More

    ಮಾಡೆಲಿಂಗ್ ಮಾಯೆಯನ್ನೂ ಬಿಡದ ಕರೊನಾ

    ಲಾಕ್​ಡೌನ್​ನಿಂದ ಎಲ್ಲಾ ಕ್ಷೇತ್ರಗಳೂ ತತ್ತರಿಸಿ ಹೋಗಿವೆ. ಅದರಲ್ಲಿ ಮಾಡೆಲಿಂಗ್ ಸಹ ಒಂದು. ಈ ಕ್ಷೇತ್ರವನ್ನೇ ನಂಬಿ ಬದುಕುವ ಸಾವಿರಾರು ಜನ ಇದ್ದಾರೆ. ಲಾಕ್​ಡೌನ್​ನಿಂದಾಗಿ ಅವರೆಲ್ಲಾ ಕಳೆದ ಎರಡು ತಿಂಗಳುಗಳಿಂದ ನಿರುದ್ಯೋಗಿಗಳಾಗಿದ್ದಾರೆ. ಮನೆ ಬಾಡಿಗೆ ಕಟ್ಟುವುದಕ್ಕೆ ಹಣವಿಲ್ಲದೆ, ಅಗತ್ಯ ವಸ್ತುಗಳನ್ನು ಕೊಳ್ಳುವುದಕ್ಕೆ ಪರದಾಡುತ್ತಿದ್ದಾರೆ. ಅಸಂಘಟಿತ ಕಾರ್ವಿುಕರ ನೆರವಿಗೆ ಬಂದಿರುವ ಸರ್ಕಾರವು, ತಮಗೂ ಏನಾದರೂ ಕೊಡಬಹುದಾ ಎಂದು ಎದುರು ನೋಡುತ್ತಿದ್ದಾರೆ. ಮೇಲ್ನೋಟಕ್ಕೆ ಸಮೃದ್ಧವಾಗಿ ಕಾಣುವ ಈ ಲೋಕದಲ್ಲಿ ಏನೆಲ್ಲಾ ಸಮಸ್ಯೆಗಳಿವೆ ಎಂದು ಈ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಹಲವರು ಅಲವತ್ತುಕೊಂಡಿದ್ದಾರೆ.

    ಬೆಂಗಳೂರು: ಮಾಡೆಲಿಂಗ್ ಎಂದರೆ ತಳುಕು-ಬಳುಕಿನ ಪ್ರಪಂಚ, ಅದು ಶ್ರೀಮಂತರ ಲೋಕ ಎಂಬ ಕಲ್ಪನೆ ಮೇಲ್ನೋಟಕ್ಕೆ ಬರುವುದು ಸಹಜ. ಆದರೆ, ಅದಕ್ಕೆ ಕಾರಣ, ಮಾಡೆಲಿಂಗ್ ಇವೆಂಟ್​ಗಳು ನಡೆಯುವುದು ಸ್ಟಾರ್ ಹೋಟೆಲ್​ಗಳಲ್ಲೇ ಹೆಚ್ಚು. ಇನ್ನು ಅದರಲ್ಲಿ ಭಾಗವಹಿಸುವವರಲ್ಲಿ ಬಹುತೇಕ ದುಡ್ಡಿರುವವರೇ. ಹಾಗಾಗಿ ಇದೊಂದು ಶ್ರೀಮಂತರ ಲೋಕ, ಅಲ್ಲಿ ಸಮಸ್ಯೆಗಳೇ ಇರುವುದಕ್ಕೆ ಸಾಧ್ಯವಿಲ್ಲ ಎಂಬ ಅಭಿಪ್ರಾಯ ಸಹಜವಾಗಿಯೇ ಬೇರೂರಿದೆ.

    ಇದು ಭಾಗಶಃ ನಿಜ ಅಷ್ಟೇ. ಇಲ್ಲೂ ಸಾಕಷ್ಟು ತಾಪತ್ರಯಗಳಿವೆ. ಮೇಲೆ ರಂಗುರಂಗಾಗಿ ಕಾಣುವ ಈ ಪ್ರಪಂಚದಲ್ಲಿ, ಇಳಿಯುತ್ತಾ ಹೋದಂತೆ ಸಾಕಷ್ಟು ಸಮಸ್ಯೆಗಳು ಕಾಣುತ್ತವೆ. ಮೇಲ್ನೋಟಕ್ಕೆ ಮಾಡೆಲಿಂಗ್ ಒಂದೇ ಕ್ಷೇತ್ರದಂತೆ ಕಂಡರೂ, ಅಲ್ಲಿ ಸಾಕಷ್ಟು ವಿಭಾಗಗಳಿವೆ. ಮಾಡೆಲಿಂಗ್ ಎಂದರೆ ಬರೀ ಮಾಡಲ್ ಅಥವಾ ರ್ಯಾಂಪ್​ವಾಕ್​ಗಳಿಗಷ್ಟೇ ಸೀಮಿತವಲ್ಲ, ಅದರಲ್ಲಿ ಇವೆಂಟ್ ಮ್ಯಾನೇಜ್​ವೆುಂಟ್ ಕಂಪನಿಗಳು, ಕಾಸ್ಟೂಮ್ ಡಿಸೈನರ್​ಗಳು, ಮೇಕಪ್ ಆರ್ಟಿಸ್ಟ್​ಗಳು, ಫ್ಯಾಶನ್ ಫೋಟೋಗ್ರಫಿ ಮಾಡುವವರು … ಹೀಗೆ ಬೇರೆಬೇರೆ ವಿಭಾಗದವರೆಲ್ಲಾ ಈ ಕ್ಷೇತ್ರದೊಂದಿಗೆ ತಳುಕು ಹಾಕಿಕೊಂಡಿದ್ದಾರೆ. ಸಾವಿರಾರು ಜನ ಈ ಕ್ಷೇತ್ರವನ್ನೇ ನಂಬಿ ಬದುಕುತ್ತಿದ್ದಾರೆ. ಇಲ್ಲಿ ಯಾವುದೇ ಫಿಕ್ಸೆಡ್ ಆದ ಆದಾಯವಿಲ್ಲ. ಕಾರ್ಯಕ್ರಮಗಳು ನಡೆಯುತ್ತಿದ್ದರೆ ದುಡ್ಡು ಓಡಾಡುತ್ತಿರುತ್ತದೆ. ಅದೂ ದೊಡ್ಡ ದುಡ್ಡು ಸಿಗುತ್ತದೆ ಎಂದು ನಿರೀಕ್ಷಿಸುವುದೂ ಕಷ್ಟವೇ. ಹೀಗೆ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿರುವ ಈ ಕ್ಷೇತ್ರಕ್ಕೆ, ಸರ್ಕಾರ ಸಹಾಯ ಮಾಡಬೇಕು ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.

    ಈ ಕುರಿತು ಮಾತನಾಡುವ ಎಸ್.ಎ. ಫ್ಯಾಶನ್ ಹಬ್​ನ ಅಜಯ್ ಕುಮಾರ್, ‘ನಾವು ಏಪ್ರಿಲ್ 14ಕ್ಕೆ ಒಂದು ದೊಡ್ಡ ಇವೆಂಟ್ ಮಾಡಬೇಕಿತ್ತು. ಅಷ್ಟರಲ್ಲಿ ಲಾಕ್​ಡೌನ್ ಘೋಷಣೆಯಾಯಿತು. ಆ ಇವೆಂಟ್​ಗೆ ಸಾಕಷ್ಟು ಖರ್ಚು ಮಾಡಿದ್ದೆವು. ಆ ಕಡೆ ಕಾರ್ಯಕ್ರಮವೂ ನಡೆಯಲಿಲ್ಲ, ಈ ಕಡೆ ಅದಕ್ಕೆ ಖರ್ಚು ಮಾಡಿದ್ದೂ ವಾಪಸ್ಸು ಬರುವುದಿಲ್ಲ. ಹೀಗಿರುವಾಗ ನಾವೇನು ಮಾಡಬೇಕು. ಕಳೆದ ಎರಡು ತಿಂಗಳಿನಿಂದ ಕೆಲಸ ಮಾಡಿಲ್ಲ. ಯಾವಾಗಿನಿಂದ ಶುರು ಎಂಬುದೂ ಗೊತ್ತಿಲ್ಲ. ಈ ಸಂದರ್ಭದಲ್ಲಿ ಸರ್ಕಾರ ನಮ್ಮ ಸಹಾಯಕ್ಕೆ ಬರಬೇಕು. ಬೇರೆಬೇರೆ ಕ್ಷೇತ್ರಗಳಿಗೆ ಸಹಾಯ ಮಾಡುತ್ತಿರುವಾಗ, ಈ ಕ್ಷೇತ್ರಕ್ಕೂ ಯಾಕೆ ಸಹಾಯ ಮಾಡಬಾರದು’ ಎಂದು ಕೇಳುತ್ತಾರೆ.

    ಇದನ್ನೂ ಓದಿ: ಜೂನ್‌ ಮೊದಲ ವಾರದಲ್ಲಿ ಉನ್ನತ ಶಿಕ್ಷಣ ಪರೀಕ್ಷೆ ಕುರಿತ ನಿರ್ಧಾರ ಪ್ರಕಟ: ಡಾ. ಅಶ್ವತ್ಥನಾರಾಯಣ

    ಹಲವು ವರ್ಷಗಳಿಂದ ಈ ಕ್ಷೇತ್ರದಲ್ಲಿ ಮೇಕಪ್ ಆರ್ಟಿಸ್ಟ್ ಆಗಿ ಗುರುತಿಸಿಕೊಂಡಿರುವ ವಿಜಯ್, ಲಾಕ್​ಡೌನ್ ಸಂದರ್ಭದಲ್ಲಿ ಸಾಕಷ್ಟು ಕಷ್ಟಪಟ್ಟಿದ್ದಾಗಿ ಹೇಳುತ್ತಾರೆ. ‘ನಾವು ಬರೀ ಮಾಡೆಲಿಂಗ್​ನಲ್ಲಿ ಮಾತ್ರವಲ್ಲ, ಸಿನಿಮಾ, ಧಾರಾವಾಹಿ, ಮದುವೆ, ಶಾಲಾ ವಾರ್ಷಿಕೋತ್ಸವ … ಹೀಗೆ ತಿಂಗಳಿಗೆ 20 ದಿನಗಳಾದರೂ ಬಿಜಿಯಾಗಿದ್ದೆವು. ಆದರೆ, ಲಾಕ್​ಡೌನ್​ನಿಂದ ಎಲ್ಲವೂ ಬಂದ್ ಆಗಿರುವುದರಿಂದ, ಎಲ್ಲೂ ಕೆಲಸ ಇಲ್ಲದಂತಾಗಿದೆ’ ಎನ್ನುತ್ತಾರೆ. ಇನ್ನು ಫ್ಯಾಶನ್ ಡೈರೆಕ್ಟರ್ ಆಗಿರುವ ಪ್ರಶಾಂತ್ ಹೇಳುವಂತೆ, ‘ನಾನು ಫೋಟೋ ಶೂಟ್​ಗಳನ್ನು ಮಾಡುತ್ತಿದ್ದೆ. ಈಗ ನಿಂತಿರುವುದರಿಂದ, ನನಗಷ್ಟೇ ಅಲ್ಲ, ಮಾಡಲ್​ಗಳಿಗೆ, ಮೇಕಪ್​ನವರಿಗೆ, ಕಾಸ್ಟೂಮ್ವರಿಗೆ ಯಾರಿಗೂ ಕೆಲಸ ಇಲ್ಲದಂತಾಗಿದೆ’ ಎನ್ನುತ್ತಾರೆ ಅವರು.

    ಮೇಲ್ನೋಟಕ್ಕೆ ಸಂಪದ್ಭರಿತವಾಗಿ ಕಾಣುವ ಮಾಡೆಲಿಂಗ್ ಪ್ರಪಂಚ, ಲಾಕ್​ಡೌನ್​ನಿಂದ ಹಲವು ಸಮಸ್ಯೆಗಳನ್ನು ಎದುರಿಸುತ್ತಿದೆ. ಇದನ್ನೇ ನಂಬಿ ಬದುಕುತ್ತಿರುವವರು ಹೈರಾಣಾಗಿದ್ದಾರೆ. ಸರ್ಕಾರ ಇವರ ಮಾತಿಗೆ ಕಿವಿಗೊಡುತ್ತದಾ ಎಂದು ಕಾದು ನೋಡಬೇಕಿದೆ.

    ಕೆಲಸ ಮಾಡಲು ಅನುಮತಿ ಕೊಡಿ: ಕೆಲವು ವರ್ಷಗಳಿಂದ ಮಾಡೆಲ್ ಆಗಿ ಗುರುತಿಸಿಕೊಂಡಿರುವ ಐಶ್ವರ್ಯ ಹೇಳುವಂತೆ, ‘ಇದುವರೆಗೂ ಯಾವ ಸರ್ಕಾರ ಸಹ ಮಾಡೆಲಿಂಗ್ ಕ್ಷೇತ್ರದ ಬಗ್ಗೆ ಗಮನಹರಿಸಿಲ್ಲ. ಇನ್ನು ಲಾಕ್​ಡೌನ್ ಸಂದರ್ಭದಲ್ಲಿ ಬೇರೆಯವರಿಗೆ ಆಹಾರ ಕಿಟ್ ಕೊಡಲಾಗುತ್ತದೆ. ಆದರೆ, ನಮ್ಮ ಕ್ಷೇತ್ರಕ್ಕೆ ಯಾವುದೇ ರೀತಿಯ ಸಹಕಾರ ಸಿಕ್ಕಿಲ್ಲ. ಮಾಡೆಲ್​ಗಳೆಂದರೆ ಬರೀ ಗ್ಲಾಮರ್ ಕಾಣುತ್ತದೆ. ಅವರಿಗೇನು ಸಮಸ್ಯೆಗಳಿರುತ್ತವೆ ಎಂಬ ಪ್ರಶ್ನೆ ಸಹಜವಾಗಿಯೇ ಬರುತ್ತದೆ. ಆದರೆ, ಮಾಡೆಲಿಂಗ್ ಕ್ಷೇತ್ರದಲ್ಲಿರುವವರು ಜೀವನ ನಿರ್ವಹಣೆಯ ಜತೆಗೆ, ತಮ್ಮ ನಿರ್ವಹಣೆಗೆ ಸಾಕಷ್ಟು ಖರ್ಚು ಮಾಡಬೇಕಾಗುತ್ತದೆ. ಕಾಸ್ಟೂಮ್ ಮೇಕಪ್, ಫಿಸಿಕಲ್ ಫಿಟ್ನೆಸ್ ಅಂತೆಲ್ಲಾ ಸಾಕಷ್ಟು ಖರ್ಚು ಮಾಡಬೇಕು. ಇದಕ್ಕೆ ಹಣ ಎಲ್ಲಿಂದ ತರಬೇಕು. ಬೇರೆ ಸಹಕಾರ ಕೊಡದಿದ್ದರೆ ಬೇಡ, ಕೆಲಸ ಶುರು ಮಾಡುವುದಕ್ಕೆ ಅನುಮತಿ ಕೊಟ್ಟರೆ ಸಾಕು’ ಎಂದು ಹೇಳುತ್ತಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts