More

    ಹಿಡಿತಕ್ಕೆ ಸಿಗುವ ಹಾದಿಯಲ್ಲಿ ಕರೊನಾ

    ವೇಣುವಿನೋದ್ ಕೆ.ಎಸ್. ಮಂಗಳೂರು

    ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಬಾರಿ ಕೋವಿಡ್ ದಿಢೀರ್ ಪ್ರಕರಣಗಳು ಹೆಚ್ಚಾಗಿದ್ದರೂ, ಒಂದನೇ ಅಲೆಗೆ ಹೋಲಿಸಿದರೆ ಮರಣದರ ಕಡಿಮೆಯೇ ಇದೆ.
    ಕಳೆದ ಬಾರಿ ಸರಾಸರಿ ಮರಣದರ ಶೇ.1.79 ಇದ್ದರೆ, ಈ ಬಾರಿ ಶೇ.0.40 ಮಾತ್ರ ಇದೆ. ಪ್ರಕರಣಗಳ ಸಂಖ್ಯೆ ಹೆಚ್ಚಿರುವುದು, ಅದರಲ್ಲಿ ಕೆಲವೇ ಮಂದಿ ಮೃತಪಟ್ಟಿರುವುದು ಮರಣ ದರ ಕಡಿಮೆ ಇರಲು ಕಾರಣ.

    ಆದರೆ ಈ ಬಾರಿ ಜಿಲ್ಲೆಗೆ ದೊಡ್ಡ ಸಂಖ್ಯೆಯಲ್ಲಿ ಕೋವಿಡ್ ಪಾಸಿಟಿವ್ ಸಂಖ್ಯೆ ಬಂದಿರುವುದರಿಂದ ಪಾಸಿಟಿವಿಟಿ ದರ ಮಾತ್ರ 25ರ ಆಸುಪಾಸಿನಲ್ಲಿದೆ. ಅದರಲ್ಲೂ ಮೇ ಮಧ್ಯಭಾಗದಲ್ಲಿ ಪಾಸಿಟಿವಿಟಿ ದರ ಶೇ.33ರಷ್ಟಿತ್ತು. ವಾರದಿಂದ ವಾರಕ್ಕೆ ಪಾಸಿಟಿವಿಟಿ ದರವನ್ನು ನಿರ್ಧರಿಸಲಾಗುತ್ತದೆ.

    ಸದ್ಯ ಶೇ.24.25 ಪಾಸಿಟಿವಿಟಿ ದರ ಇದೆ. ಕಳೆದ ಮೇ ತಿಂಗಳಲ್ಲಿ (ಮೊದಲ ಅಲೆ) ಶೇ 1.20ರಷ್ಟು ಮಾತ್ರವೇ ಪಾಸಿಟಿವಿಟಿ ದರ ಇತ್ತು. 1ನೇ ಅಲೆಯಲ್ಲಿ ಆಗಸ್ಟ್ ಸೆಪ್ಟೆಂಬರ್‌ನಲ್ಲಿ ಮಾತ್ರ ಪ್ರಕರಣ ಒಂದಷ್ಟು ಏರಿಕೆಯಾಗಿತ್ತು.

    ಇಳಿಕೆಯತ್ತ ಪಾಸಿಟಿವಿಟಿ: ಲಾಕ್‌ಡೌನ್ ಘೋಷಣೆಯಾದ ಕಾರಣ ಕೋವಿಡ್ ಪ್ರಸರಣದ ಚೈನ್ ಕಡಿತಗೊಂಡಿದೆ, ಜನರ ವರ್ತನೆಯಲ್ಲೂ ಸುಧಾರಣೆ ಇದೆ. ದೈಹಿಕ ಅಂತರ ಕಾಪಾಡುವುದು, ಮಾಸ್ಕ್ ಧಾರಣೆ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಜನರಲ್ಲಿ ಕೋವಿಡ್ ಬಗ್ಗೆ ಸರಿಯಾದ ಮಾಹಿತಿ ಈಗ ಇರುವುದರಿಂದ ಪಾಸಿಟಿವಿಟಿ ದರ ಕಡಿಮೆಯಾಗುತ್ತಿದೆ ಎನ್ನುತ್ತಾರೆ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕಿಶೋರ್ ಕುಮಾರ್.

    ಒಂದು ವಾರದ ಹಿಂದೆ ಪ್ರಮಾಣ ಶೇ.35ರಷ್ಟು ಇತ್ತು. ಪಾಸಿಟಿವ್ ಆದವರ ಪ್ರಾಥಮಿಕ ಸಂಪರ್ಕ ಹಾಗೂ ರೋಗ ಲಕ್ಷಣ ಇರುವವರ ಪರೀಕ್ಷೆಗೆ ಆದ್ಯತೆ ನೀಡಲಾಯಿತು. ಈಗ ಸೋಂಕು ಕಡಿಮೆಯಾಗತೊಡಗಿದೆ. ಸದ್ಯ 9000ದಷ್ಟು ಸಕ್ರಿಯ ಪ್ರಕರಣಗಳು ಇವೆ. ಅದರಲ್ಲಿ 1234 (ಶೇ.14) ಮಂದಿ ಮಾತ್ರ ಆಸ್ಪತ್ರೆಯಲ್ಲಿದ್ದು, 7600 ಹೋಂ ಐಸೊಲೇಶನ್‌ನಲ್ಲಿದ್ದಾರೆ. ಶೇ.85ರಷ್ಟು ಮಂದಿಗೆ ಸಹಜ ವೈರಲ್ ಜ್ವರದಂತೆ ಕೋವಿಡ್ ಕೂಡ ಇರುವುದರಿಂದ ಮನೆಯಲ್ಲೇ ಇದ್ದರೆ ಗುಣವಾಗುತ್ತದೆ.

    ವ್ಯಾಕ್ಸಿನೇಶನ್ ಪರಿಣಾಮ: ಕೋವಿಡ್ ಲಸಿಕೆ ಈಗಾಗಲೇ ಉತ್ತಮ ಪ್ರಗತಿ ಸಾಧಿಸುತ್ತಿದೆ. ಆರೋಗ್ಯ ಕಾರ್ಯಕರ್ತರಲ್ಲಿ ಶೇ.90, ಮುಂಚೂಣಿ ಕಾರ್ಯಕರ್ತರಲ್ಲಿ ಶೇ.100 ಲಸಿಕೆ ಹಾಕಲಾಗಿದೆ. ನಾಗರಿಕರಿಗೆ ಲಸಿಕೆ ಹಾಕುವ ಪ್ರಕ್ರಿಯೆಯೂ ಪ್ರಗತಿಯಲ್ಲಿದೆ. ಹಾಗಾಗಿ ಇದು ಕೂಡ ರೋಗ ನಿಯಂತ್ರಣದಲ್ಲಿ ಒಂದು ಅಂಶ ಎಂದು ಅಧಿಕಾರಿಗಳು ತಿಳಿಸುತ್ತಾರೆ.

    ಲಸಿಕೆ ನೀಡಿಕೆ ಪ್ರಮಾಣ: ದಕ್ಷಿಣ ಕನ್ನಡ:
    ವಯಸ್ಸು ಮೊದಲ ಡೋಸ್ 2ನೇ ಡೋಸ್
    60ಕ್ಕಿಂತ ಮೇಲ್ಪಟ್ಟವರು ಶೇ.61 ಶೇ.42
    45ರಿಂದ 60ರವರೆಗೆ ಶೇ.32 ಶೇ.17

    ಪಾಸಿಟಿವಿಟಿ ದರ: (ಟಾಪ್ 5 ಜಿಲ್ಲೆಗಳು)
    ಮೈಸೂರು ಶೇ.41
    ಉತ್ತರ ಕನ್ನಡ ಶೇ.33
    ಹಾಸನ ಶೇ.29.39
    ತುಮಕೂರು ಶೇ.29.3
    ಕೊಪ್ಪಳ ಶೇ.29.21
    ರಾಜ್ಯ ಸರಾಸರಿ ಶೇ.9.28

    ಉಡುಪಿಯಲ್ಲೂ ಇಳಿಕೆ: ಉಡುಪಿ ಜಿಲ್ಲೆಯಲ್ಲಿ ಪಾಸಿಟಿವಿಟಿ ಪ್ರಮಾಣ ಇಳಿಕೆಯಾಗುತ್ತಿದ್ದು, ಪ್ರಸ್ತುತ ಪಾಸಿಟಿವಿಟಿ ಪ್ರಮಾಣ ಶೇ.19 ಇದೆ. ಕಳೆದ ವಾರ ಶೇ.35 ರಿಂದ ಶೇ.38ರವರೆಗೆ ಇತ್ತು. ಜಿಲ್ಲೆಯಲ್ಲಿ ಪ್ರತಿನಿತ್ಯ 3500 ಟೆಸ್ಟ್ ಮಾಡಲಾಗುತ್ತಿದೆ. ಜನರ ಸಹಕಾರ ಇದೇ ರೀತಿ ಮುಂದುವರಿದಲ್ಲಿ ಜೂನ್ 7ರ ಒಳಗೆ ಪಾಸಿಟಿವಿಟಿ ಪ್ರಮಾಣ ಶೇ.10ಕ್ಕೆ ಇಳಿಕೆಯಾಗುವ ನಿರೀಕ್ಷೆ ಇದೆ ಎಂದು ಜಿಲ್ಲಾಧಿಕಾರಿ ಜಗದೀಶ್ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts