More

    ಗ್ರಾಪಂಗಳಲ್ಲಿ ಕರೊನಾ ಸಹಾಯವಾಣಿ; ಗ್ರಾಪಂ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಪಂ ಸಿಇಒ ಎನ್.ಎಂ.ನಾಗರಾಜ ಸೂಚನೆ

    ಬೆಂ.ಗ್ರಾಮಾಂತರ: ಜಿಲ್ಲೆಯಲ್ಲಿ ಕರೊನಾ ಸೋಂಕಿತರು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಪ್ರತಿ ಗ್ರಾಪಂನಲ್ಲಿ ಕರೊನಾ ಸಹಾಯವಾಣಿ ತೆರೆದು, ಗ್ರಾಮಮಟ್ಟದ ಕಾರ್ಯಪಡೆ ಚುರುಕುಗೊಳಿಸಬೇಕು ಎಂದು ಜಿಪಂ ಸಿಇಒ ಎನ್.ಎಂ.ನಾಗರಾಜ ಪಿಡಿಒಗೆ ಸೂಚಿಸಿದರು.

    ದೇವನಹಳ್ಳಿ ಜಿಲ್ಲಾಡಳಿತ ಭವನದಲ್ಲಿರುವ ಜಿಪಂ ಕಚೇರಿ ಸಭಾಂಗಣದಲ್ಲಿ ಪಿಡಿಒಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು. ಸಹಾಯವಾಣಿ ಸಮರ್ಪಕವಾಗಿ ಕಾರ್ಯನಿರ್ವಹಣೆಯಾಗುವಂತೆ ಗಮನ ನೀಡಬೇಕು ಎಂದರು.

    ಜಿಲ್ಲೆಯಲ್ಲಿ ಕರೊನಾ ಸೋಂಕಿತರ ಪ್ರಕರಣ ದಿನೇದಿನೆ ಹೆಚ್ಚುತ್ತಿದೆ. ಕರೊನಾ ಸೋಂಕಿನ ಸರಪಳಿ ತುಂಡರಿಸುವುದು ಪ್ರಸ್ತುತ ಮಹತ್ವದ್ದಾಗಿದೆ. ಈ ಹಿನ್ನೆಲೆಯಲ್ಲಿ ಎಲ್ಲ ಗ್ರಾಮ ಪಂಚಾಯಿತಿಗಳು ಜಾಗೃತರಾಗಿರಬೇಕು. ಕರೊನಾ ಸೋಂಕಿತರಿಗೆ ತಕ್ಷಣ ಚಿಕಿತ್ಸೆ ದೊರೆಯಬೇಕು ಎಂದರು.

    ಸೋಂಕಿತರ ಪ್ರಾಥಮಿಕ ಸಂಪರ್ಕದ ವ್ಯಕ್ತಿಗಳನ್ನು ಪತ್ತೆ ಹಚ್ಚಿ ಕೂಡಲೇ ಕ್ವಾರಂಟೈನ್ ಮಾಡಬೇಕು. ಗ್ರಾಪಂ ಮಟ್ಟದ ಕಾರ್ಯ ಪಡೆ ಚುರುಕಾಗಿ ಕಾರ್ಯ ನಿರ್ವಹಿಸಬೇಕು. ಇದಕ್ಕೆ ಎಲ್ಲ ಗ್ರಾಪಂ ಸಿಬ್ಬಂದಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಬೇಕು. ಅದೇ ರೀತಿ ಕರೊನಾ ನಿರ್ವಹಣೆಯಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಯೂ ಕರೊನಾ ನಿಯಮ ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಹೇಳಿದರು.

    ಜಿಲ್ಲೆಯ ಎಲ್ಲ ಗ್ರಾಪಂಗಳಲ್ಲಿ ವಿದ್ಯುತ್ ಬಿಲ್ ಬಾಕಿ ಇದ್ದು, ತ್ವರಿತವಾಗಿ ಬೆಸ್ಕಾಂಗೆ ಬಿಲ್ ಪಾವತಿಸಿ, ರಸೀದಿಯನ್ನು ಜಪಂಗೆ ಸಲ್ಲಿಸಲು ಜಿಪಂ ಸಿಇಒ ಸೂಚಿಸಿದರು. ಆಯಾ ಕಾಲಕ್ಕೆ ಸರಿಯಾಗಿ ಬಿಲ್ ಪಾವತಿಸಬೇಕು ಎಂದರು.

    ಸ್ವಚ್ಛ ಭಾರತ್ ಮಿಷನ್-ಗ್ರಾಮೀಣ ಹಾಗೂ ಜಲ್ ಜೀವನ್ ಮಿಷನ್ ಯೋಜನೆಯಲ್ಲಿ ಕೈಗೊಂಡಿರುವ ವೈಯಕ್ತಿಕ ಶೌಚಗೃಹ, ಘನ ತ್ಯಾಜ್ಯ ಸಂಗ್ರಹಣೆ ಘಟಕ, ಶುದ್ಧ ಕುಡಿಯುವ ನೀರಿನ ಘಟಕ, ಸಮುದಾಯ ಶೌಚಗೃಹ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಬೇಕು ಎಂದರು.

    ಸ್ವಚ್ಛತೆ ಕಾಪಾಡಬೇಕು: ಮಳೆಗಾಲದಲ್ಲಿ ಸಾಮಾನ್ಯವಾಗಿ ಕಾಡುವ ಸಾಂಕ್ರಾಮಿಕ ರೋಗಗಳು ಉಲ್ಬಣಿಸದಂತೆ ಅಗತ್ಯ ಎಚ್ಚರಿಕೆ ವಹಿಸಬೇಕು. ಗ್ರಾಪಂ ವ್ಯಾಪ್ತಿಯಲ್ಲಿ ಕ್ರಿಮಿನಾಶಕ ಸಿಂಪಡಣೆಗೆ ಕ್ರಮಕೈಗೊಳ್ಳಬೇಕು. ಗ್ರಾಮಗಳಲ್ಲಿ ಸ್ವಚ್ಚತೆಗೆ ಒತ್ತುನೀಡಬೇಕು. ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ಸಿಇಒ ಸೂಚಿಸಿದರು.

    ಜಿಲ್ಲಾ ಪಂಚಾಯತಿ ಉಪ ಕಾರ್ಯದರ್ಶಿ ಕೆ.ಕರಿಯಪ್ಪ ಮಾತನಾಡಿ, ನರೇಗಾ ಯೋಜನೆಯಡಿ, ಗೋಕಟ್ಟೆ ಕಾಮಗಾರಿ, ಬದು ನಿರ್ಮಾಣ ಕಾಮಗಾರಿ, ಕೃಷಿಹೊಂಡ ಕಾಮಗಾರಿ, ಚರಂಡಿ ಕಾಮಗಾರಿ, ಗಿಡ ನೆಡುವ ಕಾಮಗಾರಿ, ನಮ್ಮ ಹೊಲ ನಮ್ಮ ದಾರಿ, ದನಗಳ ಕುಡಿಯುವ ನೀರಿನ ತೊಟ್ಟಿ, ಆಟದ ಮೈದಾನ ನಿರ್ಮಾಣ ಮುಂತಾದ ಕಾಮಗಾರಿ ಮಾಡಿಕೊಳ್ಳಬಹುದು ಎಂದು ತಿಳಿಸಿದರು. ಜಿಲ್ಲೆಯ ನಾಲ್ಕು ತಾಲೂಕುಗಳ ಕಾರ್ಯ ನಿರ್ವಾಹಕ ಅಧಿಕಾರಿಗಳು, ಸಹಾಯಕ ನಿರ್ದೇಶಕರು, ತಾಲೂಕುಗಳ ಅಭಿಯಂತರರು ಇದ್ದರು.

    ಕರೊನಾ ವಿರುದ್ಧದ ಸಮರದಲ್ಲಿ ಎಲ್ಲರೂ ಕೈಜೋಡಿಸಬೇಕು. ಈ ಜಾಗತಿಕ ಪಿಡುಗನ್ನು ಎಲ್ಲರೂ ಒಗ್ಗೂಡಿ ನಿಯಂತ್ರಿಸಬೇಕು. ಪ್ರತಿ ಗ್ರಾಪಂಮಟ್ಟದಲ್ಲಿ ಸಹಾಯವಾಣಿ ಮೂಲಕ ತುರ್ತು ಸೇವೆ ದೊರಕಬೇಕು. ಈ ನಿಟ್ಟಿನಲ್ಲಿ ಜಿಪಂ ಸನ್ನದ್ಧವಾಗಿದೆ.
    ಎನ್.ಎಂ.ನಾಗರಾಜ್. ಜಿಪಂ ಸಿಇಒ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts