More

    ನಿರಂತರ ಮಳೆಗೆ ಹಾಳಾದ ರಸ್ತೆಗಳು

    ಬೆಳಗಾವಿ: ಜಿಲ್ಲೆಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆ ಮತ್ತು ನಿಯಮ ಮೀರಿ ಹೆಚ್ಚು ತೂಕದ ಕಲ್ಲು, ಮರಳು, ಸಿಮೆಂಟ್ ಲಾರಿಗಳ ಸಂಚಾರದಿಂದ ಗ್ರಾಮೀಣ ಭಾಗದ ರಸ್ತೆಗಳು ಹಾಳಾಗಿವೆ. ಅತಿವೃಷ್ಟಿ ಹಾಗೂ ನೆರೆ ಹಾವಳಿ ಮುಗಿದು ವರ್ಷ ಕಳೆದರೂ ಕೆಲ ರಸ್ತೆಗಳು ದುರಸ್ತಿಯಾಗದಿರುವುದು ಸದ್ಯ ಗ್ರಾಮೀಣ ಭಾಗದ ಜನರ ಆಕ್ರೋಶಕ್ಕೆ ಕಾರಣವಾಗಿದೆ.

    ಬೆಳಗಾವಿ ಮತ್ತು ಚಿಕ್ಕೋಡಿ ವಿಭಾಗದ ವ್ಯಾಪ್ತಿಯಲ್ಲಿ ರಾಜ್ಯ, ಜಿಲ್ಲಾ, ತಾಲೂಕು ಹಾಗೂ ಗ್ರಾಮೀಣ ರಸ್ತೆಗಳು ಹಾಗೂ ಪಂಚಾಯತ್ ರಾಜ್ ಇಲಾಖೆಗೆ ಸೇರಿ ಸುಮಾರು 8549 ಕಿ.ಮೀ. ವ್ಯಾಪ್ತಿಯ ರಸ್ತೆಗಳಿವೆ. ಅದರಲ್ಲಿ ಅತಿಯಾದ ಮಳೆ, ಹೆಚ್ಚು ತೂಕ ಹೊತ್ತು ಸಂಚರಿಸುವ ಲಾರಿಗಳ ಸಂಚಾರ ಕಾರಣಗಳಿಂದ 3,240 ಕಿ.ಮೀ. ರಸ್ತೆಗಳು ಹಾಳಾಗಿವೆ.

    2019-20ನೇ ಸಾಲಿನಲ್ಲಿ ಸಂಭವಿಸಿದ ನದಿಗಳ ಪ್ರವಾಹ ಮತ್ತು ಧಾರಾಕಾರ ಮಳೆಯಿಂದ ಚಿಕ್ಕೋಡಿ ಮತ್ತು ಬೆಳಗಾವಿ ವಿಭಾಗದ ವ್ಯಾಪ್ತಿಯಲ್ಲಿ ಸುಮಾರು 2,898.06 ಕಿ.ಮೀ. ರಸ್ತೆಗಳು ಹಾಳಾಗಿವೆ. ಲೋಕೋಪಯೋಗಿ ಮತ್ತು ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗವು ಸುಮಾರು 50 ಕೋಟಿ ರೂ. ವೆಚ್ಚದಲ್ಲಿ ಹಾಳಾದ ರಸ್ತೆಗಳ ದುರಸ್ತಿ ಕಾಮಗಾರಿ ಪೂರ್ಣಗೊಳಿಸಿದೆ. ಕೋವಿಡ್-19, ಧಾರಾಕಾರ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ದುರಸ್ತಿ ಕಾಮಗಾರಿ ಪೂರ್ಣ ಪ್ರಮಾಣದಲ್ಲಿ ಕೈಗೊಂಡಿಲ್ಲ. ಕಲ್ಲು, ಮಣ್ಣು ಹಾಕಿ ಗುಂಡಿ ಮುಚ್ಚುತ್ತಿದ್ದಾರೆ.

    ಕೆಲವೆಡೆ ಡಾಂಬರೀಕರಣ ಮಾಡಲಾಗಿದೆ. ಆದರೆ, ಗುಣಮಟ್ಟದ ದುರಸ್ತಿ ಮಾಡದಿರುವ ಹಿನ್ನೆಲೆಯಲ್ಲಿ ಗುಂಡಿಗಳು ಮತ್ತೆ ಮತ್ತೆ ಸೃಷ್ಟಿಯಾಗುತ್ತಿವೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಗ್ರಾಮೀಣ ಸಡಕ್ ಯೋಜನೆ, ಸುವರ್ಣ ಗ್ರಾಮ ಸೇರಿದಂತೆ ರಾಜ್ಯ ಮತ್ತು ಕೇಂದ್ರ ಸರ್ಕಾರದ ಸಾಕಷ್ಟು ಯೋಜನೆಗಳು ಜಾರಿಯಲ್ಲಿದ್ದರೂ ರಸ್ತೆಗಳ ಸ್ಥಿತಿ ಮಾತ್ರ ಸುಧಾರಿಸಿಲ್ಲ. ಇತರ ರಸ್ತೆಗಳಲ್ಲಿ ಸಂಚರಿಸುವ ಚಾಲಕರು, ಪ್ರಯಾಣಿಕರು ಪರದಾಡಬೇಕಿದೆ. ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬೆಳಗಾವಿ ಮತ್ತು ಚಿಕ್ಕೋಡಿ ವಿಭಾಗಗಳು ತಮ್ಮ ವ್ಯಾಪ್ತಿಯಲ್ಲಿ ಬಸ್ ಸಂಚಾರಕ್ಕೆ ಯೋಗ್ಯವಲ್ಲದ 1345ಕ್ಕೂ ಅಧಿಕ ಕಿ.ಮೀ. ಕೆಟ್ಟ ರಸ್ತೆಗಳಿವೆ ಎಂದು ಸಾರಿಗೆ ವಿಭಾಗದ ಅಧಿಕಾರಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

    ನಿರ್ವಹಣೆ ಇಲ್ಲದೆ ಸಂಪೂರ್ಣ ರಸ್ತೆ ಹಾಳು: ರಸ್ತೆಗಳ ದುರಸ್ತಿಗೆ ಸರ್ಕಾರ ಇಲಾಖೆ ಮೂಲಕ ಪ್ರತಿ ವರ್ಷ ಕೋಟ್ಯಂತರ ರೂ. ವೆಚ್ಚ ಮಾಡಲಾಗುತ್ತಿದೆ. ಆದರೆ, ಸಮರ್ಪಕವಾಗಿ ನಿರ್ವಹಣೆ ಮಾಡದ ಹಿನ್ನೆಲೆಯಲ್ಲಿ ರಸ್ತೆಗಳು ಹಾಳಾಗುತ್ತಿದೆ. ರಸ್ತೆಯ ಎರಡು ಬದಿಯಲ್ಲಿ ಬೆಳೆದಿರುವ ಜಾಲಿ ಮರಗಳನ್ನು ತೆರವುಗೊಳಿಸಿಲ್ಲ. ಗುಂಡಿಗಳನ್ನು ಸಣ್ಣ ಪ್ರಮಾಣದಲ್ಲಿರುವಾಗಲೇ ಮುಚ್ಚುವುದಿಲ್ಲ ಎಂದು ಲಾರಿ ಚಾಲಕರಾದ ಬಸವರಾಜ್ ಎಸ್.ಹರಿಜನ, ನದಾಫ್ ಎಸ್. ಮುಲ್ಲಾ ದೂರಿದ್ದಾರೆ.

    ಜಿಲ್ಲೆಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಸಾಕಷ್ಟು ಪ್ರಮಾಣದಲ್ಲಿ ಹಾನಿಯಾಗಿದೆ. ಚಿಕ್ಕೋಡಿ ಮತ್ತು ಬೆಳಗಾವಿ ವಿಭಾಗದಲ್ಲಿ ಹಾನಿಯಾಗಿರುವ ರಸ್ತೆಗಳ ದುರಸ್ತಿಗೆ ಲೋಕೋಪಯೋಗಿ ಇಲಾಖೆಗೆ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗುವುದು.
    | ಎಂ.ಜಿ.ಹಿರೇಮಠ ಜಿಲ್ಲಾಧಿಕಾರಿ

    | ಮಂಜುನಾಥ ಕೋಳಿಗುಡ್ಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts