More

    ಕೇಂದ್ರ ಬರ ಅಧ್ಯಯನ ತಂಡಕ್ಕೆ ವಸ್ತುಸ್ಥಿತಿ ಮನವರಿಕೆ; ಸಚಿವ ಕೃಷ್ಣಬೈರೇಗೌಡ

    ಬೆಂಗಳೂರು: ರಾಜ್ಯದ ಬರ ಪರಿಸ್ಥಿತಿ ಅಧ್ಯಯನಕ್ಕೆಂದು ಆಗಮಿಸಿರುವ ಕೇಂದ್ರ ತಂಡದ ಅಧಿಕಾರಿಗಳ ಮುಂದೆ ರಾಜ್ಯ ಸರ್ಕಾರ ಒಟ್ಟು ಬದುಕು-ಬವಣೆಯನ್ನು ಮಂಡಿಸಿದೆ. ಜಂಟಿ ಸಮೀಕ್ಷೆಯ ಅಂಕಿ-ಅಂಶಗಳು, ಮಳೆ ಪ್ರಮಾಣದ ದತ್ತಾಂಶ, ಬೆಳೆಗಳು, ಕುಡಿಯುವ ನೀರಿನ ವಸ್ತುಸ್ಥಿತಿಯನ್ನು ಪ್ರಾತ್ಯಕ್ಷಿಕೆ ಮೂಲಕ ವಿವರಿಸಿತು.

    ವಿಧಾನಸೌಧ ಸಮ್ಮೇಳನ ಸಭಾಂಗಣದಲ್ಲಿ ಕೇಂದ್ರ ಅಧ್ಯಯನ ತಂಡದ ಅಧಿಕಾರಿಗಳ ಜತೆಗೆ ಗುರುವಾರ ಸಭೆ ನಡೆಸಿದ ನಂತರ ಕಂದಾಯ ಸಚಿವ ಕೃಷ್ಣಬೈರೇಗೌಡ, ಕೃಷಿ ಸಚಿವ ಚೆಲುವರಾಯ ಸ್ವಾಮಿ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದರು.

    ಕೇಂದ್ರ ಸರ್ಕಾರದ ಮಾರ್ಗಸೂಚಿ, ನಿಯಮಾವಳಿ ಪ್ರಕಾರ 161 ತೀವ್ರ, 34 ಸಾಧಾರಣ ಬರಪೀಡಿತ ಪ್ರದೇಶವೆಂದು ೋಷಿಸಲಾಗಿದೆ. ವಾಸ್ತವಿಕ ನಷ್ಟದ ಅಂದಾಜು 30 ಸಾವಿರ ಕೋಟಿ ರೂ.ಗಳಿದ್ದರೂ ನಿಯಮದ ಪ್ರಕಾರ 4,860 ಕೋಟಿ ರೂ.ಗಳ ನೆರವಿಗೆ ಮೊರೆಯಿಡಲಾಗಿದೆ.

    ಸಚಿವ ಸಂಪುಟ ಸಭೆಯು ಸೆ.22ರಂದು ಬರ ನೆರವು ಕೋರಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲು ಒಪ್ಪಿಗೆ ನೀಡಿದ ದಿನವೇ ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಗಿದೆ.

    ಸಿಎಂ ಸಿದ್ದರಾಮಯ್ಯ ಸೂಚನೆಯಂತೆ ಕೇಂದ್ರ ಗೃಹ ಮತ್ತು ಕೃಷಿ ಸಚಿವರ ಭೇಟಿಗೆ ಕಾಲಾವಕಾಶ ಕೇಳಿದ್ದರೂ ಈವರೆಗೆ ಸಿಕ್ಕಿಲ್ಲ. ಆದರೆ ಉನ್ನತಾಧಿಕಾರಿಗಳಮಟ್ಟದಲ್ಲಿ ಕೇಂದ್ರ ಅಧ್ಯಯನ ತಂಡವು ರಾಜ್ಯಕ್ಕೆ ಕರೆಯಿಸಿಕೊಳ್ಳುವ ಪ್ರಯತ್ನ ಮುಂದುವರಿಸಿದ್ದೆವು.

    ಕೇಂದ್ರ ಕೃಷಿ ಇಲಾಖೆ ಜಂಟಿ ಕಾರ್ಯದರ್ಶಿ ಅಜಿತ್‌ಕುಮಾರ್ ಸಾಹು ನೇತೃತ್ವದಲ್ಲಿ ಒಂಭತ್ತು ಅಧಿಕಾರಿಗಳ ತಂಡವು ಅಧ್ಯಯನಕ್ಕೆ ಆಗಮಿಸಿದೆ. ಬರ ನೆರವಿಗಾಗಿ ಮನವಿ ಸಲ್ಲಿಸಿದ ರೀತಿಯ ಬಗ್ಗೆ ಕೇಂದ್ರ ಅಧಿಕಾರಿಗಳು ತೃಪ್ತಿ ವ್ಯಕ್ತಪಡಿಸಿದ್ದಾರೆ.

    ವಸ್ತುಸ್ಥಿತಿ ಮನವರಿಕೆ

    ಮುಂಗಾರು ಹಂಗಾಮಿನಲ್ಲಿ ಒಟ್ಟಾರೆ ಶೇ.28ರಷ್ಟು ಮಳೆ ಕೊರತೆಯಾಗಿದೆ. ಜೂನ್‌ನಲ್ಲಿ ಶೇ.56, ಆಗಸ್ಟ್‌ನಲ್ಲಿ ಶೇ.73 ಮಳೆ ಕೊರತೆಯಾಗಿ ಬಹುದೊಡ್ಡ ಹೊಡೆತ ನೀಡಿದೆ. ಸೆಪ್ಟೆಂಬರ್‌ನಲ್ಲಿ ಅಲ್ಪಸ್ವಲ್ಪ ಮಳೆಯಾಗಿದ್ದರೂ ನಿರೀಕ್ಷಿತ ಇಳುವರಿ ಬಾರದು.

    ಶೇಂಗಾ ಬೆಳೆ ಮೇಲು ನೋಟಕ್ಕೆ ಹಸುರಾಗಿ ಕಂಡರೂ ಒಳಗೆ ಕಾಯಿ ಸಣ್ಣದು, ಎಲ್ಲದರಲ್ಲೂ ಕಾಳುಗಳಿಲ್ಲ. ತೊಗರಿ, ಜೋಳ ಇತ್ಯಾದಿ ಬೆಳೆಗಳ ಪರಿಸ್ಥಿತಿ ಇದಕ್ಕಿಂತ ಬೇರೆಯೇನಿಲ್ಲ. ಒಟ್ಟಾರೆ ಈ ಬಾರಿ ಬರಗಾಲ ವಿಭಿನ್ನವಾಗಿದೆ ಎಂದು ಕೇಂದ್ರ ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಡಲಾಗಿದೆ.

    ಭಾನುವಾರದವರೆಗೆ ಪ್ರವಾಸ

    ಕೇಂದ್ರದ ಒಂಭತ್ತು ಅಧಿಕಾರಿಗಳು ಮೂರು ಉಪತಂಡಗಳಾಗಿ ವಿಂಗಡಣೆಯಾಗಿದ್ದಾರೆ. ರಾಜ್ಯದ 11 ಜಿಲ್ಲೆಗಳಲ್ಲಿ ಗುರುವಾರದಿಂದ ಭಾನುವಾರದವರೆಗೆ ಅಧ್ಯಯನ ಪ್ರವಾಸ ಮಾಡಲಿದ್ದಾರೆ.

    ಬೆಳೆ ಬೆಳೆದು ನಿಂತಿರುವುದು, ಹಸುರಾಗಿರುವುದು ಕಣ್ಣಿಗೆ ಗೋಚರಿಸುತ್ತದೆ. ಆದರೆ ಬೆಳೆಯನ್ನು ಮುಟ್ಟಿ ನೋಡಿ, ರೈತರೊಂದಿಗೆ ಸಂವಾದ, ಕೃಷಿ ವಿಜ್ಞಾನಿಗಳೊಂದಿಗೆ ವಿಚಾರ ವಿನಿಮಯ ಮಾಡಿದರೆ ವಸ್ತುಸ್ಥಿತಿ ತಿಳಿಯಲಿದೆ ಎಂದು ಕೇಂದ್ರ ತಂಡಕ್ಕೆ ನಿವೇದಿಸಲಾಗಿದೆ.

    ಈ ಹಿನ್ನೆಲೆಯಲ್ಲಿ ಕೇಂದ್ರ ಅಧ್ಯಯನ ತಂಡದಲ್ಲಿ ರಾಜ್ಯದ ಅಧಿಕಾರಿಗಳು ಮತ್ತು ಕೃಷಿ ವಿಜ್ಞಾನಿಗಳು ಒಳಗೊಂಡು ಪ್ರವಾಸ ಮಾಡಲಿದ್ದು, ಸಾಧ್ಯಂತವಾಗಿ ಮನವರಿಕೆ ಮಾಡಿಕೊಡಲಿದ್ದಾರೆ. ರಾಜ್ಯದ ಪ್ರವಾಸ ಮುಗಿದ ನಂತರ ಸೋಮವಾರ ಮತ್ತೊಂದು ಸುತ್ತಿನ ಸಭೆ ನಡೆಸಿ, ಕೇಂದ್ರದ ಅಧಿಕಾರಿಗಳು ಬಯಸಿದ ದತ್ತಾಂಶಗಳ ಸಹಿತ ಸಮರ್ಪಕ ಮಾಹಿತಿ ಒದಗಿಸಲಾಗುತ್ತದೆ.

    ಜಲಾಶಯಗಳ ಒಳ-ಹೊರ ಹರಿವು, ಸಂಗ್ರಹ-ಬಳಕೆ, ಭಾರತೀಯ ಹವಾಮಾನ ಮತ್ತು ರಾಜ್ಯದ ಮಳೆಮಾಪನ ಕೇಂದ್ರಗಳು ದಾಖಲಿಸಿಕೊಂಡ ಮಳೆ ಪ್ರಮಾಣದ ತುಲನಾತ್ಮಕ ಅಂಕಿ-ಅಂಶಗಳನ್ನು ಕೇಳಿದ್ದು, ತಕ್ಷಣ ಸಂಗ್ರಹಕ್ಕೆ ಸಮಸ್ಯೆಯಾಗದು ಎಂದರು.

    ಮತ್ತಷ್ಟು ಬರಪೀಡಿತ ತಾಲೂಕುಗಳು

    ಬರಪೀಡಿತ ತಾಲೂಕುಗಳು ಎಂದು ೋಷಣೆ ಮಾಡದ ಕಾರಣ ಕೆಲವು ತಾಲೂಕುಗಳಲ್ಲಿ ಪ್ರತಿಭಟನೆ ನಡೆದಿವೆ. ಆದರೂ ಕೇಂದ್ರದ ನಿಯಮಾವಳಿಗಳಿಗೆ ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ಕೃಷ್ಣಬೈರೇಗೌಡ ಸಮರ್ಥಿಸಿಕೊಂಡರು.

    ಸಾಧಾರಣ ಬರವೆಂದು ಗುರುತಿಸಿದ 34 ತಾಲೂಕುಗಳ ವಸ್ತುಸ್ಥಿತಿ ಮರು ವಿಮರ್ಶೆಯ ಬಳಿಕ ಕೆಲವು ತೀವ್ರ ಬರಪಟ್ಟಿಗೆ ಸೇರಬಹುದು. ಹಾಗೆಯೇ ಉಳಿದ 41ರಲ್ಲಿ 34 ತಾಲೂಕುಗಳಲ್ಲಿ ಬರ ಪರಿಸ್ಥಿತಿ ಕಾಣಿಸಿಕೊಂಡಿದೆ.

    ಬರ ಸಂಬಂಧಿತ ಸಚಿವ ಸಂಪುಟದ ಉಪಸಮಿತಿ ಸೋಮವಾರ ಸಭೆ ಸೇರಿ ಜಂಟಿ ಸಮೀಕ್ಷೆಯ ಬಗ್ಗೆ ನಿರ್ಧಾರ ಕೈಗೊಳ್ಳಲಿದ್ದು, ಮತ್ತೆ 15 ತಾಲೂಕುಗಳು ಬರಗಾಲದ ಪಟ್ಟಿಗೆ ಸೇರುವ ಸಾಧ್ಯತೆಗಳಿವೆ ಎಂದು ಕೃಷ್ಣಬೈರೇಗೌಡ ಹೇಳಿದರು.

    ಅಂಕಿ-ಅಂಶ ಪರಿಷ್ಕರಣೆಗೆ ಮನವಿ

    ರಾಜ್ಯದಲ್ಲಿ ಸಣ್ಣ ಮತ್ತು ಅತಿಸಣ್ಣ ರೈತರ ಸಂಖ್ಯೆ ಹೆಚ್ಚಿದೆ. ಆದರೆ ಕೇಂದ್ರದ ಅಧಿಕಾರಿಗಳ ಬಳಿ 2015ರ ಅಂಕಿ-ಅಂಶಗಳಿವೆ. ಇದನ್ನು ಪರಿಷ್ಕರಿಸಲು ಮನವಿ ಮಾಡಿಕೊಂಡಿದ್ದು, ಸಣ್ಣ ಮತ್ತು ಅತಿ ಸಣ್ಣ ರೈತರ ದತ್ತಾಂಶವನ್ನು ್ರೂಟ್ಸ್ ತಂತ್ರಾಂಶದಲ್ಲಿ ಸಂಗ್ರಹಿಸಿದ್ದನ್ನು ಗಮನಕ್ಕೆ ತರಲಾಗಿದೆ.

    ರಾಜ್ಯಕ್ಕೆ ಬರ ನೆರವಿನ ಮೊತ್ತ ನಿಗದಿಯಲ್ಲಿ ನಿರ್ಣಾಯಕ ಅಂಶಗಳ ಪೈಕಿ ಸಣ್ಣ ಮತ್ತು ಅತಿಸಣ್ಣ ರೈತರ ಅಂಕಿ-ಸಂಖ್ಯೆಯು ಗಮನಾರ್ಹವಾಗಿರಲಿದೆ ಎಂದು ಕೃಷ್ಣಬೈರೇಗೌಡ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts