More

    ದ.ಕ.ದಲ್ಲಿ ಮತ್ತೆ ಏರಿಕೆ, ಮಂಗಳವಾರ 23 ಕರೊನಾ ಪ್ರಕರಣ ಪತ್ತೆ, 16 ಮಂದಿ ಗುಣ

    ಮಂಗಳೂರು: ಮಂಗಳವಾರ 23 ಹೊಸ ಪ್ರಕರಣಗಳು ಪತ್ತೆಯಾಗುವ ಮೂಲಕ ದ.ಕ.ಜಿಲ್ಲೆಯಲ್ಲಿ ಕರೊನಾ ಪ್ರಕರಣಗಳ ಸಂಖ್ಯೆ ಏರಿಕೆ ಕಂಡಿದೆ.

    ಹೊಸ ಪಾಸಿಟಿವ್ ಪ್ರಕರಣಗಳ ಪೈಕಿ 18 ಮಂದಿ ಜೂನ್ 2ರಂದು ಸೌದಿ ಅರೇಬಿಯಾದಿಂದ ಮಂಗಳೂರಿಗೆ ಬಂದು ಖಾಸಗಿ ಹೋಟೆಲ್‌ನಲ್ಲಿ ಕ್ವಾರಂಟೈನ್‌ಲ್ಲಿದ್ದರು. ಇವರ ಗಂಟಲ ದ್ರವ ಮಾದರಿಯ ಪರೀಕ್ಷಾ ವರದಿ ಪಾಸಿಟಿವ್ ಬಂದಿದೆ. ದುಬೈನಿಂದ ಜೂನ್ 1ರಂದು ಆಗಮಿಸಿ ಖಾಸಗಿ ಹೋಟೆಲ್‌ನಲ್ಲಿ ಕ್ವಾರಂಟೈನ್‌ನಲ್ಲಿದ್ದ ಮೂವರಲ್ಲಿಯೂ ಸೋಂಕು ಪತ್ತೆಯಾಗಿದೆ. ಮುಂಬೈಯಿಂದ ಬಂದು ಉಡುಪಿಯಲ್ಲಿ ಕ್ವಾರಂಟೈನ್ ಮುಗಿಸಿ ಮೂಡುಬಿದಿರೆಗೆ ಆಗಮಿಸಿದ್ದ ಮತ್ತು ಪುಣೆಯಿಂದ ಬಂದು ಉಡುಪಿಯಲ್ಲಿ ಕ್ವಾರಂಟೈನ್‌ನಲ್ಲಿದ್ದು ಬಂಟ್ವಾಳಕ್ಕೆ ಬಂದ ಇಬ್ಬರಲ್ಲಿ ಕರೊನಾ ಸೋಂಕು ಕಂಡುಬಂದಿದೆ. ಸೋಂಕಿತರೆಲ್ಲರೂ ಪುರುಷರಾಗಿದ್ದು, ಪ್ರಸ್ತುತ ಚಿಕಿತ್ಸೆಗಾಗಿ ಮಂಗಳೂರಿನ ವೆನ್ಲಾಕ್ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದ್ದಾರೆ.

    ಕರೊನಾ ಸೋಂಕು ಪೀಡಿತರಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 16 ಮಂದಿ ಮಂಗಳವಾರ ವೆನ್ಲಾಕ್ ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಚಿಕಿತ್ಸೆಯಲ್ಲಿದ್ದ 16 ವರ್ಷದ ಬಾಲಕನೂ ಕರೊನಾದಿಂದ ಗುಣಮುಖನಾಗಿದ್ದಾನೆ. ಪ್ರಸ್ತುತ 96 ಸಕ್ರಿಯ ಕರೊನಾ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದು, ಎಲ್ಲರ ಆರೋಗ್ಯ ಸ್ಥಿತಿ ಸಹಜವಾಗಿದೆ. ಜಿಲ್ಲೆಯಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 231ಕ್ಕೇರಿದೆ. ಬುಧವಾರ 95 ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, ಲಭ್ಯವಾದ ಒಟ್ಟು 199 ವರದಿಗಳಲ್ಲಿ 176 ವರದಿಗಳು ನೆಗೆಟಿವ್ ಆಗಿತ್ತು. 39 ವರದಿಗಳು ಬರಲು ಬಾಕಿ ಇದೆ.

    ಉಡುಪಿಯಲ್ಲಿ ಶೂನ್ಯ ಪಾಸಿಟಿವ್ ಪ್ರಕರಣ
    ಉಡುಪಿ: ಕರೊನಾ ಮಹಾಘಾತದಿಂದ ಜಿಲ್ಲೆಗೆ ಕೊಂಚ ರಿಲೀಫ್ ಸಿಕ್ಕಿದ್ದು, ಮಹಾರಾಷ್ಟ್ರದಿಂದ ದೊಡ್ಡ ಸಂಖ್ಯೆಯಲ್ಲಿ ಆಗಮಿಸಿದ್ದ ಎಲ್ಲರ ಪರೀಕ್ಷೆ ಮುಗಿದ ಹಿನ್ನೆಲೆಯಲ್ಲಿ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಮಂಗಳವಾರ ಒಂದು ಕೋವಿಡ್ ಪ್ರಕರಣವೂ ವರದಿಯಾಗಿಲ್ಲ.
    ಮೇ 14ರ ಬಳಿಕ ಇದೇ ಮೊದಲ ಬಾರಿಗೆ ಜಿಲ್ಲೆಯಲ್ಲಿ ಮಂಗಳವಾರ ಮೊದಲ ಬಾರಿ ಶೂನ್ಯ ಪ್ರಕರಣ ದಾಖಲಾಗಿದೆ. ಜಿಲ್ಲಾಡಳಿತ, ಆರೋಗ್ಯ ಇಲಾಖೆ ಸೇರಿದಂತೆ ಜಿಲ್ಲೆಯ ಜನತೆ ಕೊಂಚ ನಿಟ್ಟಿಸಿರುಬಿಟ್ಟರು. ಸೋಮವಾರ ಮಹಾರಾಷ್ಟ್ರ ಸಹಿತ ಹೊರ ರಾಜ್ಯಗಳಿಂದ ಆಗಮಿಸಿದ ಎಲ್ಲರ ಪರೀಕ್ಷಾ ವರದಿಗಳು ಪೂರ್ಣಗೊಂಡು ಆರೋಗ್ಯ ಇಲಾಖೆಗೆ ಲಭ್ಯವಾಗಿದೆ. ಮಂಗಳವಾರ ಜಿಲ್ಲಾಡಳಿತ ಸ್ವೀಕರಿಸಿದ ಎಲ್ಲ 12 ವರದಿಯೂ ನೆಗೆಟಿವ್ ಬಂದಿದೆ.

    110 ಮಂದಿ ಡಿಸ್ಚಾರ್ಜ್: ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ ಕರೊನಾ ಸೋಂಕಿತ 110 ಮಂದಿ ಗುಣವಾಗಿ ಡಿಸ್ಚಾರ್ಜ್ ಆಗಿದ್ದಾರೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ. ಕೊಲ್ಲೂರು 51, ಕುಂದಾಪುರ 42, ಕಾರ್ಕಳ 8, ಉಡುಪಿ 9 ಮಂದಿ ಕೋವಿಡ್-19 ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 33 ವರದಿ ಬರಲು ಬಾಕಿ ಇದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.

    ಕಾಸರಗೋಡಿನ ಇಬ್ಬರಿಗೆ ಸೋಂಕು
    ಕಾಸರಗೋಡು: ಜಿಲ್ಲೆಯ ಇಬ್ಬರಲ್ಲಿ ಮಂಗಳವಾರ ಕರೊನಾ ಸೋಂಕು ಕಾಣಿಸಿಕೊಂಡಿದೆ. ಕುಂಬಳೆ ಗ್ರಾಪಂ ನಿವಾಸಿ 49 ವರ್ಷದ ವ್ಯಕ್ತಿ, ಪಳ್ಳಿಕ್ಕರೆ ಗ್ರಾಪಂ ನಿವಾಸಿ 65 ವರ್ಷದ ವ್ಯಕ್ತಿ ಸೋಂಕಿತರು. ಕುಂಬಳೆ ನಿವಾಸಿ ಸರ್ಕಾರಿ ಕ್ವಾರೆಂಟೈನ್‌ನಲ್ಲಿ, ಪಳ್ಳಿಕ್ಕರೆ ನಿವಾಸಿ ಪರಿಯಾರಂ ವೈದ್ಯಕೀಯ ಕಾಲೇಜಿನಲ್ಲಿ ದಾಖಲಾಗಿದ್ದಾರೆ. ಈ ಮೂಲಕ ಕಾಸರಗೋಡು ಜಿಲ್ಲೆಯಲ್ಲಿ ಕೋವಿಡ್ ಸೋಂಕು ಖಚಿತಗೊಂಡವರ ಸಂಖ್ಯೆ 111ಕ್ಕೆ ಏರಿಕೆಯಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts