More

    ತನಿಖಾ ವರದಿ: ರಾಜ್ಯದಲ್ಲಿ ಕರೊನಾ ಪ್ಯಾಕೇಜ್ ಹಣಕ್ಕೂ ಕನ್ನ!

    • ಕಿರಣ್ ಮಾದರಹಳ್ಳಿ/ರವಿತೇಜ್ ವಿ.ಛತ್ರ ಚಾಮರಾಜನಗರ

    ಲಾಕ್​ಡೌನ್ ಹೊರೆಯಿಂದ ಸಂಕಷ್ಟಕ್ಕೆ ಸಿಲುಕಿರುವವರಿಗೆ ನೆರವಾಗಲು ರಾಜ್ಯ ಸರ್ಕಾರ ಪ್ಯಾಕೇಜ್ ಘೋಷಿಸಿದ್ದರೆ ಅದರಲ್ಲೂ ಲೂಟಿಗಿಳಿದಿರುವ ಮಧ್ಯವರ್ತಿಗಳ ಜಾಲ ಅಧಿಕಾರಿಗಳ ನೆರಳಿನಲ್ಲಿ ರಾಜಾರೋಷವಾಗಿ ಸುಲಿಗೆಗಿಳಿದಿರುವ ಪ್ರಕರಣಗಳು ರಾಜ್ಯದ ಹಲವೆಡೆ ಬೆಳಕಿಗೆ ಬಂದಿವೆ. ಕಾರ್ವಿುಕ ಕಲ್ಯಾಣ ಮಂಡಳಿಯಲ್ಲಿ ಹೆಸರು ನೋಂದಣಿ ಮಾಡಿರುವ ಕಟ್ಟಡ ಕಾರ್ವಿುಕರ ಬ್ಯಾಂಕ್ ಖಾತೆಗೆ ಸರ್ಕಾರದಿಂದ ನೇರವಾಗಿ ತಲಾ 3 ಸಾವಿರ ರೂ. ಪ್ಯಾಕೇಜ್ ಹಣ ಜಮೆಯಾಗಲಿದೆ. ಮಧ್ಯವರ್ತಿಗಳ ಹಾವಳಿ ತಪ್ಪಿಸಲು ಈ ಕ್ರಮ ಕೈಗೊಂಡಿದ್ದರೂ ಧನಸಹಾಯ ಕೊಡಿಸುವುದನ್ನೇ ದಲ್ಲಾಳಿಗಳು ದಂಧೆಯನ್ನಾಗಿಸಿಕೊಂಡಿದ್ದಾರೆ. ಇದರಲ್ಲಿ ಅಧಿಕಾರಿಗಳಿಗೂ ಕಮಿಷನ್ ಹೋಗುತ್ತಿದೆ. ಚಾಮರಾಜನಗರ ಜಿಲ್ಲೆಯಲ್ಲಿ ನಡೆಯುತ್ತಿರುವ ಈ ದಂಧೆಯ ಬೆನ್ನತ್ತಿ ‘ವಿಜಯವಾಣಿ’ ನಡೆಸಿರುವ ಕುಟುಕು ಕಾರ್ಯಾಚರಣೆ ಅಕ್ರಮದ ಕರಾಳಮುಖವನ್ನು ತೆರೆದಿಟ್ಟಿದೆ.

    ಅರ್ಜಿ ನೆಪ: ಪರಿಹಾರದ ಹಣಕ್ಕೆ ಅರ್ಜಿ ಸಲ್ಲಿಸಬೇಕೆಂದು ಸುಳ್ಳು ಹೇಳಿ ಫಲಾನುಭವಿಗಳಿಂದ ದಲ್ಲಾಳಿಯೊಬ್ಬ ಹಣ ಪೀಕುತ್ತಿದ್ದಾನೆ. ಇದರ ಜತೆಗೆ, ಕಾರ್ವಿುಕ ಇಲಾಖೆ ಅಧಿಕಾರಿಗಳಿಗೂ ಪಾಲು ಕೊಡಬೇಕು. ಕಳೆದ ಬಾರಿಯ ಲಾಕ್​ಡೌನ್​ನಲ್ಲಿ ಅವರು 500ರಿಂದ 1,000 ರೂ. ಲಂಚ ಪಡೆದಿದ್ದರೆಂಬುದೂ ವಿಜಯವಾಣಿ ಕಾರ್ಯಾಚರಣೆಯಲ್ಲಿ ಬೆಳಕಿಗೆ ಬಂದಿದೆ.

    ತಲಾ 200 ರೂ. ವಸೂಲಿ: ನಾಗರಾಜು ಎಂಬ ವ್ಯಕ್ತಿ ಕೂಲಿ ಕಾರ್ವಿುಕರಿಂದ ಅರ್ಜಿ ಮತ್ತು ತಲಾ 200 ರೂ. ವಸೂಲಿ ಮಾಡುತ್ತಿದ್ದಾನೆ. ಕಟ್ಟಡ ಕಾರ್ವಿುಕರೊಬ್ಬರ ಸಹಾಯ ಪಡೆದು ಆತನನ್ನು ಸಂರ್ಪಸಲಾಯಿತು. ಪರಿಹಾರಕ್ಕೆ ಅರ್ಜಿ ಸಲ್ಲಿಸಬೇಕು ಎಂದು ಕಾರ್ವಿುಕ ಕಾರ್ಡ್, ರೇಷನ್ ಕಾರ್ಡ್, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್​ಪುಸ್ತಕದ ನಕಲು ಪ್ರತಿಯನ್ನು ನಗರದ ಫಾರೆಸ್ಟ್ ನರ್ಸರಿ ಹಿಂಭಾಗದ ಬಡಾವಣೆಗೆ ತರಲು ಹೇಳಿದ್ದ. ಅಲ್ಲಿಗೆ ಹೋದಾಗ ದಾಖಲೆಗಳನ್ನು ಪಡೆದ ನಾಗರಾಜು, 200 ರೂ. ಸ್ವೀಕರಿಸಿ ಜೇಬಿಗಿಳಿಸಿಕೊಂಡ. ಈ ದಂಧೆಯ ಸಂಪೂರ್ಣ ದೃಶ್ಯವನ್ನು ವಿಡಿಯೋ ಚಿತ್ರೀಕರಿಸಲಾಗಿದೆ.

    ಅಧಿಕಾರಿಗಳ ಪಾತ್ರ ತೆರೆದಿಟ್ಟ ಮಧ್ಯವರ್ತಿ

    ಈ ದಂಧೆಯಲ್ಲಿ ಜಿಲ್ಲಾ ಕಾರ್ವಿುಕ ಇಲಾಖೆ ಅಧಿಕಾರಿಗಳೂ ಶಾಮೀಲಾಗಿರುವ ಸಂಗತಿಯನ್ನು ಮಧ್ಯವರ್ತಿ ನಾಗರಾಜು ಬಾಯಿಬಿಟ್ಟಿದ್ದಾನೆ. ‘ಇನ್ನಷ್ಟು ಕಾರ್ವಿುಕರು ನಮ್ಮ ಜತೆ ಇದ್ದಾರೆ. ಲಾಕ್​ಡೌನ್ ಪರಿಹಾರ ಹಣವನ್ನು ಅವರಿಗೂ ಕೊಡಿಸಿ. ಬಡ ಕಾರ್ವಿುಕರಿಂದ ಒಂದು ಅರ್ಜಿಗೆ 100 ರೂ. ಕಡಿಮೆ ಮಾಡಿಕೊಳ್ಳಿ’ ಎಂದು ಮನವಿ ಮಾಡಲಾಯಿತು. ಇದಕ್ಕೆ ಪ್ರತಿಕ್ರಿಯಿಸಿದ ನಾಗರಾಜು ‘ಬಡವರು ಅಂದರೆ, ಅಲ್ಲಿ ನಮ್ಮ ಲೆಕ್ಕ ಕೌಂಟ್​ಗೆ ಬರುತ್ತದೆ. ಅಲ್ಲಿ ಕೇಳಬೇಕಲ್ಲ? 100 ರೂ. ಆಗಲ್ಲ, ನಿನ್ನೆ ಬಂದು ಜನರೆಲ್ಲ ಕೊಟ್ಟು ಹೋಗಿದ್ದಾರೆ’ ಎಂದು ಹೇಳಿದ. ಅಲ್ಲದೆ, ‘ಕಳೆದ ಬಾರಿಯ ಲಾಕ್​ಡೌನ್​ನಲ್ಲಿ ಜಿಲ್ಲಾ ಕಾರ್ವಿುಕ ಇಲಾಖೆಯಲ್ಲಿ 1,000 ಕಟ್ಟಡ ಕಾರ್ವಿುಕರ ಹಣ ಬಾಕಿ ಉಳಿದಿತ್ತು. ಅದನ್ನು ಪಡೆಯಲು 500ರಿಂದ 1000 ರೂ.ಲಂಚ ನಡೆಯಿತು. 10 ಲಕ್ಷ ರೂ. ಮೌಲ್ಯದ ಅಕ್ಕಿ ಬಂದಿತ್ತು. ಅದನ್ನೂ ಇಲಾಖೆಯಿಂದ ಜನರಿಗೆ ಕೊಡಲಿಲ್ಲ. ಅವರವರೇ ಹಣ ದೋಚುತ್ತಿದ್ದಾರೆ’ ಎಂದು ಭ್ರಷ್ಟಾಚಾರದ ಬಗ್ಗೆ ಮಾತನಾಡಿದ್ದಾನೆ.

    ಕಾರ್ವಿುಕರಿಗೆ ತಿಳಿದಿರಲಿ

    · ಕಟ್ಟಡ ಕಾರ್ವಿುಕರು 3 ಸಾವಿರ ರೂ. ಧನಸಹಾಯಕ್ಕಾಗಿ ಹೊಸದಾಗಿ ಅರ್ಜಿ ಸಲ್ಲಿಸಬೇಕಿಲ್ಲ

    · ಕಚೇರಿಗೆ ಭೇಟಿ, ಮಧ್ಯವರ್ತಿಗಳ ಸಂಪರ್ಕ ಮಾಡುವ ಅಗತ್ಯವಿಲ್ಲ

    · ಮಂಡಳಿಯಲ್ಲಿ ನೋಂದಣಿಯಾದವರಿಗೆ ಧನಸಹಾಯ ದೊರೆಯಲಿದೆ

    · ಕಾರ್ವಿುಕರು ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡಿಸಿಕೊಳ್ಳಿ

    · ಬ್ಯಾಂಕ್ ಖಾತೆ ನಿಷ್ಕ್ರಿಯವಾಗಿದ್ದರೆ ಸಕ್ರಿಯಗೊಳಿಸಿಕೊಳ್ಳಬೇಕು

    ಎಸಿಬಿ ದಾಳಿ ನಡೆದಿತ್ತು

    ಜಿಲ್ಲಾಡಳಿತ ಭವನದಲ್ಲಿರುವ ಕಾರ್ವಿುಕ ಇಲಾಖೆ ಕಚೇರಿ ಮೇಲೆ ಕಳೆದ ಜ.28ರಂದು ಎಸಿಬಿ ದಾಳಿ ನಡೆದಿತ್ತು. ನಗರದ ರಾಮಸಮುದ್ರದ ಪ್ಲಂಬರ್ ಕೆಲಸಗಾರ ಚೇತನ್ ಎಂಬಾತನ ಮದುವೆ ಸಹಾಯಧನ ನೀಡಲು ಇಲಾಖೆಯ ಹಿರಿಯ ನಿರೀಕ್ಷಕಿ ಗೀತಾ, ಕಂಪ್ಯೂಟರ್ ಆಪರೇಟರ್ (ಹೊರಗುತ್ತಿಗೆ) ಮಾಲತಿ ಎಂಬುವವರು ಲಂಚ ಪಡೆಯುತ್ತಿದ್ದಾಗ ಎಸಿಬಿ ಬಲೆಗೆ ಬಿದ್ದಿದ್ದರು.

    ಕೆಲವು ತಿಂಗಳ ಹಿಂದೆ ಕಾರ್ವಿುಕ ಇಲಾಖೆ ಕಚೇರಿ ಮೇಲೆ ಎಸಿಬಿ ದಾಳಿ ನಡೆಸಿದಾಗಲೇ ಅಧಿಕಾರಿ ಮತ್ತು ಸಿಬ್ಬಂದಿಗೆ ಎಚ್ಚರಿಕೆ ನೀಡಲಾಗಿದೆ. ಸಂಘ-ಸಂಸ್ಥೆ ಹೆಸರಿನಲ್ಲಿ ಕಚೇರಿಗೆ ಬರುವವರನ್ನು ದೂರವಿಡಬೇಕೆಂದು ಸೂಚನೆ ಕೊಟ್ಟಿದ್ದೇನೆ. ಲಾಕ್​ಡೌನ್ ಆರ್ಥಿಕ ನೆರವು ಕೊಡಿಸಲು ಅರ್ಜಿ ಸ್ವೀಕರಿಸಿ ಹಣ ಪಡೆಯುತ್ತಿರುವ ನಾಗರಾಜು ಯಾರು ಎಂಬುದು ನನಗೆ ಗೊತ್ತಿಲ್ಲ. ಈ ಬಗ್ಗೆ ಪರಿಶೀಲಿಸಿ ಕ್ರಮ ವಹಿಸಲಾಗುವುದು.

    | ಮಹದೇವಸ್ವಾಮಿ ಜಿಲ್ಲಾ ಕಾರ್ವಿುಕ ಅಧಿಕಾರಿ, ಚಾಮರಾಜನಗರ

    ರಾಜ್ಯದಲ್ಲಿ ಇದೇ ಮೊದಲಲ್ಲ

    ಪ್ಯಾಕೇಜ್​ಗಾಗಿ ಲಂಚ ಕೊಡ ಬೇಕಾದ ಸ್ಥಿತಿ ಕಳೆದ ವರ್ಷದ ಲಾಕ್​ಡೌನ್ ಸಮಯದಲ್ಲೂ ಎದುರಾಗಿತ್ತು. ಆಟೋ, ಟ್ಯಾಕ್ಸಿ ಚಾಲಕರು, ಬಡ ವರ್ತಕರು ಲಂಚ ಪಡೆದು ಪ್ಯಾಕೇಜ್ ಹಣ ಪಡೆಯಬೇಕಾದ ಸಮಸ್ಯೆ ತೋಡಿಕೊಂಡಿದ್ದರು. ಚಾಮರಾಜನಗರ ಹೊರತುಪಡಿಸಿ ಇತರ ಜಿಲ್ಲೆಗಳಲ್ಲೂ ಮಧ್ಯವರ್ತಿಗಳ ಹಾವಳಿ ವಿಚಾರ ಬೆಳಕಿಗೆ ಬಂದಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts