More

    ದೆಹಲಿಯಲ್ಲಿ ಕರೊನಾ ಏರಿಕೆ; 14 ಮಕ್ಕಳು ಸಹಿತ 53 ಸೋಂಕಿತರು ವಿವಿಧ ಆಸ್ಪತ್ರೆಗೆ ದಾಖಲು

    ನವದೆಹಲಿ: ದೇಶದಲ್ಲಿ ಕರೊನಾ ಸಾಂಕ್ರಾಮಿಕತೆ ಕ್ಷೀಣಿಸುತ್ತಿರುವ ಹೊತ್ತಿನಲ್ಲೇ ದೆಹಲಿಯಲ್ಲಿ ಹೊಸದಾಗಿ 53 ಸೋಂಕಿತರು ಆಸ್ಪತ್ರೆಗೆ ದಾಖಲಾಗಿದ್ದು, ಇವರಲ್ಲಿ 14 ಮಕ್ಕಳೂ ಇರುವುದು ಆತಂಕಕ್ಕೆ ಕಾರಣವಾಗಿದೆ. ಬಹುತೇಕ ಮಕ್ಕಳಲ್ಲಿ ಅನ್ಯವ್ಯಾಧಿಗಳಿರುವುದು ಕಂಡುಬಂದಿದೆ. ಶನಿವಾರ ಬೆಳಿಗ್ಗೆ ವರೆಗೆ 14 ಕರೊನಾ ಸೋಂಕಿತ ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. 12 ಮಕ್ಕಳು ಕಲಾವತಿ ಶರಣ್ ಮಕ್ಕಳ ಆಸ್ಪತ್ರೆಗೆ (ಕೆಎಸ್​ಸಿಎಚ್) ದಾಖಲುಗೊಂಡಿದ್ದಾರೆ. ಕಳೆದ ಕೆಲವು ದಿನಳಿಂದ ರಾಷ್ಟ್ರ ರಾಜಧಾನಿಯಲ್ಲಿ ಕೋವಿಡ್ ಪ್ರಕರಣಗಳ ಏರಿಕೆಯಾಗುತ್ತಿದ್ದು ಶುಕ್ರವಾರ 366 ಪ್ರಕರಣ ಗಳು ದಾಖಲಾಗಿದ್ದವು.

    ಶೇಕಡ 27 ಮಕ್ಕಳು: ದೆಹಲಿಯ ಆಸ್ಪತ್ರೆಗಳಲ್ಲಿ ಈಗಿರುವ ಕರೊನಾ ರೋಗಿಗಳಲ್ಲಿ ಶೇಕಡ 27ರಷ್ಟು ಮಕ್ಕಳಿದ್ದಾರೆ ಎಂದು ಅಧಿಕೃತ ಅಂಕಿಸಂಖ್ಯೆ ಹೇಳಿದೆ. ಆಸ್ಪತ್ರೆಗಳಿಗೆ ದಾಖಲಾಗಿರುವ 14 ಮಕ್ಕಳಲ್ಲಿ 12 ಚಿಣ್ಣರು ಕಲಾವತಿ ಶರಣ್ ಆಸ್ಪತ್ರೆ, ತಲಾ ಒಂದು ಮಗು ಇಂದ್ರಪ್ರಸ್ಥ ಅಪೋಲೊ ಮತ್ತು ಮಧುಕರ್ ರೈನ್​ಬೋ ಮಕ್ಕಳ ಆಸ್ಪತ್ರೆಯಲ್ಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕರೊನಾ ಪರಿಸ್ಥಿತಿ ಬಗ್ಗೆ ಕಳವಳಪಡುವ ಅಗತ್ಯವಿಲ್ಲ ಎಂದು ದೆಹಲಿ ಸರ್ಕಾರ ಹೇಳಿದ್ದರೂ ದೆಹಲಿಯ ಶಿಕ್ಷಣ ನಿರ್ದೇಶನಾಲಯ ಶುಕ್ರವಾರ ವಿದ್ಯಾರ್ಥಿಗಳಿಗಾಗಿ ಮಾರ್ಗಸೂಚಿಯೊಂದನ್ನು ಹೊರಡಿಸಿದೆ. ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುವುದು ಅಗತ್ಯವಾದರೂ ಶಾಲೆಗಳನ್ನು ಮುಚ್ಚುವುದು ಕೊನೆಯ ಆಯ್ಕೆಯಾಗಿದೆ ಎಂದು ನಿರ್ದೇಶನಾಲಯ ಹೇಳಿದೆ. ಅಗತ್ಯ ಬಿದ್ದರೆ ಭಾಗಶಃ ಮುಚ್ಚಲಾಗುತ್ತದೆ ಎಂದು ಉಪ ಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಹೇಳಿದ್ದಾರೆ.

    ಮಕ್ಕಳಿಗೆ ಕರೊನಾ ಸೋಂಕು ತಗಲಿದರೂ ಅದು ಸೌಮ್ಯವಾಗಿರುತ್ತದೆ, ಸಾಂಕೇತಿಕ ಚಿಕಿತ್ಸೆಯಿಂದ ಅವರು ಗುಣಮುಖರಾಗುತ್ತಾರೆ ಎನ್ನುವುದು ಹಿಂದಿನ ಅಲೆಗಳಿಂದ ಸ್ಪಷ್ಟವಾಗಿ ಗೊತ್ತಾಗಿದೆ. ಆದ್ದರಿಂದ ಕಳವಳಪಡುವ ಅಗತ್ಯವಿಲ್ಲ.

    | ರಣದೀಪ್ ಗುಲೇರಿಯಾ ಏಮ್ಸ್​ ನಿರ್ದೇಶಕ

    ಐಐಎಸ್​ಸಿಯಿಂದ ತಾಪ-ಸ್ಥಿರ ಲಸಿಕೆ

    ತಾಪ-ಸ್ಥಿರವಾದ (ಹೀಟ್-ಸ್ಟೇಬಲ್) ಕೋವಿಡ್ ಲಸಿಕೆಯೊಂದನ್ನು ಭಾರತದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ಅದು ಡೆಲ್ಟಾ ಮತ್ತು ಒಮಿಕ್ರಾನ್ ಸಹಿತ ಹಲವು ಕರೊನಾವೈರಸ್ ಪ್ರಭೇದಗಳಿಗೆ ಪರಿಣಾಮಕಾರಿ ಆಗಿರುವುದು ಇಲಿಗಳಲ್ಲಿ ನಡೆಸಿದ ಪ್ರಯೋಗಗಳಿಂದ ತಿಳಿದು ಬಂದಿದೆ. ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್​ಸಿ) ಮತ್ತು ಬಯೋಟೆಕ್ ಸ್ಟಾರ್ಟ್​ಅಪ್ ಕಂಪನಿ ಮಿನ್​ವ್ಯಾಕ್ಸ್ ಈ ಲಸಿಕೆಯನ್ನು ಅಭಿವೃದ್ಧಿಪಡಿಸುತ್ತಿದೆ. ಆಸ್ಟ್ರೇಲಿಯಾದ ಕಾಮನ್ವೆಲ್ತ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರೀಸರ್ಚ್ ಆರ್ಗನೈಸೇಶನ್​ನ ಸಂಶೋಧಕರೂ ಈ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದಾರೆ.

    ಗುಣಮುಖರಲ್ಲಿ ಹಲವು ಸಮಸ್ಯೆ: ಕರೊನಾ ಸೋಂಕಿನಿಂದ ಚೇತರಿಸಿ ಕೊಂಡವರಲ್ಲಿ ಹಲವು ತಿಂಗಳ ನಂತರ ಉಸಿರಾಟ ಹಾಗೂ ಕಣ್ಣಿನ ತೊಂದರೆ, ಮಾಂಸಖಂಡಗಳ ದೌರ್ಬಲ್ಯ, ಬುದ್ಧಿಮಾಂದ್ಯತೆ, ತೂಕ ಕಳೆದುಕೊಳ್ಳುವಿಕೆ, ಏಕಾಗ್ರತೆ ಕೊರತೆ ಮೊದಲಾದ ಸಮಸ್ಯೆಗಳು ಸಾಮಾನ್ಯವಾಗಿ ಕಂಡುಬರುತ್ತವೆ ಎಂದು ಅಧ್ಯಯನವೊಂದನ್ನು ಉಲ್ಲೇಖಿಸಿರುವ ಆರೋಗ್ಯ ತಜ್ಞರು ಹೇಳಿದ್ದಾರೆ.

    ಸೌಮ್ಯ ಸ್ವರೂಪ, ಗಾಬರಿ ಬೇಡ

    ಶಾಲೆಗಳು ಪುನರಾರಂಭಗೊಂಡಂತೆ ಮಕ್ಕಳಲ್ಲಿ ಕರೊನಾ ಸೋಂಕು ಏರಿಕೆಯಾಗುತ್ತಿದ್ದರೂ ಗಾಬರಿಪಡಬೇಕಾಗಿಲ್ಲ ಎಂದು ಆರೋಗ್ಯ ತಜ್ಞರು ಹೇಳಿದ್ದಾರೆ. ಬಹುತೇಕ ಮಕ್ಕಳಲ್ಲಿ ಸೌಮ್ಯ ಸ್ವರೂಪದ ಸೋಂಕಿದ್ದು ಚಿಕಿತ್ಸೆಯೊಂದಿಗೆ ಚೇತರಿಸಿಕೊಳ್ಳುವುದರಿಂದ ಚಿಂತೆ ಪಡಬೇಕಿಲ್ಲ ಎಂದು ತಜ್ಞರು ಹೇಳಿದ್ದಾರೆ. ಆದರೆ, ಲಸಿಕೆ ಪಡೆಯಲು ಅರ್ಹರಾದ ಮಕ್ಕಳಿಗೆ ವ್ಯಾಕ್ಸಿನ್ ನೀಡಬೇಕು ಎಂದವರು ಸಲಹೆ ಮಾಡಿದ್ದಾರೆ. ಸತತವಾಗಿ ಹಾಗೂ ಸರಿಯಾಗಿ ಮಾಸ್ಕ್ ಧರಿಸುವುದು, ಸ್ಯಾನಿಟೈಸೇಷನ್ ಮತ್ತು ಕೈ ತೊಳೆಯುವ ನಿಯಮಗಳನ್ನು ಜಾರಿ ಮಾಡುವುದು ಇವುಗಳು ಕೊವಿಡ್ ನಿಯಂತ್ರಣ ನಿಯಮಾವಳಿಗಳಲ್ಲಿ ಮಹತ್ವದ ಅಂಶಗಳಾಗಿವೆ ಎಂಬುದು ತಜ್ಞರ ಅಭಿಪ್ರಾಯವಾಗಿದೆ. ಅರ್ಹ ಪ್ರಾಯದ ಮಕ್ಕಳು ವ್ಯಾಕ್ಸಿನ್ ಪಡೆಯದಿದ್ದರೂ ಅವರಲ್ಲಿ ತೀವ್ರ ರೀತಿಯ ಸೋಂಕು ತಗಲುವ ಅವಕಾಶ ತುಂಬಾ ಕಡಿಮೆ ಎಂದು ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯ (ಏಮ್್ಸ) ನಿರ್ದೇಶಕ ರಣದೀಪ್ ಗುಲೇರಿಯಾ ಹೇಳಿದ್ದಾರೆ. ಶಾಲೆಗಳು ಮುಚ್ಚಿದ್ದಾಗಲೂ ಶೇಕಡ 70ರಿಂದ ಶೇಕಡ 90ರಷ್ಟು ಮಕ್ಕಳು ಈಗಾಗಲೇ ಸೋಂಕಿತರಾಗಿದ್ದರೆಂಬುದು ಅನೇಕ ಸೆರೊಪ್ರಿವಲೆನ್ಸ್ ಸಮೀಕ್ಷೆಗಳಿಂದ ಗೊತ್ತಾಗಿತ್ತು ಎಂದು ಸಾಂಕ್ರಾಮಿಕ ರೋಗ ಚಿಕಿತ್ಸಾ ತಜ್ಞ ಹಾಗೂ ಆರೋಗ್ಯ ವಿಶೇಷಜ್ಞ ಚಂದ್ರಕಾಂತ್ ಲಹಾರಿಯಾ ಹೇಳಿದ್ದಾರೆ. ಈಗ ಶಾಲೆ ಶುರುವಾದ ನಂತರ ಮಕ್ಕಳಲ್ಲಿ ಸೋಂಕು ತಗಲುತ್ತಿರುವುದು ಗಮನ ಸೆಳೆಯುತ್ತಿದೆ ಅಷ್ಟೇ ಎಂದವರು ಹೇಳಿದ್ದಾರೆ.

    ಹುಬ್ಬಳ್ಳಿಯಲ್ಲಿ ಪೊಲೀಸ್ ಠಾಣೆ ಎದುರೇ ಕಲ್ಲು ತೂರಾಟ; ವಾಹನ ಪಲ್ಟಿ ಮಾಡಿ ಆಕ್ರೋಶ, ಪರಿಸ್ಥಿತಿ ಉದ್ವಿಗ್ನ..

    ಬಾಲಿವುಡ್​ ಮೇಲೆ ಅಣುಬಾಂಬ್​!; ನಿರ್ದೇಶಕ ರಾಮ್​ಗೋಪಾಲ್​ ವರ್ಮಾ ಹೀಗಂದಿದ್ದೇಕೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts