More

    ಮದ್ದೂರು, ಬಫರ್ ವಲಯದಲ್ಲಿ ಕೂಂಬಿಂಗ್

    ಗುಂಡ್ಲುಪೇಟೆ: ತಾಲೂಕಿನ ಹೊನ್ನೇಗೌಡನಹಳ್ಳಿ ಬಾಳೆ ತೋಟದಲ್ಲಿ ಯುವಕನ ಮೇಲೆ ದಾಳಿ ನಡೆಸಿ ಪರಾರಿಯಾದ ಹುಲಿ ಪತ್ತೆಗೆ ಅರಣ್ಯ ಇಲಾಖೆ ಸೋಮವಾರವೂ ಭೀಮನಬೀಡು ಸುತ್ತಮುತ್ತ ಕೂಂಬಿಂಗ್ ನಡೆಸಿತು.


    ಹೊನ್ನೇಗೌಡನಹಳ್ಳಿ ಗ್ರಾಮದ ವೃಷಭೇಂದ್ರಪ್ಪ ಅವರ ಬಾಳೆ ತೋಟದಲ್ಲಿ ಶುಕ್ರವಾರ ಕಾಣಿಸಿಕೊಂಡ ಹುಲಿ ಜಮೀನಿನಲ್ಲಿದ್ದ ಯುವಕನ ಮೇಲೆ ದಾಳಿ ನಡೆಸಿ ಗಾಯಗೊಳಿಸಿತ್ತು. ಸೆರೆಗೆ ಅರಣ್ಯ ಇಲಾಖೆ ಕಾರ್ಯಾಚರಣೆ ಕೈಗೊಂಡರೂ ಜನರ ಗದ್ದಲದಿಂದ ಬೆದರಿ ಭೀಮನಬೀಡು ಗ್ರಾಮದತ್ತ ಓಡಿಹೋಗಿತ್ತು. ಸಂಜೆ ಕತ್ತಲಾಗಿದ್ದರಿಂದ ಕಾರ್ಯಾಚರಣೆ ಕೈಬಿಟ್ಟ ಅರಣ್ಯ ಇಲಾಖೆ ಶನಿವಾರದಿಂದಲೂ ಪತ್ತೆ ಕಾರ್ಯ ನಡೆಸುತ್ತಿದೆ. ಹೊನ್ನೇಗೌಡನಹಳ್ಳಿ, ಭೀಮನಬೀಡು ಸುತ್ತಮುತ್ತ ಹೆಜ್ಜೆಯ ಜಾಡು ಪತ್ತೆಗೆ ಸುಮಾರು 25ಕ್ಕೂ ಹೆಚ್ಚಿನ ಎಸ್‌ಟಿಪಿಎಫ್ ಸಿಬ್ಬಂದಿ ಕೂಂಬಿಂಗ್ ನಡೆಸಿದರೂ ಹುಲಿಯ ಜಾಡು ಪತ್ತೆಯಾಗಿಲ್ಲ. ಅಲ್ಲದೆ, ಜಾನುವಾರುಗಳನ್ನು ಬೇಟೆಯಾಡಿಲ್ಲ. ಇದರಿಂದ ಹುಲಿ ಕಾಡಿನತ್ತ ತೆರಳಿರಬಹುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಭಾವಿಸಿದ್ದರು.


    ಭಾನುವಾರ ಕಣ್ಣೇಗಾಲ ಸಮೀಪದ ಟೋಲ್‌ಗೇಟ್ ಪಕ್ಕದ ಜಮೀನಿನಲ್ಲಿ ಹುಲಿ ಸಂಚರಿಸುತ್ತಿದ್ದುದನ್ನು ಕಂಡ ರೈತರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಸೋಮವಾರ ಮದ್ದೂರು ಹಾಗೂ ಬಫರ್ ವಲಯದ ಅರಣ್ಯ ಸಿಬ್ಬಂದಿ ಕೂಂಬಿಂಗ್ ನಡೆಸಿದ್ದಾರೆ ಎಂದು ಗುಂಡ್ಲುಪೇಟೆ ಉಪವಿಭಾಗದ ಎಸಿಎಫ್ ರವೀಂದ್ರ ‘ವಿಜಯವಾಣಿ’ಗೆ ತಿಳಿಸಿದರು.


    ಶುಕ್ರವಾರ ಹುಲಿ ದಾಳಿಯಿಂದ ಗಾಯಗೊಂಡಿದ್ದ ಮನು ಚೇತರಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ವಾರ್ಡ್‌ಗೆ ಸ್ಥಳಾಂತರಿಸಲಾಗಿದ್ದು, ಶಾಸಕ ಗಣೇಶ್ ಪ್ರಸಾದ್ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts