More

    ಕರೊನಾ ವೈರಸ್ ತಡೆಗೆ ಬಿಗಿ ಕ್ರಮ

    ಅಥಣಿ: ತಾಲೂಕಿನಾದ್ಯಂತ ಕರೊನಾ ವೈರಸ್ ಅಟ್ಟಹಾಸ ಜೋರಾಗುತ್ತಿರುವುದನ್ನು ಮನಗಂಡ ತಾಲೂಕಾಡಳಿತದಿಂದ ತಾಲೂಕುಮಟ್ಟದ ಅಧಿಕಾರಿಗಳ ಟಾಸ್ಕ್‌ಫೋರ್ಸ್ ಸಮಿತಿ ಸಭೆಯು ಇಲ್ಲಿಯ ಪ್ರವಾಸಿ ಮಂದಿರದಲ್ಲಿ ತಹಸೀಲ್ದಾರ್ ದುಂಡಪ್ಪ ಕೋಮಾರ ನೇತೃತ್ವದಲ್ಲಿ ಶುಕ್ರವಾರ ಜರುಗಿತು.

    ತಹಸೀಲ್ದಾರ್ ದುಂಡಪ್ಪ ಕೋಮಾರ ಮಾತನಾಡಿ, ಕರೊನಾ ವೈರಸ್ ನಿಯಂತ್ರಣಕ್ಕೆ ಇನ್ನಷ್ಟು ಅಗತ್ಯ ಕ್ರಮಗಳನ್ನು ಕೈಗೊಳ್ಳುವುದು ಅವಶ್ಯವಿದೆ. ಇಲ್ಲಿಯವರೆಗೆ ತಾಲೂಕಿನಲ್ಲಿ ಸುಮಾರು 24 ಜನ ಸೋಂಕಿತರು ಕಂಡು ಬಂದಿದ್ದಾರೆ. ಶುಕ್ರವಾರ ಸಂಜೆ ಕೂಡ ಪಟ್ಟಣದ ಓರ್ವ ವ್ಯಕ್ತಿ ಎದೆನೋವು ಎಂದು ಸರ್ಕಾರಿ ಆಸ್ಪತ್ರೆಗೆ ಬಂದಿದ್ದರು. ಅವರನ್ನು ಹೆಚ್ಚಿನ ಚಿಕಿತ್ಸೆ ಮತ್ತು ಕರೊನಾ ತಪಾಸಣೆಗೆಂದು ಬೆಳಗಾವಿಗೆ ಕಳುಹಿಸಲಾಗಿತ್ತು. ಆದರೆ, ಅವರು ಕಬ್ಬೂರ ಸಮೀಪ ಆಂಬುಲೆನ್ಸ್‌ನಲ್ಲಿ ಅಸುನೀಗಿದ ಸುದ್ದಿ ಬಂದಿದೆ. ಅವರ ಗಂಟಲು ದ್ರವದ ಪರೀಕ್ಷೆ ನಡೆಯಬೇಕಿದೆ. ಯಾರಿಗಾದರೂ ಕರೊನಾ ಲಕ್ಷಣಗಳು ಕಂಡು ಬಂದಲ್ಲಿ ಕೂಡಲೇ ಪರೀಕ್ಷೆಗೆ ಒಳಪಡಬೇಕು ಮತ್ತು ಹೋಂ ಕ್ವಾರಂಟೈನ್‌ನಲ್ಲಿಟ್ಟಾಗ ಯಾವುದೇ ಗಲಾಟೆ ಮಾಡಿದರೆ ಅಂಥವರ ಮೇಲೆ ಎಫ್‌ಐಆರ್ ದಾಖಲಿಸಲಾಗುವುದು ಎಂದು ಎಚ್ಚರಿಸಿದರು.

    ತಾಲೂಕು ವೈದ್ಯಾಧಿಕಾರಿ ಎಂ.ಎಸ್. ಕೊಪ್ಪದ ಮಾತನಾಡಿ, ದಿನದಿಂದ ದಿನಕ್ಕೆ ಕರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಲಿದೆ. ಜನರು ಜಾಗ್ರತರಾಗಿರಬೇಕು. ಸರ್ಕಾರಿ ಆಸ್ಪತ್ರೆಯಲ್ಲಿ ಎಲ್ಲ ರೀತಿಯ ವ್ಯವಸ್ಥೆ ಇದ್ದು, ಕರೊನಾ ಲಕ್ಷಣ ಕಂಡುಬಂದರೆ ಕೂಡಲೇ ಪರೀಕ್ಷಿಸಿಕೊಳ್ಳಬೇಕು. ಇನ್ನು ಅಸ್ತಮಾ, ಸಕ್ಕರೆ, ಬಿಪಿ ಕಾಯಿಲೆಯುಳ್ಳವರು ಹಾಗೂ ಹೃದಯ ಶಸ್ತ್ರಚಿಕಿತ್ಸೆಗೊಳಗಾದವರು ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ನಿಯಮಿತವಾಗಿ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಪುರಸಭೆ ಮುಖ್ಯಾಧಿಕಾರಿ ಎಂ.ಎಸ್. ಕವಲಾಪುರ ಮಾತನಾಡಿ, ಈಗಾಗಲೇ ಪಟ್ಟಣದ ಶಾಂತಿನಗರ, ಸಾಯಿನಗರ, ಗಸ್ತಿಪ್ಲಾಟ್ ಮತ್ತು ಡೌರಿ ಗಲ್ಲಿಯಲ್ಲಿ ಸೀಲ್‌ಡೌನ್ ಮಾಡಲಾಗಿದೆ. ಜನರು ಸ್ವಲ್ಪ ದಿನಗಳವರೆಗೆ ಈ ಪ್ರದೇಶಗಳಲ್ಲಿ ಸಂಚರಿಸುವುದನ್ನು ನಿರ್ಬಂಧಿಸಿದ್ದು, ಸಹಕಾರ ನೀಡಬೇಕು ಎಂದರು. ಸಿಪಿಐ ಶಂಕರಗೌಡ ಬಸನಗೌಡರ ಮಾತನಾಡಿ, ಜನರು ಅನವಶ್ಯಕವಾಗಿ ಸಂಚರಿಸುವುದನ್ನು ಕಡಿಮೆ ಮಾಡಿ ಮನೆಯಲ್ಲಿ ಇರಬೇಕು. ಕರೊನಾ ನಿಯಂತ್ರಣಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ಹೇಳಿದರು. ಸಭೆಯಲ್ಲಿ ತಾಪಂ ಇಒ ರವಿ ಬಂಗಾರೆಪ್ಪನವರ, ಪಿಎಸ್‌ಐ ಕುಮಾರ ಹಾಡಕಾರ ಹಾಗೂ ತಾಲೂಕು ಮಟ್ಟದ ಎಲ್ಲ ಅಧಿಕಾರಿಗಳು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts