More

    ಗುತ್ತಿಗೆ ಸಿಬ್ಬಂದಿ ಮುಷ್ಕರ-ಡಯಾಲಿಸಿಸ್‌ ಸೇವೆ ಬಂದ್‌

    ಕಾರವಾರ:ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳ ಡಯಾಲಿಸಿಸ್ ಸಿಬ್ಬಂದಿ ಕರ್ತವ್ಯದಿಂದ ಹೊರಗುಳಿದು, ಮುಷ್ಕರ ನಡೆಸುತ್ತಿದ್ದು, ಇದರಿಂದ ರೋಗಿಗಳು ಗಂಭೀರ ಪರಿಣಾಮ ಎದುರಿಸುವಂತಾಗಿದೆ. ಹಣವಂತರು ಖಾಸಗಿ ಆಸ್ಪತ್ರೆಯತ್ತ ಮುಖ ಮಾಡುತ್ತಿದ್ದು, ಬಡವರು ಯಾತನೆ ಅನುಭವಿಸುತ್ತಿದ್ದಾರೆ.
    ಸಂಜೀವಿನಿ ಹೊರ ಗುತ್ತಿಗೆ ಕಂಪನಿಯಿಂದ ರಾಜ್ಯಾದ್ಯಂತ ಡಯಾಲಿಸಿಸ್ ಯಂತ್ರಗಳ ನಿರ್ವಹಣೆ, ಸಿಬ್ಬಂದಿ ವೇತನ ಹಾಗೂ ಇತರ ಸಾಮಗ್ರಿಗಳ ಪೂರೈಕೆ ಕಾರ್ಯ ಮಾಡಲಾಗುತ್ತಿದೆ. ಆದರೆ, ಸಿಬ್ಬಂದಿಗೆ ಮಾಸಿಕವಾಗಿ ಸರಿಯಾಗಿ ವೇತನ ಪಾವತಿಯಾಗುತ್ತಿಲ್ಲ.

    ಪಿಎಫ್, ಇಎಸ್‌ಐ ತುಂಬಿಲ್ಲ. ಕಂಪನಿ ಡಯಾಲಿಸಿಸ್ ಸಾಮಗ್ರಿಗಳನ್ನು ಸಮರ್ಪಕವಾಗಿ ಪೂರೈಕೆ ಮಾಡುತ್ತಿಲ್ಲ. ಇದ್ದ ಸಿಬ್ಬಂದಿಯನ್ನು ತೆಗೆಯುವ ಬೆದರಿಕೆ ಹಾಕುತ್ತಿದೆ.

    ಅರ್ಧ ವೇತನ ನೀಡುತ್ತೇವೆ ಎನ್ನುತ್ತಿದೆ ಎಂಬುದು ಡಯಾಲಿಸಿಸ್ ಸಿಬ್ಬಂದಿಯ ದೂರು. ಇದರಿಂದ ರಾಜ್ಯಾದ್ಯಂತ ಆ.2 ರಿಂದ ಮುಷ್ಕರ ಆರಂಭಿಸಲಾಗಿದೆ. ಎರಡನೇ ದಿನವೂ ಜಿಲ್ಲೆಯ ಎಲ್ಲ ಕಡೆ ಡಯಾಲಿಸಿಸ್ ಸೇವೆ ದೊರಕಿಲ್ಲ.

    ಈ ಹಿಂದೆ ಬಿಆರ್‌ಎಸ್ ಎಂಬ ಕಂಪನಿ ಸರ್ಕಾರಿ ಆಸ್ಪತ್ರೆಗಳಲ್ಲಿ ಡಯಾಲಿಸಿಸ್ ವ್ಯವಸ್ಥೆಯನ್ನು ನಡೆಸುತ್ತಿತ್ತು. ನಾವೆಲ್ಲ ಅದೇ ಕಂಪನಿಯಡಿ ಉದ್ಯೋಗಕ್ಕೆ ಸೇರಿದವರು.

    ಆದರೆ, ಬಿಆರ್‌ಎಸ್ ಸಂಸ್ಥೆ ಬಂದ್ ಆಗಿದ್ದು, ಸಂಜೀವಿನಿ ಎಂಬ ಸಂಸ್ಥೆ ಗುತ್ತಿಗೆ ಪಡೆದಿದ್ದು, ಆಗಿನಿಂದ ಹಲವು ಸಮಸ್ಯೆ ಉದ್ಭವವಾಗುತ್ತಿದೆ.

    ಇದನ್ನೂ ಓದಿ:ವಿದ್ಯುತ್‌ ಗುತ್ತಿಗೆದಾರರ ಸಂಘದ ಜಿಲ್ಲಾಧ್ಯಕ್ಷರಾಗಿ ಪ್ರದೀಪ ಗುನಗಿ

    ಈ ಕಂಪನಿ ನಮಗೆ ಹಿಂದಿಗಿಂತ ಕಡಿಮೆ ವೇತನ ನೀಡುತ್ತಿದೆ' ಎಂದು ಡಯಾಲಿಸಿಸ್ ಸಿಬ್ಬಂದಿ ತಮ್ಮ ಗೋಳು ತೋಡಿಕೊಳ್ಳುತ್ತಾರೆ. ಉತ್ತರ ಕನ್ನಡ ಜಿಲ್ಲೆಯ 11 ಸರ್ಕಾರಿ ಆಸ್ಪತ್ರೆಗಳಲ್ಲಿ ಒಟ್ಟು 32 ಡಯಾಲಿಸಿಸ್ ಯಂತ್ರಗಳಿವೆ.

    ಟೆಕ್ನೀಶಿಯನ್, ಸ್ಟಾಪ್ ನರ್ಸ್ ಹಾಗೂ ಸಹಾಯಕ ಸಿಬ್ಬಂದಿ ಸೇರಿ 49 ಜನ ಈ ವ್ಯವಸ್ಥೆಯಡಿ ಕಾರ್ಯನಿರ್ವಹಿಸುತ್ತಿದ್ದಾರೆ. ವಿವಿಧ ಆಸ್ಪತ್ರೆಗಳಲ್ಲಿ ಮೂತ್ರಪಿಂಡ ಸಮಸ್ಯೆ ಇರುವ 228 ನೋಂದಾಯಿಸಿಕೊಂಡು ನಿರಂತರವಾಗಿ ಡಯಾಲಿಸಿಸ್ ಸೌಲಭ್ಯ ಪಡೆದುಕೊಳ್ಳುತ್ತಿದ್ದಾರೆ.

    ಕೆಲವೆಡೆ ಮಾನವೀಯತೆಯ ದೃಷ್ಟಿಯಿಂದ ಸಂಸ್ಥೆಯ ಸಿಬ್ಬಂದಿ ಡಯಾಲಿಸಿಸ್ ಮಾಡುತ್ತಿದ್ದು, ಇನ್ನು ಕೆಲವು ಕಡೆಗಳಲ್ಲಿ ಸಂಪೂರ್ಣ ಸ್ಥಗಿತ ಮಾಡಲಾಗಿದೆ.
    ದುಬಾರಿ ವೆಚ್ಚ:
    ಕಿಡ್ನಿ ವೈಫಲ್ಯ ಉಂಟಾದವರಿಗೆ ಡಯಾಲಿಸಿಸ್ ಮಾಡಬೇಕಾಗುತ್ತದೆ. ಅವರ ರೋಗದ ತೀವ್ರತೆಗೆ ಅನುಗುಣವಾಗಿ ವಾರದಲ್ಲಿ 2 ರಿಂದ 3 ಬಾರಿ ಈ ಡಯಾಲಿಸಿಸ್ ಕಾರ್ಯ ಮಾಡಲಾಗುತ್ತದೆ.

    ಖಾಸಗಿಯಲ್ಲಾದರೆ ಪ್ರತಿ ಡಯಾಲಿಸಿಸ್‌ಗೆ 2 ರಿಂದ 3 ಸಾವಿರ ರೂ. ಶುಲ್ಕ ಪಡೆಯಲಾಗುತ್ತದೆ. ಬಡ, ಮಧ್ಯಮ ವರ್ಗದವರಿಗೆ ಸರ್ಕಾರಿ ಆಸ್ಪತ್ರೆಗಳ ಡಯಾಲಿಸಿಸ್ ಯಂತ್ರಗಳಿಂದ ಅನುಕೂಲವಾಗಿತ್ತು.

    ಆದರೆ. ಆಗಸ್ಟ್ 2 ರಿಂದ ಮುಷ್ಕರ ನಡೆಸಿದ್ದರಿಂದ ಈ ರೋಗಿಗಳು ಖಾಸಗಿಯಲ್ಲಿ ದುಬಾರಿ ವೆಚ್ಚ ಭರಿಸುವಂತಾಗಿದೆ.


    ನಾನು ಕೆಲ ದಿನಗಳಿಂದ ಅಂಕೋಲಾ ಸರ್ಕಾರಿ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಮಾಡಿಸಿಕೊಳ್ಳುತ್ತಿದ್ದೆ. ಈಗ ಖಾಸಗಿ ಆಸ್ಪತ್ರೆಗೆ ತೆರಳಿ ಹಣ ಖರ್ಚು ಮಾಡಬೇಕಿದೆ. ಈ ಸಮಸ್ಯೆಯನ್ನು ಶೀಘ್ರ ಬಗೆಹರಿಸಬೇಕು.
    ಗಣೇಶ ಶೆಟ್ಟಿ , ಕುಂಟಗಣಿ
    ಡಯಾಲಿಸಿಸ್ ಮಾಡಿಸಿಕೊಳ್ಳುತ್ತಿದ್ದ ರೋಗಿ

    ಜಿಲ್ಲೆಯ 11 ರಲ್ಲಿ 6 ಕೇಂದ್ರಗಳಲ್ಲಿ ಡಯಾಲಿಸಿಸ್ ಸೇವೆ ಸ್ಥಗಿತವಾಗಿದೆ. ಉಳಿದೆಡೆ ಬುಧವಾರ ಡಯಾಲಿಸಿಸ್ ನಡೆದಿದೆ. ಖಾಸಗಿ ಹೊರ ಗುತ್ತಿಗೆ ಕಂಪನಿಯಿಂದ ಡಯಾಲಿಸಿಸ್ ಸೇವೆ ಸರ್ಕಾರಿ ಆಸ್ಪತ್ರೆಗಳಲ್ಲಿ ನಡೆಯುತ್ತಿದೆ. ಇಡೀ ರಾಜ್ಯದಲ್ಲಿ ಸಿಬ್ಬಂದಿ ಮುಷ್ಕರ ನಡೆಸುತ್ತಿದ್ದು, ಸರ್ಕಾರ ಮಾತುಕತೆ ನಡೆಸುತ್ತಿದೆ. ಶೀಘ್ರದಲ್ಲಿ ಸಮಸ್ಯೆ ಬಗೆಹರಿದು, ನಾಳೆ, ನಾಡಿದ್ದರಲ್ಲಿ ಸಿಬ್ಬಂದಿ ಕರ್ತವ್ಯಕ್ಕೆ ಮರಳುವ ಸಾಧ್ಯತೆ ಇದೆ.
    ಡಾ.ನೀರಜ್
    ಡಿಎಚ್‌ಒ, ಕಾರವಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts