More

    ಆರ್ಥಿಕತೆಗೆ ಸಣ್ಣ ಕೈಗಾರಿಕೆಗಳ ಕೊಡುಗೆ ಅಪಾರ: ರಕ್ಷಣಾ ಸಚಿವ ರಾಜನಾಥ್ ಸಿಂಗ್

    ಬೆಂಗಳೂರು: ದೇಶದ ಪ್ರಗತಿಯಲ್ಲಿ ಸಣ್ಣ ಕೈಗಾರಿಕೆಗಳ ಪಾತ್ರ ಮಹತ್ವದ್ದಾಗಿದ್ದು, ದೇಶದ ಆರ್ಥಿಕತೆಯಲ್ಲಿ ಕ್ರಾಂತಿಯಾಗಲು ಸಣ್ಣ ಕೈಗಾರಿಕೆಗಳ ಕೊಡುಗೆ ಅಪಾರ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ತಿಳಿಸಿದರು.

    ನಗರದ ನೆಲಮಂಗಲ ರಸ್ತೆಯ ಬೆಂಗಳೂರು ಅಂತರಾಷ್ಟ್ರೀಯ ಪ್ರದರ್ಶನ ಕೇಂದ್ರದಲ್ಲಿ (ಬಿಐಇಸಿ) ಲಘು ಉದ್ಯೋಗ ಭಾರತಿ, ಐಖ ಫೌಂಡೇಶನ್ ಜಂಟಿಯಾಗಿ ಆಯೋಜಿಸಿದ್ದ ಮತ್ತು ರಕ್ಷಣಾ ಸಚಿವಾಲಯದ ರಕ್ಷಣಾ ಉತ್ಪಾದನಾ ಇಲಾಖೆಯಿಂದ ಬೆಂಬಲಿತ 3 ದಿನಗಳ ‘ಭಾರತ ಉತ್ಪಾದನಾ ಪ್ರದರ್ಶನ-2023’ ಉದ್ಘಾಟಿಸಿ ಗುರುವಾರ ಮಾತನಾಡಿದರು.

    ರಕ್ಷಣಾ ವಲಯದ ದೇಶಿಯ ಉತ್ಪಾದನೆಯನ್ನು ಉತ್ತೇಜಿಸಲು ಕೇಂದ್ರ ಸರ್ಕಾರ ಹಲವು ಉಪಕ್ರಮಗಳನ್ನು ಕೈಗೊಂಡು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಬೆಳವಣಿಗೆಯಾಗಿದೆ. ರಕ್ಷಣಾ ವಲಯದ ಬೇಡಿಕೆ ಬಹುಪಾಲನ್ನು ದೇಶಿಯ ಕಂಪನಿಗಳಿಗೆ ಆದ್ಯತೆ ನೀಡಬೇಕು. ರಕ್ಷಣಾ ವಲಯದ ಅಗತ್ಯ 4,666 ಉಪಕರಣ ಮತ್ತು ಸಲಕರಣೆಗಳನ್ನು ಆಮದು ಮಾಡಿಕೊಳ್ಳದೇ, ದೇಶದಲ್ಲೇ ಖರೀದಿಸಬೇಕು ಎಂಬ ನಿಬಂಧನೆಯನ್ನು ಹೇರಲಾಗಿದೆ ಎಂದರು.

    ದೇಶಿಯ ಕೈಗಾರಿಕೆಗಳು ಉಪಕರಣ ತಯಾರಿಸಲು ಆರ್ಥಿಕ ನೆರವು ನೀಡಲಾಗುತ್ತದೆ. ಜತೆಗೆ ಬಿಡಿ ಭಾಗಗಳು ಖರೀದಿಗೆ ಸಣ್ಣ ಮತ್ತು ಮಧ್ಯಮ ಗಾತ್ರದ ಕೈಗಾರಿಕೆಗಳ ಮೇಲೆ ಅವಲಂಬಿಸುವಂತೆ ಸೂಚಿಸಲಾಗಿದೆ ಎಂದು ರಕ್ಷಣಾ ಸಚಿವರು ತಿಳಿಸಿದರು.

    ನವೋದ್ಯಮ ಬೆಳವಣಿಗೆಗೆ ಸಹಕಾರಿ:

    ಸರ್ಕಾರದ ನೀತಿ ನಿರೂಪಣೆ ಮತ್ತು ನಿಯಮಗಳ ಸಡಿಲಿಕೆಯಿಂದ ಸಣ್ಣ ಕೈಗಾರಿಕೆಗಳಿಗೆ ಉತ್ತೇಜನ ದೊರೆತ್ತಿದ್ದು, ಇದರಿಂದ ದೇಶದಲ್ಲಿ ಪ್ರಸ್ತುತ 1 ಲಕ್ಷಕ್ಕೂ ಹೆಚ್ಚು ನವೋದ್ಯಮಗಳು ಮತ್ತು 100ಕ್ಕೂ ಹೆಚ್ಚು ಯೂನಿಕಾರ್ನ್‌ಗಳನ್ನು ಬೆಳಸುವಲ್ಲಿ ಸಹಕಾರಿಯಾಗಿದೆ. ಉದ್ಯಮಗಳು ಸಮಾಜದ ಏಳಿಗೆ, ಜವಾಬ್ದಾರಿ ವಹಿಸಿಕೊಳ್ಳಬೇಕೆಂದು ಸಲಹೆ ನೀಡಿದ ಸಚಿವರು, ಗ್ರಾಹಕರಿಗೆ ಉತ್ತಮ ಗುಣಮಟ್ಟದ ಅಲ್ಪ ಬೆಲೆಯ ಉತ್ಪನ್ನಗಳನ್ನು ಪೂರೈಸುವ ಕಡೆ ಗಮನ ಹರಿಸಬೇಕು ಎಂದು ಸಲಹೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts