More

    ವಾಪಾರ, ವಹಿವಾಟು, ಪೂಜಾ ಕಾರ್ಯ ಸ್ಥಗಿತ

    ಕೋಟ: ಕರೊನಾ ವೈರಸ್‌ನಿಂದಾಗಿ ಉಡುಪಿ ಜಿಲ್ಲೆಯಲ್ಲಿ ವ್ಯಾಪಾರ, ವಹಿವಾಟು, ದೇವಾಲಯಗಳಲ್ಲಿ ವಿಶೇಷ ದರ್ಶನ ಪೂಜಾ ಕಾರ್ಯಕ್ಕೆ ಕಡಿವಾಣ ಬಿದ್ದಿದೆ.

    ಕೋಟ, ಸಾಲಿಗ್ರಾಮ, ತೆಕ್ಕಟ್ಟೆ, ಸಾಸ್ತಾನ ಭಾಗಗಳ ಬಸ್ ನಿಲ್ದಾಣಗಳಲ್ಲಿ ಗುರುವಾರ ಬಿಕೊ ಎನ್ನುತ್ತಿರುವ ದೃಶ್ಯ ಕಂಡುಬಂತು. ದೇವಾಲಯಗಳು ಭಕ್ತರಿಲ್ಲದೆ ಬಣಗುಟ್ಟುತ್ತಿವೆ. ಕೋಟ ಅಮೃತೇಶ್ವರಿ ಹಲವು ಮಕ್ಕಳ ತಾಯಿ ದೇವಳದಲ್ಲಿ ಬುಧವಾರವೇ ಜಿಲ್ಲಾಧಿಕಾರಿ ಆದೇಶದಂತೆ ದೇವಳದ ವಿಶೇಷ ಪೂಜೆ, ಹರಕೆ ಯಕ್ಷಗಾನ, ಅನ್ನದಾನ ಕಾರ್ಯಕ್ರಮಗಳನ್ನು ಮುಂದಿನ ಆದೇಶದವರೆಗೂ ತಡೆಹಿಡಿಯಲಾಗಿದೆ ಎಂಬ ಫಲಕ ದೇವಳದಲ್ಲಿ ಅಳವಡಿಸಲಾಗಿದೆ.

    ಕೋಟ ಸಂತೆ ವ್ಯಾಪಾರ ಬಂದ್ ಗೊಂದಲ: ಪ್ರತಿ ವಾರದಂತೆ ಗುರುವಾರ ಬೆಳಗ್ಗೆ 8ಕ್ಕೆ ಸಂತೆಗೆ ಆಗಮಿಸಿದ ವ್ಯಾಪಾರಸ್ಥರು ವ್ಯವಹಾರದಲ್ಲಿ ತೊಡಗಿದ್ದರು. ಸಂತೆ ರದ್ದಾದ ಬಗ್ಗೆ ಪಂಚಾಯಿತಿ ತಡವಾಗಿ ಮಾಹಿತಿ ನೀಡಿರುವುದರಿಂದ ವ್ಯಾಪಾರಸ್ಥರು ಆಗಮಿಸಿದ್ದರು. ಸಂತೆ ವ್ಯವಹಾರ ಪ್ರಾರಂಭಿಸುತ್ತಿದ್ದಂತೆ ಕೋಟ ಗ್ರಾಪಂ ಅಧ್ಯಕ್ಷೆ ವನೀತಾ ಶ್ರೀಧರ ಆಚಾರ್ಯ, ಉಪಾಧ್ಯಕ್ಷ ರಾಜಾರಾಮ್ ಶೆಟ್ಟಿ, ಅಭಿವೃದ್ಧಿ ಅಧಿಕಾರಿ ಸುರೇಶ್, ಕೋಟ ಗ್ರಾಮಲೆಕ್ಕಿಗ ಚಲುವರಾಜ್, ಆರಕ್ಷಕ ಠಾಣಾಧಿಕಾರಿ ನಿತ್ಯಾನಂದ ಗೌಡ ಭೇಟಿ ನೀಡಿ ಜಿಲ್ಲಾಧಿಕಾರಿ ಆದೇಶದಂತೆ ಸಂತೆ ವ್ಯವಹಾರ ನಿಲ್ಲಿಸಲು ಆದೇಶಿಸಿದರು. ಆದರೆ ವ್ಯಾಪಾರಸ್ಥರು ಮಾತ್ರ ಪ್ಲೀಸ್ ಅಣ್ಣ…. ಹೊಟ್ಟೆ ಮೇಲೆ ಹೊಡೆಯಬೇಡಿ…ವ್ಯಾಪಾರ ಮಾಡಲು ಬಿಡಿ ಎಂಬ ಮಾತು ಪಂಚಾಯಿತಿ ಸಿಬ್ಬಂದಿಯ ಮನಕಲುಕುವಂತೆ ಮಾಡಿತು. ಆದರೂ ಜಿಲ್ಲಾಧಿಕಾರಿ ನಿರ್ದೇಶನದಂತೆ ಸಂತೆಯನ್ನು ತಡೆ ಹಿಡಿಯಬೇಕಾಯಿತು. ಇಲಾಖಾಧಿಕಾರಿಗಳು ಹಿಂದಿರುಗಿದ ಬಳಿಕ ತಂದಿದ್ದ ತರಕಾರಿ ಜಿನಸು ಸಾಮಾನುಗಳನ್ನು ಅರೆಬರೆ ದರಕ್ಕೆ ಸೀಮಿತಗೊಳಿಸಿ ಸಾರ್ವಜನಿಕರಿಗೆ ಹಂಚಿದರು.

    ನಷ್ಟ ತುಂಬುವುದು ಯಾರು?: ಸಂತೆ ಇಲ್ಲದಿರುವ ಬಗ್ಗೆ ಮುಂಚಿತವಾಗಿ ಮಾಹಿತಿ ನೀಡದಿರುವುದರಿಂದ ಮಾರಾಟಕ್ಕೆ ತಂದಿದ್ದ ತರಕಾರಿಗಳು ಮಾರಾಟವಾಗದೆ ಲಕ್ಷ ಲಕ್ಷ ರೂ. ನಷ್ಟವಾಗಿದೆ. ಇದರ ನಷ್ಟ ತುಂಬುವವರಾರು ಎಂದು ಪಂಚಾಯಿತಿ ಹಾಗೂ ಸುಂಕ ವಸೂಲಿಗಾರನ ವಿರುದ್ಧ ರಾಯಚೂರಿನ ತರಕಾರಿ ವ್ಯಾಪಾರಸ್ಥ ಚಂದ್ರಶೇಖರ ಆಕ್ರೋಶ ವ್ಯಕ್ತಪಡಿಸಿದರು.

    ನಾವು ಬುಧವಾರವೇ ಜಿಲ್ಲಾಧಿಕಾರಿ ಸೂಚನೆಯಂತೆ ಸಂತೆ ನಡೆಸದಂತೆ ಸೂಚಿಸಿದ್ದೇವೆ. ಆದರೆ ಗುರುವಾರ ಸಂತೆ ನಡೆಸಲು ಬಂದಿದ್ದಾರೆ ಎಂಬ ಸುದ್ದಿ ತಿಳಿದು ನಮ್ಮ ಸಿಬ್ಬಂದಿ ಹಾಗೂ ಸಂಬಂಧಿತ ಇಲಾಖೆಯ ಮೂಲಕ ಸೂಚಿಸಿದ್ದೇವೆ.
    ವನಿತಾ ಶ್ರೀಧರ ಆಚಾರ್ಯ, ಅಧ್ಯಕ್ಷೆ ಕೋಟ ಗ್ರಾಮ ಪಂಚಾಯಿತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts