More

    ಜಿಲ್ಲಾಡಳಿತಕ್ಕೆ ಖಾಸಗಿ ಆಸ್ಪತ್ರೆಗಳ ಸಹಕಾರ

    ಮೈಸೂರು: ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಕರೊನಾ ವೈರಸ್ ನಿಯಂತ್ರಣಕ್ಕಾಗಿ ಜಿಲ್ಲಾಡಳಿತದೊಂದಿಗೆ ನಗರದ ಖಾಸಗಿ ಆಸ್ಪತ್ರೆಗಳು ಕೈ ಜೋಡಿಸಿವೆ.
    ಕೋವಿಡ್ ಚಿಕಿತ್ಸೆಗೆ ಬೆಡ್‌ಗಳ ಶೇರಿಂಗ್ ವ್ಯವಸ್ಥೆಯಡಿ ಸೇಂಟ್ ಜೋಸೆಫ್, ಕೊಲಂಬಿಯಾ ಏಷ್ಯಾ, ನಾರಾಯಣ ಹೃದಯಾಲಯ ಸೇರಿ ಇತರ ಖಾಸಗಿ ಆಸ್ಪತ್ರೆಗಳಲ್ಲಿ ಸುಮಾರು 500 ರಿಂದ 600 ಬೆಡ್‌ಗಳ ವ್ಯವಸ್ಥೆ ಮಾಡಲಾಗಿದೆ. ಫೀವರ್ ಕ್ಲಿನಿಕ್ ಜತೆಗೆ ಖಾಸಗಿ ಹೋಟೆಲ್‌ಗಳ ಮೂಲಕವೂ ಆಸ್ಪತ್ರೆಗಳು ಚಿಕಿತ್ಸೆಗೆ ಮುಂದಾಗಿವೆ.

    ಈ ಹಿನ್ನೆಲೆಯಲ್ಲಿ ಎನ್.ಆರ್.ವಿಧಾನಸಭಾ ಕ್ಷೇತ್ರದ ಕೋವಿಡ್ ಉಸ್ತುವಾರಿ ಹೊತ್ತಿರುವ ಸಂಸದ ಪ್ರತಾಪ್ ಸಿಂಹ ಸೋಮವಾರ ಹಿರಿಯ ವೈದ್ಯಾಧಿಕಾರಿಗಳೊಂದಿಗೆ ಖಾಸಗಿ ಕೋವಿಡ್ ಕೇರ್ ಸೆಂಟರ್‌ಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಸೇಂಟ್ ಜೋಸೆಫ್, ಕೊಲಂಬಿಯಾ ಏಷ್ಯಾ, ನಾರಾಯಣ ಹೃದಯಾಲಯ ಆಸ್ಪತ್ರೆಗಳಿಗೆ ಭೇಟಿ ನೀಡಿ, ಸಿದ್ಧತೆ ಪರಿಶೀಲಿಸಿದರು. ಜತೆಗೆ ಆಸ್ಪತ್ರೆ ಮುಖ್ಯಸ್ಥರಿಂದ ಮಾಹಿತಿ ಪಡೆದುಕೊಂಡರು.
    ಬಳಿಕ ಕರೊನಾ ಸೋಂಕು ಕ್ಷಿಪ್ರವಾಗಿ ಹರಡುತ್ತಿರುವ ನರಸಿಂಹರಾಜ ಕ್ಷೇತ್ರದ ಮನೆ ಮನೆ ಸಮೀಕ್ಷೆ ಕಾರ್ಯ ಹಾಗೂ ರ‌್ಯಾಪಿಡ್ ಆ್ಯಂಟಿಜೆನ್ ಪರೀಕ್ಷೆ ಕೇಂದ್ರಗಳಿಗೆ ಭೇಟಿ ನೀಡಿ ಪರೀಶಿಲಿಸಿದರು.

    ಇದೇ ವೇಳೆ ಮಾತನಾಡಿದ ಅವರು, ಕೋವಿಡ್ ಅನ್ನು ಸಮರ್ಥವಾಗಿ ಎದುರಿಸಲು ಮುಂದಾಗಿದ್ದೇವೆ. ನಗರದ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲೂ ಆಯಾ ಶಾಸಕರ ನೇತೃತ್ವದಲ್ಲಿ ಟಾಸ್ಕ್‌ಫೋರ್ಸ್ ಸಿದ್ಧವಾಗಿವೆ. ನರಸಿಂಹರಾಜ ಕ್ಷೇತ್ರಕ್ಕೆ ನನ್ನನ್ನ ಉಸ್ತುವಾರಿಯನ್ನಾಗಿ ಮಾಡಿದ್ದಾರೆ. ಶಾಸಕ ತನ್ವೀರ್ ಸೇಠ್‌ಗೆ ಸಾಧ್ಯವಾಗದ ಕಾರಣ ನಾನು ಉಸ್ತುವಾರಿ ವಹಿಸಿಕೊಂಡಿದ್ದೇನೆ. ಹೀಗಾಗಿ ಜನರು ಸಹಕಾರ ಕೊಡಬೇಕು. ಎಲ್ಲಿ ಸಹಕಾರ ಕೊಡೋದಿಲ್ವೋ ಅಲ್ಲಿ ಪೊಲೀಸರನ್ನು ಬಳಕೆ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು. ನಾವು ಈಗ ಸಾವಿರಕ್ಕೂ ಹೆಚ್ಚು ರ‌್ಯಾಪಿಡ್ ಟೆಸ್ಟಿಂಗ್ ಕಿಟ್‌ಗಳನ್ನು ಕೇಳಿದ್ದೇವೆ. ಅವುಗಳನ್ನು ಬಳಸಿಕೊಂಡು ಕರೊನಾ ನಿಯಂತ್ರಣ ಮಾಡುತ್ತೇವೆ ಎಂದರು.
    ಹಿಂದೆ ಪೋಲಿಯೋ ಬಂದಾಗಲು ಕೆಲವರು ಅಪಪ್ರಚಾರ ಮಾಡಿದ್ದರು. ಅದರಿಂದಲೇ ಅಫ್ಘಾನಿಸ್ತಾನ ಇನ್ನೂ ಪೋಲಿಯೋ ಮುಕ್ತವಾಗಿಲ್ಲ. ಮುಸ್ಲಿಮರು ಇದನ್ನು ಅರ್ಥ ಮಾಡಿಕೊಳ್ಳಬೇಕು. ನಿಮ್ಮ ಹಾಗೂ ಸಮಾಜದ ಆರೋಗ್ಯಕ್ಕಾಗಿ ಪರೀಕ್ಷೆಗೆ ಬರುತ್ತಿದ್ದೇವೆ. ಬೇರೆ ಅಪಪ್ರಚಾರದ ಬಗ್ಗೆ ಕಿವಿಗೊಡಬೇಡಿ ಎಂದು ಮನವಿ ಮಾಡಿದರು.

    ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಆರ್.ವೆಂಕಟೇಶ್ ಮಾತನಾಡಿ, ಜಿಲ್ಲೆಗೆ 2300 ರ‌್ಯಾಪಿಡ್ ಆ್ಯಂಟಿಜೆನ್ ಕಿಟ್ ಬಂದಿದ್ದು, ಎನ್.ಆರ್.ಕ್ಷೇತ್ರದಲ್ಲೇ 1500 ಕಿಟ್ ಬಳಸಲಾಗುತ್ತಿದೆ. ಈ ಕ್ಷೇತ್ರದಲ್ಲಿ ಸೋಂಕಿತರು ದಾಖಲಾದ 24 ಗಂಟೆಯೊಳಗೆ ಮೃತಪಡುತ್ತಿದ್ದು, ವಾರದಿಂದ ದಾಖಲಾದ ಮರಣದ ಪ್ರಕರಣಗಳಲ್ಲಿ ಶೇ.70ರಷ್ಟು ಈ ಕ್ಷೇತ್ರಕ್ಕೆ ಸೇರಿವೆ. ಇಲ್ಲಿ ಸೋಂಕಿತರ ಸಂಖ್ಯೆ, ಸಾವಿನ ಪ್ರಮಾಣ ಕಡಿಮೆ ಮಾಡಬೇಕು. ಅದಕ್ಕಾಗಿ ಇಲ್ಲಿ ಲಾಕ್‌ಡೌನ್ ಜಾರಿ ಮಾಡಿ ಸಮೀಕ್ಷೆ ಮಾಡಲಾಗುತ್ತಿದೆ ಎಂದರು.
    15 ಲ್ಯಾಬ್ ತಂಡದ ಸಿಬ್ಬಂದಿ ಸೋಂಕಿನ ಲಕ್ಷಣ ಇದ್ದವರನ್ನು ಕರೆದುಕೊಂಡು ಬಂದು ಈ ಪರೀಕ್ಷೆ ಮಾಡಲಿದ್ದಾರೆ. ಒಂದು ಗಂಟೆಯೊಳಗೆ ವರದಿ ಬರಲಿದ್ದು, ನೆಗೆಟಿವ್ ಬಂದವರನ್ನು ಮನೆಗೆ, ಪಾಸಿಟಿವ್ ಬಂದವರನ್ನು ಕೋವಿಡ್ ಆಸ್ಪತ್ರೆಗೆ ಕಳುಹಿಸಲಾಗುತ್ತದೆ. ರ‌್ಯಾಪಿಡ್ ಟೆಸ್ಟ್‌ನಲ್ಲಿ ಈಗಾಗಲೇ 30 ಪಾಸಿಟಿವ್ ಪ್ರಕರಣಗಳು ಕಂಡು ಬಂದಿವೆ ಎಂದು ಮಾಹಿತಿ ನೀಡಿದರು.

    ಆಂಬುಲೆನ್ಸ್ ವ್ಯವಸ್ಥೆ ಮಾಡಿ: ಕರೊನಾದಿಂದ ನರಳಾಡುತ್ತಿರುವವರಿಗೆ ಬೇಗ ಆಂಬುಲೆನ್ಸ್ ವ್ಯವಸ್ಥೆ ಮಾಡಿಕೊಡುವಂತೆ ಸಾರ್ವಜನಿಕರೊಬ್ಬರು ಸಂಸದರಲ್ಲಿ ಮನವಿ ಮಾಡಿದರು.

    ಪಾಸಿಟಿವ್ ಬಂದು 24 ಗಂಟೆ ಕಳೆದರೂ ಆಂಬುಲೆನ್ಸ್ ಮತ್ತು ಚಿಕಿತ್ಸೆ ಇಲ್ಲದೆ ನನ್ನ ಸಹೋದರ ನರಳಿ ಸತ್ತೇ ಹೋದ. ನನ್ನ ತಂಗಿಗೂ ಕರೊನಾ ಬಂದು ಒದ್ದಾಡುತ್ತಿದ್ದಾಳೆ. ದಯವಿಟ್ಟು ಆಸ್ಪತ್ರೆಗೆ ಸಾಗಿಸಲು ಆಂಬುಲೆನ್ಸ್ ಕಲ್ಪಿಸಿ ಎಂದು ಮನವಿ ಮಾಡಿದರು. ಸಮಸ್ಯೆ ಆಲಿಸಿದ ಸಂಸದರು, ಕೂಡಲೇ ಸ್ಪಂದಿಸುವಂತೆ ಜಿಲ್ಲಾ ಆರೋಗ್ಯಾಧಿಕಾರಿ ಡಾ.ವೆಂಕಟೇಶ್‌ಗೆ ಸೂಚನೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts