More

    ವಿಪತ್ತು ನಿರ್ವಹಣೆಗೆ ಕಂಟ್ರೋಲ್ ರೂಂ, ಕುಂದುಕೊರತೆ ನಿವಾರಿಸಲು ತಹಸೀಲ್ದಾರ್​ಗಳಿಗೆ ಡಿಸಿ ಸೂಚನೆ

    ಕೋಲಾರ: ನಿವಾರ್ ಚಂಡಮಾರುತದಿಂದಾಗಿ ಜಿಲ್ಲೆಯಾದ್ಯಂತ ಮುಂಬರುವ ಮೂರು ದಿನ ಬಿರುಗಾಳಿ ಸಹಿತ ಮಳೆಯಾಗುವುದಾಗಿ ಹವಮಾನ ಇಲಾಖೆ ಹಾಗೂ ರಾಜ್ಯ ವಿಪತ್ತು ನಿರ್ವಹಣಾ ಘಟಕ ಮಾಹಿತಿ ನೀಡಿದ್ದು, ಮುನ್ನೆಚ್ಚರಿಕೆ ವಹಿಸಲು ಕಂಟ್ರೋಲ್ ರೂಂ ಸ್ಥಾಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಸಿ. ಸತ್ಯಭಾಮ ತಿಳಿಸಿದ್ದಾರೆ.

    ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ತಹಸೀಲ್ದಾರ್​ಗಳು ಕಚೇರಿಗಳಲ್ಲಿ ಈ ಕೂಡಲೇ 24*7 ಕಂಟ್ರೋಲ್ ರೂಂಗಳನ್ನು ತೆರೆದು ದೂರವಾಣಿ ಸೇವೆಯ ಬಗ್ಗೆ ಸಾರ್ವಜನಿಕರಿಗೆ ಪ್ರಚುರಪಡಿಸಿ, ನೈಸರ್ಗಿಕ ವಿಕೋಪಗಳಿಗೆ ಸಂಬಂಧಿಸಿದ ಕುಂದುಕೊರತೆಗಳನ್ನು ತಕ್ಷಣ ನಿವಾರಿಸುವಂತೆ ಕ್ರಮ ಜರುಗಿಸಬೇಕು. ತಾಲೂಕು ಕಂಟ್ರೋಲ್ ರೂಂಗಳ ದೂರವಾಣಿ ಸಂಖ್ಯೆ ಮತ್ತು ಕಾರ್ಯನಿರ್ವಹಿಸುವ ನೌಕರರ ವಿವರಗಳು, ಮೊಬೈಲ್ ಸಂಖ್ಯೆ ವಿವರಗಳನ್ನು ಜಿಲ್ಲಾಧಿಕಾರಿ ಕಚೇರಿಗೆ ಕಳುಹಿಸಬೇಕು. ಕೇಂದ್ರಸ್ಥಾನದಲ್ಲಿ ಲಭ್ಯವಿದ್ದು ಸಾರ್ವಜನಿಕರಿಂದ ಸ್ವೀಕರಿಸಲಾಗುವ ಕುಂದು ಕೊರತೆಗಳು ಹಾಗೂ ಅಗತ್ಯ ನಿಯಂತ್ರಣಾ ಕ್ರಮಗಳನ್ನು ಕೈಗೂಳ್ಳಬೇಕು ಎಂದು ನಿರ್ದೇಶನ ನೀಡಿದ್ದಾರೆ.

    ಜಿಲ್ಲಾ ವ್ಯಾಪ್ತಿಯ ಆಯಾ ಗ್ರಾಮ ವೃತ್ತಗಳಿಗೆ ಸಂಬಂಧಿಸಿದ ಗ್ರಾಮಲೆಕ್ಕಾಧಿಕಾರಿಗಳು, ರಾಜಸ್ವ ನಿರೀಕ್ಷಕರು ಹಾಗೂ ಉಪ ತಹಸೀಲ್ದಾರರು ಕೇಂದ್ರ ಸ್ಥಾನದಲ್ಲಿ ಲಭ್ಯವಿದ್ದು ಸೂಕ್ತ ಕ್ರಮಗಳನ್ನು ಜರುಗಿಸಿ, ಹಾನಿಯ ಬಗ್ಗೆ ಪ್ರತಿದಿನ ವರದಿಯನ್ನು ತಹಸೀಲ್ದಾರ್ ಅವರಿಗೆ ನೀಡಬೇಕು. ತುರ್ತು ಸಂದರ್ಭಗಳಲ್ಲಿ ಇತರ ಇಲಾಖೆಗಳನ್ನು ಒಳಗೊಂಡಂತೆ ರಕ್ಷಣಾ ಕಾರ್ಯಗಳನ್ನು ಕೈಗೊಳ್ಳಬೇಕು. ಸಾರ್ವಜನಿಕರ ಆಸ್ತಿ ಹಾನಿ, ಮಾನವ ಅಥವಾ ಜಾನುವಾರು ಜೀವಹಾನಿ, ಬೆಳೆಹಾನಿ, ಮನೆಗಳ ಹಾನಿ ಬಗ್ಗೆ ಸಂಬಂಧಿಸಿದ ಗ್ರಾಮಲೆಕ್ಕಾಧಿಕಾರಿಗಳು, ರಾಜಸ್ವ ನಿರೀಕ್ಷಕರಿಂದ ವರದಿ ಪಡೆದು, ತಾಲೂಕುವಾರು ಕ್ರೋಡೀಕರಿಸಿ ನಿಗದಿತ ನಮೂನೆಯಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಪ್ರತಿದಿನ ಬೆಳಗ್ಗೆ 10 ಗಂಟೆಗೆ ಹಾಗೂ ಸಂಜೆ 4 ಗಂಟೆಗೆ ತಪ್ಪದೇ ಸಲ್ಲಿಸಬೇಕು ಎಂದು ಸೂಚನೆ ನೀಡಿದ್ದಾರೆ.

    ಜಿಲ್ಲೆಯಲ್ಲಿ ಹೆಚ್ಚಿನ ಹಾನಿ ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸಲು ಜಿಲ್ಲಾ ವಿಪತ್ತು ನಿರ್ವಹಣಾ ಕಂಟ್ರೋಲ್ ರೂಂ ಈಗಾಗಲೇ ದಿನದ 24*7 ಕಾರ್ಯನಿರ್ವಹಿಸುತ್ತಿದೆ. ಜಿಲ್ಲಾ ಕಂಟ್ರೋಲ್ ರೂಂ ಸಂಖ್ಯೆಗೆ (1077, 08152-243506) ವಿಪತ್ತಿನಲ್ಲಿರುವ ಸಾರ್ವಜನಿಕರು ಕರೆ ಮಾಡಿ ತಿಳಿಸಬಹುದಾಗಿದೆ. ಅಥವಾ ಕಂಟ್ರೋಲ್ ರೂಂ ಸಿಬ್ಬಂದಿ ಎನ್.ಗೋವಿಂದರಾಜು -9740050061, ವಿ.ಮಂಜುನಾಥ್ -9141577499 ಇವರನ್ನು ಸಂರ್ಪಸಬಹುದಾಗಿದೆ ಎಂದಿದ್ದಾರೆ. ಮಳೆಯಿಂದ ಸಾರ್ವಜನಿಕ ಆಸ್ತಿ ಹಾಗೂ ಮಾನವ, ಜಾನುವಾರುಗಳ ಜೀವ ಹಾನಿಯಾಗದಂತೆ ಮುನ್ನೆಚ್ಚರಿಕೆ ಕೈಗೊಂಡು ಪ್ರತಿದಿನ ಹಾನಿ ಬಗ್ಗೆ ವರದಿ ಸಲ್ಲಿಸಬೇಕೆಂದು ತಹಸೀಲ್ದಾರ್​ಗಳಿಗೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts