More

    ಕರಾವಳಿಯಲ್ಲಿಲ್ಲ ಕರೊನಾ ಲಕ್ಷಣ

    ಮಂಗಳೂರು: ಕರೊನಾ ಶಂಕೆ ದೃಢಪಡಿಸಲು ದಕ್ಷಿಣ ಕನ್ನಡ ಜಿಲ್ಲೆಯಿಂದ ಬೆಂಗಳೂರಿನ ಪ್ರಯೋಗಾಲಯಕ್ಕೆ ಶನಿವಾರ ಕಳುಹಿಸಿದ ಎಲ್ಲ ಎಂಟು ಜನ ಅಂತಾರಾಷ್ಟ್ರೀಯ ಪ್ರಯಾಣಿಕರು ಹಾಗೂ ರೋಗಿಗಳ ಗಂಟಲು ಸ್ರಾವದ ಮಾದರಿಗಳ ಫಲಿತಾಂಶ ಭಾನುವಾರ ಲಭಿಸಿದ್ದು, ಯಾರಲ್ಲೂ ರೋಗ ಇಲ್ಲ ಎಂಬುದು ಖಚಿತವಾಗಿದೆ.

    ವಿಮಾನ ನಿಲ್ದಾಣ, ನವಮಂಗಳೂರು ಬಂದರು ಸಹಿತ ವಿವಿಧೆಡೆಗಳಲ್ಲಿ ಭಾನುವಾರ 377 ಜನರ ಸ್ಕ್ರೀನಿಂಗ್ ನಡೆಸಲಾಗಿದ್ದು, ಶಂಕಿತ 11 ಮಂದಿಯ ಮಾದರಿಗಳನ್ನು ಬೆಂಗಳೂರಿಗೆ ಕಳುಹಿಸಲಾಗಿದೆ. ಒಂಬತ್ತು ಮಂದಿಯನ್ನು ಚಿಕಿತ್ಸೆಗಾಗಿ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಇಲಾಖೆ ಮಾರ್ಗಸೂಚಿ ಪ್ರಕಾರ 106 ಜನರು ಮನೆಯಲ್ಲೇ ವೈದ್ಯಾಧಿಕಾರಿಗಳ ನಿಗಾದಲ್ಲಿದ್ದಾರೆ.
    ಚಿತ್ರಮಂದಿರ, ಮಾಲ್ ಬಂದ್ ಸಹಿತ ಕೆಲವು ವಿಷಯಗಳನ್ನು ಹೊರತುಪಡಿಸಿದರೆ ಮಂಗಳೂರು ನಗರದ ದಿನಚರಿಯಲ್ಲಿ ಭಾನು ವಾರ ಹೆಚ್ಚಿನ ವ್ಯತ್ಯಾಸ ಕಂಡುಬರಲಿಲ್ಲ. ನೆಹರು ಮೈದಾನದಲ್ಲಿ ಕ್ರಿಕೆಟ್ ಲೀಗ್ ಪಂದ್ಯಾಟ ನಡೆಯುತ್ತಿತ್ತು. ಸಾಮಾನ್ಯವಾಗಿ ಭಾನುವಾರ ಪುರಭವನ, ಸೆಂಟ್ರಲ್ ಮಾರುಕಟ್ಟೆ, ಸ್ಟೇಟ್‌ಬ್ಯಾಂಕ್ ಸಹಿತ ನಗರದ ವಿವಿಧೆಡೆ ಭಾನುವಾರ ನಡೆಯುವ ಬೀದಿಬದಿಯ ವ್ಯಾಪಾರ ಎಂದಿನಂತೆ ಜೋರಾಗಿ ನಡೆಯುತ್ತಿತ್ತು. ಇತರ ಭಾನುವಾರಗಳಿಗೆ ಹೋಲಿಸಿದರೆ ಗ್ರಾಹಕರೇ ಸ್ವಲ್ಪ ವಿರಳ. ಕದ್ರಿ ಪಾರ್ಕ್‌ನಲ್ಲಿ ಜನ ಓಡಾಟವಿತ್ತು. ಮಣ್ಣಗುಡ್ಡೆ ಪಾರ್ಕ್ ಬಂದ್ ಆಗಿತ್ತು. ಮೀನು ಮಾರುಕಟ್ಟೆ ಸಹಜವಾಗಿತ್ತು.

    ದೇವರಿಗೆ ಮೊರೆ: ಸರ್ಕಾರ, ಸಂಬಂಧಿಸಿದ ಇಲಾಖೆಗಳ ಪ್ರಯತ್ನದ ನಡುವೆಯೇ ವಿವಿಧ ಧರ್ಮಗಳ ಜನರು ಕರೊನಾ ಆತಂಕದಿಂದ ಮುಕ್ತಿ ಕೋರಿ ದೇವರಿಗೆ ವಿಶೇಷ ಸಾಮೂಹಿಕ ಪ್ರಾರ್ಥನೆ ನಡೆಸುವುದು ಕಂಡುಬಂದಿದೆ. ಕದ್ರಿ ಶ್ರೀ ಮಂಜುನಾಥ ದೇವರ ಸನ್ನಿಧಿಯಲ್ಲಿ ಧನ್ವಂತರಿ ಪಾರಾಯಣ, ರುದ್ರ ಪಠಣ, ವಿಷ್ಣು ಸಹಸ್ರನಾಮ , ಸಾಮೂಹಿಕ ಪ್ರಾರ್ಥನೆ ನಡೆಯಿತು. ಇತರ ಕೆಲ ದೇವಾಲಯ, ಮಸೀದಿಗಳಲ್ಲೂ ಕಳೆದ ಕೆಲ ದಿನಗಳಿಂದ ವಿಶೇಷ ಪ್ರಾರ್ಥನೆ ನಡೆಯುತ್ತಿದೆ.

    ಹಾಸ್ಟೆಲ್‌ಗಳು ಪ್ರಮಾಣಪತ್ರ ಕೇಳುವಂತಿಲ್ಲ
    ಹಾಸ್ಟೆಲ್‌ಗಳು ಕೋವಿದ್ ಫ್ರೀ (ಕರೊನೊ ಇಲ್ಲ) ಎಂದು ಪ್ರಮಾಣಪತ್ರ ತರುವಂತೆ ಯಾರಿಗೂ ನಿರ್ದೇಶಿಸುವಂತಿಲ್ಲ ಎಂದು ಜಿಲ್ಲಾದಿಕಾರಿ ಸಿಂಧೂ ಬಿ.ರೂಪೇಶ್ ಎಚ್ಚರಿಸಿದ್ದಾರೆ. ಹಾಸ್ಟೆಲ್‌ಗಳಲ್ಲಿ ವಿದ್ಯಾರ್ಥಿಗಳು ರಜೆ ಮುಗಿಸಿಕೊಂಡು ಮರಳುವಾಗ ಕೋವಿದ್ ಫ್ರೀ ಪ್ರಮಾಣಪತ್ರ ತರುವಂತೆ ಸೂಚಿಸಲಾಗಿದೆ ಎನ್ನುವ ಕೆಲವು ದೂರುಗಳು ಬಂದಿವೆ. ಈ ರೀತಿ ಯಾರ ಮೇಲೂ ಒತ್ತಡ ಹೇರಲು ಅವಕಾಶವಿಲ್ಲ ಎಂದವರು ‘ವಿಜಯವಾಣಿ’ಗೆ ತಿಳಿಸಿದ್ದಾರೆ.

    ಭಾನುವಾರವೂ ಜಿಲ್ಲಾಡಳಿತ ಸಕ್ರಿಯ
    ಕರೊನಾ ಆತಂಕ ಹಿನ್ನೆಲೆಯಲ್ಲಿ ಭಾನುವಾರ ರಜಾದಿನವೂ ದ.ಕ.ಜಿಲ್ಲಾಡಳಿತ ವ್ಯವಸ್ಥೆ ಸಕ್ರಿಯವಾಗಿತ್ತು. ನಗರದ ಪ್ರಾದೇಶಿಕ ಸಾರಿಗೆ ಕಚೇರಿ ಆವರಣದ ಸಮೀಪವಿರುವ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಚೇರಿ ವಾರದ ಇತರ ದಿನಗಳಂತೆ ಕಾರ್ಯನಿರ್ವಹಿಸಿದೆ. ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ರಾಜೇಶ್ ಸಹಿತ ಎಲ್ಲ ಹಿರಿಯ ಅಧಿಕಾರಿಗಳು ಹಾಗೂ ಇತರ ಪ್ರಮುಖ ಸಿಬ್ಬಂದಿ ಕರ್ತವ್ಯ ನಿರ್ವಹಿಸಿದರು. ಎಂದಿನಂತೆ ಸಾಯಂಕಾಲ ಜಿಲ್ಲಾಧಿಕಾರಿ ಕಚೇರಿಯಲ್ಲಿ ಆರೋಗ್ಯ ಇಲಾಖೆ ಸಂಬಂಧಿಸಿದ ಸಭೆಯಲ್ಲಿ ಕರೊನಾ ಸಂಬಂಧಿಸಿ ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್ ಹಿರಿಯ ಅಧಿಕಾರಿಗಳಿಂದ ಮಾಹಿತಿ ಪಡೆದು ನಿರ್ದೇಶನ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts