More

    ಅಂತಾರಾಷ್ಟ್ರೀಯ ಪ್ರಯಾಣಿಕರ ಮೇಲೆ ನಿಗಾ

    ಮಂಗಳೂರು: ಕರಾವಳಿಯಲ್ಲಿ ಇದುವರೆಗೆ ಕರೊನಾ ಸೋಂಕು ಪತ್ತೆಯಾಗಿಲ್ಲವಾದರೂ ಎಲ್ಲಾದರೂ ವೈರಸ್ ಇದ್ದವರು ಪ್ರವೇಶಿಸಿದರೂ ಹರಡದಂತೆ ಕಠಿಣ ಕ್ರಮಕ್ಕೆ ಜಿಲ್ಲಾಡಳಿತಗಳು ಮುಂದಾಗಿವೆ. ವಿದೇಶದಿಂದ ಆಗಮಿಸಿದವರ ಕಡ್ಡಾಯ ತಪಾಸಣೆ, ರೋಗ ಲಕ್ಷಣಗಳಿದ್ದರೆ ಪ್ರತ್ಯೇಕ ನಿಗಾ ವಹಿಸುವುದರ ಸಹಿತ ಹಲವು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.
    ವಿದೇಶಗಳಿಂದ ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸಿದ ಪ್ರಯಾಣಿಕರಲ್ಲಿ ರೋಗದ ಲಕ್ಷಣಗಳು ಇಲ್ಲದಿದ್ದರೂ ಮುಂಜಾಗರೂಕತಾ ಕ್ರಮವಾಗಿ ಅವರು 14 ದಿನ ತಮ್ಮ ಮನೆಗಳಲ್ಲಿಯೇ ಉಳಿಯಲು ಸೂಚಿಸಲಾಗಿದೆ. ಇಂತಹ ವಿಶೇಷ ನಿಗಾದಲ್ಲಿ 50 ಮಂದಿ ಇದ್ದು, 14 ದಿನಗಳನ್ನು 11 ಮಂದಿ ಪೂರ್ಣಗೊಳಿಸಿದ್ದಾರೆ. ಐದು ಮಂದಿಯ ಗಂಟಲು ಸ್ರಾವ ಪರೀಕ್ಷೆಗೆ ಕಳುಹಿಸಿದ್ದು, ಇದರಲ್ಲಿ ವರದಿ ಲಭ್ಯವಾಗಿರುವ ಮೂರು ಮಂದಿಯಲ್ಲೂ ಸೋಂಕು ಪತ್ತೆಯಾಗಿರುವುದಿಲ್ಲ.

    ನಿಗಾ ವಿರೋಧಿಸುವಂತಿಲ್ಲ: ಕರೊನಾ ಸೋಂಕು ಇರುವ ವ್ಯಕ್ತಿಯ ಸಂಪರ್ಕದಲ್ಲಿ ಇದ್ದವರಲ್ಲಿ ರೋಗದ ಲಕ್ಷಣಗಳು ಕಂಡುಬಂದಲ್ಲಿ ಅವರು ವೈದ್ಯಕೀಯ ನಿಗಾದಲ್ಲಿ ಇರುವುದು ಕಡ್ಡಾಯ. ಇದನ್ನು ವಿರೋಧಿಸಲು ಅವಕಾಶ ಇಲ್ಲ ಜಿಲ್ಲಾಡಳಿತ ತಿಳಿಸಿದೆ. ವಿದೇಶದಿಂದ ಆಗಮಿಸಿರುವ ವ್ಯಕ್ತಿಗಳನ್ನು ಗುರುತಿಸಿ ಆರೋಗ್ಯ ತಪಾಸಣೆ ಕೈಗೊಳ್ಳುವ ನಿಟ್ಟಿನಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ (ಪಿಎಚ್‌ಸಿ)ಗಳ ಮಟ್ಟದಲ್ಲಿ ತಂಡಗಳನ್ನು ರಚಿಸಲಾಗಿದೆ.

    ಲಕ್ಷದ್ವೀಪ ಪ್ರಯಾಣಿಕರ ತಪಾಸಣೆ: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗುರುವಾರ ಒಂದೇ ದಿನ 614 ಅಂತಾರಾಷ್ಟ್ರೀಯ ಪ್ರಯಾಣಿಕರ ಸ್ಕ್ರೀನಿಂಗ್ ನಡೆದಿದೆ. ವಿಮಾನ ನಿಲ್ದಾಣ, ನವಮಂಗಳೂರು ಬಂದರು ಮಾತ್ರವಲ್ಲದೆ, ಲಕ್ಷದ್ವೀಪದಿಂದ ಆಗಮಿಸುವ ಪ್ರಯಾಣಿಕರ ದಿನಂಪ್ರತಿ ವೈದ್ಯಕೀಯ ತಪಾಸಣೆ ಕೂಡ ಆರಂಭಿಸಲಾಗಿದೆ.

    ರೈಲು ನಿಲ್ದಾಣದಲ್ಲಿ ಜಾಗೃತಿ: ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಲ್ಲಿ ಗುರುವಾರ ಡಿವಿಜನಲ್ ರೈಲ್ವೆ ಮ್ಯಾನೇಜರ್ ಪ್ರತಾಪ್ ಸಿಂಗ್ ಶಮಿ ನೇತೃತ್ವದಲ್ಲಿ ಕೊರೊನ ವೈರಸ್ ಕುರಿತು ಜಾಗೃತಿ ಸಭೆ ನಡೆಯಿತು. ಮುನ್ನೆಚ್ಚರಿಕೆ ಕ್ರಮಗಳ ಕುರಿತು ರೈಲು ನಿಲ್ದಾಣದ ಮೇಲ್ವಿಚಾರಕರು ಮತ್ತು ಸಿಬ್ಬಂದಿ ವರ್ಗಕ್ಕೆ ನಿರ್ದೇಶನ ನೀಡಲಾಯಿತು. ರೈಲ್ವೆ ಅಧಿಕಾರಿಗಳಾದ ಸಿ. ಮುರಳೀಧರನ್, ರಾಕೇಶ್ ಕುಮಾರ್ ಮೀನಾ, ಶಿವಶಂಕರ್ ಮೂರ್ತಿ, ಕೆವಿ ಶ್ರೀಧರನ್, ರಾಮ್ ಕುಮಾರ್ ಉಪಸ್ಥಿತರಿದ್ದರು.

    ವಸತಿಗೃಹಗಳ ಆದಾಯ ಖೋತಾ: ಅಂತಾರಾಷ್ಟ್ರೀಯ ಪ್ರಯಾಣಕ್ಕೆ ನಿರ್ಬಂಧ ಹಾಗೂ ಪ್ರವಾಸ ತೆರಳಲು ಇರುವ ಆತಂಕದ ಪರಿಸ್ಥಿತಿ ಹೋಟೆಲ್ ಹಾಗೂ ವಸತಿ ಗೃಹಗಳ ಆದಾಯಕ್ಕೂ ಹೊಡೆತ ನೀಡಿದೆ. ಒಂದು ವಾರದಲ್ಲಿ ವಸತಿಗೃಹಗಳ ಆದಾಯದಲ್ಲಿ ಶೇ.50ರಷ್ಟು ಇಳಿಕೆಯಾಗಿದೆ. ಮುಖ್ಯವಾಗಿ ಕೇರಳ, ಕೊಡಗು, ದೇಶ ವಿದೇಶಗಳ ಗಮನಾರ್ಹ ಸಂಖ್ಯೆಯ ಜನರು ಮಂಗಳೂರಿಗೆ ಭೇಟಿ ನೀಡುತ್ತಿರುತ್ತಾರೆ. ಈ ಸಂದರ್ಭ ಹೋಟೆಲ್ ಮತ್ತು ವಸತಿಗೃಹಗಳನ್ನು ಹೆಚ್ಚು ಬಳಸುತ್ತಿರುತ್ತಾರೆ ಎಂದು ಹೋಟೆಲ್ ಮಾಲೀಕರ ಸಂಘದ ಜಿಲ್ಲಾಧ್ಯಕ್ಷ ಕುಡ್ಪಿ ಜಗದೀಶ್ ಶೆಣೈ ಪ್ರತಿಕ್ರಿಯಿಸಿದ್ದಾರೆ.

    ನೋಟು ಹಿಡಿಯಲೂ ಗ್ಲೌಸ್
    ಕರೊನಾ ಸೋಂಕು ಹರಡುವುದನ್ನು ತಡೆಯುವ ಬಗ್ಗೆ ಹೊರಡಿಸಲಾದ ಎಚ್ಚರಿಕೆ ಕ್ರಮಗಳ ಪರಿಣಾಮ ವಿವಿಧ ಬ್ಯಾಂಕುಗಳ ಕ್ಯಾಶ್ ಕೌಂಟರ್‌ಗಳಲ್ಲಿ ಇರುವ ಸಿಬ್ಬಂದಿ ನೋಟು ಎಣಿಸಲು ಕೂಡ ಕೈಗವಚ (ಗ್ಲೌಸ್) ಬಳಸುತ್ತಿರುವುದು ಕಂಡುಬಂದಿದೆ. ಮಾಸ್ಕ್, ಹ್ಯಾಂಡ್ ವಾಶ್‌ಗಳಂತಹ ವಸ್ತುಗಳು ನಗರ ಮಾತ್ರವಲ್ಲದೆ ಗ್ರಾಮೀಣ ಪ್ರದೇಶದ ಮೆಡಿಕಲ್‌ಗಳಲ್ಲೂ ಲಭ್ಯವಾಗದ ಸ್ಥಿತಿ ನಿರ್ಮಾಣವಾಗಿದೆ. ಆಸ್ಪತ್ರೆಯಲ್ಲಿ ಬಹುತೇಕ ಎಲ್ಲ ಸಿಬ್ಬಂದಿ ಮಾಸ್ಕ್ ಬಳಸಲು ಆರಂಭಿಸಿದ್ದಾರೆ.

    ಸೌದಿ-ಭಾರತ ಸಂಪರ್ಕ ಸ್ಥಗಿತ
    ಕರೊನಾ ಆತಂಕ ಹಿನ್ನೆಲೆಯಲ್ಲಿ ಕುವೈತ್, ಕತಾರ್ ಬಳಿಕ ಈಗ ಸೌದಿ ಅರೇಬಿಯಾ ದೇಶವು ಭಾರತ ಸಹಿತ 12 ರಾಷ್ಟ್ರಗಳ ನಡುವಿನ ವಿಮಾನ ಯಾನ ಸಂಪರ್ಕವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ಶ್ರೀಲಂಕಾ, ಪಾಕಿಸ್ತಾನ, ಪಿಲಿಫೈನ್ಸ್, ದಕ್ಷಿಣ ಸುಡಾನ್, ಇಥಿಯೋಪಿಯಾ, ಕೇನ್ಯಾ, ಸೊಮಾಲಿಯಾ, ಏರಿಟ್ರಿಯಾ ದೇಶಗಳು ಸೌದಿ ಅರೇಬಿಯಾ ಪ್ರಯಾಣಕ್ಕೆ ನಿರ್ಬಂಧ ಹೇರಿದ ದೇಶಗಳ ಪಟ್ಟಿಯಲ್ಲಿ ಸೇರಿವೆ.ಕರ್ನಾಟಕ ಹಾಗೂ ಕೇರಳ ರಾಜ್ಯಗಳ ಗಮನಾರ್ಹ ಸಂಖ್ಯೆಯ ಜನರು ಉದ್ಯೋಗಕ್ಕಾಗಿ ಕೊಲ್ಲಿ ರಾಷ್ಟ್ರಗಳಲ್ಲಿದ್ದಾರೆ. ಪ್ರಯಾಣ ನಿರ್ಬಂಧದಿಂದಾಗಿ ಅಲ್ಲಿಂದ ಊರಿಂದ ಬರಲು ಸಾಧ್ಯವಾಗುತ್ತಿಲ್ಲ, ವಾಪಸ್ ಹೋಗಲೂ ಆಗದೆ ಸಮಸ್ಯೆಗೆ ಸಿಲುಕಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts