More

    ಕರೊನಾ ವೈರಸ್ ಪೀಡಿತರಿಗೆ ಆತ್ಮಸ್ಥೈರ್ಯ ತುಂಬಿ

    ರಾಮದುರ್ಗ: ಪಟ್ಟಣದ ಹೊರ ವಲಯದ ತುರನೂರ ಸಮೀಪದ ಬಿಸಿಎಂ ವಸತಿ ನಿಲಯದಲ್ಲಿ ನಿರ್ಮಿಸಿರುವ ಕೋವಿಡ್ ಕೇರ್ ಸೆಂಟರ್‌ಗೆ ಬೆಳಗಾವಿ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಹಾಗೂ ಜಿಪಂ ಸಿಇಒ ಕೆ.ವಿ. ರಾಜೇಂದ್ರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

    ಈ ವೇಳೆ ಮಾತನಾಡಿದ ಅವರು, ಕೋವಿಡ್-19 ರೋಗಿಗಳಲ್ಲಿ ಆತ್ಮಸ್ಥೈರ್ಯ ತುಂಬುವ ಕೆಲಸವಾಗಬೇಕು. ರೋಗಿಗಳಿಗೆ ಸರಿಯಾದ ಚಿಕಿತ್ಸೆ, ಊಟದ ವ್ಯವಸ್ಥೆ, ಮೇಲಿಂದ ಮೇಲೆ ಸ್ಯಾನಿಟೈಸರ್ ಬಳಕೆ ಕುರಿತು ಸ್ಥಳೀಯ ಸೆಂಟರ್‌ನ ಉಸ್ತುವಾರಿ ಸಿಬ್ಬಂದಿ ನೋಡಿಕೊಳ್ಳಬೇಕು. ಸೋಂಕಿತರನ್ನು ಮನರಂಜಿಸಿ ಕರೊನಾ ಸೋಂಕಿನ ಮಾನಸಿಕ ಬಾಧೆಯಿಂದ ಅವರು ಹೊರ ಬರುವಂತೆ ಕೋವಿಡ್ ಸೆಂಟರ್ ನಿರ್ಮಾಣ ಮಾಡುವ ಜವಾಬ್ದಾರಿಯನ್ನು ನೋಡಿಕೊಳ್ಳಬೇಕು ಎಂದು ತಹಸೀಲ್ದಾರ್ ಗಿರೀಶ ಸ್ವಾಧಿ ಅವರಿಗೆ ಸೂಚನೆ ನೀಡಿದರು.

    ಸೋಂಕಿತರು, ಸಾರ್ವಜನಿಕರಲ್ಲಿ ಕರೊನಾ ಕುರಿತು ಭಯ ಹುಟ್ಟಿಸದೇ ಅದು ಬರದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳುವ ಕುರಿತು ತಿಳಿವಳಿಕೆ ನೀಡಬೇಕು. ಸ್ಥಳೀಯ ಪರಿಸ್ಥಿತಿಯ ಕುರಿತು ಕಾಲಕ್ಕೆ ತಕ್ಕಂತೆ ಮಾಹಿತಿ ನೀಡಬೇಕು. ಆರೋಗ್ಯ ಇಲಾಖೆಯ ಸಿಬ್ಬಂದಿ ಅವರಿಗೆ ಚಿಕಿತ್ಸೆ ನೀಡುವ ಜತೆಗೆ ಅವರಲ್ಲಿರುವ ಮಾನಸಿಕ ಕಾಯಿಲೆಯನ್ನು ಮೊದಲು ಗುಣಪಡಿಸಲು ಅವರೊಂದಿಗೆ ಸೌಜನ್ಯದಿಂದ ವರ್ತಿಸಬೇಕು ಎಂದು ಸಲಹೆ ನೀಡಿದರು. ಜಿಪಂ ಸಿಇಒ ಕೆ.ವಿ. ರಾಜೇಂದ್ರ ಮಾತನಾಡಿ, ಕೋವಿಡ್ ಸೆಂಟರ್‌ಅನ್ನು ಶುಚಿಯಾಗಿಟ್ಟುಕೊಳ್ಳಬೇಕು. ಅವರಲ್ಲಿ ಕರೊನಾ ಸೋಂಕಿತರೆಂಬ ಭಾವ ಬರದಂತೆ ನೋಡಿಕೊಂಡಲ್ಲಿ ಮಾತ್ರ ಕಾಯಿಲೆಯಿಂದ ಅವರು ಶೀಘ್ರ ಗುಣಮುಖರಾಗಲು ಸಾಧ್ಯವಿದೆ. ಆ ನಿಟ್ಟಿನಲ್ಲಿ ವೈದ್ಯರು ಸೇವಾ ಮನೋಭಾವನೆಯಿಂದ ಕೆಲಸ ನಿರ್ವಹಿಸಬೇಕು ಎಂದು ತಿಳಿಸಿದರು.

    ನಂತರ ಕಟಕೋಳ ಮುರಾರ್ಜಿ ವಸತಿ ನಿಲಯ, ಕೆ. ಚಂದರಗಿ ಕ್ರೀಡಾಶಾಲೆಗಳನ್ನು ಅಗತ್ಯವಿದ್ದಲ್ಲಿ ಕೋವಿಡ್ ಸೆಂಟರ್‌ಗಳಾಗಿ ಪರಿವರ್ತಿಸಿ ಬಳಕೆ ಮಾಡಿಕೊಳ್ಳುವ ಕುರಿತು ಜಿಲ್ಲಾಧಿಕಾರಿಗಳು ಹಾಗೂ ಜಿಪಂ ಸಿಇಒ ಪರಿಶೀಲಿಸಿ ಬಳಕೆ ಮಾಡಿಕೊಳ್ಳುವಂತೆ ತಾಲೂಕಾಡಳಿತ ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು. ತಹಸೀಲ್ದಾರ್ ಗಿರೀಶ ಸ್ವಾಧಿ, ತಾಪಂ ಇಒ ಮುರುಳೀಧರ ದೇಶಪಾಂಡೆ, ತಾಲೂಕು ವೈದ್ಯಾಧಿಕಾರಿ ಮಹೇಶ ಚಿತ್ತರಗಿ, ಡಾ. ನವೀನ್ ನಿಜಗುಲಿ, ಪಿಎಸ್‌ಐ ಆನಂದ ಡೋಣಿ, ಕಂದಾಯ ನಿರೀಕ್ಷಕರಾದ ಶಿವು ಗೊರವನಕೊಳ್ಳ, ಮಹೇಶ ತೆಂಗಿನಕಾಯಿ, ಕೋವಿಡ್ ಟಾಸ್ಕ್‌ಫೋರ್ಸ್ ಸಮಿತಿಯ ಸದಸ್ಯೆ ಆರ್.ಎಲ್. ಕದಂ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts