್ಯ ರಾಜಕಾರಣದ ದೊಡ್ಡ ಕುಟುಂಬ ಸರಳವಾಗಿ ವಿವಾಹ ಸಮಾರಂಭ ಮಾಡಿದೆ ಎಂದು ಹೇಳುವ ಮೂಲಕ ಯಡಿಯೂರಪ್ಪ ಸಹೃದಯದ ಮಾತುಗಳನ್ನಾಡಿದ್ದಾರೆ. ಅವರಿಗೆ ಮನದಾಳದ ಧನ್ಯವಾದಗಳು ಎಂದು ಎಚ್​ಡಿಕೆ ಟ್ವೀಟ್​ ಮಾಡಿದ್ದಾರೆ.

    ನನ್ನ ಒಡನಾಡಿಗಳು, ಹಿತೈಷಿಗಳು, ಜನರು, ಕಾರ್ಯಕರ್ತರನ್ನೆಲ್ಲ ಒಟ್ಟಾಗಿ ಸೇರಿಸಿ ಶುಭಸಮಾರಂಭ ನಡೆಸಲು ವೈಯಕ್ತಿಕವಾಗಿ ನನಗೆ ಇದ್ದ ಒಂದೇ ಸುವರ್ಣ ಅವಕಾಶ ನಿಖಿಲ್​ ಮದುವೆಯಾಗಿತ್ತು. ಆದರೂ ಆ ಆಸೆಯನ್ನು ಬದಿಗೊತ್ತಿ, ಲಾಕ್​ಡೌನ್​ ನಿಯಮ ಪಾಲಿಸಿ, ಮದುವೆ ಮಾಡಿದ್ದೇವೆ ಎಂದಿದ್ದಾರೆ.

    ನಿಖಿಲ್​ ವಿವಾಹದಲ್ಲೂ ರಾಜಕೀಯ ಹುಡುಕಿದ ಸಾಮಾಜಿಕ ಮಾಧ್ಯಮಗಳ ಕೆಲವು ಹುಳುಕು ಮನಸಿನ ಮಂದಿ ತಮ್ಮ ಮನಸಲ್ಲಿರುವ ವಿಷ ಕಾರಿಕೊಂಡಿದ್ದಾರೆ. ಅಂಥವರು “ಮನದ ಕೋಪ ತನ್ನ ಅರಿವಿನ ಕೇಡು, ಮನೆಯೊಳಗಣ ಕಿಚ್ಚು ಮನೆಯ ಸುಟ್ಟಲ್ಲದೆ, ನೆರೆಮನೆಯ ಸುಡದು ಕೂಡಲಸಂಗಮದೇವಾ” ಎಂಬ ಶರಣರ ಮಾತನ್ನು ನೆನಪಿಟ್ಟುಕೊಳ್ಳಬೇಕು ಎಂದು ಎಚ್​.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.
    ಈ ಸರಣಿ ಟ್ವೀಟ್ ಮೂಲಕ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ. 

    ಭಾರತ ಕರೊನಾ ವೈರಸ್​ನಿಂದ ಪಾರಾಗುವ ದಿನ ದೂರ ಇಲ್ಲ..! ಇಲ್ಲೊಂದು ಗುಡ್​ ನ್ಯೂಸ್​ ಇದೆ ನೋಡಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts