More

    ಇಬ್ಬರು ಶಂಕಿತರು ಆಸ್ಪತ್ರೆಗೆ ದಾಖಲು

    ಕುಂದಾಪುರ: ಶಿರೂರು ಮಹಿಳೆ ಜ್ವರ ಹಾಗೂ ಕೆಮ್ಮಿನಿಂದ ಕುಂದಾಪುರ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮರಳಿದ ಬೆನ್ನಿಗೆ ಬುಧವಾರ ತಾಲೂಕು ಸರ್ಕಾರಿ ಆಸ್ಪತ್ರೆಗೆ ವಿದೇಶದಿಂದ ಮರಳಿದ ಇಬ್ಬರು ದಾಖಲಾಗಿದ್ದಾರೆ.
    ಜಡ್ಕಲ್ ಗ್ರಾಮದ ಒಬ್ಬರು ಹಾಗೂ ಗುಜ್ಜಾಡಿ ಗ್ರಾಮದ ಒಬ್ಬರು ಜ್ವರ ಹಾಗೂ ಗಂಟಲು ನೋವಿಂದ ತಾಲೂಕು ಆಸ್ಪತ್ರೆ ಇಟೆನ್ಸಿವ್ ಕೇರ್‌ನಲ್ಲಿ ದಾಖಲಾಗಿದ್ದು, ಇಬ್ಬರ ಗಂಟಲು ದ್ರವ ಹೆಚ್ಚಿನ ಚಿಕಿತ್ಸೆಗಾಗಿ ರವಾನಿಸಲಾಗಿದೆ. ತಾಲೂಕು ಆಸ್ಪತ್ರೆಯಲ್ಲಿ ಕರೊನಾ ಶಂಕಿತರಿಗೆ 14 ದಿನ ತೀವ್ರ ನಿಗಾ ವಿಭಾಗದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇಬ್ಬರಿಗೂ ಜ್ವರ ಹಾಗೂ ಗಂಟಲು ನೋವಿದ್ದು, ಕರೊನಾ ಸಾಧ್ಯತೆ ಕಡಿಮೆ. ಇಬ್ಬರೂ ಲವಲವಿಕೆಯಿಂದ ಇದ್ದಾರೆ. ಅವರನ್ನು 14 ದಿನ ಆಸ್ಪತ್ರೆಯಲ್ಲೇ ಉಳಿಸಿಕೊಳ್ಳಲಾಗುತ್ತದೆ ಎಂದು ವೈದ್ಯಾಧಿಕಾರಿ ಡಾ.ರಾಬರ್ಟ್ ರೊಬೆರೋ ತಿಳಿಸಿದ್ದಾರೆ.

    ಆಹಾರಧಾನ್ಯ ಬಿಡುಗಡೆ ಸಿಪಿಐಎಂ ಒತ್ತಾಯ
    ಕುಂದಾಪುರ: ದೇಶದಲ್ಲಿ ಮಾರಕ ಕರೊನ ಸೋಂಕಿನಿಂದ ಉಂಟಾಗಿರುವ ಪ್ರತಿಕೂಲ ಆರ್ಥಿಕ ಪರಿಣಾಮ ತಡೆಯುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ತನ್ನ ಗೋದಾಮುಗಳಲ್ಲಿರುವ ಆಹಾರ ಧಾನ್ಯಗಳನ್ನು ಬಿಡುಗಡೆ ಮಾಡಿ ಜನರ ನೆರವಿಗೆ ಧಾವಿಸುವಂತೆ ಸಿಪಿಐ(ಎಂ) ಮುಖಂಡ ಸುರೇಶ್ ಕಲ್ಲಾಗಾರ್ ಒತ್ತಾಯಿಸಿದ್ದಾರೆ. ಕೇಂದ್ರ ಸರ್ಕಾರದ ಬಳಿ ಫೆ.1ರ ವರೆಗೆ 7.5ಕೋಟಿ ಟನ್ ಆಹಾರ ಧಾನ್ಯಗಳು ದಾಸ್ತಾನು ಇದ್ದು, ಅವುಗಳು ಗೋದಾಮುಗಳಲ್ಲಿ ಕೊಳೆಯುತ್ತಿವೆ. ಕೂಡಲೇ ಈ ಆಹಾರ ಧಾನ್ಯಗಳ ವಿತರಣೆಗೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

    ಅಂತರ ಜಿಲ್ಲಾ ಬಸ್ ಸಂಚಾರ ವ್ಯತ್ಯಯ
    ಉಡುಪಿ: ಕರೊನಾ ವೈರಸ್‌ನಿಂದ ಪ್ರಯಾಣಿಕರ ಸಂಖ್ಯೆ ವಿರಳವಾಗುತ್ತಿರುವ ಹಿನ್ನೆಲೆಯಲ್ಲಿ ಅಂತರ ಜಿಲ್ಲಾ ಬಸ್ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. ಈಗಾಗಲೇ ಬೆಂಗಳೂರು-ಮಂಗಳೂರು ಮತ್ತು ಉಡುಪಿ ಜಿಲ್ಲೆಗಳ ನಡುವೆ ಸಂಚರಿಸುವ ಕೆಲವು ಖಾಸಗಿ ಬಸ್‌ಗಳು ತಮ್ಮ ಸಂಚಾರ ಮೊಟಕುಗೊಳಿಸಿದ್ದು, ಈಗಾಗಲೇ ಆಸನ ಕಾಯ್ದಿರಿಸಿದವರಿಗೆ ಹಣ ಮರಳಿಸಲಾಗುತ್ತಿದೆ.
    ಸರ್ಕಾರಿ ಬಸ್‌ಗಳ ಓಡಾಟದಲ್ಲೂ ವಿರಳವಾಗಿದೆ. ಪ್ರಯಾಣಿಕರ ಸಂಖ್ಯೆ ಇಳಿಮುಖವಾಗುತ್ತಿರುವ ಹಿನ್ನೆಲೆಯಲ್ಲಿ ಈಗಾಗಲೇ ವಿವಿಧ ಮಾರ್ಗಗಳ ಸುಮಾರು 50 ಬಸ್‌ಗಳ ಸಂಚಾರ ಸ್ಥಗಿತಗೊಳಿಸಲಾಗಿದೆ. ಮಂದಿನ ದಿನಗಳಲ್ಲಿ ಇನ್ನಷ್ಟು ಬಸ್‌ಗಳನ್ನು ಸ್ಥಗಿತಗೊಳಿಸಲಾಗುವುದು ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.

    ನಮಾಜ್ ಸಮಯ ಬದಲಾವಣೆ
    ಕರೊನಾ ವೈರಸ್ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಹೊರಡಿಸಿದ ಆದೇಶದ ಮೇರೆಗೆ ಉಡುಪಿ ಜಾಮೀಯ ಮಸೀದಿಯ ನಮಾಝ್ ವೇಳಾಪಟ್ಟಿಯನ್ನು ತಾತ್ಕಾಲಿಕವಾಗಿ ಬದಲಾಯಿಸಲಾಗಿದ್ದು, ಇದು ಮುಂದಿನ ಆದೇಶದವರೆಗೆ ಜಾರಿಯಲ್ಲಿರುತ್ತದೆ ಎಂದು ಮಸೀದಿಯ ಆಡಳಿತ ಮಂಡಳಿ ತಿಳಿಸಿದೆ. ಫಜರ್(ಮುಂಜಾನೆಯ) ನಮಾಜನ್ನು ಹೊರತುಪಡಿಸಿ ಉಳಿದ(ನಾಲ್ಕು ಹೊತ್ತಿನ) ದೈನಂದಿನ ನಮಾಝ್ಗಳನ್ನು ಅಝಾನ್(ಬಾಂಗ್) ಆದ ಕೂಡಲೇ ನಿರ್ವಹಿಸಲಾಗುವುದು. ಜುಮಾ ನಮಾಝ್ ವೇಳಾಪಟ್ಟಿಯಂತೆ ಅಝಾನ್- 12.40ಕ್ಕೆ, ಖುತ್ಬಾ -12.45ಕ್ಕೆ, ನಮಾಝ್-12.55ಕ್ಕೆ ನಿರ್ವಹಿಸಲಾಗುತ್ತದೆ.
    ಪುರುಷರಿಗೆ ಮಸೀದಿಯ ಒಳಗಿನ ಮಿಂಬರ್ ಹಾಲ್ನಲ್ಲಿ ನಮಾಝ್ ಮಾಡಲು ಅವಕಾಶವಿರುವುದಿಲ್ಲ. ತಾತ್ಕಾಲಿಕವಾಗಿ ಮಸೀದಿ ಹೊರಭಾಗದಲ್ಲಿ ನಮಾಝ್ ನಿರ್ವಹಿಸಲಾಗುವುದು. ಮಸೀದಿಯಲ್ಲಿ ಮಹಿಳೆಯರ ನಮಾಝ್, ಮದ್ರಸಾ, ಸ್ಟಡಿ ಕ್ಲಾಸ್ ಇತ್ಯಾದಿಗಳಿಗೆ ಅವಕಾಶವಿರುವುದಿಲ್ಲ ಎಂದು ಪ್ರಕಟಣೆ ತಿಳಿಸಿದೆ.

    ಉದ್ಯೋಗ ಮೇಳ ಮುಂದೂಡಿಕೆ
    ಸಂಚಲನ ಸ್ವಯಂಸೇವಾ ಸಂಘಟನೆ ಆಶ್ರಯದಲ್ಲಿ, ಉನ್ನತಿ ಕ್ಯಾರಿಯರ್ ಅಕಾಡೆಮಿ ಪ್ರಾಯೋಜಕತ್ವದಲ್ಲಿ ಮಂಗಳೂರು ವಿಶ್ವ ವಿದ್ಯಾಲಯದ ಸಹಯೋಗದೊಂದಿಗೆ ಉನ್ನತಿ ಉದ್ಯೋಗ ಮೇಳ 2020ನ್ನು ಮಾ.20 ಮತ್ತು 21ರಂದು ಉಡುಪಿಯ ಅಜ್ಜರಕಾಡು ಡಾ.ಜಿ.ಶಂಕರ್ ಸರ್ಕಾರಿ ಮಹಿಳಾ ಪ್ರ. ದ.ಕಾಲೇಜು, ಹಾಗೂ ಹಂಪನಕಟ್ಟದ ಮಂಗಳೂರು ನಗರದ ವಿಶ್ವ ವಿದ್ಯಾಲಯ ಕಾಲೇಜಿನಲ್ಲಿ ನಡೆಸಲು ನಿರ್ಧರಿಸಿದ್ದು, ಈ ಕಾರ್ಯಕ್ರಮವನ್ನು ಕರೊನಾ ನಿರ್ಬಂಧ ಹಿನ್ನಲೆಯಲ್ಲಿ ಮುಂದೂಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

    ಕೆಎಂಸಿ ಒಪಿಡಿ ಸಮಯ ಬದಲಾವಣೆ
    ಉಡುಪಿ: ಕರೊನಾ ತಡೆಗಟ್ಟುವ ಮುನ್ನೆಚ್ಚರಿಕೆ ಕ್ರಮವಾಗಿ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆ ಆಡಳಿತ ಮಂಡಳಿ ಹೊರರೋಗಿ ವಿಭಾಗಗಳನ್ನು ಬೆಳಗ್ಗೆ 8.30ರಿಂದ ಮಧ್ಯಾಹ್ನ 1ರ ನಡುವೆ ಮಾತ್ರ ತೆರೆಯಲು ನಿರ್ಧರಿಸಿದೆ. ವೈದ್ಯಕೀಯ ತುರ್ತು ಸೇವೆಗಳಿಗೆ ಮಾತ್ರ ಆಸ್ಪತ್ರೆಗೆ ಭೇಟಿ ನೀಡುವಂತೆ ಸಾರ್ವಜನಿಕರಿಗೆ ಈ ಮೂಲಕ ಸೂಚಿಸಲಾಗಿದೆ. ವೈದ್ಯರ ಎಲ್ಲ ಪೂರ್ವ ನಿಯೋಜಿತ ಭೇಟಿಗಳನ್ನು ಮುಂದೂಡಲು ಸೂಚಿಸಲಾಗಿದೆ. ಒಳರೋಗಿಗಳೊಂದಿಗೆ ಒಬ್ಬರಿಗೆ ಮಾತ್ರ ಇರಲು ಅವಕಾಶ ಕಲ್ಪಿಸಲಾಗಿದೆ. ತೀವ್ರ ನಿಗಾ ಘಟಕಗಳಿಗೆ (ಐಸಿಯು) ಪ್ರವೇಶ, ಶಸ್ತ್ರಚಿಕಿತ್ಸೆ ನಂತರದ ತೀವ್ರ ನಿಗಾ ಘಟಕಗಳ ಪ್ರವೇಶ ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ. ತುರ್ತು ಚಿಕಿತ್ಸಾ ಸೇವೆಗಳು ಎಂದಿನಂತೆ ಇರಲಿವೆ. ಹಿರಿಯ ನಾಗರಿಕರು ಮತ್ತು ಮಕ್ಕಳು ವೈದ್ಯಕೀಯ ತುರ್ತು ಸಂದರ್ಭ ಮಾತ್ರ ಆಸ್ಪತ್ರೆಗೆ ಭೇಟಿ ನೀಡುವಂತೆ ವಿನಂತಿಸಲಾಗಿದೆ.

    ಕರೊನಾ ವೈರಸ್ ಸಹಾಯವಾಣಿ
    ಕರೊನಾ ವೈರಸ್ ಬಗ್ಗೆ ಜಿಲ್ಲಾಮಟ್ಟದಲ್ಲಿ ಮೊದಲು ಇದ್ದ ಸಹಾಯವಾಣಿಯನ್ನು 24/7 ಮೇಲ್ದರ್ಜೆಗೆ ಏರಿಸಲಾಗಿದ್ದು, ಅಗತ್ಯ ಮಾಹಿತಿಗಳಾದ ಕೋವಿಡ್-19 ಸೋಂಕು, ಐಸೊಲೇಶನ್ ವಾರ್ಡ್, ಲ್ಯಾಬ್ ಮತ್ತು ಸೋಂಕಿತ ರೋಗಿಯ ಸ್ಥಳಾಂತರ ಬಗ್ಗೆ ಸುಸಜ್ಜಿತ ತಾಂತ್ರಿಕ ಸೇವೆಗಳನ್ನೊಳಗೊಂಡ ಸಂಪೂರ್ಣ ಮಾಹಿತಿ ಲಭ್ಯವಾಗಲಿದೆ. ಸಾರ್ವಜನಿಕರು ಸಹಾಯವಾಣಿ ಸಂಖ್ಯೆ 9663957222 ಅಥವಾ 9663950222 ಕರೆ ಮಾಡಿ ಮಾಹಿತಿ ಪಡೆಯಬಹುದು. ಶಂಕಿತ ರೋಗಿಗಳು ಜಿಲ್ಲಾಸ್ಪತ್ರೆಯಲ್ಲಿ ಸರತಿ ಸಾಲಿನಲ್ಲಿ ನಿಲ್ಲದೆ ನೇರವಾಗಿ ಪ್ರತ್ಯೇಕ ಹೆಲ್ಪ್ ಡೆಸ್ಕ್‌ನಲ್ಲಿ ನೋಂದಣಿ ಮಾಡಿಕೊಳ್ಳಬೇಕು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts