More

    ಒಂದೇ ದಿನ 24 ಕರೊನಾ ಪ್ರಕರಣ, ದ.ಕ. 14, ಉಡುಪಿ 10 ಸೋಂಕಿತರು, 12 ಮಂದಿ ಡಿಸ್ಚಾರ್ಜ್

    ಮಂಗಳೂರು/ಉಡುಪಿ: ಕರಾವಳಿಯಲ್ಲಿ ಭಾನುವಾರ 24 ಕರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ದ.ಕ ಜಿಲ್ಲೆಯಲ್ಲಿ 14, ಉಡುಪಿಯಲ್ಲಿ 10 ಮಂದಿ ಸೋಂಕಿಗೊಳಗಾಗಿದ್ದಾರೆ.

    ದಕ್ಷಿಣ ಕನ್ನಡದಲ್ಲಿ ಮೂವರು ಪ್ರಥಮ ಸಂಪರ್ಕದಿಂದ ಸೋಂಕು ಪೀಡಿತರಾದವರು. ಎಲ್ಲರನ್ನೂ ಚಿಕಿತ್ಸೆಗಾಗಿ ಮಂಗಳೂರಿನ ವೆನ್ಲಾಕ್ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೇ 22ರಂದು ಕತಾರ್‌ನಿಂದ ಬೆಂಗಳೂರಿಗೆ ಬಂದಿದ್ದ 50 ವರ್ಷದ ವ್ಯಕ್ತಿ 7 ದಿನಗಳ ಸಾಂಸ್ಥಿಕ ಕ್ವಾರಂಟೈನ್‌ಗೆ ಒಳಪಟ್ಟು ಮೇ 30ರಂದು ಮಂಗಳೂರಿಗೆ ಬಂದಿದ್ದರು. ಇದೀಗ ಅವರ ಗಂಟಲ ದ್ರವ ವರದಿ ಪಾಸಿಟಿವ್ ಬಂದಿದೆ. ಮೇ 22ರಂದು ಮಲೇಷ್ಯಾದಿಂದ ಬೆಂಗಳೂರಿಗೆ ಆಗಮಿಸಿ ಕ್ವಾರಂಟೈನ್‌ಗೆ ಒಳಗಾಗಿದ್ದ 38 ವರ್ಷದ ವ್ಯಕ್ತಿಯೂ ಮೇ 30ರಂದು ಮಂಗಳೂರಿಗೆ ಬಂದ್ದಿದ್ದು, ಅವರಲ್ಲಿಯೂ ಸೋಂಕು ದೃಢವಾಗಿದೆ.

    ಮಹಾರಾಷ್ಟ್ರ, ಮುಂಬೈನಿಂದ ಬಂದಿದ್ದ 9 ಮಂದಿಯಲ್ಲಿಯೂ ಕರೊನಾ ವೈರಸ್ ಪತ್ತೆಯಾಗಿದೆ. ಮೇ 18ರಂದು ಆಗಮಿಸಿದ ಒಂದೇ ಕುಟುಂಬದ ಮಹಿಳೆ ಹಾಗೂ ಪುರುಷನಲ್ಲಿ ಸೋಂಕು ಪತ್ತೆಯಾಗಿದೆ. ಅದೇ ದಿನ ಬಂದಿದ್ದ ಒಂದೇ ಕುಟುಂಬದ ಇಬ್ಬರು ಪುರುಷರಲ್ಲಿ, ಜತೆಗೆ 22, 52 ಮತ್ತು 50 ವರ್ಷದ ಪುರುಷರಲ್ಲಿ ಸೋಂಕು ಕಂಡು ಬಂದಿದೆ. ಮೇ 22ರಂದು ಬಂದಿದ್ದ ಇಬ್ಬರು ಹೆಂಗಸರಲ್ಲೂ ಸೋಂಕು ದೃಢವಾಗಿದ್ದು, ಅವರನ್ನೆಲ್ಲ ವೆನ್ಲಾಕ್ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.

    *ಪ್ರಾಥಮಿಕ ಸಂಪರ್ಕದಿಂದ ಕರೊನಾ: ಮಹಾರಾಷ್ಟ್ರದಿಂದ ಮಂಗಳೂರಿನ ಕೆಂಜಾರಿಗೆ ಬಂದಿದ್ದ 2287 ಸಂಖ್ಯೆಯ ರೋಗಿಯ ಪ್ರಾಥಮಿಕ ಸಂಪರ್ಕದಿಂದ ಮೂವರಿಗೆ ಕರೊನಾ ಹರಡಿದೆ. ಸೋಂಕಿತರಾದವರು ಒಂದೇ ಕುಟುಂಬದವರಾಗಿದ್ದು, 17 ವರ್ಷದ ಯುವಕ, 31 ಮತ್ತು 52 ವರ್ಷದ ಗಂಡಸಿಗೆ ಸೋಂಕು ಹರಡಿದೆ. ಕ್ವಾರಂಟೈನ್ ಕೇಂದ್ರದಲ್ಲಿದ್ದ ಇವರನ್ನು ವೆನ್ಲಾಕ್‌ಗೆ ದಾಖಲಿಸಲಾಗಿದೆ.

    ಹನ್ನೆರಡು ಮಂದಿ ಬಿಡುಗಡೆ: ಕರೊನಾ ಸೋಂಕಿತರಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಹನ್ನೆರಡು ಮಂದಿ ಗುಣಮುಖರಾಗಿ ಮಂಗಳೂರಿನಲ್ಲಿ ಭಾನುವಾರ ಬಿಡುಗಡೆಯಾಗಿದ್ದಾರೆ. ಇವರಲ್ಲಿ ಮೇ 12ರಂದು ದುಬೈನಿಂದ ಮಂಗಳೂರಿಗೆ ಆಗಮಿಸಿದ್ದ 76 ವರ್ಷದ ವೃದ್ಧ (ರೋಗಿ 1008) ಸೇರಿದ್ದಾರೆ. ಮಧುಮೇಹ, ಅಧಿಕ ರಕ್ತದೊತ್ತಡ, ಹೃದಯ ಸಂಬಂಧಿ ತೊಂದರೆ ಮತ್ತು ಕಾಲಿನ ಸೋಂಕು ಹಾಗೂ ಇತರ ಕಾಯಿಲೆಗಳಿಂದ ಬಳಲುತ್ತಿದ್ದರು. ಐಸಿಯುನಲ್ಲಿ ದಾಖಲಿಸಿ ಅವರಿಗೆ ಚಿಕಿತ್ಸೆ ನೀಡಲಾಗಿದ್ದು, ಮೇ 30ರಂದು ಬಂದ ಗಂಟಲ ದ್ರವ ಮಾದರಿಯ ವರದಿ ನೆಗೆಟಿವ್ ಬಂದಿರುವುದರಿಂದ ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿದೆ. ಉಳಿದಂತೆ 3 ಮತ್ತು 11 ವರ್ಷದ ಬಾಲಕಿಯರು ಸೇರಿ 6 ಮಂದಿ ಗಂಡಸರು ಮತ್ತು ಮೂವರು ಮಹಿಳೆಯರು ಬಿಡುಗಡೆಯಾಗಿದ್ದಾರೆ. ಇದರೊಂದಿಗೆ ಒಟ್ಟು ಜಿಲ್ಲೆಯಲ್ಲಿ 56 ಮಂದಿ ಗುಣಮುಖರಾಗಿ ಬಿಡುಗಡೆಯಾದಂತಾಗಿದೆ.

    ಉಡುಪಿ 7,257 ವರದಿ ನಿರೀಕ್ಷೆ
    ಉಡುಪಿ: ಜಿಲ್ಲೆಯಲ್ಲಿ ವಿವಿಧೆಡೆ ಹೋಂ ಕ್ವಾರಂಟೈನ್‌ನಲ್ಲಿದ್ದವರನ್ನು ಕೋವಿಡ್ ನಿಗದಿತ ಆಸ್ಪತ್ರೆಗೆ ದಾಖಲಿಸಲಾಗಿದೆ. ಒಟ್ಟು 7257 ವರದಿ ಬರಲು ಬಾಕಿ ಇದೆ. ಭಾನುವಾರ ಮಹಾರಾಷ್ಟ್ರದಿಂದ ಹಿಂದಿರುಗಿದ್ದ 30 ವರ್ಷ, 32 ವರ್ಷ, 24 ವರ್ಷ, 62 ವರ್ಷ, 31 ವರ್ಷ, 35 ವರ್ಷ, 45 ವರ್ಷದ ಪುರುಷರಲ್ಲಿ ಹಾಗೂ 31 ವರ್ಷ, 42 ವರ್ಷದ ಮಹಿಳೆಯರಲ್ಲಿ ಮತ್ತು 7 ವರ್ಷದ ಮಗುವಿನಲ್ಲಿ ಕರೊನಾ ಪಾಸಿಟಿವ್ ಪತ್ತೆಯಾಗಿದೆ. ಭಾನುವಾರ 1501 ಮಾದರಿ ಸಂಗ್ರಹಿಸಲಾಗಿದ್ದು, 9 ಮಂದಿ ಐಸೋಲೇಷನ್ ವಾರ್ಡ್‌ಗೆ ದಾಖಲಾಗಿದ್ದಾರೆ. 4 ಮಂದಿ ಬಿಡುಗಡೆಯಾಗಿದ್ದಾರೆ. 83 ಮಂದಿ 28 ದಿನದ ಹಾಗೂ 19 ಮಂದಿ 14 ದಿನದ ನಿಗಾ ಅವಧಿ ಪೂರೈಸಿದ್ದಾರೆ.

    ಕಾಸರಗೋಡಿನ ಹತ್ತು ಮಂದಿಗೆ ಸೋಂಕು
    ಕಾಸರಗೋಡು: ಜಿಲ್ಲೆಯಲ್ಲಿ ಭಾನುವಾರ ಹತ್ತು ಮಂದಿ ಸೋಂಕಿಗೊಳಗಾಗಿದ್ದಾರೆ. ರೋಗ ಕಾಣಿಸಿಕೊಂಡವರಲ್ಲಿ ಎಲ್ಲರೂ ಪುರುಷರಾಗಿದ್ದು, 4 ಮಂದಿ ಮಂಗಲ್ಪಾಡಿ ಪಂಚಾಯಿತಿ, ಮಧೂರು, ಪೈವಳಿಕೆ ಪಂಚಾಯಿತಿ ತಲಾ ಇಬ್ಬರು, ಕಾಸರಗೋಡು ನಗರಸಭೆ ಹಾಗೂ ಮೊಗ್ರಾಲ್‌ಪುತ್ತೂರು ಪಂಚಾಯಿತಿ ವ್ಯಾಪ್ತಿಯ ತಲಾ ಒಬ್ಬರು ಒಳಗೊಂಡಿದ್ದಾರೆ. ಜಿಲ್ಲೆಯ ಬದಿಯಡ್ಕ, ಪಿಲಿಕ್ಕೋಡ್ ಒಳಗೊಂಡಂತೆ ಹತ್ತು ಹಾಟ್‌ಸ್ಪಾಟ್‌ಗಳನ್ನು ಗುರುತಿಸಲಾಗಿದೆ.

    ಪೊಲೀಸ್ ಠಾಣೆ ತಾತ್ಕಾಲಿಕ ಶಿಫ್ಟ್
    ಕುಂದಾಪುರ: ಶಂಕರನಾರಾಯಣ ಪೊಲೀಸ್ ಠಾಣೆಯ ಮಹಿಳಾ ಸಿಬ್ಬಂದಿಯೊಬ್ಬರಿಗೆ ಕರೊನಾ ಪಾಸಿಟಿವ್ ಶಂಕೆ ಹಿನ್ನೆಲೆಯಲ್ಲಿ ಸೋಮವಾರ ಪೊಲೀಸ್ ಠಾಣೆ ಮುಚ್ಚಿ ಸ್ಯಾನಿಟೈಸ್ ಮಾಡಲಾಗುವುದು. ಸಮೀಪದ ಹೈಸ್ಕೂಲ್‌ನಲ್ಲಿ ಠಾಣೆ ತಾತ್ಕಾಲಿಕ ಕಾರ್ಯನಿರ್ವಹಣೆ ನಡೆಯಲಿದೆ. ಸಿಬ್ಬಂದಿ ಕ್ವಾರಂಟೈನ್ ಆಗಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts