More

    ಕರೊನಾ ನಿಯಂತ್ರಣ ಎಲ್ಲರ ಜವಾಬ್ದಾರಿ

    ರಾಯಬಾಗ: ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಂದಷ್ಟೇ ಕರೊನಾ ಸೋಂಕು ನಿಯಂತ್ರಿಸಲು ಸಾಧ್ಯವಿಲ್ಲ. ಸಮಾಜದ ಪ್ರತಿಯೊಬ್ಬರು ತಮ್ಮ ಜವಾಬ್ದಾರಿ ಅರಿತು ಸರ್ಕಾರದ ಆದೇಶ ಪಾಲಿಸಿದರೆ ಕರೊನಾ ಸೋಂಕಿನಿಂದ ದೂರವಿರಬಹುದಾಗಿದೆ ಎಂದು ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಹೇಳಿದರು.

    ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.
    ಕರೊನಾ ವಿರುದ್ಧ ಹೋರಾಡಲು ದೇಶದ ಪ್ರತಿಯೊಬ್ಬ ಪ್ರಜೆಯು ಮನೆಯಲ್ಲಿದ್ದು, ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು. ಸರ್ಕಾರ ಜಾರಿಗೆ ತಂದಿರುವ ಲಾಕ್‌ಡೌನ್ ಕಡ್ಡಾಯವಾಗಿ ಪಾಲನೆ ಮಾಡಬೇಕು ಎಂದರು. ಉದ್ಯೋಗ ಅರಿಸಿ ಮಹಾರಾಷ್ಟ್ರಕ್ಕೆ ತೆರಳಿದ್ದ ಕೂಲಿಕಾರ್ಮಿಕರು ಗಡಿಭಾಗದ ಒಳದಾರಿಗಳ ಮೂಲಕ ಬರುತ್ತಿದ್ದು, ಅವರನ್ನು ತಪಾಸಣೆಗೆ ಒಳಪಡಿಸಲು ಪೊಲೀಸ್, ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂದರು.

    ಶಾಸಕ ಡಿ.ಎಂ. ಐಹೊಳೆ ಮಾತನಾಡಿ, ರೈತರು ಬೆಳೆದ ತರಕಾರಿ, ಹಣ್ಣುಗಳನ್ನು ಬೇರೆ ಕಡೆಗೆ ಮಾರಾಟ ಮಾಡಲು ಪೊಲೀಸ್ ಇಲಾಖೆಯಿಂದ ಪರವಾನಗಿ ಪಾಸ್ ಪಡೆಯಬೇಕು. ತರಕಾರಿ ಕೊಳ್ಳುವಾಗ ಮುಗಿಬಿದ್ದು ಗದ್ದಲ ಮಾಡದೇ ಪ್ರತಿಯೊಬ್ಬರು 6 ಅಡಿ ಅಂತರ ಕಾಯ್ದುಕೊಳ್ಳಬೇಕು ಎಂದರು.

    ತಹಸೀಲ್ದಾರ್ ಚಂದ್ರಕಾಂತ ಭಜಂತ್ರಿ ಅವರು ತಾಲೂಕಿನಾದ್ಯಂತ ಕರೊನಾ ಸೋಂಕು ನಿಯಂತ್ರಿಸಲು ಕೈಕೊಂಡ ಕಾರ್ಯಗಳ ಮತ್ತು ಅವುಗಳ ನಿರ್ವಹಣೆ ಬಗ್ಗೆ ವಿವರಿಸಿದರು. ಸಿಪಿಐ ಕೆ.ಎಸ್. ಹಟ್ಟಿ ಮಾತನಾಡಿ, ಅನವಶ್ಯಕವಾಗಿ ಸುತ್ತಾಡುವ 30 ಜನರ ಮೇಲೆ ಪ್ರಕರಣ ದಾಖಲಿಸಿಕೊಂಡು, ಅವರ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ. ಇನ್ನು ಮುಂದೆ ಯಾರಾದರೂ ಹೊರ ಬಂದರೆ ಅವರ ವಿರುದ್ಧ ಅತ್ಯಂತ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

    ಸಭೆಯಲ್ಲಿ ಉಪವಿಭಾಗಾಧಿಕಾರಿ ರವಿ ಕರಲಿಂಗನವರ, ತಾಲೂಕು ಪಂಚಾಯಿತಿ ಇಒ ಪ್ರಕಾಶ ವಡ್ಡರ, ತಾಪಂ ಅಧ್ಯಕ್ಷೆ ಸುಜಾತಾ ಪಾಟೀಲ, ತಾಲೂಕು ವೈದ್ಯಾಧಿಕಾರಿ ಡಾ. ಎಸ್.ಎಸ್. ಬಾನೆ, ಇತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts