More

    ಚಿತ್ರರಂಗಕ್ಕೆ ಮುಂದುವರೆದ ಕರ್ಫ್ಯೂ: ಏಪ್ರಿಲ್ 14ರ ನಂತರವಾದರೂ ಎಲ್ಲಾ ಸರಿ ಹೋಗತ್ತಾ?

    ಬೆಂಗಳೂರು: ಏಪ್ರಿಲ್ ಒಂದರ ನಂತರ ಚಿತ್ರೀಕರಣ ಚಟುವಟಿಕೆಗಳು ಪ್ರಾರಂಭವಾಗಬಹುದು, ಚಿತ್ರ ಪ್ರದರ್ಶನ ಮತ್ತೆ ಮುಂದುವರೆಯಬಹುದು ಎಂದು ಕಾದಿದ್ದ ಚಿತ್ರರಂಗದ ಮಂದಿಗೆ ಮತ್ತೊಮ್ಮೆ ನಿರಾಸೆ ಕಾದಿದೆ.

    ಮಹಾಮಾರಿ ಕರೊನಾ ವೈರಸ್‍ನಿಂದ ದೇಶವನ್ನು ರಕ್ಷಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಮಾರ್ಚ್ 25ರಿಂದ ಏಪ್ರಿಲ್ 14ರವರೆಗೆ 21 ದಿನಗಳ ಕಾಲ ದೇಶವ್ಯಾಪಿ ಲಾಕ್‍ಡೌನ್ ಘೋಷಿಸಿರುವುದರಿಂದ, ಏಪ್ರಿಲ್ 15ರವರೆಗೆ ಚಿತ್ರ ಪ್ರದರ್ಶನ, ಚಿತ್ರೀಕರಣ ಚಟುವಟಿಕೆಗಳು ಎಲ್ಲವೂ ರದ್ದಾಗಿದೆ.

    ಕರೊನಾ ಭೀತಿಯಿಂದ ಕರ್ನಾಟಕದಲ್ಲಿ ಚಿತ್ರ ಪ್ರದರ್ಶನ ನಿಂತು 12 ದಿನಗಳೇ ಆಗಿವೆ. ಕರೊನಾ ಸೋಂಕು ಹರಡುವುದನ್ನು ತಡೆಗಟ್ಟುವುದಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಮಾರ್ಚ್ 13ರಿಂದ ಚಿತ್ರ ಪ್ರದರ್ಶನವನ್ನು ನಿಲ್ಲಿಸಿದ್ದರು. ಒಂದು ವಾರದ ನಂತರ ನೋಡಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ಅವರು ಹೇಳಿದ್ದರು. ಅಷ್ಟರಲ್ಲಿ ಹಿರಿತೆರೆ ಮತ್ತು ಕಿರುತೆರೆ ಸಂಘಟನೆಗಳೆಲ್ಲಾ ಚಿತ್ರೀಕರಣ ನಿಲ್ಲಿಸುವ ಒಮ್ಮತದ ತೀರ್ಮಾನ ತೆಗೆದುಕೊಂಡಿದ್ದರಿಂದ ದೇಶವ್ಯಾಪಿ ಚಿತ್ರೀಕರಣ ಚಟುವಟಿಕೆಗಳೆಲ್ಲಾ ನಿಂತವು. ಹಾಗಾಗಿ ಮಾರ್ಚ್ 31ರವರೆಗೂ ಚಿತ್ರ ಪ್ರದರ್ಶನ ಮತ್ತು ಚಿತ್ರೀಕರಣ ಎಲ್ಲವೂ ಸ್ಥಬ್ಧವಾಗಿ ಚಿತ್ರರಂಗದ ಮಂದಿಯೆಲ್ಲಾ ಮನೆಯಲ್ಲೇ ಕುಳಿತುಕೊಳ್ಳುವಂತಾಯಿತು.

    ಏಪ್ರಿಲ್ ಒಂದರ ನಂತರವಾದರೂ ಪರಿಸ್ಥಿತಿ ಸರಿಹೋಗಬಹುದು ಎಂಬ ನಿರೀಕ್ಷೆ ಚಿತ್ರರಂಗದ ವಲಯದಲ್ಲಿತ್ತು. ಕೆಲವು ಚಿತ್ರತಂಡಗಳು ಏಪ್ರಿಲ್ ತಿಂಗಳಲ್ಲಿ ತಮ್ಮ ಚಿತ್ರಗಳನ್ನು ಬಿಡುಗಡೆ ಮಾಡುವುದಕ್ಕೆ ತಯಾರಿ ನಡೆಸಿದರೆ, ಇನ್ನೂ ಕೆಲವು ತಂಡಗಳು ಚಿತ್ರೀಕರಣ ಮಾಡುವುದಕ್ಕೆ ಪ್ಲಾನ್ ಹಾಕಿಕೊಂಡಿದ್ದವು. ಆದರೆ, ಏಪ್ರಿಲ್ 14ರವರೆಗೂ ದೇಶವ್ಯಾಪಿ ಲಾಕೌಟ್ ಘೋಷಣೆಯಾಗಿರುವುದರಿಂದ, ಅಲ್ಲಿಯವರೆಗೂ ಯಾರೂ ಚಿತ್ರ ಬಿಡುಗಡೆಯನ್ನಾಗಲೀ, ಚಿತ್ರೀಕರಣವನ್ನಾಗಲೀ ಮಾಡುವಂತಿಲ್ಲ. ಆ ನಂತರ ಪರಿಸ್ಥಿತಿ ತಿಳಿಗೊಂಡರೆ ಮಾತ್ರ ಚಿತ್ರ ಪ್ರದರ್ಶನ ಮತ್ತು ಚಿತ್ರೀಕರಣ ಮುಂದುವರೆಯುವ ಸಾಧ್ಯತೆ ಇದೆ. ಆದರೆ, ಏಪ್ರಿಲ್ 14ರ ನಂತರವಾದರೂ ಪರಿಸ್ಥಿತಿ ತಹಬದಿಗೆ ಬಂದು, ಎಲ್ಲವೂ ಮೊದಲಿನಂತಾಗುತ್ತದಾ ಎಂಬುದೇ ಎಲ್ಲರಲ್ಲೂ ಇರುವ ಪ್ರಶ್ನೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts