More

    ಅರ್ಧದಷ್ಟು ಕರೊನಾ ಮೂಲ ನಿಗೂಢ

    ಮಂಗಳೂರು: ಜಿಲ್ಲೆಯಲ್ಲಿ ನಿರಂತರ ಏರಿಕೆಯಲ್ಲಿರುವ ಕೋವಿಡ್-19 ಪ್ರಕರಣಗಳಲ್ಲಿ ಶೇ.50ಕ್ಕೂ ಅಧಿಕ ಮೂಲ ಪತ್ತೆಯಾಗದಿರುವುದು ಆರೋಗ್ಯ ಇಲಾಖೆಗೆ ಸವಾಲಾಗಿ ಪರಿಣಮಿಸಿದೆ.
    ಕಳೆದ 11 ದಿನಗಳಲ್ಲಿ ಸೋಂಕಿತರ ಪೈಕಿ 514 ಮಂದಿಗೆ ಎಲ್ಲಿಂದ ಸೋಂಕು ತಗುಲಿದೆ ಎನ್ನುವುದನ್ನು ನಿರ್ಧರಿಸುವುದು ಇನ್ನೂ ಸಾಧ್ಯವಾಗಿಲ್ಲ. ಇವರಲ್ಲಿ ಜ್ವರ, ಶೀತ, ಕೆಮ್ಮು, ತೀವ್ರ ಉಸಿರಾಟದ ಸಮಸ್ಯೆ(ಐಎಲ್‌ಐ, ಎಸ್‌ಎಆರ್‌ಐ)ಗಳಿಂದ ಆಸ್ಪತ್ರೆಗಳಿಗೆ ದಾಖಲಾದವರು, ರ‌್ಯಾಂಡಮ್ ಟೆಸ್ಟ್, ಇತರ ಸಮಸ್ಯೆಗಳಿಗೆ ಆಸ್ಪತ್ರೆಗಳಿಗೆ ದಾಖಲಾದವರ ಪರೀಕ್ಷೆ ನಡೆಸಿದಾಗ ಪಾಸಿಟಿವ್ ಬಂದವರೂ ಸೇರಿದ್ದಾರೆ. ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕ ಇಲ್ಲದವರಿಗೂ ಪಾಸಿಟಿವ್ ಬರುತ್ತಿದ್ದು, ಸಂಪರ್ಕದ ಮೂಲ ಪತ್ತೆ ಮಾಡಲು ಪ್ರತ್ಯೇಕ ವೈದ್ಯರ ತಂಡ ಕಾರ್ಯ ನಿರ್ವಹಿಸುತ್ತಿದೆ.

    ಜಿಲ್ಲೆಯಲ್ಲಿ ಬುಧವಾರದವರೆಗೆ ಒಟ್ಟು 1542 ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದ್ದು, 819 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆಯಲ್ಲಿದ್ದಾರೆ. 28 ಮಂದಿ ಮೃತಪಟ್ಟಿದ್ದಾರೆ, 695 ಮಂದಿ ಗುಣಮುಖರಾಗಿದ್ದಾರೆ.
    ಉಳ್ಳಾಲ ವ್ಯಾಪ್ತಿಯಲ್ಲಿ ಮಹಿಳೆಯೊಬ್ಬರು ಮೃತಪಟ್ಟ ಬಳಿಕ 160 ಮಂದಿಗೆ ರ‌್ಯಾಂಡಮ್ ಟೆಸ್ಟ್ ನಡೆಸಿದಾಗ 60ರಷ್ಟು ಮಂದಿಗೆ ಪಾಸಿಟಿವ್ ಬಂದಿರುವುದು ಆಘಾತ. ಇದೇ ರೀತಿ ಇತರೆಡೆಯೂ ರ‌್ಯಾಂಡಮ್ ಟೆಸ್ಟ್ ನಡೆಸಿದಲ್ಲಿ ದೊಡ್ಡ ಸಂಖ್ಯೆಯಲ್ಲಿ ಕರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಬಹುದು ಎನ್ನಲಾಗುತ್ತಿದೆ.

    ದಿನಾಂಕ       ಪ್ರಕರಣ      ಮೂಲತಿಳಿಯದ ಪ್ರಕರಣ
    ಜೂ.28        97                 54
    ಜೂ.29        32                19
    ಜೂ.30        44                17
    ಜು.1           84                38
    ಜು.2           90                45
    ಜು.3           97                56
    ಜು.4          75                 39
    ಜು.5          147               95
    ಜು.6          34                 17
    ಜು.7          83                 24
    ಜು.8         183               110
    10 ದಿನ      966               514 (ಶೇ.53)

    ದಕ್ಷಿಣ ಕನ್ನಡ ಜಿಲ್ಲಾಡಳಿತದಿಂದ ಕರೊನಾ ಸೋಂಕಿತರ ಮೂಲ ಪತ್ತೆಗೆ ಪ್ರಯತ್ನ ಮುಂದುವರಿದಿದೆ. ವೈದ್ಯರ ತಂಡ ಈ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೋಂಕಿತರು ಕಂಡು ಬಂದಿರುವುದರಿಂದ ಒಂದಷ್ಟು ಸಮಯ ಬೇಕಾಗುತ್ತದೆ. ಸೋಂಕಿತರ ಮೂಲ ಪತ್ತೆಯಾದ ಬಗ್ಗೆ ವರದಿಯನ್ನು ತಯಾರಿಸಿ ರಾಜ್ಯ ಸರ್ಕಾರಕ್ಕೆ ಸಲ್ಲಿಸಬೇಕಾಗಿದೆ.
    – ಸಿಂಧೂ ಬಿ.ರೂಪೇಶ್, ಜಿಲ್ಲಾಧಿಕಾರಿ ದ.ಕ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts