More

    ಕರೊನಾ ನಿಯಂತ್ರಣಕ್ಕೆ ಕೈ ಜೋಡಿಸದಿದ್ದರೆ ಹೋರಾಟ; ಜಿಂದಾಲ್ ಕಂಪನಿಗೆ ಶಾಸಕ ಸೋಮಶೇಖರರೆಡ್ಡಿ ಎಚ್ಚರಿಕೆ

    ಬಳ್ಳಾರಿ: ಜಿಂದಾಲ್ ಸಂಸ್ಥೆ 10 ದಿನದೊಳಗೆ ಜಿಲ್ಲೆಯಲ್ಲಿ ಒಂದು ಸಾವಿರ ಬೆಡ್ ಸೌಲಭ್ಯ ಇರುವ ಕೋವಿಡ್ ಕೇರ್ ಕೇಂದ್ರ ಆರಂಭಿಸಬೇಕು. ಇಲ್ಲದಿದ್ದರೆ ಬಳ್ಳಾರಿಯಿಂದ ಜಿಂದಾಲ್‌ವರೆಗೆ ಪಾದಯಾತ್ರೆ ಕೈಗೊಂಡು ಧರಣಿ ನಡೆಸುವುದಾಗಿ ಶಾಸಕ ಜಿ.ಸೋಮಶೇಖರರೆಡ್ಡಿ ಎಚ್ಚರಿಕೆ ನೀಡಿದರು.

    ಜಿಲ್ಲೆಯಲ್ಲಿ ಕರೊನಾ ಸೋಂಕಿತರ ಸಂಖ್ಯೆ ನಿತ್ಯ ಹೆಚ್ಚಳವಾಗುತ್ತಿದ್ದು, ಆಸ್ಪತ್ರೆಗಳಲ್ಲಿ ಬೆಡ್‌ಗಳ ಕೊರತೆಯಾಗುತ್ತಿದೆ. ಜಿಲ್ಲೆಯಲ್ಲಿ ಸಕಲ ಸೌಲಭ್ಯಗಳನ್ನು ಪಡೆದು ಲಾಭ ಗಳಿಸುತ್ತಿರುವ ಜಿಂದಾಲ್ ಸಂಸ್ಥೆ ಇಂತಹ ಸಂದರ್ಭದಲ್ಲಿ ಜನರ ನೆರವಿಗೆ ಧಾವಿಸದಿರುವುದು ವಿಷಾದನೀಯ ಎಂದು ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

    ಜಿಲ್ಲೆಯ ಗಣಿ ಮಾಲೀಕರು ಕೂಡ ಎರಡು ಸಾವಿರ ಬೆಡ್‌ಗಳ ಕೋವಿಡ್ ಕೇರ್ ಸೆಂಟರ್ ವ್ಯವಸ್ಥೆ ಮಾಡಬೇಕು. ಖಾಸಗಿ ಆಸ್ಪತ್ರೆಗಳು ಶೇ.50 ಬೆಡ್‌ಗಳನ್ನು ಕರೊನಾ ಸೋಂಕಿತರಿಗಾಗಿ ಮೀಸಲಿಡಬೇಕು. ನಗರದ ಜನರ ಅನುಕೂಲಕ್ಕಾಗಿ ವೆಂಟಿಲೇಟರ್ ಸೌಲಭ್ಯ ಇರುವ ಎರಡು ಆಂಬುಲೆನ್ಸ್‌ಗಳನ್ನು ನೀಡಲು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ್ ರೇವೂರ್ ಹಾಗೂ ಕಾರ್ಯದರ್ಶಿ ಡಾ.ಎನ್.ವಿ.ಪ್ರಸಾದ್ ಸಮ್ಮತಿಸಿದ್ದು ಎರಡು ವಾರದಲ್ಲಿ ಬರಲಿವೆ ಎಂದು ತಿಳಿಸಿದರು.

    ಜಿಲ್ಲೆಯಲ್ಲಿ ಕರೊನಾ ವೇಗವಾಗಿ ಹರಡುತ್ತಿರುವುದರಿಂದ ಜಿಲ್ಲಾಡಳಿತ ಎರಡು ವಾರ ಸಂಪೂರ್ಣ ಲಾಕ್‌ಡೌನ್ ಘೋಷಿಸಬೇಕು. ಲಾಕ್‌ಡೌನ್‌ಗೂ ಮುನ್ನ ಜನರು ಪಡಿತರ ಮತ್ತು ತರಕಾರಿ ಖರೀದಿ ಮಾಡಲು ವ್ಯವಸ್ಥೆ ಮಾಡಬೇಕು. ಸಂಪೂರ್ಣ ಲಾಕ್‌ಡೌನ್ ಮಾಡಿದಾಗ ಕರೊನಾ ವೇಗಕ್ಕೆ ಕಡಿವಾಣ ಬೀಳಬಹುದು ಎಂದು ಶಾಸಕ ಸೋಮಶೇಖರರೆಡ್ಡಿ ಅಭಿಪ್ರಾಯಪಟ್ಟರು. ಬುಡಾ ಅಧ್ಯಕ್ಷ ದಮ್ಮೂರು ಶೇಖರ್, ರಾಬಕೊ ಹಾಲು ಒಕ್ಕೂಟದ ನಿರ್ದೇಶಕ ವೀರಶೇಖರರೆಡ್ಡಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts