More

    ಪ್ರಭಾವಿಗಳಿಗೆ ಸುಸೂತ್ರ, ಸಾಮಾನ್ಯರಿಗೆ ದಂಡಾಸ್ತ್ರ ; ಕರೊನಾ ನಿಯಮ ಉಲ್ಲಂಘನೆ ದಂಡ ವಿಧಿಸುವಲ್ಲಿ ತಾರತಮ್ಯದ ಆರೋಪ

    ಚಿಕ್ಕಬಳ್ಳಾಪುರ : ಕರೊನಾ ರಣಕೇಕೆ ಶುರುವಾಗುತ್ತಿದ್ದಂತೆ ಮಾಸ್ಕ್ ಧರಿಸದ ಮತ್ತು ಅಂತರ ಕಾಪಾಡಿಕೊಳ್ಳದವರಿಗೆ ದಂಡ ವಿಧಿಸುವ ಕಾರ್ಯಾಚರಣೆ ಮತ್ತೆ ಆರಂಭವಾಗಿದೆ, ಆದರೆ ಜಾಗೃತಿಗಿಂತಲೂ ಹಣ ಸುಲಿಗೆಯೇ ಮುಖ್ಯವಾಗಿದೆ ಎಂದು ಅಭಿಪ್ರಾಯ ವ್ಯಕ್ತವಾಗುತ್ತಿರುವ ಜತೆಗೆ ಪ್ರಭಾವಿಗಳಿಗಿಂತಲೂ ಬಡ ಹಾಗೂ ಮಧ್ಯಮ ವರ್ಗದವರನ್ನೇ ಟಾರ್ಗೆಟ್ ಮಾಡುತ್ತಿರುವ ಆರೋಪಗಳು ಕೇಳಿಬಂದಿವೆ.

    ಕಳೆದೆರಡು ದಿನಗಳಿಂದಲೂ ಮಾರ್ಷಲ್, ಪೊಲೀಸ್ ಮತ್ತು ಸ್ಥಳೀಯ ಆಡಳಿತ ಸಂಸ್ಥೆಯ ಸಿಬ್ಬಂದಿ ಬೀದಿಗಿಳಿದ್ದಾರೆ. ಮಾರುಕಟ್ಟೆ, ಬಸ್ ನಿಲ್ದಾಣ, ಸರ್ಕಾರಿ ಮತ್ತು ಖಾಸಗಿ ಕಚೇರಿ ಆವರಣ ಸೇರಿ ಹಲವೆಡೆ ನಿಯಮ ಉಲ್ಲಂಸುತ್ತಿರುವವರಿಗೆ ದಂಡ ವಿಧಿಸುತ್ತಿದ್ದು, ಹಣ ಪಡೆಯುವವರೆಗೂ ಬಿಡುತ್ತಿಲ್ಲ. ಇದರಿಂದ ಮಾತಿನ ಚಕಮಕಿ, ಆಕ್ರೋಶದ ಪ್ರಕರಣಗಳು ವರದಿಯಾಗುತ್ತಿವೆ.

    ಜನಪ್ರತಿನಿಧಿಗಳ ರಾಜಕೀಯ ಸಮಾವೇಶ, ಸಭೆ ಮತ್ತು ಸಮಾರಂಭಗಳಲ್ಲಿ ನಿಯಮಗಳಿಗೆ ಎಳ್ಳುನೀರು ಬಿಡಲಾಗಿರುತ್ತದೆ. ಬಹುತೇಕರು ಮಾಸ್ಕ್ ಧರಿಸಿರುವುದಿಲ್ಲ, ಇನ್ನು ಅಂತರವಂತೂ ಮಾಯವಾಗಿರುತ್ತದೆ. ಇಂತಹ ಕಾರ್ಯಕ್ರಗಳಲ್ಲಿ ಅಧಿಕಾರಿಗಳು ಮತ್ತು ಪೊಲೀಸ್ ಸಿಬ್ಬಂದಿ ಇದ್ದರೂ ನಿಯಮಗಳನ್ನು ಪಾಲಿಸುವಂತೆ ತುಟಿ ಬಿಚ್ಚುವುದಿಲ್ಲ, ಆದರೆ ಸಾರ್ವಜನಿಕ ಸ್ಥಳಗಳಲ್ಲಿ ಜನರಿಗೆ ದಂಡ ವಿಧಿಸುತ್ತಿರುವುದು ಸಹಜವಾಗಿ ಆಕ್ರೋಶಕ್ಕೆ ಕಾರಣವಾಗಿದೆ.

    ಮನೆಯಲ್ಲಿ ಇದ್ದವರನ್ನು ಕರೆಸಿ ದಂಡ ಹಾಕಿದ್ರ! : ಬೆಂಗಳೂರಿನ ರಸ್ತೆ ಬದಿಯ ಅಂಗಡಿಯೊಂದರಲ್ಲಿ ಟೀ ಕುಡಿಯುತ್ತಿದ್ದ ವ್ಯಕ್ತಿ ಮಾಸ್ಕ್ ಧರಿಸಿಲ್ಲ ಎಂಬ ಕಾರಣಕ್ಕೆ ಮಾರ್ಷಲ್ ಹಾಗೂ ಅಧಿಕಾರಿಗಳು ದಂಡ ವಿಧಿಸಿದ್ದ ಪ್ರಕರಣದಂತೆಯೇ ಚಿಕ್ಕಬಳ್ಳಾಪುರದಲ್ಲಿಯೂ ನಡೆದಿದೆ, ಮನೆಯ ಕಾಂಪೌಂಡ್ ಒಳಗೆ ನಿಂತಿದ್ದ ವ್ಯಕ್ತಿಗೆ ರಸ್ತೆಗೆ ಕರೆದು ಮಾಸ್ಕ್ ಧರಿಸಿಲ್ಲ ಎಂದು ದಂಡ ವಿಧಿಸಿರುವುದು ಚರ್ಚೆಗೆ ಗ್ರಾಸವೊದಗಿಸಿದೆ. ಇಲ್ಲಿನ ವಾಪಸಂದ್ರ ಬಡಾವಣೆಯಲ್ಲಿ ಮನೆಯ ಕಾಂಪೌಂಡ್‌ನೊಳಗೆ ಒಬ್ಬರೇ ನಿಂತಿದ್ದ ವ್ಯಕ್ತಿಯನ್ನು ರಸ್ತೆಗೆ ಕರೆಸಿಕೊಂಡು ಮಾಸ್ಕ್ ಧರಿಸಿಲ್ಲ ಎಂದು ದಂಡ ವಿಧಿಸಲಾಗಿದೆ. ಇದರಿಂದ ಮಾತಿನ ಚಕಮಕಿ ನಡೆದಿದೆ. ಸಾರ್ವಜನಿಕ ಸ್ಥಳ ಮತ್ತು ಜನಸಂದಣಿಯ ನಡುವೆ ಮಾಸ್ಕ್ ಹಾಕಿರದಿದ್ದರೆ ದಂಡ ಹಾಕುವುದು ನಿಯಮ. ಆದರೆ, ಮನೆಯೊಳಗೆ ಬಂದು ಪ್ರಶ್ನಿಸುವ ಅಧಿಕಾರ ಕೊಟ್ಟವರ‌್ಯಾರು ಎನ್ನುತ್ತಿಂದ್ದಂತೆ ಸಿಬ್ಬಂದಿ ಅಲ್ಲಿಂದ ಕಾಲ್ಕಿತ್ತಿದ್ದಾರೆ!

    ಮೊದಲು ಅರಿವು ಮೂಡಿಸಿ : ಜಾಗೃತಿಗಿಂತಲೂ ಹಣ ಸುಲಿಗೆಗೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಹಗಲು ದರೋಡೆ ಮಾಡುತ್ತಿದ್ದಾರೆ ಎಂಬ ಆಕ್ರೋಶ ವ್ಯಕ್ತವಾಗಿದೆ. ಮಾರ್ಷಲ್ ಮತ್ತು ಪೊಲೀಸ್ ಸಿಬ್ಬಂದಿಗೆ ನಿಯಮ ಉಲ್ಲಂಘಿಸುವ ಪ್ರಭಾವಿಗಳಿಗೆ ದಂಡ ವಿಧಿಸಿದೆ ಇಲಾಖೆಗೆ ಅಂಕಿ-ಅಂಶ ಸಲ್ಲಿಸಲು ಸಾಮಾನ್ಯರ ವಿರುದ್ಧ ದಂಡಾಸ್ತ್ರ ಬಳಸುತ್ತಿದ್ದಾರೆ ಎಂಬ ಟೀಕೆಗಳು ಕೇಳಿಬರುತ್ತಿವೆ.

    ವಿವಿಧೆಡೆ ಕಾರ್ಯಾಚರಣೆ : ಕರೊನಾ ಸೋಂಕು ಹರಡುವಿಕೆಯ ಅರಿವಿದ್ದರೂ ಮಾಸ್ಕ್ ಧರಿಸದೇ ರಾಜಾರೋಷವಾಗಿ ಅಡ್ಡಾಡುತ್ತಿರುವವರಿಗೆ ದಂಡ ವಿಧಿಸುವ ಪ್ರಕ್ರಿಯೆ ಜೋರಾಗಿದೆ. ಪೊಲೀಸ್ ಇಲಾಖೆಯೊಂದೇ ಭಾನುವಾರ ಒಂದೇ ದಿನ ನಿಯಮ ಉಲ್ಲಂಘನೆಯ 1,680 ಪ್ರಕರಣಗಳನ್ನು ದಾಖಲಿಸಿದೆ. ನಗರಸಭೆಯ ಮಾರ್ಷಲ್‌ಗಳು ವಾಪಷಂದ್ರ, ನಗರದ ಗಂಗಮ್ಮನಗುಡಿ ರಸ್ತೆ, ಭುವನೇಶ್ವರಿ ವೃತ್ತ, ಬಜಾರ್ ರಸ್ತೆ ಸೇರಿ ಹಲವೆಡೆ ಕಾರ್ಯಾಚರಣೆ ನಡೆಸಿ ದಂಡ ವಿಧಿಸುತ್ತಿದೆ.

    ಕರೊನಾ ಎರಡನೇ ಅಲೆ ತೀವ್ರತೆಗೆ ಕಡಿವಾಣ ಹಾಕಲು ಪ್ರತಿಯೊಬ್ಬರು ಸಹಕಾರ ನೀಡಬೇಕು. ಮಾಸ್ಕ್ ಧರಿಸದ, ಪರಸ್ಪರ ಅಂತರ ಕಾಪಾಡಿಕೊಳ್ಳದವರಿಗೆ ನಿರ್ದಾಕ್ಷಿಣ್ಯವಾಗಿ ದಂಡ ವಿಧಿಸಲಾಗುತ್ತದೆ.
    ಆರ್.ಲತಾ, ಜಿಲ್ಲಾಧಿಕಾರಿ

    ಜಿಲ್ಲೆಯಾದ್ಯಂತ ಒಂದೇ ದಿನ ಮಾಸ್ಕ್ ಧರಿಸದೇ ನಿಯಮ ಉಲ್ಲಂಘಿಸಿಕ್ಕೆ ಸಂಬಂಧಿಸಿದಂತೆ 1680 ಪ್ರಕರಣಗಳನ್ನು ದಾಖಲಿಸಲಾಗಿದೆ.
    ಜಿ.ಕೆ.ಮಿಥುನ್ ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

    ಕರೊನಾ ಮಾರ್ಗಸೂಚಿ ನಿಯಮ ಪಾಲನೆಯ ಜಾಗೃತಿಗಿಂತಲೂ ದಂಡದ ಮೂಲಕ ಅಮಾಯಕ ಜನರನ್ನು ಸುಲಿಗೆ ಮಾಡುತ್ತಿದ್ದಾರೆ. ಮನೆ ಮತ್ತು ಕಾಂಪೌಂಡ್ ಒಳಗಿದ್ದವರನ್ನು ಹೊರಗೆ ಕರೆಸಿ ದಂಡ ಹಾಕುತ್ತಿರುವುದು ಹಗಲು ದರೋಡೆಯಲ್ಲವೇ?
    ಯಲುವಹಳ್ಳಿ ಸೊಣ್ಣೇಗೌಡ, ಸ್ಥಳೀಯ ಮುಖಂಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts