More

    ಹೂ ವ್ಯಾಪಾರಕ್ಕೂ ಕರೊನಾ ಕಂಟಕ

    ಗಂಗೊಳ್ಳಿ: ಕರೊನಾ ಎರಡನೇ ಅಲೆಯ ಎಫೆಕ್ಟ್ ಹೂ ವ್ಯಾಪಾರಸ್ಥರಿಗೂ ತಟ್ಟಿದ್ದು, ಹೂ ವ್ಯಾಪಾರದಿಂದ ಬದುಕು ಕಟ್ಟಿಕೊಂಡವರು, ಬೆಳೆಗಾರರು ಚಿಂತೆಗೀಡಾಗಿದ್ದಾರೆ.

    ಏಪ್ರಿಲ್, ಮೇ ತಿಂಗಳು ಮದುವೆ ಮತ್ತು ಧಾರ್ಮಿಕ ಹಬ್ಬಗಳ ಸೀಸನ್. ಈ ಸಮಯ ಹೂವಿನ ವ್ಯಾಪಾರ ಭರ್ಜರಿಯಾಗಿ ನಡೆಯುತ್ತದೆ. ಮಲ್ಲಿಗೆ ಹೂವಿಗಂತೂ ಭಾರಿ ಡಿಮ್ಯಾಂಡ್. ಕಳೆದ ಒಂದು ತಿಂಗಳಿನಿಂದ ಆರಂಭವಾಗಿರುವ ಕರೊನಾ ಎರಡನೇ ಅಲೆಯ ಆರ್ಭಟದಿಂದ ಹೂ ವ್ಯಾಪಾರಸ್ಥರ ಬದುಕು ಸಂಕಷ್ಟಕ್ಕೆ ಸಿಲುಕಿದ್ದು, ಸಾಲ ಹೊರೆ ಕೂಡ ಹೆಚ್ಚಾಗತೊಡಗಿದೆ.

    ಏಪ್ರಿಲ್- ಮೇ ತಿಂಗಳ ಪ್ರತಿ ದಿನವೂ ಏನಾದರೊಂದು ಕಾರ್ಯಕ್ರಮ ಇದ್ದೇ ಇರುತ್ತಿತ್ತು. ಮಲ್ಲಿಗೆ ಮೊಗ್ಗಿಗೆ, ಬಣ್ಣ ಬಣ್ಣದ ಸೇವಂತಿಗೆ ಹೂವಿಗೆ, ಕೆಂಪು ಗುಲಾಬಿಗಳಿಗೆ ಭಾರಿ ಬೇಡಿಕೆ ಇದ್ದು ಈ 2-3 ತಿಂಗಳು ಲಕ್ಷಾಂತರ ರೂಪಾಯಿ ವಹಿವಾಟು ನಡೆಯುತ್ತಿತ್ತು. ಭರ್ಜರಿ ವ್ಯಾಪಾರದಿಂದ ಹೂ ವ್ಯಾಪಾರಸ್ಥರು ತಮ್ಮ ಜೀವನ ಕಟ್ಟಿಕೊಳ್ಳುತ್ತಿದ್ದರೆ, ಹೂ ಕಟ್ಟುವವರ ಕುಟುಂಬದ ನಿರ್ವಹಣೆಗೂ ಸಹಾಯವಾಗುತ್ತಿತ್ತು. ಕರೊನಾ ಆರ್ಭಟದಿಂದ ಎರಡು ವರ್ಷಗಳಿಂದ ಹೂವಿನ ವ್ಯಾಪಾರ ನಂಬಿಕೊಂಡವರ ಬದುಕು ಬಾಡಿ ಹೋಗಿದೆ.

    ಬೆಳಗ್ಗೆ 10 ಗಂಟೆಯೊಳಗೆ ಹೂ ಮಾರಾಟಕ್ಕೆ ಅವಕಾಶ ಇದ್ದರೂ ಅಷ್ಟರೊಳಗೆ ಹೂ ತಂದು, ಅದನ್ನು ಕಟ್ಟಿ ಮಾರುಕಟ್ಟೆಗೆ ತರುವಾಗಲೇ 9 ಗಂಟೆಯಾಗುತ್ತದೆ. ದೇವಸ್ಥಾನಗಳಲ್ಲಿ ಯಾವುದೇ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿಲ್ಲ. ಇನ್ನು ಮದುವೆ, ಮುಂಜಿ ಮತ್ತಿತರ ಶುಭ ಕಾರ್ಯಗಳು ಸರಳವಾಗಿ ನಡೆಯುತ್ತಿರುವುದರಿಂದ ಹೂಗಳಿಗೆ ಬೇಡಿಕೆ ಬಹಳಷ್ಟು ಕಡಿಮೆಯಾಗಿದೆ. ವ್ಯಾಪಾರವಾಗದೆ ಹೂ ಮಾಲೆ, ಗುಚ್ಚಗಳು ಬಾಡಿ ಹೋಗುತ್ತಿವೆ.

    ಹೆಚ್ಚುತ್ತಿದೆ ಸಾಲದ ಹೊರೆ: ಹೂ ತಂದವರಿಗೆ, ಹೂ ಕಟ್ಟಿದವರಿಗೆ ನೀಡಲು ದುಡ್ಡಿಲ್ಲ. ತಂದ ಹೂ ಮಾರಾಟವಾಗದೆ ಕೊಳೆತು ಹೋಗುತ್ತಿದೆ. ಹೂವನ್ನು ಕಟ್ಟಿ ಮಾರುಕಟ್ಟೆಗೆ ತರುವಷ್ಟರಲ್ಲಿ ಲಾಕ್‌ಡೌನ್ ಆರಂಭವಾಗುವುದರಿಂದ ಹೂ ಮಾರಾಟವಾಗುತ್ತಿಲ್ಲ. ಮನೆ ಮನೆಗೆ ತೆರಳಿ ಮಾರಾಟ ಮಾಡಲೂ ಸಾಧ್ಯವಿಲ್ಲ. ಹೀಗಾಗಿ ಪ್ರತಿನಿತ್ಯ ಸಾವಿರಾರು ರೂ. ಮೌಲ್ಯದ ಹೂವುಗಳು ಕೊಳೆತು ಮಣ್ಣು ಸೇರುತ್ತಿದ್ದು, ಹೂ ವ್ಯಾಪಾರಸ್ಥರ, ಹೂ ಕಟ್ಟುವವರ ಕುಟುಂಬ ಸಾಲದ ಬಲೆಗೆ ಬಿದ್ದು, ಜೀವನ ಸಾಗಿಸುವುದು ಕಷ್ಟವಾಗುತ್ತಿದೆ.

    ಕಳೆದ ವರ್ಷ ಕರೊನಾ ವೈರಸ್ ಕಾರಣದಿಂದ ಹೂ ವ್ಯಾಪಾರಸ್ಥರು ಸಂಕಷ್ಟಕ್ಕೊಳಗಾಗಿ ಕುಟುಂಬ ನಿರ್ವಹಣೆ ಕಷ್ಟವಾಗಿತ್ತು. ಈ ವರ್ಷವು ಕೂಡ ಅದೇ ರೀತಿ ಪರಿಸ್ಥಿತಿಯಿಂದ ಬದುಕು ಸಂಕಷ್ಟಕ್ಕೆ ಸಿಲುಕಿದೆ. ಹೂವುಗಳು ಹೆಚ್ಚೆಚ್ಚು ಮಾರಾಟವಾಗುವ ಈ ತಿಂಗಳುಗಳಲ್ಲಿ ಹೂವಿನ ಮಾರಾಟ ಕರೊನಾ ಅಲೆಯಲ್ಲಿ ಕೊಚ್ಚಿ ಹೋಗಿದೆ. ಹೂವಿನ ವ್ಯಾಪಾರದಿಂದ ಬದುಕನ್ನು ಕಟ್ಟಿಕೊಂಡವರು ಮತ್ತು ಹೂವಿನ ವ್ಯಾಪಾರಸ್ಥರು ಸಾಲದ ಸುಳಿಯಲ್ಲಿ ಸಿಲುಕುವಂತಾಗಿದೆ.
    ರಾಘವ ಸಾರಂಗ್
    ನಗರೇಶ್ವರಿ ಪ್ಲವರ್ ಸ್ಟಾಲ್, ಗಂಗೊಳ್ಳಿ

    ಈ 2-3 ತಿಂಗಳಿನಲ್ಲಿ ಅನೇಕ ಧಾರ್ಮಿಕ ಮತ್ತು ಶುಭ ಕಾರ್ಯಗಳು ನಡೆಯುತ್ತಿದ್ದುದರಿಂದ ಮಲ್ಲಿಗೆ ಹೂವಿಗೆ ಭಾರಿ ಬೇಡಿಕೆ ಇರುತ್ತಿತ್ತು. ಈ ದಿನಗಳಲ್ಲಿ ಮಲ್ಲಿಗೆ ಪೂರೈಕೆ ಮಾಡುವುದೇ ದೊಡ್ಡ ಕೆಲಸವಾಗಿತ್ತು. ಈಗ ಶುಭ ಕಾರ್ಯಗಳಿಗೆ ಅಡ್ಡಿಯಾಗಿದ್ದು, ಬಹುತೇಕ ಮಂದಿ ಸರಳವಾಗಿ ಕಾರ್ಯಕ್ರಮ ನಡೆಸುತ್ತಿದ್ದಾರೆ. ಹೀಗಾಗಿ ಮಲ್ಲಿಗೆ ಹೂವಿಗೆ ಬೇಡಿಕೆ ಬಹಳಷ್ಟು ಕಡಿಮೆಯಾಗಿದೆ. ಕನಿಷ್ಠ ಬೆಲೆಗೆ ತೆಗೆದುಕೊಳ್ಳಿ ಎಂದರೂ ಕೊಳ್ಳುವವರಿಲ್ಲ.
    ಸುಶೀಲ ಪೂಜಾರಿ ಕಳಿಹಿತ್ಲು
    ಮಲ್ಲಿಗೆ ಹೂವಿನ ವ್ಯಾಪಾರಸ್ಥೆ, ಗಂಗೊಳ್ಳಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts