More

    ಯಾವುದೇ ಪರಿಸ್ಥಿತಿ ಎದುರಿಸಲು ಸನ್ನದ್ಧ

    ಮಂಗಳೂರು: ದುಬೈನಿಂದ ವಿಮಾನದ ಮೂಲಕ ಮಂಗಳೂರಿಗೆ ಆಗಮಿಸಿದ ವ್ಯಕ್ತಿಯ ಮಾದರಿ ಪರೀಕ್ಷೆಯ ವರದಿ ನೆಗೆಟಿವ್. ಹಾಗಾಗಿ ಜಿಲ್ಲೆಯಲ್ಲಿ ಈವರೆಗೂ ಯಾವುದೇ ಕರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿಲ್ಲ. ಈ ಸಂಬಂಧ ಯಾವುದೇ ಪರಿಸ್ಥಿತಿ ಎದುರಿಸಲು ಜಿಲ್ಲೆ ಸನ್ನದ್ಧವಾಗಿದೆ ಎಂದು ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಸ್ಪಷ್ಟಪಡಿಸಿದ್ದಾರೆ.
    ಮಾ.8ರಂದು ದುಬೈನಿಂದ ಆಗಮಿಸಿದ ಯುವಕನಲ್ಲಿ ಕರೊನಾ ಸೋಂಕಿನ ಲಕ್ಷಣ ಕಂಡುಬಂದ ಹಿನ್ನೆಲೆಯಲ್ಲಿ ಅವರ ಗಂಟಲಿನ ದ್ರವದ ಸ್ಯಾಂಪಲ್‌ನ್ನು ಪರೀಕ್ಷೆಗಾಗಿ ಬೆಂಗಳೂರಿಗೆ ಕಳುಹಿಸಲಾಗಿದ್ದು, ನೆಗೆಟಿವ್ ವರದಿ ಬಂದಿದೆ. ಆದರೂ 14 ದಿನಗಳ ಕಾಲ ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಬುಧವಾರ ತಿಳಿಸಿದರು.
    ಇದುವರೆಗೆ ಜಿಲ್ಲೆಯಿಂದ 10 ಸ್ಯಾಂಪಲ್‌ಗಳನ್ನು ಪರೀಕ್ಷೆಗಾಗಿ ಕಳುಹಿಸಿಕೊಟ್ಟಿದ್ದು, ಅದರಲ್ಲಿ 7 ನೆಗೆಟಿವ್ ಆಗಿವೆ. ಉಳಿದ ಮೂರು ಪರೀಕ್ಷಾ ವರದಿಗಳು ಇನ್ನಷ್ಟೇ ದೊರೆಯಬೇಕಿದೆ ಎಂದರು.

    5 ಪರೀಕ್ಷಾ ಕೇಂದ್ರ: ಕರೊನಾ ಸ್ಯಾಂಪಲ್ ಪರೀಕ್ಷೆಗಾಗಿ ಬೆಂಗಳೂರಿನಲ್ಲಿ 2, ಮೈಸೂರು, ಹಾಸನ, ಶಿವಮೊಗ್ಗದಲ್ಲಿ ತಲಾ ಒಂದು ಕೇಂದ್ರ ಇದೆ. ಜಿಲ್ಲೆಯ ಸ್ಯಾಂಪಲ್‌ಗಳನ್ನು ಅಲ್ಲಿಗೆ ಕಳುಹಿಸಿಕೊಡಲಾಗುತ್ತದೆ. ಎಲ್ಲ ತಾಲೂಕು ಆಸ್ಪತ್ರೆಗಳಿಗೆ ಪರ್ಸನಲ್ ಪ್ರೊಟೆಕ್ಷನ್ ಕಿಟ್ ರವಾನಿಸಲಾಗಿದೆ. ಕರೊನಾ ಸೋಂಕಿತರನ್ನು ಹೇಗೆ ನಿರ್ವಹಣೆ ಮಾಡಬೇಕು ಎಂಬ ಕುರಿತು ವೈದ್ಯರು ಸೇರಿದಂತೆ ವೈದ್ಯಕೀಯ ಸಿಬ್ಬಂದಿಗೆ ತರಬೇತಿ ನೀಡಲಾಗಿದೆ.
    ಕರೊನಾ ಸೋಂಕಿನ ಲಕ್ಷಣ ಪತ್ತೆಯಾದರೆ ಮಾಹಿತಿ ನೀಡಲು ಅಥವಾ ಇನ್ನಿತರ ಅಗತ್ಯ ಮಾಹಿತಿಗಾಗಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕಂಟ್ರೋಲ್ ರೂಮ್ ತೆರೆಯಲಾಗಿದ್ದು, ಸಾರ್ವಜನಿಕರು 1077, 104, 0824- 2442590ಗೆ ಕರೆ ಮಾಡಿ ಮಾಹಿತಿ ನೀಡಬಹುದು ಎಂದು ಹೇಳಿದರು.
    ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಜೇಶ್ ಬಿ.ವಿ, ವೆನ್ಲಾಕ್ ಆಸ್ಪತ್ರೆ ಅಧೀಕ್ಷಕಿ ಡಾ.ರಾಜೇಶ್ವರಿ ದೇವಿ, ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ನವೀನ್‌ಚಂದ್ರ ಕುಲಾಲ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಜಗದೀಶ್ ಮತ್ತಿತರರಿದ್ದರು.

    ವೆನ್ಲಾಕ್‌ನಲ್ಲಿ ಕರೊನಾ ವಾರ್ಡ್: ಮಂಗಳೂರು ವಿಮಾನ ನಿಲ್ದಾಣದಲ್ಲಿ ಒಂದು 108 ಆಂಬುಲೆನ್ಸ್ನ್ನು ಸನ್ನದ್ಧ ಸ್ಥಿತಿಯಲ್ಲಿರಿಸಲಾಗಿದ್ದು, ಒಬ್ಬರು ಡಾಕ್ಟರ್, ಇಬ್ಬರು ಅಸಿಸ್ಟೆಂಟ್‌ಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವಿಮಾನದ ಮೂಲಕ ಬರುವವರನ್ನು ಉಷ್ಣತಾ ಮಾಪಕದ ಸ್ಕ್ರೀನಿಂಗ್‌ಗೆ ಒಳಪಡಿಸಲಾಗುತ್ತಿದ್ದು, ಕರೊನಾ ಸೋಂಕಿನ ಲಕ್ಷಣ ಕಂಡುಬಂದರೆ ಕೂಡಲೆ ಅವರನ್ನು ಕೌನ್ಸೆಲಿಂಗ್‌ಗೆ ಒಳಪಡಿಸಿ, ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಕರೆದೊಯ್ಯಲಾಗುವುದು. ಒಂದೆರಡು ದಿನದೊಳಗೆ ಪರೀಕ್ಷಾ ವರದಿ ಬರುವವರೆಗೂ ಅವರು ಆಸ್ಪತ್ರೆಯ 5 ಬೆಡ್‌ಗಳ ಪ್ರತ್ಯೇಕ ವಾರ್ಡ್‌ನಲ್ಲಿ (ಐಸೊಲೇಶನ್) ಇರಬೇಕಾಗುತ್ತದೆ. ವರದಿ ಪಾಸಿಟಿವ್ ಬಂದರೆ ಕರೊನಾಕ್ಕಾಗಿಯೇ ಸಿದ್ಧಗೊಳಿಸಲಾಗಿರುವ 6 ಬೆಡ್‌ಗಳ ಇನ್ನೊಂದು ಪ್ರತ್ಯೇಕ ವಿಭಾಗಕ್ಕೆ ಸ್ಥಳಾಂತರಿಸಲಾಗುವುದು. ಅಲ್ಲಿ 28 ದಿನಗಳ ಕಾಲ ಚಿಕಿತ್ಸೆ ನೀಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ವಿವರಿಸಿದರು.

    ಬಂದರಿನಲ್ಲಿ ಮುನ್ನೆಚ್ಚರಿಕೆ: ವಿದೇಶಗಳಿಂದ ಜನರು ಆಗಮಿಸುವ ನವಮಂಗಳೂರು ಬಂದರಿನಲ್ಲೂ ಸೂಕ್ತ ಮುನ್ನೆಚ್ಚರಿಕೆ ವಹಿಸಲಾಗಿದೆ. ಪ್ರವಾಸಿ ಹಡಗುಗಳಿಗೆ ನಿರ್ಬಂಧ ಹೇರಿರುವುದರಿಂದ ಹೊರ ದೇಶಗಳ ಪ್ರವಾಸಿಗರು ಬರುವ ಆತಂಕವಿಲ್ಲ. ಆದರೆ ಗೂಡ್ಸ್ ಹಡಗುಗಳ ಮೂಲಕ ಆಗಮಿಸುವ ಸಿಬ್ಬಂದಿಯ ಸ್ಕ್ರೀನಿಂಗ್ ಕಡ್ಡಾಯವಾಗಿ ನಡೆಸಲಾಗುತ್ತಿದೆ. ಅವರು ಯಾವುದೇ ಕಾರಣಕ್ಕೂ ನಗರ ಪ್ರವೇಶಿಸದಂತೆ ನೋಡಿಕೊಳ್ಳಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

    49 ಮಂದಿಗೆ ಕ್ವಾರಂಟೈನ್: ವಿಮಾನ ನಿಲ್ದಾಣಕ್ಕೆ ಆಗಮಿಸುವ ಎಲ್ಲರಿಗೂ 14 ದಿನಗಳ ಕಾಲ ಮುನ್ನೆಚ್ಚರಿಕೆ ವಹಿಸಲು ಸೂಚಿಸಲಾಗುತ್ತಿದೆ. ವಿಮಾನ ಪ್ರಯಾಣಿಕರಲ್ಲಿ ಜ್ವರ, ಶೀತ, ಕೆಮ್ಮು ಇತ್ಯಾದಿ ಕಂಡುಬಂದಿರುವ 49 ಮಂದಿಯನ್ನು ಅವರ ಮನೆಗಳಲ್ಲಿ ವೈದ್ಯಕೀಯ ನಿಗಾದಲ್ಲಿ ಇರಿಸಲಾಗಿದೆ. ಇವರಲ್ಲಿ 5 ಮಂದಿ 28 ದಿನಗಳ ನಿಗಾ ಅವಧಿ ಪೂರ್ತಿಗೊಳಿಸಿದ್ದು, ಕರೊನಾ ಪತ್ತೆಯಾಗಿಲ್ಲ. ಉಳಿದವರು ಇನ್ನೂ ವೈದ್ಯಕೀಯ ನಿಗಾದಲ್ಲಿದ್ದಾರೆ. ಅಗತ್ಯವಿರುವ ಪ್ರಕರಣಗಳಲ್ಲಿ ಮಾತ್ರ ಗಂಟಲಿನ ದ್ರವದ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗುತ್ತಿದೆ ಎಂದು ಡಿಸಿ ತಿಳಿಸಿದರು.

    ಖಾಸಗಿ ಆಸ್ಪತ್ರೆಗಳಲ್ಲೂ ವಾರ್ಡ್: ಇದುವರೆಗೆ ಜಿಲ್ಲಾ ವೆನ್ಲಾಕ್ ಆಸ್ಪತ್ರೆಯಲ್ಲಿ ಮಾತ್ರವೇ ಇದ್ದ ಕರೊನಾ ಪ್ರತ್ಯೇಕ ವಾರ್ಡ್‌ನ್ನು ಇತರ 7 ಖಾಸಗಿ ಆಸ್ಪತ್ರೆಗಳಲ್ಲಿ ಪ್ರಾರಂಭಿಸಲಾಗಿದೆ. ವೆನ್ಲಾಕ್ ಆಸ್ಪತ್ರೆಯಲ್ಲಿ 6 ಹಾಸಿಗೆ (3 ಪುರುಷರಿಗೆ, 3 ಮಹಿಳೆಯರಿಗೆ)ಗಳುಳ್ಳ ಪ್ರತ್ಯೇಕ ವಾರ್ಡ್ ತೆರೆಯಲಾಗಿದೆ. ಉಳಿದಂತೆ ಶ್ರೀನಿವಾಸ ಆಸ್ಪತ್ರೆ, ಕೆಎಂಸಿ, ಯೆನೆಪೋಯ, ಫಾದರ್ ಮುಲ್ಲರ್, ಕೆ.ಎಸ್. ಹೆಗ್ಡೆ, ಎ.ಜೆ. ಆಸ್ಪತ್ರೆಗಳಲ್ಲೂ ಪ್ರತ್ಯೇಕ ವಾರ್ಡ್‌ಗೆ ಸಿದ್ಧತೆ ನಡೆಸಲಾಗಿದೆ. ಒಂದು ವೇಳೆ ಸ್ಥಿತಿ ಉಲ್ಬಣಿಸಿದರೆ ಇಎಸ್‌ಐ ಆಸ್ಪತ್ರೆಯಲ್ಲೂ ಪ್ರತ್ಯೇಕ ವಾರ್ಡ್ ಮಾಡಲು ಯೋಜಿಸಲಾಗಿದೆ ಎಂದು ಡಿಸಿ ತಿಳಿಸಿದರು.

    ಆರೋಗ್ಯಾಧಿಕಾರಿ ಬದಲು: ನಾಲ್ಕು ದಿನ ಹಿಂದೆಯಷ್ಟೇ ಜಿಲ್ಲಾ ಆರೋಗ್ಯಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ್ದ ಡಾ.ಸಿಖಂದರ್ ಪಾಷಾ ಅವರನ್ನು ಕೇವಲ ಕುಟುಂಬ ಕಲ್ಯಾಣಾಧಿಕಾರಿಯಾಗಿ ಮುಂದುವರಿಸಲಾಗಿದೆ, ಆರೋಗ್ಯಾಧಿಕಾರಿಯಾಗಿ ಡಾ.ರಾಜೇಶ್ ಬಿ.ವಿ. ಅವರಿಗೆ ಅಧಿಕಾರ ನೀಡಲಾಗಿದೆ. ದುಬೈನಿಂದ ಬಂದ ವ್ಯಕ್ತಿಗೆ ಜ್ವರವಿದ್ದು ಚಿಕಿತ್ಸೆ ನೀಡುವ ವಿಚಾರದಲ್ಲಿ ಆದ ಗೊಂದಲದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಂಡಿರುವುದಾಗಿ ತಿಳಿದುಬಂದಿದೆ.

    ಸಾರ್ವಜನಿಕ ಕಾರ್ಯಕ್ರಮಗಳ ಸಂಖ್ಯೆ ಇಳಿಕೆ
    ಯಾವುದೇ ಪಾಸಿಟಿವ್ ಕೇಸ್ ಇದುವರೆಗೆ ವರದಿಯಾಗದಿದ್ದರೂ ಕರೊನಾ ವೈರಸ್ ಪಸರಿಸುವ ಆತಂಕ ನಿಧಾನವಾಗಿ ಮಂಗಳೂರಿಗೂ ತಟ್ಟತೊಡಗಿದೆ. ಸರ್ಕಾರ ಶಾಲೆಗಳಲ್ಲಿ ಪರೀಕ್ಷೆ ಮೊದಲೇ ನಡೆಸುವಂತೆ ಸೂಚಿಸಿದ್ದು ಬಿಟ್ಟರೆ ಬೇರೆ ಯಾವುದೇ ನಿರ್ಬಂಧಗಳನ್ನು ಹೇರಿಲ್ಲವಾದರೂ ಜನರೇ ಸ್ವಯಂ ಆಗಿ ಕೆಲವು ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ.
    ಖಾಸಗಿ ಹಾಗೂ ಸಾರ್ವಜನಿಕ ಅನೇಕ ಕಾರ್ಯಕ್ರಮಗಳನ್ನು ಮುಂದೂಡುವ ಅಥವಾ ರದ್ದುಗೊಳಿಸುವ ಬಗ್ಗೆ ವರದಿಗಳು ಬರತೊಡಗಿವೆ. ಇಸ್ಕಾನ್‌ನವರು ಮಂಗಳೂರಿನಲ್ಲಿ ಮಾ.14ರಂದು ಹಮ್ಮಿಕೊಂಡಿದ್ದ ಶ್ರೀಕೃಷ್ಣ ಬಲರಾಮ ಮಂದಿರದ ಶ್ರೀಕೃಷ್ಣ ಬಲರಾಮ ರಥಯಾತ್ರೆಯನ್ನು ರದ್ದುಪಡಿಸಲಾಗಿದೆ.

    ಬಸ್ ಪ್ರಯಾಣ ಇಳಿಕೆ: ಕಳೆದ ಕೆಲವು ದಿನಗಳಿಂದ ಎಸಿ ಸಹಿತ ಕೆಎಸ್ಸಾರ್ಟಿಸಿ ಹಾಗೂ ಖಾಸಗಿ ಬಸ್‌ಗಳಿಗೆ ಪ್ರಯಾಣಿಕರ ಸಂಖ್ಯೆ ಇಳಿಮುಖವಾಗಿದೆ. ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿರುವುದರಿಂದ ಬಸ್‌ಗಳ ಸಂಖ್ಯೆಯನ್ನೂ ಕಡಿಮೆ ಮಾಡಲಾಗಿದೆ.

    ಮಾಸ್ಕ್ ಬಗ್ಗೆ ಗೊಂದಲ ಬೇಡ: ನಮ್ಮಲ್ಲಿ ಯಾವುದೇ ಪಾಸಿಟಿವ್ ಕೇಸ್ ಇಲ್ಲದ ಕಾರಣ ವಿನಾಕಾರಣ ಭಯ ಬೇಡ, ಮಾಸ್ಕ್ ಕೊಳ್ಳುವುದಕ್ಕೆ ಮುಗಿಬೀಳಬೇಕಾಗಿಲ್ಲ ಎನ್ನುತ್ತಾರೆ ಆರೋಗ್ಯ ಇಲಾಖೆ ಅಧಿಕಾರಿಗಳು. ಯಾರಿಗಾದರೂ ಸೋಂಕು ತಗಲಿದ ಬಗ್ಗೆ ಭೀತಿ ಇದ್ದರೆ ಅಂತಹವರ ಹತ್ತಿರದಲ್ಲಿರುವವರು ಮಾತ್ರವೇ ಮಾಸ್ಕ್ ಧರಿಸಿದರೆ ಸಾಕು, ಎಲ್ಲರೂ ಮಾಸ್ಕ್ ಧರಿಸುವುದು ಬೇಡ ಎಂದು ತಿಳಿಸಿದ್ದಾರೆ.

    ಚೀನಾದಿಂದ ಆಗಮಿಸಿದ ಕಡಬ ನಿವಾಸಿಯ ಆರೋಗ್ಯ ತಪಾಸಣೆ
    ಕಡಬ: ಚೀನಾದ ಶಾಂೈಯಲ್ಲಿ ಉದ್ಯೋಗದಲ್ಲಿದ್ದ ಕಡಬ ಸಮೀಪದ ಬಲ್ಯ ನಿವಾಸಿ ತಾಯ್ನಡಿಗೆ ವಾಪಸ್ಸಾದ ಕಾರಣ ಕಡಬ ಪರಿಸರದ ಜನತೆ ಕರೊನಾ ವೈರಸ್ ಬಗ್ಗೆ ಆತಂಕಗೊಂಡಿದ್ದು, ಕಡಬದ ಸರ್ಕಾರಿ ವೈದ್ಯಾಧಿಕಾರಿ ಸ್ಥಳಕ್ಕೆ ತೆರಳಿ ಪರಿಶೀಲಿಸಿದರು.
    ಎರಡು ದಿನಗಳ ಹಿಂದೆ ಆಗಮಿಸಿದ್ದ ಅವರನ್ನು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಅವರನ್ನು ತಪಾಸಣೆಗೊಳಪಡಿಸಿದಾಗ ಕರೊನಾ ವೈರಸ್ ಲಕ್ಷಣಗಳು ಕಂಡುಬಾರದ ಹಿನ್ನೆಲೆಯಲ್ಲಿ ಮನೆಗೆ ಕಳುಹಿಸಲಾಗಿತ್ತು. ಆದರೆ ಮನೆಯ ಪರಿಸರದಲ್ಲಿ ಕೆಲವರು ಆತಂಕ ವ್ಯಕ್ತಪಡಿಸಿದ್ದರಿಂದ ಬುಧವಾರ ಕಡಬ ಸಮುದಾಯ ಆರೋಗ್ಯ ಕೇಂದ್ರಕ್ಕೆ ತೆರಳಿ ಆರೋಗ್ಯ ತಪಾಸಣೆ ನಡೆಸಿದರು. ಯಾವುದೇ ಸೋಂಕು ತಗುಲಿಲ್ಲ, ಯಾರೂ ಆತಂಕಪಡುವ ಅಗತ್ಯವಿಲ್ಲ ಎಂದು ಕಡಬ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ತ್ರಿಮೂರ್ತಿ ಸ್ಪಷ್ಟನೆ ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts