More

    ಕರೊನಾ ವೈರಸ್ ಭಯ ಬಿಟ್ಟಾಕಿ, ಮುಂಜಾಗ್ರತೆ ವಹಿಸಿ

    ಮುಂಡರಗಿ: ಕರೊನಾ ವೈರಸ್ ತಗುಲಿದ ವ್ಯಕ್ತಿಗಳಲ್ಲಿ ಶೇ.99 ರಷ್ಟು ಜನ ಗುಣಮುಖರಾಗುತ್ತಾರೆ. ಮಕ್ಕಳಲ್ಲಿ ಕೆಮ್ಮು, ನೆಗಡಿ ಬಂದರೆ ತಕ್ಷಣವೇ ವೈದ್ಯರನ್ನು ಸಂರ್ಪಸಿ ಚಿಕಿತ್ಸೆ ಪಡೆಯಬೇಕು. ಕರೊನಾ ಕುರಿತು ಭಯಪಡದೆ ಮುಂಜಾಗ್ರತೆ ವಹಿಸಬೇಕು ಎಂದು ತಾಲೂಕು ಸರ್ಕಾರಿ ಆಸ್ಪತ್ರೆಯ ಆರೋಗ್ಯ ವೈದ್ಯಾಧಿಕಾರಿ ಡಾ.ಬಸವರಾಜ ಕೆ. ಹೇಳಿದರು.

    ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಆರೋಗ್ಯ ಇಲಾಖೆ, ತಾಲೂಕು ಆಡಳಿತ, ತಾಪಂ, ಸಾರ್ವಜನಿಕ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಆಶ್ರಯದಲ್ಲಿ ಮಂಗಳವಾರ ಆಯೋಜಿಸಿದ್ದ ಕೊರಾನಾ ವೈರಸ್ ಕುರಿತ ಜಾಗೃತಿ ಸಭೆಯಲ್ಲಿ ಅವರು ಮಾತನಾಡಿದರು.

    ಕರೊನಾ ಸೋಂಕು ರೋಗವಾಗಿದ್ದು, ರೋಗಪೀಡಿತ ವ್ಯಕ್ತಿಯ ಕೆಮ್ಮುವಿಕೆ, ಶೀನುವಿಕೆಯಿಂದ ರೋಗ ಹರಡುತ್ತದೆ. ಜನರು ಹೆಚ್ಚಾಗಿ ಪಾಲ್ಗೊಳ್ಳುವ ಜಾತ್ರೆ, ಸಂತೆಯಂತಹ ಸ್ಥಳಗಳಲ್ಲಿ ರೋಗವು ಶೀಘ್ರವಾಗಿ ಹರಡುತ್ತದೆ. ಕೊರಾನ ವೈರಸ್ ಬಗ್ಗೆ ಹೆಚ್ಚಿನ ಆತಂಕ ಮತ್ತು ಭಯವನ್ನು ಬಿಟ್ಟು ಕೆಮ್ಮು, ಶೀತ, ನೆಗಡಿಯಾದರೆ ತಕ್ಷಣ ವೈದ್ಯರಿಂದ ಚಿಕಿತ್ಸೆ ಪಡೆಯಬೇಕು. ಗದಗನ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಕರೊನಾ ವೈರಸ್ ಬಗ್ಗೆ ಗಮನ ಹರಿಸಲು ಘಟಕ ಸ್ಥಾಪಿಸಲಾಗಿದೆ ಎಂದರು.

    ಸಭೆಯ ಅಧ್ಯಕ್ಷತೆ ವಹಿಸಿದ್ದ ತಹಸೀಲ್ದಾರ್ ಡಾ.ವೆಂಕಟೇಶ ನಾಯಕ ಮಾತನಾಡಿ, ಕರೊನಾ ವೈರಸ್ ವ್ಯಕ್ತಿಯಿಂದ ವ್ಯಕ್ತಿಗೆ ಹರಡುವ ರೋಗವಾಗಿದೆ. ಆತಂಕ ಮತ್ತು ಭಯದಿಂದ ಮುಕ್ತರಾಗಿ ರೋಗದ ಬಗ್ಗೆ ತಿಳಿದುಕೊಳ್ಳಬೇಕು. ಹೊರರಾಜ್ಯದಿಂದ ವಲಸೆ ಬರುವ ವ್ಯಕ್ತಿಗಳಲ್ಲಿ ಕರೊನಾ ವೈರಸ್ ಸೊಂಕು ಕಂಡು ಬಂದಿದ್ದರೆ ತಾಲೂಕು ಆಡಳಿತ ಗಮನಕ್ಕೆ ತರಬೇಕು. ಈಗಾಗಲೇ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಡಂಗೂರ ಸಾರಲಾಗಿದೆ ಎಂದರು.

    ಸಿಡಿಪಿಒ ದಸ್ತಗೀರ್ ಮುಲ್ಲಾ, ಎಸ್.ಎಸ್.ಬಿಚ್ಚಾಲಿ, ಆರ್​ಎಫ್​ಒ ಎಸ್.ಎಂ. ಶಿವರಾತ್ರೇಶ್ವರಸ್ವಾಮಿ, ಡಾ.ಗಿರೀಶ ಬಡಿಗೇರ, ಡಾ.ಶಂಕರ ಬಾವಿಮನಿ, ಸಿ.ಎಸ್. ಮುಂಡರಗಿ, ಡಾ.ಫಕೀರೇಶ ಈಟಿ, ಡಾ.ಪಿ.ಬಿ. ಹಿರೇಗೌಡರ, ಡಾ. ಸೌಭಾಗ್ಯಲಕ್ಷ್ಮಿ, ಎನ್.ಬಿ. ಅಳವಂಡಿ, ಶಶಿಧರ ಹೊಂಬಳ, ವಿನಾಯಕ ಮಂಕಾಳಿ ಇತರರು ಇದ್ದರು.

    ಭಯ ಬೇಡ.. ಇರಲಿ ಎಚ್ಚರಿಕೆ

    ಗದಗ: ನೊವೆಲ್ ಕರೊನಾ ವೈರಸ್ ಬಗ್ಗೆ ಭಯ ಬೇಡ ಆದರೆ ಎಚ್ಚರಿಕೆ ಇರಲಿ ಎಂದು ಜಿಲ್ಲಾ ಆರೋಗ್ಯ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ. ಜ್ವರ, ನೆಗಡಿ, ಕೆಮ್ಮು, ಉಸಿರಾಟದ ತೊಂದರೆ, ನ್ಯೂಮೋನಿಯಾ ಹಾಗೂ ಭೇದಿ ಕರೊನಾ ವೈರಸ್ ಸೋಂಕಿನ ಲಕ್ಷಣಗಳಾಗಿವೆ. ಸೋಂಕಿತ ವ್ಯಕ್ತಿಯು ಕೆಮ್ಮಿದರೆ, ಸೀನಿದರೆ, ಸೋಂಕಿತ ವ್ಯಕ್ತಿಯ ಜತೆ ನಿಕಟ ಸಂಪರ್ಕದಲ್ಲಿದ್ದರೆ ಹಾಗೂ ಸ್ವಚ್ಛಗೊಳಿಸದ ಕೈಗಳಿಂದ ಕಣ್ಣು, ಮೂಗು, ಬಾಯಿ ಮುಟ್ಟುವುದರಿಂದ, ಸೋಂಕಿತ ವ್ಯಕ್ತಿಯ ಹಸ್ತಲಾಘವ ಮತ್ತು ಮುಟ್ಟುವುದರಿಂದಲೂ ಸೋಂಕು ಹರಡಬಹುದು. ಇಂತಹ ಲಕ್ಷಣಗಳು ಕಂಡು ಬಂದ ವ್ಯಕ್ತಿಯ ಮೂಗು, ಗಂಟಲಿನ ಸ್ರಾವದ ಲೇಪನ ಮತ್ತು ರಕ್ತದ ಮಾದರಿಯನ್ನು ಪ್ರಯೋಗ ಶಾಲೆಯಲ್ಲಿ ಪರೀಕ್ಷೆಗೆ ಒಳಪಡಿಸಿ ಸೋಂಕನ್ನು ದೃಢಪಡಿಸಲಾಗುತ್ತದೆ.

    ರೋಗ ಹರಡದಂತೆ ಜನರು ಕೆಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಮುಖ್ಯವಾಗಿ ಕೆಮ್ಮುವಾಗ ಮತ್ತು ಸೀನುವಾಗ ಬಾಯಿಗೆ ಕರವಸ್ತ್ರ ಅಡ್ಡ ಹಿಡಿಯಬೇಕು. ಆಗಾಗ ಕೈಯನ್ನು ಚೆನ್ನಾಗಿ ತೊಳೆದುಕೊಳ್ಳುವ ಮೂಲಕ ಸರಳ ನೈರ್ಮಲ್ಯವನ್ನು ಅಭ್ಯಾಸ ಮಾಡಿಕೊಳ್ಳಬೇಕು. ಪ್ರಾಣಿಗಳ ನೇರ ಸಂಪರ್ಕ ಹಾಗೂ ಬೇಯಿಸದ, ಕಚ್ಚಾ ಮಾಂಸ ಸೇವನೆ ಮಾಡಬಾರದು. ಸೋಂಕು ಪೀಡಿತರ ಸಂಪರ್ಕದಿಂದ ದೂರವಿರಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಉಗುಳಬಾರದು. ಉಸಿರಾಟದ ತೊಂದರೆಯಾದಲ್ಲಿ ತಕ್ಷಣ ವೈದ್ಯರ ಸಲಹೆ ಪಡೆಯಬೇಕು. ಅಸುರಕ್ಷಿತವಲ್ಲದ ಕಾಡುಪ್ರಾಣಿ ಅಥವಾ ಸಾಕು ಪ್ರಾಣಿಗಳನ್ನು ಮುಟ್ಟಬಾರದು. ಮಾಹಿತಿಗೆ ಉಚಿತ ಆರೋಗ್ಯ ಸಹಾಯವಾಣಿ 104ಕ್ಕೆ ಕರೆ ಮಾಡಬಹುದು ಎಂದು ಆರೋಗ್ಯ ಇಲಾಖೆಯ ಪ್ರಕಟಣೆ ತಿಳಿಸಿದೆ.

     

    ಯಮಸ್ವರೂಪಿಯಾಗಿವೆ ಟಿಪ್ಪರ್, ಲಾರಿ ಸಂಚಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts