More

    ಐಪಿಎಲ್‌ನಲ್ಲಿ ಗದ್ದಲ ಎಬ್ಬಿಸಿದ ವಿವಾದಗಳಿವು…

    ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಎಂದರೆ ಬರೀ ಕ್ರಿಕೆಟ್‌ಗೆ ಸೀಮಿತವಲ್ಲ. ಇದೊಂದು ಮನರಂಜನೆಯ ತಾಣ. ಜತೆಗೆ ಕಳೆದ 13 ವರ್ಷಗಳಿಂದ ಹಲವಾರು ವಿವಾದಗಳೂ ಟೂರ್ನಿಯನ್ನು ಕಾಡುತ್ತ ಬಂದಿವೆ. ವಿವಾದಗಳೊಂದಿಗೆ ಆರಂಭವಾದ ಐಪಿಎಲ್ ವಿವಾದಗಳನ್ನೇ ಬೆನ್ನಿಗಿಟ್ಟುಕೊಂಡು ಅಭೂತಪೂರ್ವ ಯಶಸ್ಸು ಸಾಧಿಸುತ್ತ ಬಂದಿರುವುದು ವಿಶೇಷ. ವರ್ಷದಿಂದ ವರ್ಷಕ್ಕೆ ಹೆಚ್ಚೆಚ್ಚು ಆಕರ್ಷಣೆ ಪಡೆಯುತ್ತ ಬಂದಿರುವ ಐಪಿಎಲ್‌ನ ಹಿಂದಿನ 12 ಆವೃತ್ತಿಗಳಲ್ಲಿ ಭಾರಿ ಸದ್ದು ಮಾಡಿದ ಕೆಲ ವಿವಾದಗಳ ಹಿನ್ನೋಟ ಇಲ್ಲಿದೆ…

    ಸ್ಪಾಟ್ ಫಿಕ್ಸಿಂಗ್-ಬೆಟ್ಟಿಂಗ್
    ಐಪಿಎಲ್‌ನಲ್ಲಿ ಭಾರಿ ಸುದ್ದಿ ಮಾಡಿದ ಪ್ರಕರಣಗಳೆಂದರೆ ಸ್ಪಾಟ್ ಫಿಕ್ಸಿಂಗ್ ಹಾಗೂ ಬೆಟ್ಟಿಂಗ್. ಇಡೀ ಕ್ರಿಕೆಟ್ ಲೋಕವೇ ಬೆಚ್ಚಿ ಬೀಳಿಸುವಂಥ ಘಟಾನುವಳಿಗಳು ಸಂಭವಿಸಿದವು. 2012ರಲ್ಲಿ ಮೊಟ್ಟ ಮೊದಲ ಬಾರಿಗೆ ಸ್ಪಾಟ್ ಫಿಕ್ಸಿಂಗ್ ಹಗರಣ ಬೆಳಕಿಗೆ ಬಂದಿತು. ಖಾಸಗಿ ಟಿವಿ ಚಾನೆಲ್ ನಡೆಸಿದ ಕುಟುಕು ಕಾರ್ಯಚರಣೆಯಲ್ಲಿ 5 ಆಟಗಾರರು ಸಿಕ್ಕಿಬಿದ್ದರು. ಡೆಕ್ಕನ್ ಚಾರ್ಜರ್ಸ್‌ ತಂಡದ ಟಿಪಿ ಸುಧೀಂದ್ರ, ಪುಣೆ ವಾರಿಯರ್ಸ್‌ನ ಮೋನಿಶ್ ಮಿಶ್ರಾ, ಪಂಜಾಬ್‌ನ ಅಮಿತ್ ಯಾದವ್, ಶಲಭ್ ಶ್ರೀವಾತ್ಸವ್, ದೆಹಲಿ ತಂಡದ ಅಭಿನವ್ ಬಾಲಿ ಸಿಕ್ಕಬಿದ್ದ ಆಟಗಾರರು. ಇದರ ಬೆನ್ನಲ್ಲೇ ಅಂದಿನ ಐಪಿಎಲ್ ಅಧ್ಯಕ್ಷ ರಾಜೀವ್ ಶುಕ್ಲಾ ಐವರು ಆಟಗಾರರನ್ನು ಅಮಾನತುಗೊಳಿಸಿದ್ದರು. ತಂಡದ ಮಾಲೀಕರು ಆಟಗಾರರಿಗೆ ಕಾಳಧನ ನೀಡುತ್ತಾರೆ ಎಂದು ಮೋನಿಶ್ ಮಿಶ್ರಾ ರಹಸ್ಯ ಕಾರ್ಯಾಚರಣೆ ವೇಳೆ ಬಾಯ್ಬಿಟ್ಟಿದ್ದರು.

    ಐಪಿಎಲ್‌ನಲ್ಲಿ ಗದ್ದಲ ಎಬ್ಬಿಸಿದ ವಿವಾದಗಳಿವು...

    ನಂತರ 2013ರಲ್ಲಿ ಭುಗಿಲೆದ್ದ ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ಎಸ್. ಶ್ರೀಶಾಂತ್, ಅಂಕಿತ್ ಚೌವಾಣ್, ಅಜಿತ್ ಚಾಂಡಿಲಾ (ರಾಜಸ್ಥಾನ) ಸಿಕ್ಕಿಬಿದ್ದು ಕೆಲಕಾಲ ಸೆರೆವಾಸ ಅನುಭವಿಸಿದ್ದರು. ಜತೆಗೆ ನಿಷೇಧ ಶಿಕ್ಷೆಗಳಿಗೂ ಒಳಗಾದರು. ಆದರೆ ಶ್ರೀಶಾಂತ್ ಇತ್ತೀಚೆಗಷ್ಟೇ ನಿಷೇಧ ಮುಕ್ತರಾಗಿ ಮರಳಿ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಬೆಟ್ಟಿಂಗ್ ಹಗರಣದಲ್ಲಿ ಅಂದಿನ ಬಿಸಿಸಿಐ ಅಧ್ಯಕ್ಷ ಶ್ರೀನಿವಾಸನ್ ಹಾಗೂ ಅವರ ಅಳಿಯ ಗುರುನಾಥ್ ಮೇಯಪ್ಪನ್, ರಾಜಸ್ಥಾನ ತಂಡದ ಸಹ-ಮಾಲೀಕ ರಾಜ್‌ಕುಂದ್ರಾ ಹೆಸರೂ ಕೇಳಿ ಬಂದಿತ್ತು. ಗುರುನಾಥ್, ರಾಜ್‌ಕುಂದ್ರಾ ತಪ್ಪಿತಸ್ಥರೆಂದು ಕೋರ್ಟ್‌ನಲ್ಲೂ ಸಾಬೀತಾಗಿದೆ.

    ಎಂಸಿಎಯಿಂದ ಶಾರುಖ್‌ಗೆ ನಿಷೇಧ

    ಐಪಿಎಲ್‌ನಲ್ಲಿ ಗದ್ದಲ ಎಬ್ಬಿಸಿದ ವಿವಾದಗಳಿವು...
    ಬಾಲಿವುಡ್ ಸ್ಟಾರ್ ಹಾಗೂ ಕೋಲ್ಕತ ತಂಡದ ಸಹ-ಮಾಲೀಕ ಶಾರುಖ್ ಖಾನ್ ಸಿಬ್ಬಂದಿ ವರ್ಗದವರೊಂದಿಗೆ ವಾಗ್ವಾದ ನಡೆಸಿದ ಕಾರಣ ಮುಂಬೈ ಕ್ರಿಕೆಟ್ ಸಂಸ್ಥೆ (ಎಂಸಿಎ) ಐದು ವರ್ಷಗಳ ಕಾಲ ನಿಷೇಧದ ಶಿಕ್ಷೆ ಹೇರಿತ್ತು. ಶಾರುಖ್ ಖಾನ್ ಕುಡಿದು ಸ್ಟೇಡಿಯಂಗೆ ಆಗಮಿಸಿ ಸಿಬ್ಬಂದಿ ವರ್ಗದವರೊಂದಿಗೆ ಅಸಭ್ಯವಾಗಿ ವರ್ತಿಸಿದ್ದರು ಎಂದು ಎಂಸಿಎ ಅಧಿಕಾರಿಗಳು ಆರೋಪ ಮಾಡಿದ್ದರು. ಬಳಿಕ ಐಪಿಎಲ್ ಆಡಳಿತ ಮಂಡಳಿಯ ಮಧ್ಯಪ್ರವೇಶದಿಂದಾಗಿ ಶಾರುಖ್ ಮೇಲೇರಿದ್ದ ನಿಷೇಧವನ್ನು ಎಂಸಿಎ ಹಿಂತೆಗೆದುಕೊಂಡಿತು.

    ಇದನ್ನೂ ಓದಿ: ಮೋದಿ ವಿರೋಧಿಯಾಗಿದ್ದ ಜ್ವಾಲಾ ಗುಟ್ಟಾ ಈಗ ಅಭಿಮಾನಿ ಆಗಿಬಿಟ್ಟರೇ?

    ಮೂರು ತಂಡಗಳ ವಜಾ

    ಐಪಿಎಲ್‌ನಲ್ಲಿ ಗದ್ದಲ ಎಬ್ಬಿಸಿದ ವಿವಾದಗಳಿವು...
    ಐಪಿಎಲ್ 2ನೇ ಆವೃತ್ತಿ 2009ರ ಚಾಂಪಿಯನ್ ಡೆಕ್ಕನ್ ಚಾರ್ಜರ್ಸ್‌, 2011ರಲ್ಲಿ ಸೇರ್ಪಡೆಗೊಂಡ ಕೊಚ್ಚಿ ಟಸ್ಕರ್ಸ್‌ ಹಾಗೂ ಪುಣೆ ವಾರಿಯರ್ಸ್‌ ತಂಡಗಳು ನಿಗದಿತ ವೇಳೆಗೆ ಫ್ರಾಂಚೈಸಿ ಶುಲ್ಕ ಪಾವತಿಸದ ಪರಿಣಾಮ ಅಮಾನತು ಶಿಕ್ಷೆ ಅನುಭವಿಸಿದವು. ಡೆಕ್ಕನ್ ಚಾರ್ಜರ್ಸ್‌ ಬದಲಿಗೆ ಚೆನ್ನೈ ಮೂಲದ ಸನ್‌ನೆಟ್‌ವರ್ಕ್ ಸಮೂಹ ಹೈದರಾಬಾದ್ ತಂಡವನ್ನು ಖರೀದಿಸಿತು.

    ಕೆಕೆಆರ್‌ನಿಂದ ಗಂಗೂಲಿ ಔಟ್
    ಕೋಲ್ಕತದ ಮಹಾರಾಜ ಸೌರವ್ ಗಂಗೂಲಿ ಐಪಿಎಲ್‌ನ ಆರಂಭಿಕ ಋತುಗಳಲ್ಲಿ ಕೋಲ್ಕತ ನೈಟ್ ರೈಡರ್ಸ್‌ ತಂಡವನ್ನು ಮುನ್ನಡೆಸಿದ್ದರು. ಆದರೆ, ಗಂಗೂಲಿ ನಾಯಕತ್ವದ ತಂಡ ನಿರೀಕ್ಷಿತ ಮಟ್ಟದ ಪ್ರದರ್ಶನ ನೀಡದ ಹಿನ್ನೆಲೆಯಲ್ಲಿ ಮಾಲೀಕ ಶಾರೂಖ್ ಕೆಂಗಣ್ಣಿಗೆ ಗುರಿಯಾದರು. ಇದರ ಪರಿಣಾಮ 3ನೇ ಆವೃತ್ತಿಯಲ್ಲಿ ಕೆಕೆಆರ್ ಗಂಗೂಲಿಯನ್ನು ಹೊರಗಿಟ್ಟಿತ್ತು. ಈ ವೇಳೆ ಕೋಲ್ಕತದಲ್ಲಿ ಭಾರೀ ಪ್ರತಿಭಟನೆಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ‘ಕೋಲ್ಕತದ ಮಹಾರಾಜ ನಿಲ್ಲದೆ’ ಕೆಕೆಆರ್ ಇಲ್ಲ ಎಂದು ಶಾರುಖ್ ಹೇಳಿದರೂ, ಅದೇ ವೇಳೆ ಗಂಗೂಲಿ ನೂತನ ತಂಡವಾದ ಪುಣೆ ವಾರಿಯರ್ಸ್‌ ತಂಡ ಸೇರ್ಪಡೆಗೊಂಡಿದ್ದರು.

    ಲಲಿತ್ ಮೋದಿ ಔಟ್

    ಐಪಿಎಲ್‌ನಲ್ಲಿ ಗದ್ದಲ ಎಬ್ಬಿಸಿದ ವಿವಾದಗಳಿವು...
    ಐಪಿಎಲ್‌ನ ಪ್ರಮುಖ ರೂವಾರಿ ಲಲಿತ್ ಮೋದಿ. ಆದರೆ, ಮೊದಲ ಮೂರು ಆವೃತ್ತಿಗಳ ಬಳಿಕ ಅವರ ವಿರುದ್ಧ ಅವ್ಯವಹಾರದ ಆರೋಪ ಕೇಳಿ ಬಂದಾಗ ಐಪಿಎಲ್ ಅಧ್ಯಕ್ಷ ಹುದ್ದೆ ಹಾಗೂ ಬಿಸಿಸಿಐನಿಂದ ಉಚ್ಚಾಟಿಸಲಾಯಿತು. ಜತೆಗೆ ಬಿಸಿಸಿಐ ಕಾನೂನು ಕ್ರಮ ಕೈಗೊಳ್ಳಲು ಮುಂದಾಯಿತು. ಇದರ ನಡುವೆ ಲಲಿತ್ ಮೋದಿ ಭಾರತ ಬಿಟ್ಟು ಲಂಡನ್‌ಗೆ ಹೋಗಿ ನೆಲೆಸಿದ್ದಾರೆ. ಐಪಿಎಲ್ ಅನ್ನು ಬಿಸಿಸಿಐ ಪಾಲಿನ ಹಣದ ಕಣಜ ಮಾಡುವಲ್ಲಿ ಮೋದಿ ಶ್ರಮ ಅಪಾರ.

    ಶ್ರೀಶಾಂತ್‌ಗೆ ಭಜ್ಜಿ ಏಟು

    ಐಪಿಎಲ್‌ನಲ್ಲಿ ಗದ್ದಲ ಎಬ್ಬಿಸಿದ ವಿವಾದಗಳಿವು...
    ಮೊದಲ ಆವೃತ್ತಿಯಲ್ಲೇ ಮುಂಬೈ ಇಂಡಿಯನ್ಸ್ ತಂಡದ ಹರ್ಭಜನ್ ಸಿಂಗ್, ಆಗ ಪಂಜಾಬ್ ತಂಡದಲ್ಲಿದ್ದ ವೇಗಿ ಶ್ರೀಶಾಂತ್ ಕಪಾಳಕ್ಕೆ ಹೊಡೆದಿದ್ದು ಭಾರೀ ಸುದ್ದಿಯಾಗಿತ್ತು. ಮೊಹಾಲಿಯಲ್ಲಿ ಪಂದ್ಯದ ಬಳಿಕ ಹರ್ಭಜನ್‌ರನ್ನು ಕೆಣಕಿದ್ದಕ್ಕೆ ಶ್ರೀಶಾಂತ್ ಪೆಟ್ಟು ತಿಂದಿದ್ದರು. ಮೈದಾನದಲ್ಲಿ ಶ್ರೀಶಾಂತ್ ಗಳಗಳನೆ ಅತ್ತಿದ್ದು ಭಾರೀ ಸುದ್ದಿಯಾಗಿತ್ತು. ಬಳಿಕ ಭಜ್ಜಿ ಶ್ರೀಶಾಂತ್ ಕ್ಷಮೆ ಕೋರಿ ವಿವಾದಕ್ಕೆ ಇತಿಶ್ರೀ ಹಾಡಿದ್ದರು. ಇನ್ನು ಮೈದಾನದಲ್ಲಿ ಆಟಗಾರರ ನಡುವೆ ಆಗಾಗ ಕೆಲ ವಾಗ್ವಾದ, ಚಕಮಕಿಗಳು ಸಾಮಾನ್ಯವಾದರೂ ಶ್ರೀಶಾಂತ್-ಭಜ್ಜಿಯಂತೆ ದೈಹಿಕ ಸಂಘರ್ಷದಷ್ಟು ಯಾರೂ ಮುಂದುವರಿದಿಲ್ಲ.

    ಚಿಯರ್‌ಗರ್ಲ್ಸ್ ಉಡುಪು

    ಐಪಿಎಲ್‌ನಲ್ಲಿ ಗದ್ದಲ ಎಬ್ಬಿಸಿದ ವಿವಾದಗಳಿವು...
    ಚೊಚ್ಚಲ ಐಪಿಎಲ್‌ನಲ್ಲಿ ಚಿಯರ್‌ಲೀಡರ್‌ಗಳು ಕುಣಿಯಲು ಆರಂಭಿಸಿದಾಗ ಸಾಂಪ್ರದಾಯವಾದಿಗಳು ಅವರ ತುಂಡುಬಟ್ಟೆ ಬಗ್ಗೆ ಆಕ್ಷೇಪ ಎತ್ತಿದ್ದರು. ಚಿಯರ್‌ಲೀಡರ್‌ಗಳ ನೃತ್ಯ ಮತ್ತು ಉಡುಪು ಅಶ್ಲೀಲವಾಗಿದೆ ಎಂದು ಮಹಾರಾಷ್ಟ್ರ ಮತ್ತು ಬಂಗಾಳದ ಸಚಿವರು ದೂರಿದ್ದಲ್ಲದೆ ತಮ್ಮ ರಾಜ್ಯದಲ್ಲಿ ಚಿಯರ್‌ಲೀಡರ್‌ಗಳನ್ನು ನಿಷೇಧಿಸುವ ಮಾತನ್ನಾಡಿದ್ದರು. ಬಾರ್ ಗರ್ಲ್‌ಗಳಂತೆ ಅರೆಬೆತ್ತಲೆ ಕುಣಿಯುವ ಈ ಹುಡುಗಿಯರಿಗೆ ಕ್ರಿಕೆಟ್ ಸ್ಟೇಡಿಯಂನಲ್ಲೇನು ಕೆಲಸ ಎಂದು ತಗಾದೆ ತೆಗೆದಿದ್ದರು. ನಂತರ ಅಶ್ಲೀಲತೆ ಪ್ರದರ್ಶಿಸಬೇಡಿ ಎಂದಷ್ಟೇ ಎಚ್ಚರಿಸಲಾಗಿತ್ತು. ಇದರ ಬೆನ್ನಲ್ಲೇ ಚಿಯರ್‌ಗರ್ಲ್‌ಗಳನ್ನು ಫಿಕ್ಸಿಂಗ್‌ಗೆ ಆಟಗಾರರನ್ನು ಸೆಳೆಯಲು ಬಳಸಲಾಗುತ್ತಿದೆ ಎಂಬ ಆರೋಪಗಳೂ ಕೇಳಿಬಂದಿದ್ದವು.

    ಅಶ್ವಿನ್ ಮಂಕಡಿಂಗ್ ಪ್ರಕರಣ

    ಐಪಿಎಲ್‌ನಲ್ಲಿ ಗದ್ದಲ ಎಬ್ಬಿಸಿದ ವಿವಾದಗಳಿವು...
    ಕಳೆದ ವರ್ಷದ ಐಪಿಎಲ್ ವೇಳೆ ಮಂಕಡಿಂಗ್ ಪ್ರಕರಣದ ಸಾಕಷ್ಟು ವಿವಾದ ಸೃಷ್ಟಿಸಿತು. ರಾಜಸ್ಥಾನ ರಾಯಲ್ಸ್ ತಂಡದ ಬ್ಯಾಟ್ಸ್‌ಮನ್ ಜೋಸ್ ಬಟ್ಲರ್ ಅವರನ್ನು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಆಗಿನ ನಾಯಕ ಆರ್. ಅಶ್ವಿನ್ ನಾನ್-ಸ್ಟ್ರೈಕರ್ ಎಂಡ್‌ನಲ್ಲಿ ಬೌಲಿಂಗ್‌ಗಿಂತ ಮುನ್ನವೇ ಕ್ರೀಸ್ ಬಿಟ್ಟ ಕಾರಣಕ್ಕಾಗಿ ಮಂಕಡಿಂಗ್ ಮೂಲಕ ಔಟ್ ಮಾಡಿದರು. ಇದರಿಂದ ಅಶ್ವಿನ್ ವಿರುದ್ಧ ಭಾರಿ ಆಕ್ರೋಶವೇ ವ್ಯಕ್ತವಾಗಿತ್ತು ಮತ್ತು ಅವರ ಕ್ರೀಡಾಸ್ಫೂರ್ತಿಯನ್ನೂ ಪ್ರಶ್ನಿಸಲಾಯಿತು. ಕೊನೆಗೆ ಮಂಕಡಿಂಗ್ ಪರವಾಗಿ ಎಂಸಿಸಿ ಕೂಡ ತೀರ್ಪು ನೀಡಿದರೂ ಅಶ್ವಿನ್‌ರನ್ನು ಖಳನಾಯಕರನ್ನಾಗಿ ನೋಡುವುದು ನಿಲ್ಲಲಿಲ್ಲ. ಈ ಬಾರಿ ಅಶ್ವಿನ್ ಡೆಲ್ಲಿ ತಂಡಕ್ಕೆ ವರ್ಗಾವಣೆಗೊಂಡಿದ್ದು, ಮಂಕಡಿಂಗ್ ಸಮರ್ಥನೆಯನ್ನು ಅವರು ಮುಂದುವರಿಸಿದ್ದಾರೆ. ಇದರಿಂದಾಗಿ ಈ ಬಾರಿಯೂ ಟೂರ್ನಿಗೆ ಮುನ್ನವೇ ಮಂಕಡಿಂಗ್ ಬಗ್ಗೆ ಮತ್ತೆ ಪರ-ವಿರೋಧದ ಚರ್ಚೆಗಳು ಹುಟ್ಟುಕೊಂಡಿವೆ.

    ಮೈದಾನಕ್ಕೆ ನುಗ್ಗಿದ ಧೋನಿ

    ಐಪಿಎಲ್‌ನಲ್ಲಿ ಗದ್ದಲ ಎಬ್ಬಿಸಿದ ವಿವಾದಗಳಿವು...

    ಸಿಎಸ್‌ಕೆ ತಂಡದ ನಾಯಕ ಎಂಎಸ್ ಧೋನಿ ಕಳೆದ ವರ್ಷ ರಾಜಸ್ಥಾನ ವಿರುದ್ಧದ ಪಂದ್ಯದ ವೇಳೆ ಅಂಪೈರ್ ನೋಬಾಲ್ ತೀರ್ಪನ್ನು ಹಿಂಪಡೆದಾಗ ಮೈದಾನಕ್ಕೆ ನುಗ್ಗಿ ದೊಡ್ಡ ವಿವಾದ ಸೃಷ್ಟಿಸಿದ್ದರು. ಕೂಲ್ ಕ್ಯಾಪ್ಟನ್ ಖ್ಯಾತಿಯ ಧೋನಿ ಗರಂ ಆಗಿದ್ದು ಎಲ್ಲರಿಗೂ ಅಚ್ಚರಿ ಮೂಡಿಸಿತ್ತು. ಸಿಎಸ್‌ಕೆ ತಂಡಕ್ಕೆ 3 ಎಸೆತಗಳಲ್ಲಿ 8 ರನ್ ಬೇಕಾಗಿದ್ದಾಗ ಅಂಪೈರ್ ನೋಬಾಲ್ ತೀರ್ಪನ್ನು ಬದಲಾಯಿಸಿದ್ದರು. ಇದರಿಂದ ಧೋನಿ ಡಗ್‌ಔಟ್‌ನಿಂದ ಮೈದಾನಕ್ಕೆ ನುಗ್ಗಿ ಅಂಪೈರ್‌ಗಳ ಜತೆ ವಾಗ್ವಾದ ನಡೆಸಿದ್ದರು. ಇದಕ್ಕಾಗಿ ಧೋನಿಗೆ ಪಂದ್ಯ ಸಂಭಾವನೆಯ ಶೇ. 50ರಷ್ಟು ದಂಡ ವಿಧಿಸಲಾಗಿತ್ತು.

    ಈ ಬಾರಿ ಐಪಿಎಲ್‌ನಲ್ಲಿ ಹೊಸದೇನಿದೆ? ಏನೇನು ಬದಲಾಗಿದೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts