More

    ಸ್ವಹಿತಾಸಕ್ತಿ ಸುಳಿಯಲ್ಲಿ ಸಹಕಾರ | ಹೊಸ ಪ್ಯಾಕ್ಸ್ ಸ್ಥಾಪನೆಗೆ ಅತ್ಯುತ್ಸಾಹ; ಮಾರ್ಗಸೂಚಿ ಕಡೆಗಣಿಸಿ ಒತ್ತಡ ತಂತ್ರ

    | ಮೃತ್ಯುಂಜಯ ಕಪಗಲ್ ಬೆಂಗಳೂರು

    ರಾಜ್ಯದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ (ಪ್ಯಾಕ್ಸ್)ಗಳನ್ನು ಹೊಸದಾಗಿ ಸೃಜಿಸುವ ನಡೆಯು ಶಂಕೆಗೆ ಗುರಿಯಾಗಿದ್ದು, ಗ್ರಾಮೀಣ ಪ್ರದೇಶದ ಆರ್ಥಿಕ ಸಬಲತೆ ಹಾಗೂ ಎಲ್ಲ ಅರ್ಹ ಕೃಷಿಕರಿಗೂ ಸಾಲ ಸೌಲಭ್ಯಕ್ಕೆ ನೆರವಾಗುವ ಬದಲು ಎರವಾಗಲಿವೆ ಎಂಬ ಆತಂಕ ವ್ಯಕ್ತವಾಗಿದೆ.

    ಆಯ್ದ ರೈತರಿಗೆ ಸಾಲ ಹಾಗೂ ಇನ್ನಿತರ ಸೌಲಭ್ಯ ಚೌಕಟ್ಟು ಮತ್ತು ಅನೇಕ ಪ್ಯಾಕ್ಸ್ ಗಳಲ್ಲಿನ ಏಕಸ್ವಾಮ್ಯ ಮುರಿಯಲು ಮುಂದಾಗಿರುವುದು ಸ್ವಾಗತಾರ್ಹ. ಆದರೆ ಇದಕ್ಕಾಗಿ ಅನುಸರಿಸಿರುವ ದಾರಿ, ಒತ್ತಡದ ತಂತ್ರಗಳು ಈಗಿರುವ ಸಂಘಗಳನ್ನು ದುರ್ಬಲಗೊಳಿಸಲಿದೆ ಎಂಬುದು ಕಳವಳಕ್ಕೆ ಕಾರಣವಾಗಿದೆ.

    ಷಾ ಗುರಿ: ಕೇಂದ್ರ ಸರ್ಕಾರ ಪ್ರತ್ಯೇಕವಾಗಿ ಸಹಕಾರ ಇಲಾಖೆ ಸ್ಥಾಪಿಸಿದೆ. ಅಲ್ಲದೆ, ಸಹಕಾರ ಕ್ಷೇತ್ರದಲ್ಲಿ ನಿಷ್ಣಾತ, ಪ್ರಭಾವಿ ಸಚಿವ ಅಮಿತ್ ಷಾಗೆ ಖಾತೆ ಜವಾಬ್ದಾರಿ ನೀಡಲಾಗಿದೆ. ಪ್ರತಿ ಎರಡು ಹಳ್ಳಿಗೆ ಒಂದು ಪ್ಯಾಕ್ಸ್ ಸ್ಥಾಪಿಸಬೇಕೆಂದು ಷಾ ನಿಗದಿಪಡಿಸಿದ ಗುರಿ ರಾಜ್ಯದಲ್ಲಿ ‘ಸ್ವಹಿತಾಸಕ್ತಿ ಸಂಘರ್ಷ’ದ ಸುಳಿಗೆ ತಳ್ಳುವ ಅಪಾಯ ಎದುರಿಸುತ್ತಿದೆ. ಹಾಲಿ ಪ್ಯಾಕ್ಸ್​ಗಳನ್ನು ಸುಸ್ಥಿರತೆ ಹಳಿಗೆ ತಂದು, ಹೆಚ್ಚೆಚ್ಚು ಸದಸ್ಯರನ್ನು ಸೇರಿಸಿ ಬಲಪಡಿಸಿದ ಬಳಿಕ ಅಗತ್ಯವಿರುವೆಡೆ ಹೊಸ ಪ್ಯಾಕ್ಸ್​ಗಳನ್ನು ಸ್ಥಾಪಿಸಲು ಅಮಿತ್ ಷಾ ನಿರ್ದೇಶನ ನೀಡಿದ್ದಾರೆ. ಅದೇ ಕಾಲಕ್ಕೆ ಹೊಸ ಪ್ಯಾಕ್ಸ್​ಗಳನ್ನು ತೆರೆಯುವುದಕ್ಕೆ ನಬಾರ್ಡ್ ಮಾರ್ಗಸೂಚಿ, ಅರ್ಹತೆ ಮಾನದಂಡ ಗಳನ್ನು ಅನುಸರಿಸುವಂತೆ ಸೂಚನೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ಅತ್ಯುತ್ಸಾಹದ ನಿಲುವು: ರಾಜ್ಯದಲ್ಲಿ ಒಟ್ಟು 6,022 ಗ್ರಾಪಂಗಳಿದ್ದರೆ, 5,463 ಪ್ಯಾಕ್ಸ್​ಗಳು ಸಹಕಾರ ಇಲಾಖೆಯಲ್ಲಿ ನೋಂದಣಿಯಾಗಿವೆ. ಈ ಪೈಕಿ 5,230ಕ್ಕೂ ಹೆಚ್ಚು ಸಂಘಗಳು ಕಾರ್ಯನಿರತವಾಗಿವೆ. 3-4 ವರ್ಷಗಳಿಂದ ಸಂಘಗಳ ಸಂಖ್ಯೆ ವೃದ್ಧಿಸಿದೆ. ಪ್ರತಿ ಗ್ರಾಪಂನಲ್ಲಿ ಒಂದು ಸಂಘ ಸ್ಥಾಪಿಸುವ ಚಿಂತನೆ ಸರಿಯಾಗಿದೆ. ಆದರೆ, ಷಾ ನೀಡಿದ ಗುರಿ ಮುಟ್ಟುವ ನೆಪದಲ್ಲಿ ಅತ್ಯುತ್ಸಾಹ ತೋರುತ್ತಿದ್ದು, ಹಿಡಿತ ಸಾಧಿಸುವ ಪ್ರಯತ್ನವಿದು ಎಂದು ಟೀಕಿಸಲಾಗುತ್ತಿದೆ. ಕರೊನಾಘಾತದಿಂದ ಅನೇಕ ಪ್ಯಾಕ್ಸ್​ಗಳು ತತ್ತರಿಸಿವೆ. ಇದರೊಂದಿಗೆ 10-20 ಲಕ್ಷ ರೂ.ವರೆಗಿನ ಸಾಲ ಮನ್ನಾ ಮೊತ್ತ ಸರ್ಕಾರ ಭರಿಸದ ಕಾರಣ ವಾರ್ಷಿಕ ಒಂದು ಲಕ್ಷ ರೂ.ವರೆಗೆ ಬಡ್ಡಿಯ ಹೊರೆ ಹೊತ್ತುಕೊಂಡಿವೆ. ಪ್ರತಿ ಗ್ರಾಪಂಗೆ ಒಂದರ ಪ್ರಕಾರ, 600-700 ಪ್ಯಾಕ್ಸ್​ಗಳನ್ನು ಸ್ಥಾಪಿಸುವ ಅವಕಾಶವಿದೆ. ಈಗಿರುವ ಬಹುತೇಕ ಸಂಘಗಳು ಪ್ರಬಲರ ಕಪಿಮುಷ್ಠಿಯಿಂದ ಪಾರು ಮಾಡುವುದಕ್ಕೆ ಒತ್ತು ನೀಡಬೇಕಾಗಿದೆ ಎಂದು ಸಹಕಾರಿ ಧುರೀಣರೊಬ್ಬರು ಹೇಳುತ್ತಾರೆ.

    ಗ್ರಾಮ ಪಂಚಾಯಿತಿ ಗೊಂದರಂತೆ ಪ್ಯಾಕ್ಸ್​ಗಳನ್ನು ಸ್ಥಾಪಿಸಲು ಉತ್ತೇಜಿಸುತ್ತೇವೆ. ಸಂಘಗಳ ಸ್ಥಾಪನೆ ಸರ್ಕಾರದ ಕೆಲಸವಲ್ಲ, ಆಸಕ್ತ ಮುಂದೆ ಬಂದು ನೋಂದಣಿಗೆ ಅಧಿಕೃತ ಪ್ರಸ್ತಾವನೆ ಸಲ್ಲಿಸಿದರೆ ನಿಗದಿತ ನಿಯಮಾವಳಿ ಪ್ರಕಾರ ಪರವಾನಗಿ ನೀಡಲಾಗುವುದು. ಮಾರ್ಗಸೂಚಿ, ನಿಯಮಾವಳಿಗೆ ವಿರುದ್ಧವಾಗಿ ಹೊಸ ಸಂಘಗಳ ನೋಂದಣಿಗೆ ಅವಕಾಶವಿಲ್ಲ.

    | ಎಸ್.ಜಿಯಾವುಲ್ಹಾ ಸಹಕಾರ ಸಂಘಗಳ ನಿಬಂಧಕರು

    ಲಾಭ-ನಷ್ಟದ ಲೆಕ್ಕಾಚಾರ: ಪ್ಯಾಕ್ಸ್​ಗಳ ಸಂಖ್ಯೆ ಹೆಚ್ಚಿದಷ್ಟು ಹೊಸ ಸದಸ್ಯರ ಸಂಖ್ಯೆ ಏರಲಿದೆ. ಅರ್ಹ ರೈತರು ಕಿಸಾನ್ ಕ್ರೆಡಿಟ್ ಕಾರ್ಡ್ ಪಡೆದು ಸಾಲ ಸೌಲಭ್ಯ ಪಡೆಯಲಿದ್ದಾರೆ. ವ್ಯಾಪಾರ ಅಭಿವೃದ್ಧಿ ಕಾರ್ಯಕ್ರಮ ಮತ್ತಿತರ ಚಟುವಟಿಕೆಗಳಿಗೆ ಪುಷ್ಟಿ ಲಭಿಸಿ, ಸ್ವಾವಲಂಬಿ ಹಾಗೂ ಸದೃಢ ಸಂಘಗಳಾಗಲಿವೆ. ಆದರೆ ಮಾರ್ಗಸೂಚಿ ಮತ್ತು ನಿಯಮಗಳನ್ನು ಕಡೆಗಣಿಸಿ ಸಂಘಗಳ ವಿಭಜನೆ, ಹೊಸ ಸಂಘಗಳ ಸ್ಥಾಪನೆಯಿಂದ ಇರುವ ಸಂಘಗಳು ದುರ್ಬಲವಾಗಲಿವೆ. ಗ್ರಾಮೀಣ ಪ್ರದೇಶದ ಆರ್ಥಿಕ ಸಬಲತೆ ಬದಲಿಗೆ ಬೇರೆ ಇನ್ನೇನೋ ಸಾಧಿಸಲು ಹೊರಟರೆ ನಷ್ಟದ ಮಡುವಿಗೆ ಬೀಳಲಿವೆ.

    ನಿಯಮಾವಳಿಗಳು: ನಬಾರ್ಡ್​ನ ಪರಿಷ್ಕೃತ ಮಾರ್ಗಸೂಚಿ ಪ್ರಕಾರ, 4,000 ಎಕರೆ ಸಾಗುವಳಿ ಜಮೀನು, 600 ಕುಟುಂಬಗಳು ಮತ್ತು 5 ಕಿ.ಮೀ. ಪರಿಧಿ ಇರಬೇಕು. ಸರ್ಕಾರದ ಸುತ್ತೋಲೆಯಂತೆ ಸಂಘ ಸಮಾಪನೆಯಾಗಿ ನೋಂದಣಿ ರದ್ದಾಗಿದ್ದರೆ ಹೊಸದಾಗಿ ರಚಿಸಬಹುದಾಗಿದೆ. ಅಲ್ಲದೆ, ಅಸ್ತಿತ್ವದಲ್ಲಿರುವ ಸಂಘ ವಿಭಜಿಸಿ ಮತ್ತೊಂದು ಸಂಘ ರಚನೆಗೆ ಗ್ರಾಮಗಳ ವಿವರ, ಹಾಲಿ ಸಂಘದ ಅರ್ಥಿಕ ಸ್ಥಿತಿ, ಮೂಲ ಸೌಲಭ್ಯಗಳ ವರದಿ ತರಿಸಿಕೊಳ್ಳಬೇಕು. ಆಯಾ ಸಹಕಾರ ಅಭಿವೃದ್ಧಿ ಅಧಿಕಾರಿಯಿಂದ ವರದಿ, ಸರ್ವಸದಸ್ಯರ ಸಭೆಯಲ್ಲಿ ಒಪ್ಪಿಗೆಯೊಂದಿಗೆ ಸಂಘದ ಕಾರ್ಯದರ್ಶಿ ಪ್ರಸ್ತಾವನೆ ಸಲ್ಲಿಸಿ, ಸಹಕಾರ ನಿಬಂಧಕರ ಪೂರ್ವಾನುಮತಿ ಪಡೆಯಬೇಕೆಂಬ ನಿಯಮಗಳಿವೆ.

    ದ್ವಂದ್ವ ಪರಿಸ್ಥಿತಿ: ಮಾರ್ಗಸೂಚಿ, ನಿಯಮಗಳನ್ನು ಉಲ್ಲಂಘಿಸಿ ಬೆಳಗಾವಿ ಜಿಲ್ಲೆ ಬೈಲಹೊಂಗಲ ಮತ್ತು ಕಿತ್ತೂರು ತಾಲೂಕಿನಲ್ಲಿ ಹೊಸದಾಗಿ ಪ್ಯಾಕ್ಸ್ ನೋಂದಣಿಗೆ ಪ್ರಸ್ತಾವನೆ ಸಲ್ಲಿಕೆಯಾಗಿತ್ತು. ಇದೇ ಕಾರಣಕ್ಕೆ ಬೈಲಹೊಂಗಲ ಉಪ ವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕರಿಗೆ ಇಲಾಖೆ ನಿರ್ಬಂಧಕರು ಕಾರಣ ಕೇಳಿ ನೋಟಿಸ್ ನೀಡಿದ್ದು, ವರ್ಗೀಕರಣ, ನಿಯಂತ್ರಣ ಮತ್ತು ಮನವಿ ನಿಯಮದ ಪ್ರಕಾರ ಶಿಸ್ತುಕ್ರಮ ಜಾರಿಯಲ್ಲಿಟ್ಟಿದೆ. ಆದರೆ ಹೊಸದಾಗಿ ಸಂಘಗಳ ನೋಂದಣಿಗೆ ಸಲ್ಲಿಕೆಯಾದ ಪ್ರಸ್ತಾವನೆಗಳಿಗೆ ಅನುಮೋದನೆ ಪಡೆಯಲು ಒತ್ತಡ ಹೇರಿದ್ದು, ಪ್ರಭಾವಿಯೊಬ್ಬರ ಒತ್ತಡದಿಂದ ತದ್ವಿರುದ್ಧ ಪರಿಸ್ಥಿತಿ ಸೃಷ್ಟಿಯಾಗಿದೆ ಎಂಬ ಆರೋಪಗಳು ಕೇಳಿಬರುತ್ತಿವೆ.

    ಚುನಾವಣೆ ನಗಣ್ಯ: ನಗರ-ಪಟ್ಟಣ ಸ್ಥಳೀಯ ಸಂಸ್ಥೆಗಳು, ವಿಧಾನಸಭೆ ಉಪ ಚುನಾವಣೆಗೆ ಕರೊನಾ ಬಾಧೆಯಿಲ್ಲ. ಆದರೆ ಚುನಾಯಿತ ಆಡಳಿತ ಮಂಡಳಿ ಅವಧಿ ಮುಗಿದ ಸುಮಾರು 1,000 ಸಹಕಾರ ಸಂಸ್ಥೆಗಳಿಗೆ ಮಾತ್ರ ಕರೊನಾ ಕಾಡುತ್ತಿದೆ. ಸೋಂಕಿನ ನೆಪವೊಡ್ಡಿ ಅವಧಿ ಮುಗಿದ ಆಡಳಿತ ಮಂಡಳಿಗಳ ಚುನಾವಣೆ ಡಿಸೆಂಬರ್ ಅಂತ್ಯದ ತನಕ ಮುಂದೂಡಿದ್ದು, ಈ ಆದೇಶ ಪರಿಷ್ಕರಿಸಲು ಸರ್ಕಾರಕ್ಕೆ ಅವಕಾಶವಿದೆ. ಸಹಕಾರ ಸಂಸ್ಥೆಗಳ ಚುನಾವಣಾ ಪ್ರಾಧಿಕಾರಕ್ಕೆ ಈಗ ಅನುಮತಿ ಕೊಟ್ಟರೆ ಚುನಾವಣಾ ಪ್ರಕ್ರಿಯೆ ಮುಗಿಸಲು 60 ದಿನಗಳು ಹಿಡಿಯಲಿವೆ ಎಂದು ಮೂಲಗಳು ಮಾಹಿತಿ ನೀಡಿವೆ. ಆರ್ಥಿಕವಾಗಿ ಕಾರ್ಯಸಾಧು ಹೌದೋ ಅಲ್ಲವೋ ಎನ್ನುವುದನ್ನು ಯೋಚಿಸದೆ ಹೊಸ ಪ್ಯಾಕ್ಸ್​ಗಳ ಸ್ಥಾಪನೆಗೆ ಆಸಕ್ತಿವಹಿಸಿದ್ದು, ಚುನಾವಣೆ ಬಗೆಗಿನ ನಿರ್ಲಕ್ಷ್ಯ ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts