More

    ಬಸ್ ನಿಲ್ದಾಣ ಉದ್ಘಾಟನೆಗೆ ಕರೊನಾ ಅಡ್ಡಿ!: 4.98ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಬಸ್ ಸಂಖ್ಯೆ ಏರಿಕೆಗೆ ಬೇಡಿಕೆ

    ವೆಂಕಟರಾಜು ಎಸ್. ದೊಡ್ಡಬಳ್ಳಾಪುರ
    ನಗರದ ಕೆಎಸ್‌ಆರ್‌ಟಿಸಿ ಹೈಟೆಕ್ ಬಸ್ ನಿಲ್ದಾಣ ಕಾಮಗಾರಿ ಮುಗಿದು ಅರ್ಧ ವರ್ಷ ಕಳೆದರೂ ಉದ್ಘಾಟನೆ ಕಂಡಿಲ್ಲ. ಕರೊನಾ ಭೀತಿಯಲ್ಲಿ ಮುಂದೂಡಲ್ಪಟ್ಟ ಕಾರ್ಯಕ್ರಮ ಲಾಕ್‌ಡೌನ್ ಸಡಿಲಿಕೆಯಾದರೂ ನಿಗದಿಯಾಗಿಲ್ಲ.

    ನಗರದ ಹಳೇ ಬಸ್ ನಿಲ್ದಾಣ ಹೂ, ಹಣ್ಣು, ತರಕಾರಿ ತಳ್ಳುವ ಗಾಡಿಗಳು, ಬಿಎಂಟಿಸಿ, ಖಾಸಗಿ ಬಸ್‌ಗಳ ಓಡಾಟದಿಂದ ಸದಾ ಟ್ರಾಫಿಕ್‌ನಿಂದ ಕೂಡಿರುತ್ತದೆ. ಹೊಸ ಬಸ್ ನಿಲ್ದಾಣದಲ್ಲಿ 8 ಬಸ್‌ಗಳು ನಿಲ್ಲಲು ವ್ಯವಸ್ಥೆಯಿದ್ದು, ಹೆಚ್ಚುವರಿ ಬಸ್‌ಗಳು ಬಂದರೆ ನಿಲುಗಡೆಗೆ ಎಲ್ಲಿ ಪರ್ಯಾಯ ವ್ಯವಸ್ಥೆ ಎನ್ನುವುದು ಅಂತಿಮವಾಗಿಲ್ಲ.

    ಪ್ರಸ್ತುತ, ಕೊಂಗಾಡಿಯಪ್ಪ ಖಾಸಗಿ ಬಸ್ ನಿಲ್ದಾಣದಲ್ಲಿ ನಿಲುಗಡೆ ಮಾಡಲಾಗುತ್ತಿದ್ದು, ಹೊಸ ಬಸ್ ನಿಲ್ದಾಣ ಉದ್ಘಾಟನೆ ಬಳಿಕ ನಿಲುಗಡೆಗೆ ಅವಕಾಶ ಸಿಗುವುದು ಸಮಸ್ಯೆಯಾಗಬಹುದು. ಸದ್ಯ, ಖಾಸಗಿ ಬಸ್‌ಗಳ ಸಂಚಾರವಿಲ್ಲದ ಹಿನ್ನೆಲೆ ಉದ್ಘಾಟನೆ ಶೀಘ್ರವಾಗಿ ನಡೆದರೆ ಇಲ್ಲಿನ ವ್ಯವಸ್ಥೆಗೆ ಅನುಕೂಲವಾಗಲಿದೆ ಎನ್ನುವುದು ಸಾರ್ವಜನಿಕರ ಆಶಯ.

    ಅಂತಿಮವಾಗದ ಹೆಸರು: ತಾಲೂಕಿನ ಕೇಂದ್ರಸ್ಥಳವಾದ ಹಳೇ ಬಸ್ ನಿಲ್ದಾಣದಲ್ಲಿ ನಿರ್ಮಾಣವಾಗಿರುವ ಹೈಟೆಕ್ ಬಸ್ ನಿಲ್ದಾಣಕ್ಕೆ ಯಾವುದೇ ಹೆಸರು ಅಂತಿಮವಾಗಿಲ್ಲ. ಡಾ.ರಾಜ್‌ಕುಮಾರ್, ಕೊಂಗಾಡಿಯಪ್ಪ, ಶಂಕರ್‌ನಾಗ್ ಸೇರಿ ಹಲವರ ಹೆಸರುಗಳು ಪ್ರಸ್ತಾವನೆಗೆ ಬಂದರೂ, ಯಾವುದೇ ಹೆಸರನ್ನು ಇಡಲಾಗಿಲ್ಲ.

    ಪ್ರತಿನಿತ್ಯ ಸಾವಿರಾರು ಜನ ಬೆಂಗಳೂರಿಗೆ ತೆರಳಲು ಬಸ್ಸನ್ನೇ ಅವಲಂಬಿಸಿದ್ದಾರೆ. ಕರೊನಾ ಬಿಸಿ ಕಡಿಮೆಯಾದ ಬಳಿಕ ಹೆಚ್ಚಿನ ಬಸ್‌ಗಳನ್ನು ವ್ಯವಸ್ಥೆ ಮಾಡಬೇಕು ಎಂದು ನಗರ ನಿವಾಸಿ ರಾಜಶೇಖರ್‌ಶೆಟ್ಟಿ ಒತ್ತಾಯಿಸಿದ್ದಾರೆ.

    ಹೈಟೆಕ್ ಬಸ್ ನಿಲ್ದಾಣ ಉದ್ಘಾಟನೆಗೆ ಜಿಲ್ಲಾ ಉಸ್ತುವಾರಿ ಸಚಿವ, ಸಾರಿಗೆ ಸಚಿವರನ್ನು ಆಹ್ವಾನಿಸಿ, ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆದರೆ ಕರೊನಾ ಹಿನ್ನೆಲೆಯಲ್ಲಿ ಉದ್ಘಾಟನೆಗೆ ಸಾಧ್ಯವಾಗಿರಲಿಲ್ಲ. ಮುಂದಿನ ತಿಂಗಳು ಉದ್ಘಾಟನೆಗೆ ವ್ಯವಸ್ಥೆ ಮಾಡಿಕೊಳ್ಳಲಾಗುತ್ತದೆ.
    ಟಿ. ವೆಂಕಟರಮಣಯ್ಯ, ಶಾಸಕ

    ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಸಂಪೂರ್ಣವಾಗಿ ಬಳಕೆಗೆ ಸಿದ್ಧವಾಗಿದೆ. ಜಿಲ್ಲಾಡಳಿತ, ಸಚಿವರು, ಶಾಸಕರೊಂದಿಗೆ ಚರ್ಚಿಸಿ ಉದ್ಘಾಟನೆಗೆ ಶೀಘ್ರವೇ ಸಮಯ ನಿಗದಿ ಮಾಡಲಾಗುವುದು.
    ಮಂಜುನಾಥ್, ವಿಭಾಗೀಯ ಸಂಚಾರ ನಿಯಂತ್ರಣಾಧಿಕಾರಿ, ಚಿಕ್ಕಬಳ್ಳಾಪುರ ವಿಭಾಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts