More

    ಉಡುಪಿಯಲ್ಲಿ ಕರೊನಾ ಹರಡುತ್ತಿದೆಯೇ?

    ಉಡುಪಿ: ಕಳೆದ 15ರಿಂದ 20 ದಿನಗಳಿಂದ 50ರ ಗಡಿ ದಾಟದ ಪಾಸಿಟಿವ್ ಪ್ರಕರಣಗಳ ಸಂಖ್ಯೆ, ಉಡುಪಿ ಜಿಲ್ಲೆಯಲ್ಲಿ ಶನಿವಾರ ಏಕಾಏಕಿ 90ಕ್ಕೇರಿದೆ. ಪ್ರಾಥಮಿಕ ಸಂಪರ್ಕಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ ಕರೊನಾ ಹಬ್ಬುತ್ತಿದೆಯೇ ಎಂಬ ಆತಂಕ ಜನರಲ್ಲಿ ಮನೆಮಾಡಿದೆ.

    ಮಂಗಳೂರು, ರಾಯಚೂರಿನಿಂದ ಆಗಮಿಸಿದ ತಲಾ ಒಬ್ಬರಿಗೆ, ಮುಂಬೈನಿಂದ ಬಂದ 8 ಮಂದಿಗೆ, ಬೆಂಗಳೂರಿನಿಂದ ಬಂದ ಐವರಲ್ಲಿ ಸೋಂಕು ದೃಢಪಟ್ಟಿದೆ. ಈವರೆಗೆ ಜಿಲ್ಲೆಯಲ್ಲಿ ಒಟ್ಟು ಪಾಸಿಟಿವ್ ಸಂಖ್ಯೆ 1,567ಕ್ಕೆ ಏರಿಕೆಯಾಗಿದೆ. ಶನಿವಾರ ದೃಢಪಟ್ಟ ಪ್ರಕರಣಗಳಲ್ಲಿ ಉಡುಪಿ 66, ಕುಂದಾಪುರ 20, ಕಾರ್ಕಳದ 4 ಮಂದಿ ಇದ್ದಾರೆ. 57 ಪುರುಷರು, 25 ಮಹಿಳೆಯರು, ಮೂವರು ಗಂಡು, ಐವರು ಹೆಣ್ಣು ಮಕ್ಕಳಿಗೆ ಸೋಂಕು ತಗುಲಿದೆ.

    573 ಮಂದಿಯ ವರದಿ ನೆಗೆಟಿವ್: ಶನಿವಾರ 573 ಮಂದಿಯ ವರದಿ ನೆಗೆಟಿವ್ ಬಂದಿದ್ದು, 269 ಜನರ ಗಂಟಲ ದ್ರವ ಮಾದರಿ ಸಂಗ್ರಹಿಸಲಾಗಿದೆ. 21 ಮಂದಿ ಸೋಂಕಿನಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಈವರೆಗೆ ಒಟ್ಟು 1,245 ಮಂದಿ ಸೋಂಕಿನಿಂದ ಮುಕ್ತರಾಗಿ ಡಿಸ್ಚಾರ್ಜ್ ಆಗಿದ್ದಾರೆ. 317 ಸಕ್ರಿಯ ಪ್ರಕರಣಗಳಿವೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.

    ಜಿಲ್ಲಾಸ್ಪತ್ರೆ ಲ್ಯಾಬ್ ಕಾರ್ಯಾರಂಭ: ಅಜ್ಜರಕಾಡು ಜಿಲ್ಲಾಸ್ಪತ್ರೆಯಲ್ಲಿರುವ ಕೊವಿಡ್-19 ಲ್ಯಾಬ್ ಶುಕ್ರವಾರ ಕಾರ್ಯಾರಂಭ ಮಾಡಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಜುಲೈ 10ರಂದು 47, 11ರಂದು 48 ಪರೀಕ್ಷೆ ನಡೆಸಲಾಗಿದೆ. ಬೆಳಗ್ಗೆ 8ರಿಂದ ರಾತ್ರಿ 8ರವರೆಗೆ ಎರಡು ಪಾಳಿಯಲ್ಲಿ ಲ್ಯಾಬ್ ತಂತ್ರಜ್ಞರು, ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಹೆಚ್ಚು ಪರೀಕ್ಷೆ ನಡೆಸಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇನ್ನೂ 2030 ಮಂದಿಯ ವರದಿ ಬರಬೇಕಿದೆ.

    ಹೋಟೆಲ್‌ಗಳು ಸ್ವಯಂಪ್ರೇರಿತ ಬಂದ್: ಉಡುಪಿ ನಗರದಲ್ಲಿ ಕೋವಿಡ್-19 ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೆಲವು ಹೋಟೆಲ್ ಮಾಲೀಕರು ಆತಂಕದಿಂದ ಸ್ವಯಂಪ್ರೇರಿತರಾಗಿ ಕೆಲವು ದಿನ ಬಂದ್ ಮಾಡುವ ನಿರ್ಧಾರ ಕೈಗೊಂಡಿದ್ದಾರೆ. ನಗರದಲ್ಲಿ ಕೆಲವು ಹೋಟೆಲ್‌ಗಳು ಬಾಗಿಲು ಎಳೆದಿವೆ. ಒಂದೆಡೆ ವ್ಯಾಪಾರವೂ ಇಲ್ಲ, ಇನ್ನೊಂದೆಡೆ ಕರೊನಾ ಭೀತಿ. ಈ ನಡುವೆ ಹೋಟೆಲ್ ಮಾಲೀಕರು ತತ್ತರಿಸಿದ್ದಾರೆ. ಎಲ್ಲ ಸುರಕ್ಷಿತ ಕ್ರಮಗಳನ್ನು ಅಳವಡಿಸಿ ವ್ಯವಹಾರ ಮುಂದುವರಿಸುವಂತೆ ಜಿಲ್ಲಾಡಳಿತ ಸಲಹೆ ನೀಡಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts