More

    Web Exclusive | ಮಧ್ಯಾಹ್ನದ ಉಪಾಹಾರ ಯೋಜನೆಯಡಿ ವಿದ್ಯಾರ್ಥಿಗಳಿಗೆ ಅಡುಗೆ ಎಣ್ಣೆ, ಉಪ್ಪು…

    | ದೇವರಾಜ್ ಎಲ್. ಬೆಂಗಳೂರು

    ಮಧ್ಯಾಹ್ನದ ಬಿಸಿಯೂಟದ ಬದಲಾಗಿ ನೀಡಲಾಗುತ್ತಿರುವ ಆಹಾರ ಧಾನ್ಯಗಳ ಜತೆಗೆ ಇನ್ನು ಮುಂದೆ ಅಡುಗೆ ಎಣ್ಣೆ ಮತ್ತು ಉಪ್ಪು ಕೂಡ ದೊರೆಯಲಿದೆ. ಕರೊನಾ ಹಿನ್ನೆಲೆಯಲ್ಲಿ ಶಾಲೆಗಳು ಆರಂಭವಾಗದೇ ಇರುವುದರಿಂದ ಮಧ್ಯಾಹ್ನದ ಬಿಸಿಯೂಟದ ಬದಲು ಪ್ರತಿನಿತ್ಯಕ್ಕೆ ವಿದ್ಯಾರ್ಥಿಗಳಿಗೆ ವೆಚ್ಚ ಮಾಡುವಂತಹ ಆಹಾರ ಧಾನ್ಯಗಳನ್ನು ಲೆಕ್ಕಾಚಾರ ಹಾಕಿ ನೀಡುತ್ತಿದೆ. ಇತ್ತೀಚಿಗೆ ಹೈಕೋರ್ಟ್ ವಿದ್ಯಾರ್ಥಿಗಳಿಗೆ ಆಹಾರ ಧಾನ್ಯಗಳ ನೀಡುವ ಜತೆಗೆ ಅಡುಗೆ ಎಣ್ಣೆ ಮತ್ತು ಉಪ್ಪು ನೀಡಬೇಕೆಂದು ಸೂಚನೆ ನೀಡಿದ್ದರಿಂದ ಪ್ರತಿ ತಿಂಗಳಿಗೆ 1 ಲೀಟರ್ ಕಡಲೆಕಾಯಿ ಎಣ್ಣೆ ಮತ್ತು 1 ಕೆ.ಜಿ ಉಪ್ಪನ್ನು ನೀಡಲು ಸಾರ್ವಜನಿಕ ಶಿಕ್ಷಣ ಇಲಾಖೆ ನಿರ್ಧರಿಸಿದೆ.

    ಎಣ್ಣೆ ಮತ್ತು ಉಪ್ಪು ನೀಡುವುದಕ್ಕೆ ತಗಲುವ ವೆಚ್ಚವನ್ನು ಭರಿಸುವ ಸಲುವಾಗಿ ತೊಗರಿ ಬೇಳೆಯ ಪ್ರಮಾಣವನ್ನು ಕಡಿಮೆ ಮಾಡಲು ಇಲಾಖೆ ತೀರ್ಮಾನಿಸಿದೆ. ಸದ್ಯ 1ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಪ್ರತಿ ದಿನಕ್ಕೆ 50 ಗ್ರಾಂ.ತೊಗರಿ ಬೇಳೆಯನ್ನು ನೀಡುತ್ತಿತ್ತು. ಇದನ್ನು ಮೊಟಕು ಮಾಡಿ 1ರಿಂದ 5ನೇ ತರಗತಿ ವಿದ್ಯಾರ್ಥಿಗಳಿಗೆ 20 ಗ್ರಾಂ. ಮತ್ತು 6ರಿಂದ 10ನೇ ತರಗತಿಗೆ 30 ಗ್ರಾಂ. ಲೆಕ್ಕಹಾಕಿ ನೀಡಲಿದೆ. ಇಲ್ಲಿ ಹಣ ಉಳಿತಾಯವಾಗಲಿದ್ದು, ಇದನ್ನು ಎಣ್ಣೆ ಮತ್ತು ಉಪ್ಪು ಖರೀದಿಗೆ ಬಳಕೆ ಮಾಡಲಿದೆ. ಶೀಘ್ರವೇ ಟೆಂಡರ್ ಕರೆಯಲು ತೀರ್ಮಾನಿಸಿದೆ.

    ಮೊದಲ ಸುತ್ತಿನ ಮಾತುಕತೆ: ಎಣ್ಣೆ ಮತ್ತು ಉಪ್ಪನ್ನು ಖರೀದಿ ಮತ್ತು ಸರಬರಾಜು ಮಾಡುವ ಕುರಿತು ಸಾರ್ವಜನಿಕ ಶಿಕ್ಷಣ ಇಲಾಖೆಯು ಈಗಾಗಲೇ ಉನ್ನತ ಮಟ್ಟದ ಸಭೆ ನಡೆಸಿ ಚರ್ಚಿಸಿದೆ. ಎಣ್ಣೆ ಮತ್ತು ಉಪ್ಪು ಖರೀದಿ ಮಾಡುವುದಕ್ಕೆ ಟೆಂಡರ್ ಕರೆಯಲು ಸೂಚಿಸಿದೆ. ಈ ಎಲ್ಲ ಪ್ರಕ್ರಿಯೆ ಮುಗಿಸಿ ಜನವರಿ 1ರಿಂದಲೇ ಎಣ್ಣೆ ಮತ್ತು ಉಪ್ಪು ವಿದ್ಯಾರ್ಥಿಗಳ ಕೈ ಸೇರಲಿದೆ.

    ಕೋರ್ಟ್ ಹೇಳಿದ್ದೇನು?

    ಕರೊನಾ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಸರ್ಕಾರಿ ಶಾಲೆ ಹಾಗೂ ಅಂಗನವಾಡಿ ಕೇಂದ್ರಗಳಿಗೆ ಬಿಸಿಯೂಟ ಪೂರೈಕೆ ಸ್ಥಗಿತಗೊಂಡಿದ್ದರಿಂದ ಅರ್ಹ ಫಲಾನುಭವಿಗಳಿಗೆ ಪಡಿತರ ಹಂಚಿಕೆಗೆ ಸೂಕ್ತ ನಿಯಮಗಳನ್ನು ಅನುಸರಿಸುವಂತೆ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶಿಸಿತ್ತು. ಆಹಾರ ಧಾನ್ಯಗಳ ಜತೆಗೆ 2020ರ ಆಗಸ್ಟ್​ನಿಂದ ಐದು ತಿಂಗಳ ಲೆಕ್ಕಚಾರದಲ್ಲಿ 1ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ತಲಾ 1 ಕೆಜಿ ಅಯೊಡೈಸ್ಡ್ ಉಪ್ಪು, ತೊಗರಿ ಬೇಳೆ ಮತ್ತು ಅಡುಗೆ ಎಣ್ಣೆ ವಿತರಿಸಲು ಹೈಕೋರ್ಟ್ ಸೂಚಿಸಿತ್ತು.

    ಶೀಘ್ರದಲ್ಲೇ ಮಕ್ಕಳಿಗೆ ತೊಗರಿ ಬೇಳೆ, ಅಕ್ಕಿ ಜತೆಗೆ ತಿಂಗಳಿಗೆ ಒಂದು ಕೆ.ಜಿ. ಅಡುಗೆ ಎಣ್ಣೆ ಮತ್ತು ಉಪ್ಪು ದೊರೆಯಲಿದೆ. ಸದ್ಯ ಯಾವ ರೀತಿ ಸರಬರಾಜು ಮಾಡಬೇಕೆಂಬ ರೀತಿಯಲ್ಲಿ ಚರ್ಚೆ ನಡೆಯುತ್ತಿದೆ.

    |ಅನ್ಬು ಕುಮಾರ್ ಆಯುಕ್ತ, ಸಾರ್ವಜನಿಕ ಶಿಕ್ಷಣ ಇಲಾಖೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts