More

    ಜೀವದಾನಕ್ಕೂ ಕರೊನಾ ಕಾಟ: ಅಂಗಾಂಗ ಕಸಿ, ನೇತ್ರ, ರಕ್ತದಾನಕ್ಕೆ ಅಡ್ಡಿಯಾದ ಮಹಾಮಾರಿ ಗ್ರಹಣ

    ಆರ್ಥಿಕ, ಶೈಕ್ಷಣಿಕ, ಕೌಟುಂಬಿಕ ಹೀಗೆ ಸಮಾಜದ ಸರ್ವವಲಯಗಳನ್ನು ಕಾಡಿ ಕಂಗೆಡಿಸಿರುವ ಕರೊನಾ ಮಹಾಮಾರಿ ವೈದ್ಯಲೋಕದ ಕಾಯಕಕ್ಕೂ ಗ್ರಹಣ ಕವಿಸಿದೆ. ಪ್ರತಿನಿತ್ಯ ನೂರಾರು ಜೀವಗಳಿಗೆ ಮರುಜನ್ಮ ನೀಡುತ್ತಿದ್ದ ಅಂಗಾಂಗ ಕಸಿ, ನೇತ್ರದಾನ, ರಕ್ತದಾನದಂಥ ಜೀವರಕ್ಷಕ ಸೇವೆಗಳಿಗೆ ಅಡಚಣೆಯಾಗಿದೆ. ರಾಜ್ಯಾದ್ಯಂತ ನಾಲ್ಕು ಸಾವಿರಕ್ಕೂ ಅಧಿಕ ರೋಗಿಗಳು ಅಂಗಾಂಗ ಕಸಿಗಾಗಿ ಕಾಯುತ್ತ ನೋವಿನಲ್ಲೇ ದಿನದೂಡುತ್ತಿದ್ದಾರೆ.

    | ಪಂಕಜ ಕೆ.ಎಂ. ಬೆಂಗಳೂರು

    ರಾಜ್ಯಾದ್ಯಂತ ಮಿದುಳು ನಿಷ್ಕ್ರಿಯಗೊಂಡ ದೇಹಗಳನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲು ಅನುಮತಿ ನಿರಾಕರಿಸಿರುವ ಪರಿಣಾಮ ಬರೋಬ್ಬರಿ 4 ಸಾವಿರಕ್ಕೂ ಅಧಿಕ ರೋಗಿಗಳು ಅಂಗಾಂಗ ಕಸಿಯ ಕನಸು ಕಾಣುತ್ತ ಪುನರ್ಜನ್ಮದ ಕನವರಿಕೆಯಲ್ಲೇ ದಿನದೂಡುವಂತಾಗಿದೆ.

    ಅಂಗಾಂಗ ದಾನಿಗಳು ಹಾಗೂ ರೋಗಿಗಳ ನಡುವೆ ಸೇತುವೆಯಾಗಿ ಕಾರ್ಯ ನಿರ್ವಹಿಸುತ್ತಿರುವ ರಾಜ್ಯ ನೋಡಲ್ ಸಂಸ್ಥೆ ಜೀವಸಾರ್ಥಕತೆ ಏಪ್ರಿಲ್​ನಿಂದ ನ. 25ರವರೆಗೆ ನಾಲ್ಕು ದೇಣಿಗೆಗಳನ್ನಷ್ಟೇ ದಾಖಲಿಸಿದೆ. ಇದರಿಂದ 22 ಅಂಗಗಳನ್ನು ಪಡೆಯಲಾಗಿದ್ದು, 16 ಮಂದಿಗೆ ಜೀವದಾನ ಹಾಗೂ 6 ಮಂದಿಗೆ ದೃಷ್ಟಿ ದಾನ ಮಾಡಿದಂತಾದರೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿನ ಚರ್ಮ ನಿಧಿಗೆ ಕೇವಲ ಒಂದು ದಾನ ಸಿಕ್ಕಿದೆ.

    ಹೆಚ್ಚಿದ ಪೂರೈಕೆ, ಬೇಡಿಕೆ: ಕಳೆದ ವರ್ಷ (2019ರಲ್ಲಿ) ಜೀವಸಾರ್ಥಕತೆ ವತಿಯಿಂದ ಮಿದುಳು ನಿಷ್ಕ್ರಿಯಗೊಂಡ 105 ವ್ಯಕ್ತಿಗಳಿಂದ 511 ಅಂಗಾಂಗ ಗಳನ್ನು ದೇಣಿಗೆ ನೀಡುವ ಮೂಲಕ 359 ಮಂದಿಗೆ ಜೀವದಾನ ಹಾಗೂ 152 ಮಂದಿಗೆ ದೃಷ್ಟಿದಾನ ಮಾಡಲಾಗಿತ್ತು. ಜತೆಗೆ ಚರ್ಮದ ಬ್ಯಾಂಕ್​ಗೆ 40 ದಾನಿಗಳ ಚರ್ಮ ದಾನವೂ ಆಗಿತ್ತು. ಆಸ್ಪತ್ರೆಗಳೆಲ್ಲ ಕೋವಿಡ್ ಮೇಲೆ ಸಂಪೂರ್ಣ ಗಮನ ಹರಿಸಿರುವುದರಿಂದ ಬಹಳಷ್ಟು ಆಸ್ಪತ್ರೆಗಳಲ್ಲಿ ಅಂಗಾಂಗ ಕಸಿ ಶಸ್ತ್ರಚಿಕಿತ್ಸೆ ಸ್ಥಗಿತಗೊಂಡಿದೆ. ಕೋವಿಡ್​ನಿಂದಾಗಿ ನಗರದ ನೆಫ್ರೋ ಯುರಾಲಜಿ ಸಂಸ್ಥೆಯಲ್ಲಿ ಏಪ್ರಿಲ್ ಬಳಿಕ ಒಂದೇ ಒಂದು ಕಿಡ್ನಿ ಕಸಿ ಶಸ್ತ್ರಚಿಕಿತ್ಸೆಯೂ ನಡೆದಿಲ್ಲ. ಜನವರಿಯಿಂದ ಮಾರ್ಚ್ ಅಂತ್ಯದ ವರೆಗೂ 12 ಕಿಡ್ನಿ ಕಸಿ ನಡೆಸಲಾಗಿತ್ತು. ಸದ್ಯ 8 ಮಂದಿ ಕಸಿಗಾಗಿ ಕಾಯುತ್ತಿದ್ದು, ಅನುಮತಿ ಸಹ ದೊರೆತಿದೆ. ಕಳೆದ ವರ್ಷ 34 ಮಂದಿಗೆ ಕಿಡ್ನಿ ಕಸಿ ನಡೆಸಲಾಗಿತ್ತು ಎಂದು ಸಂಸ್ಥೆಯ ನಿರ್ದೇಶಕ ಡಾ. ಕೇಶವ ಮೂರ್ತಿ ತಿಳಿಸಿದ್ದಾರೆ.

    ಖಾಸಗಿ ಕಸಿ ಶಸ್ತ್ರಚಿಕಿತ್ಸೆ: ಬೆಂಗಳೂರಿನ ಕೆಲ ಖಾಸಗಿ ಆಸ್ಪತ್ರೆಗಳು ಲಾಕ್​ಡೌನ್ ಹೊರತುಪಡಿಸಿ ಕೋವಿಡ್ ಸಂದರ್ಭದಲ್ಲೂ ಗಂಭೀರ ಸ್ಥಿತಿಯಲ್ಲಿರುವ ರೋಗಿಗಳಿಗೆ ಅಂಗಾಂಗ ಕಸಿ ಶಸ್ತ್ರಚಿಕಿತ್ಸೆ ನಡೆಸಿವೆ. ಮಣಿಪಾಲ ಆಸ್ಪತ್ರೆಯಲ್ಲಿ 12 ಮೂತ್ರಪಿಂಡ ಕಸಿ, ಆಸ್ಟರ್ ಸಿಎಂಐ ಮತ್ತು ಆಸ್ಟರ್ ಆರ್ವಿ ಆಸ್ಪತ್ರೆಗಳಿಂದ 11 ಯಕೃತ್ ಕಸಿ, 12 ಮೂತ್ರಪಿಂಡ ಕಸಿ ಮತ್ತು ಐದು ಮೂಳೆ ಮಜ್ಜೆ ಕಸಿ ಹಾಗೂ ಅಪೋಲೊ ಆಸ್ಪತ್ರೆಗಳ ಸಮೂಹದಿಂದ ಒಟ್ಟು 9 ಮೂತ್ರಪಿಂಡ ಹಾಗೂ 7 ಯಕೃತ್ ಕಸಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ.

    ಕೋವಿಡ್ ಭೀತಿಯಿಂದ ಮಿದುಳು ನಿಷ್ಕ್ರಿಯಗೊಂಡ ದೇಹವನ್ನು ಪರೀಕ್ಷೆಗೆ ಒಳಪಡಿಸಲು ಕುಟುಂಬದ ಸದಸ್ಯರು ಮುಂದಾಗá-ತ್ತಿರಲಿಲ್ಲ. ಹಾಗಾಗಿ ರಾಜ್ಯದಲ್ಲಿ ರೋಗಿಗಳಿಗೆ ದಾನಿಗಳು ದೊರೆಯದೆ ಅಂಗಾಂಗ ಕಸಿ ಶಸ್ತ್ರಚಿಕಿತ್ಸೆಗೆ ತೀವ್ರ ಹಿನ್ನೆಡೆಯುಂಟಾಗಿದೆ. ಇದು ಕರ್ನಾಟಕಕ್ಕೆ ಮಾತ್ರವಲ್ಲ ವಿಶ್ವದಾದ್ಯಂತ ಅಂಗಾಂಗ ದಾನ ಹಾಗು ಕಸಿ ಶಸ್ತ್ರಚಿಕಿತ್ಸೆ ಕಡಿಮೆಯಾಗಿದೆ.

    | ಕಿಶೋರ್ ಫಡ್ಕೆ ಸಂಚಾಲಕ, ಜೀವಸಾರ್ಥಕತೆ

    ಜೀವದಾನಕ್ಕೂ ಕರೊನಾ ಕಾಟ: ಅಂಗಾಂಗ ಕಸಿ, ನೇತ್ರ, ರಕ್ತದಾನಕ್ಕೆ ಅಡ್ಡಿಯಾದ ಮಹಾಮಾರಿ ಗ್ರಹಣ

    2.20 ಲಕ್ಷ ಜನ ತತ್ತರ

    ದೀರ್ಘಕಾಲದ ಮಧುಮೇಹ ಹಾಗೂ ಅಧಿಕ ರಕ್ತದೊತ್ತಡದಿಂದ ಭಾರತದಲ್ಲಿ ಸುಮಾರು 2.20 ಲಕ್ಷ ಮಂದಿ ಮೂತ್ರಪಿಂಡದ ವೈಫಲ್ಯದಿಂದಾಗಿ ಬಳಲುತ್ತಿದ್ದು, ಕಸಿಗಾಗಿ ಎದುರು ನೋಡುತ್ತಿದ್ದಾರೆ. ಆದರೆ ದಾನಿಗಳ ಕೊರತೆಯಿಂದ ಪ್ರತಿ ವರ್ಷ ಕೇವಲ 7,500 ಕಸಿ ನಡೆಸಲಷ್ಟೇ ಸಾಧ್ಯವಿದೆ. ಒಟ್ಟಾರೆ ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆಯಲ್ಲಿ ಕೇವಲ ಶೇ.10 ಮಾತ್ರ ಮಿದುಳು ನಿಷ್ಕ್ರಿಯಗೊಂಡವರದ್ದಾಗಿರುತ್ತದೆ. ಉಳಿದಂತೆ ಜೀವಂತ ದಾನಿಗಳಿಂದ ಪಡೆದು ಕಸಿ ಮಾಡಲಾಗುತ್ತಿದೆ ಎಂದು ಮಣಿಪಾಲ್ ಆಸ್ಪತ್ರೆಯ ಎಚ್​ಒಡಿ ಡಾ.ವಿಶ್ವಂತ್ ತಿಳಿಸಿದ್ದಾರೆ.

    ರಕ್ತಕ್ಕಾಗಿ ತೀವ್ರ ಪರದಾಟ

    ರಾಜ್ಯದಲ್ಲಿ ವರ್ಷಕ್ಕೆ ನಾಲ್ಕೂವರೆ ಲಕ್ಷ ಯುನಿಟ್ ರಕ್ತದ ಅಗತ್ಯತೆಯಿದೆಯಾದರೂ ಕೋವಿಡ್ ನಂತರದಲ್ಲಿ ಶೇ.70 ರಕ್ತದ ಕೊರತೆ ಕಾಡುತ್ತಿದೆ. ಬೆಂಗಳೂರಿನ ರಾಷ್ಟ್ರೋತ್ಥಾನ ರಕ್ತ ನಿಧಿ, ರೆಡ್ ಕ್ರಾಸ್ ಸೇರಿದಂತೆ ಎಲ್ಲೆಡೆಯೂ ರಕ್ತ ನಿಧಿಗಳಲ್ಲಿ ರಕ್ತದ ಕೊರತೆ ಮುಂದುವರಿದಿರುವ ಪರಿಣಾಮ ತುರ್ತು ಚಿಕಿತ್ಸೆ ಸಂದರ್ಭದಲ್ಲಿ ರೋಗಿಗಳ ಜೀವ ಉಳಿಸಲು ಸಂಬಂಧಿಕರು ರಕ್ತಕ್ಕಾಗಿ ಪರದಾಡುವ ಸ್ಥಿತಿ ನಿರ್ವಣವಾಗಿದೆ. ಸಾಮಾನ್ಯ ಶಸ್ತ್ರಚಿಕಿತ್ಸೆಗಳಷ್ಟೇ ಅಲ್ಲದೆ, ಅಪಘಾತ, ಹೆರಿಗೆ ಸೇರಿದಂತೆ ತುರ್ತು ಚಿಕಿತ್ಸೆಗೆ ಪರದಾಡುವವರು ಒಂದೆಡೆಯಾದರೆ, ತಲೆಸೀಮಿಯಾ ಕಾಯಿಲೆಯುಳ್ಳವರು, ಹಿಮೊಫೀಲಿಯ, ಕ್ಯಾನ್ಸರ್ ರೋಗಿಗಳಿಗೂ ತೊಂದರೆಯಾಗಿದೆ. ಇವರಲ್ಲಿ ಹಲವರು 15-20 ದಿನಕ್ಕೊಮ್ಮೆ ರಕ್ತ ಮರುಪೂರಣ ಮಾಡಿಕೊಳ್ಳಬೇಕಿರುವವರು ಒಂದು ತಿಂಗಳು, ಒಂದೂವರೆ ತಿಂಗಳು ರಕ್ತ ಪಡೆಯುವುದನ್ನು ಮುಂದೂಡುತ್ತಿದ್ದಾರೆ.

    ಹಿಂದೆ ಸರಿದ ದಾನಿಗಳು: ರಕ್ತದಾನಕ್ಕೆ ಮುನ್ನ ಇತರ ಕೆಲವು ಪರೀಕ್ಷೆ ಜೊತೆ ಕರೊನಾ ಪರೀಕ್ಷೆ ಮಾಡಿಸುವುದು ಕಡ್ಡಾಯ. ಹೀಗಾಗಿ ದಾನಿಗಳು ರಕ್ತದಾನಕ್ಕೆ ಹಿಂಜರಿಯುತ್ತಿದ್ದಾರೆ.

    ಶಿಬಿರಗಳೂ ನಡೆಯುತ್ತಿಲ್ಲ: ವರ್ಷ ಪೂರ್ತಿ ಒಂದಿಲ್ಲೊಂದು ಸದಾಶಯದ ಕಾರಣಗಳಿಂದ ನಡೆಯುತ್ತಿದ್ದ ರಕ್ತದಾನ ಶಿಬಿರಗಳು ಕರೊನಾ ಬಂದ ಮೇಲೆ ನಿಂತು ಹೋಗಿರುವುದು ಸಮಸ್ಯೆಯಾಗಿದೆ.

    ತಿಂಗಳಿಗೆ ನಾಲ್ಕು ಸಾವಿರ ಯುನಿಟ್ ರಕ್ತದ ಅವಶ್ಯಕತೆಯಿದೆ. ಆದರೆ, ತಿಂಗಳಿಗೆ 600ರಿಂದ 100 ಯುನಿಟ್ ರಕ್ತ ಮಾತ್ರ ಸಂಗ್ರಹವಾಗುತ್ತಿದೆ. ನಮ್ಮ ಬಳಿ ನೋಂದಾಯಿತ ರಕ್ತದಾನಿಗಳನ್ನು ಅಗತ್ಯತೆ ಮೇರೆಗೆ ಸಂರ್ಪಸಿ ರಕ್ತ ಪಡೆಯುತ್ತಿದ್ದೇವೆ.

    | ಎಸ್ . ನಾಗಣ್ಣ ಸಭಾಧ್ಯಕ್ಷ, ಕರ್ನಾಟಕ ರೆಡ್ ಕ್ರಾಸ್ ಸೊಸೈಟಿ

    ಜೀವದಾನಕ್ಕೂ ಕರೊನಾ ಕಾಟ: ಅಂಗಾಂಗ ಕಸಿ, ನೇತ್ರ, ರಕ್ತದಾನಕ್ಕೆ ಅಡ್ಡಿಯಾದ ಮಹಾಮಾರಿ ಗ್ರಹಣ

    ದೃಷ್ಟಿ ಕಸಿದ ಕೋವಿಡ್

    | ಮರಿದೇವ ಹೂಗಾರ ಹುಬ್ಬಳ್ಳಿ

    ನೇತ್ರದಾನ ಮಾಡುವುದಾಗಿ ಘೊಷಿಸಿದ್ದ ಅನೇಕರ ಕಣ್ಣುಗಳು ಕರೊನಾ ದಿಂದಾಗಿ ಮಣ್ಣು ಪಾಲಾಗುತ್ತಿದ್ದು, ಕಣ್ಣು ಪಡೆದು ಜಗತ್ತನ್ನು ನೋಡುವ ಅಂಧರ ಕನಸಿಗೆ ಕರೊನಾ ಕೊಳ್ಳಿ ಇಡುತ್ತಿದೆ. ರಾಜ್ಯದ 10 ‘ಐ ಬ್ಯಾಂಕ್’ ಹಾಗೂ 30ಕ್ಕೂ ಹೆಚ್ಚು ‘ಕಾರ್ನಿಯಾ ಸಂಗ್ರಹ ಕೇಂದ್ರ’ದಲ್ಲಿ ಕಾರ್ನಿಯಾವೇ ಸಿಗುತ್ತಿಲ್ಲ. ಬಹಳಷ್ಟು ಜನರು ನೇತ್ರದಾನಕ್ಕೆ ಹೆಸರು ನೋಂದಾಯಿಸಿದ್ದರೂ ಕರೊನಾದಿಂದಾಗಿ ಮೃತರ ಕಣ್ಣು ಪಡೆಯುವುದೇ ತಜ್ಞರಿಗೆ ಕಷ್ಟವಾಗಿದೆ. ತಿಂಗಳಿಗೆ ಪ್ರತಿ ‘ಐ ಬ್ಯಾಂಕ್’ನಲ್ಲಿ ಏನಿಲ್ಲವೆಂದರೂ 30 ಕಣ್ಣುಗಳನ್ನು ದಾನ ಪಡೆಯಲಾಗುತ್ತಿತ್ತು. ಆದರೆ, ಮಾರ್ಚ್ ಬಳಿಕ 1ರಿಂದ 2 ದಾನಿಗಳಷ್ಟೇ ಲಭ್ಯರಾಗುತ್ತಿದ್ದಾರೆ.

    ಕೋವಿಡ್​ನಿಂದ ಮೃತಪಟ್ಟವರ ಕಣ್ಣು ಪಡೆಯುವುದು ಅಸಾಧ್ಯ. ಸಹಜ ಸಾವಪ್ಪಿದವರಿಂದಲೂ ನೇರವಾಗಿ ಕಣ್ಣು ಪಡೆಯಲು ಸಾಧ್ಯವಿಲ್ಲ. ಅವರಿಗೆ ಕರೊನಾ ಪರೀಕ್ಷೆ ನಡೆಸಿ ಪಡೆದುಕೊಳ್ಳಬೇಕು. ಆದರೆ, ಮೃತಪಟ್ಟ 4ರಿಂದ 6 ಗಂಟೆ ಒಳಗೆ ಕಣ್ಣು ಪಡೆಯಬೇಕಾಗುತ್ತದೆ. ಹೀಗಾಗಿ ಕರೊನಾ ಪರೀಕ್ಷೆ ಫಲಿತಾಂಶ ಸಕಾಲಕ್ಕೆ ಪಡೆಯುವುದೇ ಕಷ್ಟವಾಗಿದೆ. ಜೊತೆಗೆ ಕುಟುಂಬದವರು ಕೂಡ ಇದಕ್ಕೆ ಸಮ್ಮತಿಸುತ್ತಿಲ್ಲ.

    ಪ್ರತಿ ತಿಂಗಳು 30 ಕ್ಕೂ ಹೆಚ್ಚು ಜನರಿಂದ ಕಣ್ಣು ಪಡೆಯಲಾಗುತ್ತಿತ್ತು. ಕೋವಿಡ್ ಇರುವುದರಿಂದ ಸರ್ಕಾರದ ಮಾರ್ಗಸೂಚಿ ಅನ್ವಯ ಕಣ್ಣು ಪಡೆಯಲಾಗುತ್ತಿದೆ. ಇದರಿಂದ ಹೆಚ್ಚಿನ ನೇತ್ರದಾನ ಸಾಧ್ಯವಾಗುತ್ತಿಲ್ಲ.

    | ಡಾ. ಶ್ರೀನಿವಾಸ ಜೋಶಿ ಹುಬ್ಬಳ್ಳಿಯ ಎಂ.ಎಂ. ಜೋಶಿ ನೇತ್ರ ಮಹಾವಿಜ್ಞಾನ ಸಂಸ್ಥೆ ನಿರ್ದೇಶಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts