More

    ನಿರಂತರ ಮಳೆ…ಮೊಳಕೆಯೊಡೆಯುತ್ತಿದೆ ಹತ್ತಿ ಬೆಳೆ..

    ಕರಿಯಪ್ಪ ಅರಳಿಕಟ್ಟಿ ರಾಣೆಬೆನ್ನೂರ
    15 ದಿನದಿಂದ ನಿರಂತರವಾಗಿ ಸುರಿದ ಮಳೆಯಿಂದಾಗಿ ತಾಲೂಕಿನಾದ್ಯಂತ ಹತ್ತಿ ಬೆಳೆದ ರೈತರು ಸಂಕಷ್ಟ ಎದುರಿಸುವಂತಾಗಿದೆ. ಅತಿಯಾದ ಮಳೆಯಿಂದ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ.
    ತಾಲೂಕಿನಲ್ಲಿ ಈ ಬಾರಿ ಒಟ್ಟು 540 ಹೆಕ್ಟೇರ್ ಪ್ರದೇಶದಲ್ಲಿ ಹತ್ತಿ ಬಿತ್ತನೆ ಮಾಡಿದ್ದರು. ತುಂಗಭದ್ರಾ ನದಿಪಾತ್ರದ ಚೌಡಯ್ಯದಾನಪುರ, ಚಂದಾಪುರ, ಚಿಕ್ಕಕುರುವತ್ತಿ, ಹೊನ್ನತ್ತಿ ಸೇರಿ ಇತರ ಗ್ರಾಮಗಳ ರೈತರು ಕಳೆದ ಫೆಬ್ರವರಿಯಲ್ಲಿ ನೀರಾವರಿ ಮಾಡಿಕೊಂಡು ನೂರಾರು ಎಕರೆ ಪ್ರದೇಶದಲ್ಲಿ ಹತ್ತಿ ಬೆಳೆದ್ದರು. ಬೆಳೆ ಈಗ ಕಾಯಿ ಕಟ್ಟಿದ್ದು, ಹತ್ತಿ ಸಹ ಬಿಡುವ ಹಂತಕ್ಕೆ ಬಂದಿದೆ. ಇನ್ನೇನು ಹತ್ತಿ ಬಿಡಿಸಿಕೊಂಡು ಮಾರುಕಟ್ಟೆಗೆ ಸಾಗಾಟ ಮಾಡಲು ರೈತರು ಸಿದ್ಧತೆ ಮಾಡಿಕೊಂಡಿದ್ದರು. ಆದರೆ, ಇತ್ತೀಚೆಗೆ ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ಸಂಪೂರ್ಣ ಹತ್ತಿ ಬೆಳೆ ಕೊಳೆಯುವಂತೆ ಮಾಡಿದೆ. ಬೆಳೆಯನ್ನು ಮಾರುಕಟ್ಟೆಗೆ ಸಾಗಿಸಬೇಕು ಎಂದುಕೊಂಡಿದ್ದ ರೈತರ ಆಸೆಗೆ ಮಳೆ ತಣ್ಣೀರೆರೆಚಿದೆ.
    ಸಂಕಷ್ಟದಲ್ಲಿ ರೈತರು…
    ಹತ್ತಿ ಬೆಳೆಗೆ ಸರಿಯಾಗಿ ಬಿಸಿಲು ಕಾಣದೆ ಹೂವು, ಮೋಪು ಉದರುತ್ತಿವೆ. ತೇವಾಂಶ ಹೆಚ್ಚಾದ ಕಾರಣ ಗಿಡಗಳು ಕೆಂಪು ರೋಗಕ್ಕೆ ತುತ್ತಾಗಿವೆ. ಇದರಿಂದ ಸಾಲಸೋಲ ಮಾಡಿಕೊಂಡು ಹತ್ತಿ ಬೆಳೆದ ರೈತರು ಸಂಕಷ್ಟ ಎದುರಿಸಬೇಕಾಗಿದೆ. ಬಿಳಿ ಬಂಗಾರಕ್ಕೆ ಬಂಗಾರದಂತಹ ಬೆಲೆ ಸಿಗುತ್ತಿರುವ ಸಂದರ್ಭದಲ್ಲಿ ಮಳೆಯಿಂದಾಗಿ ಹತ್ತಿ ಬೆಳೆದ ರೈತರು ದಿಕ್ಕುತೋಚದಂತಾಗಿ ತಲೆ ಮೇಲೆ ಕೈ ಹೊತ್ತು ಕುಳಿತುಕೊಳ್ಳುವಂತಾಗಿದೆ.
    ದಾಖಲೆಯ ಬೆಲೆ
    ಈ ಬಾರಿ ಹತ್ತಿ ಬೆಳೆಗೆ ದಾಖಲೆ ಪ್ರಮಾಣದಲ್ಲಿ ಬೇಡಿಕೆ ಜತೆಗೆ ದಿನದಿಂದ ದಿನಕ್ಕೆ ಬೆಲೆಯೂ ಏರಿಕೆಯಾಗುತ್ತಿದೆ. ಈ ಹಿಂದೆ ಎಂದೂ ಸಿಗದಂತ ಬೆಲೆ ಸದ್ಯದ ಮಾರುಕಟ್ಟೆಯಲ್ಲಿ ಸಿಗುತ್ತಿದೆ. ಡಿಸಿಎಚ್ ಹತ್ತಿ ಪ್ರತಿ ಕ್ವಿಂಟಾಲ್‌ಗೆ 11,300 ರೂಪಾಯಿಯಿಂದ 12,400 ರೂಪಾಯಿ ವರೆಗೂ ಇದೆ.
    ಬ್ರಹ್ಮ, ಬಿಟಿ ಹತ್ತಿ ಸೇರಿ ಇತರ ತಳಿಯ ಹತ್ತಿಗೂ ಪ್ರತಿ ಕ್ವಿಂಟಾಲ್‌ಗೆ 7 ಸಾವಿರ ರೂಪಾಯಿಯಿಂದ 8.5 ಸಾವಿರ ರೂಪಾಯಿ ವರೆಗೂ ಬೆಲೆಯಿದೆ. ಇದರಿಂದ ಹತ್ತಿ ಬೆಳೆದ ರೈತರು ಉತ್ತಮ ಆದಾಯ ಹೊಂದವ ಆಲೋಚನೆಯಲ್ಲಿದ್ದರು. ಆದರೆ, ಮಳೆರಾಯ ರೈತರ ಆಸೆಗೆ ತಣ್ಣೀರು ಎರಚಿದ್ದಾನೆ. ಮಳೆ ಇದೇ ರೀತಿ ಮುಂದುವರಿದರೆ ಮುಂದಿನ ದಿನದಲ್ಲಿ ಅಳಿದುಳಿದ ಹತ್ತಿ ಕೂಡ ಮಣ್ಣು ಪಾಲಾಗಲಿದೆ ಎಂದು ರೈತರಲು ಅಳಲು ತೋಡಿಕೊಂಡಿದ್ದಾರೆ.

    ಸದ್ಯ ಮಾರುಕಟ್ಟೆಯಲ್ಲಿ ಹತ್ತಿಗೆ ಉತ್ತಮ ಬೆಲೆಯಿದೆ. ಆದರೆ, ಹತ್ತಿ ಬೆಳೆ ಬರುವ ಸಮಯದಲ್ಲಿಯೇ ಹೆಚ್ಚಾಗಿ ಮಳೆ ಸುರಿದ ಕಾರಣ ಸಂಪೂರ್ಣ ಬೆಳೆ ನೀರು ಪಾಲಾಗಿದೆ. ಈ ಸಮಯದಲ್ಲಿ ಕಳೆದ ವರ್ಷ 1 ಸಾವಿರ ಕ್ವಿಂಟಾಲ್‌ನಷ್ಟು ಹತ್ತಿ ಮಾರುಕಟ್ಟೆಗೆ ಬರುತ್ತಿತ್ತು. ಆದರೆ, ಈ ಬಾರಿ ಕೇವಲ 300 ಕ್ವಿಂಟಾಲ್‌ನಷ್ಟು ಹತ್ತಿ ಬರುತ್ತಿದೆ.
    ಪರಮೇಶ ನಾಯಕ, ಎಪಿಎಂಸಿ ಸಹಾಯಕ ಕಾರ್ಯದರ್ಶಿ

    ಮೆಕ್ಕೆಜೋಳ ಬೆಳೆದರೆ ಲದ್ದಿಹುಳುವಿನ ಕಾಟ ಹೆಚ್ಚಾಗಲಿದೆ ಎಂದುಕೊಂಡು ಹತ್ತಿ ಬೆಳೆದಿದ್ದೇವೆ. ಬೆಳೆಯೂ ಉತ್ತಮವಾಗಿಯೇ ಬಂದಿದೆ. ಆದರೆ, ಹತ್ತಿ ಬಿಡಿಸಲು ಆರಂಭಿಸಬೇಕು ಎನ್ನುವಷ್ಟರಲ್ಲಿ ನಿರಂತರವಾಗಿ ಸುರಿದ ಮಳೆಗೆ ಸಂಪೂರ್ಣ ಹಾಳಾಗಿದೆ. ಸಾಲ ಮಾಡಿಕೊಂಡು ಹತ್ತಿ ಬೆಳೆದಿದ್ದೇವೆ. ಇದೀಗ ಸಾಲ ತುಂಬುವ ಚಿಂತೆ ಕಾಡತೊಡಗಿದೆ. ಆದ್ದರಿಂದ ಮಳೆಯಿಂದ ಹಾಳಾದ ಹತ್ತಿ ಬೆಳೆಗೆ ಸರ್ಕಾರ ಸೂಕ್ತ ಪರಿಹಾರ ನೀಡಬೇಕು.
    ಕೊಟ್ರಯ್ಯ ಪೂಜಾರ, ಹತ್ತಿ ಬೆಳೆಗಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts