More

    ಕೋವಿಡ್ ಮೂರು ಪಟ್ಟು ಉಬ್ಬರ: ಜಿಲ್ಲಾಡಳಿತಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇಡಲು ಸರ್ಕಾರದ ಗಮನ

    ಬೆಂಗಳೂರು: ಕರೊನಾ ಮೂರನೇ ಅಲೆ ಇನ್ನಷ್ಟು ಉಬ್ಬರವಾಗಲಿದ್ದು, ಹಳ್ಳಿಗಳಿಗೆ ದಾಂಗುಡಿ ಇಡುವ ಮುನ್ನ ಜಿಲ್ಲಾಡಳಿತ ಎಚ್ಚೆತ್ತು ಪರಿಸ್ಥಿತಿ ಎದುರಿಸಲು ಸಜ್ಜಾಗಬೇಕೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಾಕೀತು ಮಾಡಿದ್ದಾರೆ.

    ಈವರೆಗೆ ಬೆಂಗಳೂರು ನಗರ ಮತ್ತು ಕೆಲವು ಆಯ್ದ ಜಿಲ್ಲೆಗಳಿಗೆ ಸೀಮಿತವಾಗಿದ್ದ ಸಿಎಂ ಅವಲೋಕನ ಸಭೆ ಇದೀಗ ರಾಜ್ಯದ 18 ಜಿಲ್ಲೆಗಳಿಗೆ ವಿಸ್ತರಣೆಯಾಗಿದೆ. ತಜ್ಞರು ನೀಡಿದ ಎಚ್ಚರಿಕೆ ಪ್ರಕಾರ ರಾಜ್ಯದಲ್ಲಿ ದೈನಂದಿನ ಪ್ರಕರಣ ಸಂಖ್ಯೆ ಮೂರು ಪಟ್ಟು ಹೆಚ್ಚಾಗಿ ಗರಿಷ್ಠ 1.20 ಲಕ್ಷ ಕೇಸ್‌ಗಳು ತಲುಪುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಗರಿಷ್ಠ ಆರೋಗ್ಯ ಸೌಲಭ್ಯ ಹೊಂದಿರದ ಪ್ರದೇಶಗಳಲ್ಲಿ ಮುಂಜಾಗ್ರತಾ ತಯಾರಿ ಮಾಡಿಕೊಳ್ಳುವುದು, ಭಯ ನಿವಾರಣೆ ಮಾಡುವುದು, ಅನಗತ್ಯ ಭೀತಿ ತೊಡೆದು ಹಾಕುವ ಅಜೆಂಡಾವನ್ನು ಜಿಲ್ಲಾಡಳಿಗಳಿಗೆ ನಿಗದಿ ಮಾಡಿದ್ದಾರೆ.

    ಮಂಗಳವಾರ 18 ಜಿಲ್ಲೆಗಳ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಆರೋಗ್ಯ ಸಚಿವ ಡಾ.ಕೆ.ಸುಧಾಕರ್, ಪ್ರತಿ ಜಿಲ್ಲೆಯ ಕರೊನಾ ಪರಿಸ್ಥಿತಿ ಮತ್ತು ಪೂರ್ವಸಿದ್ಧತೆ ತಯಾರಿ ಕುರಿತು ಮಾಹಿತಿ ಪಡೆದು ಸಲಹೆ ಸೂಚನೆ ನೀಡಿದರು.

    ಒಂದೆರೆಡು ವಾರದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾದರೂ ವ್ಯವಸ್ಥೆ ಸುಸ್ಥಿರವಾಗಿರಬೇಕು. ಈ ಹಿನ್ನೆಲೆಯಲ್ಲಿ ವಾರ್ ರೂಂ, ಫೀವರ್ ಕ್ಲಿನಿಕ್, ಕೋವಿಡ್ ಕೇರ್ ಸೆಂಟರ್ ತಕ್ಷಣವೇ ಸ್ಥಾಪನೆ ಮಾಡಲು ನಿರ್ದೇಶನ ನೀಡಿದ್ದಾರೆ.

    ಶೇ. 94ರಷ್ಟು ಸೋಂಕಿತರು ಹೋಮ್ ಐಸೋಲೇಷನ್ ಇರುವುದರಿಂದ ಮನೆಯವರಿಗೆ ಹರಡದಂತೆ ಕ್ರಮ ಕೈಗೊಳ್ಳಬೇಕು. ಸೋಂಕಿತರ ಮನೆಯವರಿಗೂ ಪರೀಕ್ಷೆ ಮಾಡಿ ಅಗತ್ಯವಿದ್ದರೆ ಚಿಕಿತ್ಸೆ ನೀಡಲು ಸೂಚಿಸಲಾಯಿತು. ಹಾಗೆಯೇ ಬೆಂಗಳೂರಿನಲ್ಲಿ ಖಾಸಗಿ ಹಾಗೂ ಸರ್ಕಾರಿ ಒಪಿಡಿಗಳನ್ನು ಬಲಪಡಿಸಲು ಹಾಗೂ ಜನಸಂಖ್ಯೆಗೆ ಅನುಗುಣವಾಗಿ ಹೊಸ ಒಪಿಡಿಗಳನ್ನು ತೆರೆಯಲು ಸಿಎಂ ಸೂಚನೆ ನೀಡಿದರು.
    ಕೆಲಸಕ್ಕಾಗಿ ಹೊರ ರಾಜ್ಯಗಳಿಂದ ಕಾರ್ಮಿಕರನ್ನು ಕರೆತರುವ ರಾಜ್ಯದ ಕೈಗಾರಿಕೆಗಳಿಗೆ ಕಾರ್ಮಿಕರ ಲಸಿಕೆ ಹಾಗೂ ಚಿಕಿತ್ಸೆ ಕುರಿತು ವಿಶೇಷ ಎಸ್‌ಒಪಿ ರೂಪಿಸುವುದಕ್ಕೂ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

    ಸಭೆ ಬಳಿಕ ಮಾಧ್ಯಮಗಳಿಗೆ ಮಾಹಿತಿ ನೀಡಿದ ಆರೋಗ್ಯ ಸಚಿವ ಸುಧಾಕರ್, ಅತಿ ಕೆಟ್ಟ ಪರಿಸ್ಥಿತಿಯಲ್ಲಿ ದಿನವೊಂದಕ್ಕೆ 1.2 ಲಕ್ಷ ಕೇಸ್‌ಗಳು ಬರಬಹುದು ಎಂದು ತಾಂತ್ರಿಕ ಸಲಹಾ ಸಮಿತಿಯ ತಜ್ಞರು ವರದಿ ಕೊಟ್ಟಿದ್ದಾರೆ. ಸಾಧಾರಣ ಪರಿಸ್ಥಿತಿಯಲ್ಲಿ ದಿನವೊಂದಕ್ಕೆ 70-80 ಸಾವಿರ ಕೇಸ್‌ಗೆ ಬಂದು ನಿಲ್ಲುತ್ತೆ ಎಂಬ ವರದಿ ಇದೆ. ಈಗಾಗಲೇ 40 ಸಾವಿರ ಕೇಸ್ ತಲುಪಿದ್ದು ತಜ್ಞರು ಕೊಟ್ಟಿರುವ ವರದಿ ಪ್ರಕಾರವೇ ಕೇಸ್ ಬರುತ್ತಿದೆ ಎಂದರು.

    ಎರಡನೇ ಅಲೆಗೆ ಹೋಲಿಕೆ ಮಾಡಿದರೆ ಮೂರನೇ ಅಲೆಯಲ್ಲಿ ಸೋಂಕು ಹರಡುವಿಕೆ ಬಹಳ ವೇಗವಾಗಿದೆ. ನಾಲ್ಕರಿಂದ ಐದುಪಟ್ಟು ವೇಗವಾಗಿ ಹರಡುತ್ತದೆ. ವೇಗವಾಗಿ ಹರಡಿದ ಹಾಗೆಯೇ ಅಷ್ಟೇ ವೇಗವಾಗಿ ಕಡಿಮೆ ಆಗುವುದನ್ನು ನೋಡಿದ್ದೇವೆ. ಇಲ್ಲು ಕೂಡ ಹಾಗೆಯೇ ಆಗುತ್ತೆ ಎಂದು ವರದಿಯಲ್ಲಿ ಹೇಳಿದ್ದಾರೆ. ಫೆಬ್ರವರಿ ಎರಡು ಅಥವಾ ಮೂರನೇ ವಾರದಲ್ಲಿ ಕೇಸ್ ಕಡಿಮೆ ಆಗುತ್ತ ಹೋಗುತ್ತದೆ ಎಂದು ಸ್ಪಷ್ಟಪಡಿಸಿದರು.

    ಐಸಿಎಂಆರ್ ಮಾರ್ಗಸೂಚಿಯ ಪ್ರಕಾರ ಟೆಸ್ಟಿಂಗ್ ಮುಂದುವರಿಸಲಾಗುತ್ತದೆ. ಪ್ರತಿ ದಿನ 2ರಿಂದ 2.50 ಲಕ್ಷ ಟೆಸ್ಟ್ ಮಾಡಲಾಗುತ್ತಿದೆ. ಕೇಂದ್ರ ಸರ್ಕಾರ ಅನೇಕ ರಾಜ್ಯಗಳಿಗೆ ಟೆಸ್ಟ್ ಹೆಚ್ಚಿಸಲು ಸೂಚನೆ ಕೊಟ್ಟಿದೆ, ನಾವು ಸಹ ಹೆಚ್ಚು ಟೆಸ್ಟ್ ಮಾಡುವುದನ್ನು ಮುಂದುವರಿಸುತ್ತೇವೆ ಎಂದರು.

    60 ವರ್ಷ ಮೇಲ್ಪಟ್ಟವರ ಮೇಲೆ ಹೆಚ್ಚಿನ ಕಾಳಜಿವಹಿಸಬೇಕು. ಫ್ಲೂ ರೀತಿಯ ರೋಗ ಲಕ್ಷಣ (ಐಎಲ್‌ಐ) ಅಥವಾ ತೀವ್ರ ಉಸಿರಾಟದ ಸಮಸ್ಯೆ(ಸಾರಿ) ಇರುವವರಿಗೆ ಟೆಸ್ಟ್ ಮುಂದುವರಿಸಿ, ಪಾಸಿಟಿವಿಟಿ ಬರುವವರೆಗೆ ಚಿಂತೆ ಬೇಡ, ಕಾಳಜಿ ವಹಿಸಿ ಎಂದು ಜಿಲ್ಲೆಗಳಿಗೆ ಸೂಚನೆ ಕೊಡಲಾಗಿದೆ ಎಂದು ಸಚಿವರು ತಿಳಿಸಿದರು.

    ಪ್ರತಿ ಜಿಲ್ಲಾ ಕೇಂದ್ರದಲ್ಲಿ ವಾರ್ ರೂಂ ತಕ್ಷಣವೇ ತೆರೆಯಬೇಕು, ಗ್ರಾಮೀಣ ಪ್ರದೇಶದಲ್ಲಿ ವಾರ್ ರೂಮ್ ಸ್ಥಾಪಿಸಬೇಕು, ಇದರಿಂದ ಜನರಿಗೆ ಟೆಲಿ ಸಲಹೆ ಸಿಗುವಂತಾಗಬೇಕು. ಫೀವರ್ ಕೇಂದ್ರ ಸ್ಥಾಪಿಸುವ ಮೂಲಕ ಪಾಸಿಟಿವ್ ಬಂದವರು ನೇರವಾಗಿ ಆಸ್ಪತ್ರೆಗೆ ಹೋಗಬಾರದು ಎಂದು ತಿಳಿಸಲಾಗಿದೆ. ಸೋಂಕಿತರು ಹೆಚ್ಚಾದರೆ ಆತಂಕ, ಭಯ ಹೆಚ್ಚಾಗಿ ಅನಗತ್ಯ ಮತ್ತು ಚಿಕಿತ್ಸೆ ಅವಶ್ಯಕತೆ ಇಲ್ಲದಿದ್ದರೂ ದಾಖಲಾದರೆ ಅಗತ್ಯ ಇರುವವರಿಗೆ ವಂಚನೆ ಮಾಡಿದಂತಾಗುತ್ತದೆ. ಯಾರಿಗೂ ಚಿಕಿತ್ಸೆ ಕೈ ತಪ್ಪಬಾರದು. ಒಳ್ಳೆಯ ರೀತಿ ವ್ಯವಸ್ಥೆ ಮಾಡಬೇಕು ಎಂದು ಸೂಚನೆ ಕೊಡಲಾಗಿದೆ ಎಂದು ವಿವರಿಸಿದರು.

    ಹೋಮ್ ಐಸೊಲೇಷನ್ ಇದ್ದವರಿಗೆ ಕಿಟ್ ವ್ಯವಸ್ಥೆ ಮಾಡಿದ್ದು, ಪ್ರತಿ ಸೋಂಕಿತರ ಮನೆಗೇ ಕಳುಹಿಸಲಾಗುತ್ತದೆ. ಅಗತ್ಯ ಔಷಧ ಸಾಮಗ್ರಿಯನ್ನು ಜಿಲ್ಲೆಗಳಿಗೆ ಕಳುಹಿಸಿಕೊಡಲಾಗುತ್ತದೆ, ಅಲ್ಲಿಂದ ಪ್ಯಾಕೇಜ್ ಮಾಡಿ ಮನೆಗೆ ಕಳಿಸುತ್ತಾರೆ ಎಂದರು.
    ವೈದ್ಯರು ಹಾಗೂ ದಾದಿಯರ ನಡಿಗೆ ಹಳ್ಳಿಯ ಕಡೆಗೆ ಕಾರ್ಯಕ್ರಮ ಪುನರಾರಂಭಕ್ಕೆ ಸೂಚನೆ ಕೊಡಲಾಗಿದೆ. ಅವರು ಹೋದಂತಹ ಸಂದರ್ಭದಲ್ಲಿ ಪ್ಯಾರಾ ಮೀಟರ್ ರೀತಿ ಚಿಕಿತ್ಸೆಗೆ ಮಾರ್ಗದರ್ಶನ ಮಾಡಿ, ಆರೈಕೆ ಹೇಗಿದೆ ನೋಡುತ್ತಾರೆ ಎಂದು ಹೇಳಿದರು.
    ರಾಜ್ಯದಲ್ಲಿ 264 ಆಕ್ಸಿಜನ್‌ ಘಟಕ ಸ್ಥಾಪನೆಗೆ ಕ್ರಮಗಳಾಗಿದೆ. 222 ಘಟಕಗಳ ಸೇವೆಗೆ ಚಾಲನೆ ನೀಡಲಾಗಿದೆ. 17 ಸಿಎಸ್‌ಆರ್ ಅಡಿಯಲ್ಲಿ ಮಾಡಬೇಕಿತ್ತು, ಕಾರಣಾಂತರದಿಂದ ನಿಧಾನ ಮಾಡುತ್ತಿರುವುದರಿಂದ ಸರ್ಕಾರವೇ ಘಟಕ ಆರಂಭಿಸುತ್ತದೆ ಎಂದರು.

    ಕೋವಿಡ್ ಮೂರು ಪಟ್ಟು ಉಬ್ಬರ: ಜಿಲ್ಲಾಡಳಿತಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇಡಲು ಸರ್ಕಾರದ ಗಮನ

    ರಾಜ್ಯದಲ್ಲಿ ಪರೀಕ್ಷೆಗಳು ಹೆಚ್ಚಾಗಿರುವುದರಿಂದ ಪ್ರಕರಣ ಹೆಚ್ಚಿದ್ದರೂ ಪರಿಸ್ಥಿತಿ ನಿಭಾಯಿಸುವಲ್ಲಿ ಯಶಸ್ವಿಯಾಗಿದ್ದೇವೆ. ಮುನ್ನೆಚ್ಚರಿಕಾ ಕ್ರಮಗಳು ಉತ್ತಮವಾಗಿದ್ದರೆ ಕೋವಿಡ್ ಮೂರನೇ ಅಲೆ ಏರುಗತಿ ತಲುಪಿದರೂ ಆತಂಕ ಪಡದೆ ಯಶಸ್ವಿಯಾಗಿ ಮೂರನೇ ಅಲೆ ನಿಭಾಯಿಸಬಹುದು.
    | ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ


    ಜಿಲ್ಲೆಗಳಿಗೆ ತಕ್ಷಣದ ಗುರಿ

    1. ಪ್ರತಿ ಜಿಲ್ಲೆಯಲ್ಲೂ ಕಡ್ಡಾಯ ಕೋವಿಡ್ ವಾರ್ ರೂಂಗಳ ಸ್ಥಾಪನೆ
    2. ಹೆಚ್ಚು ಫೀವರ್ ಕ್ಲಿನಿಕ್, ಕೋವಿಡ್ ಕೇರ್ ಸೆಂಟರ್ ತೆರೆಯುವುದು
    3. ಪಾಸಿಟಿವ್ ಬಂದವರು ನೇರ ಆಸ್ಪತ್ರೆಗೆ ಹೋಗದಂತೆ ಕ್ರಮ.
    4. ಪ್ರಯೋಗಾಲಯದ ವರದಿ ಬಂದ ತಕ್ಷಣ ಟೆಲಿ ಟ್ರಯಾಜಿಂಗ್ ಮಾಡಬೇಕು.
    5. ಹೋಮ್‌ಐಸೋಲೇಷನ್ ಇದ್ದವರಿಗೆ ಮನೆಗೇ ಕಿಟ್ ರವಾನೆ
    6. ವೈದ್ಯರು, ದಾದಿಯರ ನಡಿಗೆ ಹಳ್ಳಿ ಕಡೆಗೆ ಪುನರಾರಂಭ
    7. ಟೆಲಿ ಸಲಹೆಗೆ ಒತ್ತು ನೀಡುವುದು
    8. ಹಿರಿಯರ ಬಗ್ಗೆ ವಿಶೇಷ ಕಾಳಜಿ ವಹಿಸುವುದು.
    9. ತಿಂಗಳ ಅಂತ್ಯದೊಳಗೆ ಲಸಿಕೆ ವಿತರಣೆ ರಾಜ್ಯ ಸರಾಸರಿ ತಲುಪಬೇಕು
    10. ಕೋ- ಮಾರ್ಬಿಡಿಟಿ ಇರುವವರನ್ನು ಗುರುತಿಸಿ, ಟೆಸ್ಟ್ಮಾಡಿ ಚಿಕಿತ್ಸೆ ನೀಡುವುದು
    11. ಮಕ್ಕಳ ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸೆಗೆ ಹೆಚ್ಚು ಒತ್ತು ನೀಡಬೇಕು

    ಹಳ್ಳಿಗಳಿಗೆ ಎಚ್ಚರಿಕೆ ಗಂಟೆ: ಬೆಂಗಳೂರು ಹೊರತು ಇತರ ಕಡೆಗಳಲ್ಲಿ ಈಗ ಕೋವಿಡ್ ಪ್ರಕರಣ ಹೆಚ್ಚಾಗುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿ ಸಹ ಕೇಸ್ ಹೆಚ್ಚಾಗುತ್ತಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಈ ಸಂದರ್ಭದಲ್ಲಿ ಜನತೆ ಯಾವ ರೀತಿ ನಡೆದುಕೊಳ್ಳಬೇಕು ಎಂಬ ಬಗ್ಗೆ ಎಚ್ಚರಿಕೆ ವಹಿಸುವ ಅಗತ್ಯವಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.

    ಪಾಸಿಟಿವಿಟಿ ರೇಟ್ ಹೆಚ್ಚಾಗಿದೆ. ಸಮಾಧಾನಕರ ಸಂಗತಿ ಎಂದರೆ ಆಸ್ಪತ್ರೆ ಸೇರುವವರ ಸಂಖ್ಯೆ ಕಡಿಮೆ ಇದೆ. ಸಾವಿನ ಸಂಖ್ಯೆ ಕಡಿಮೆ ಇದೆಯಾದರೂ ಸಾವು ಕೂಡ ಆಗುತ್ತಿದೆ ಎಂಬುದು ಗಮನದಲ್ಲಿರಲಿ. ಎರಡೂ ಲಸಿಕೆ ತೆಗೆದುಕೊಂಡಿರದವರ ಮೇಲೆ ಸೋಂಕಿನ ಪ್ರಭಾವ ಹೆಚ್ಚಾಗಿದೆ.
    | ಡಾ.ಕೆ.ಸುಧಾಕರ್ ಆರೋಗ್ಯ ಸಚಿವ


    ನಿರ್ಬಂಧ ಶುಕ್ರವಾರ ಫೈನಲ್: ವೀಕೆಂಡ್ ಕರ್ಫ್ಯೂ ತೆಗೆಯುವ ವಿಚಾರದ ಬಗ್ಗೆ ಗೊತ್ತಿಲ್ಲ, ಶುಕ್ರವಾರ ಸಿಎಂ ಸಭೆ ಕರೆದಿದ್ದಾರೆ. ಅಲ್ಲಿ ಎಲ್ಲರ ಅಭಿಪ್ರಾಯ ಪಡೆಯುತ್ತೇವೆ. ತಾಂತ್ರಿಕ ಸಲಹಾ ಸಮಿತಿಯವರ ಸಲಹೆ ಕೂಡ ಪಡೆಯಬೇಕಾಗುತ್ತೆ. ಅಂತಿಮವಾಗಿ ಸಿಎಂ ನಿರ್ಣಯ ಮಾಡುತ್ತಾರೆ ಎಂದು ಡಾ.ಸುಧಾಕರ್ ತಿಳಿಸಿದರು.

    ತದ್ವಿರುದ್ಧ ಹೇಳಿಕೆ ನೀಡುವವರಿಗೆ ಎಚ್ಚರಿಕೆ

    ಕೋವಿಡ್ ವಿಚಾರದಲ್ಲಿ ರಾಜ್ಯ, ಕೇಂದ್ರ ಸರ್ಕಾರ ಮಾರ್ಗಸೂಚಿ ಬಿಡುಗಡೆ ಮಾಡುತ್ತದೆ. ವಿಶ್ವ ಆರೋಗ್ಯ ಸಂಸ್ಥೆ, ಐಸಿಎಂಆರ್, ಕೇಂದ್ರದ ತಾಂತ್ರಿಕ ಸಲಹಾ ಸಮಿತಿ ಅಧಿಕೃತ ಸೂಚನೆ ಹೇಳಿಕೆ ನೀಡುತ್ತದೆ. ಇದಕ್ಕೆ ಭಿನ್ನವಾಗಿ ತಪ್ಪು ಮಾಹಿತಿ ಕೊಡುವುದು ಕಾನೂನಾತ್ಮಕವಾಗಿ ತಪ್ಪಾಗುತ್ತದೆ. ಇದು ವೈದ್ಯರಿಗೂ ಅನ್ವಯ. ಯಾರೂ ತಪ್ಪು ಮಾಹಿತಿ ನೀಡುವ ಕೆಲಸ ಮಾಡಬಾರದೆಂದು ಸುತ್ತೋಲೆ ಹೊರಡಿಸಲಾಗಿದೆ ಎಂದು ಆರೋಗ್ಯ ಸಚಿವರು ತಿಳಿಸಿದರು.

    ನಿರಾಸಕ್ತಿಗೆ ಸಿಎಂ ಬೇಸರ

    ಕರೊನಾದಿಂದ ದೊಡ್ಡ ಮಟ್ಟದಲ್ಲಿ ಜೀವಹಾನಿ ತಡೆಯಲು ಕಾರಣವಾಗಿರುವ ಲಸಿಕೆಯ ಮೂರನೇ ಡೋಸ್ ವಿತರಣೆ ಆರಂಭವಾಗಿದ್ದು, ಮುಂಚೂಣಿ ಕಾರ್ಯಕರ್ತರು ನಿರೀಕ್ಷಿತ ಪ್ರಮಾಣದಲ್ಲಿ ಪಡೆದುಕೊಳ್ಳದೇ ಇರುವುದಕ್ಕೆ ಸಿಎಂ ಹಾಗೂ ಆರೋಗ್ಯ ಸಚಿವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಫ್ರಂಟ್​ಲೈನ್ ವಾರಿಯರ್‌ಗಳ ಪೈಕಿ ಶೇ.39ರಷ್ಟು ಮಂದಿ ಮಾತ್ರ ಮೂರನೇ ಡೋಸ್ ಪಡೆದುಕೊಂಡಿದ್ದಾರೆ. ಇದು ತೃಪ್ತಿದಾಯಕವಾಗಿಲ್ಲ ಎಂದು ಖುದ್ದು ಆರೋಗ್ಯ ಸಚಿವ ಡಾ.ಸುಧಾಕರ್ ತಿಳಿಸಿದರು.

    ಹಾಗೆಯೇ ಮುಂದಿನ ವಾರ- ಹತ್ತು ದಿನದಲ್ಲಿ ಫ್ರಂಟ್‌ಲೈನ್ ವಾರಿಯರ್‌ಗಳಿಗೆ ಮೂರನೇ ಡೋಸ್ ಕೊಡಲು ಅಭಿಯಾನ ನಡೆಸುವುದಾಗಿ ಆರೋಗ್ಯ ಇಲಾಖೆ ಆಯುಕ್ತರು ಸಿಎಂಗೆ ಭರವಸೆ ನೀಡಿದ್ದಾರೆ.

    15ರಿಂದ 18 ವರ್ಷದವರಿಗೆ ನೀಡುತ್ತಿರುವ ಲಸಿಕೆ ಪ್ರಗತಿ ಶೇ.62ರಷ್ಟಾಗಿದೆ. ಕೆಲವು ಜಿಲ್ಲೆಗಳಲ್ಲಿ ಬಹಳ ಕಡಿಮೆ ಇದೆ. ಲಸಿಕೆ ವಿತರಣೆಗೆ ವೇಗ ನೀಡಲು ಸಭೆಯಲ್ಲಿ ಸೂಚನೆ ಕೊಡಲಾಗಿದೆ.

    ದೇವರ ತೇರೆಳೆದಿದ್ದಕ್ಕೆ ಬಿತ್ತು ಕೇಸು; ದೇವಸ್ಥಾನದ ಟ್ರಸ್ಟಿಗಳು, ಗ್ರಾಮದ ಹಿರಿಯರ ವಿರುದ್ಧ ಎಫ್​ಐಆರ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts