More

    ಮುಂದುವರಿದ ದಾಳಿ, ಸ್ಥಳಾಂತರಕ್ಕೆ ಹಿನ್ನಡೆ; ಪುತಿನ್, ಝೆಲೆನ್​ಸ್ಕಿ ಜತೆಗೆ ಮೋದಿ ಚರ್ಚೆ

    ನವದೆಹಲಿ/ಕಿಯೆವ್/ಮಾಸ್ಕೊ: ಯೂಕ್ರೇನ್​ನಿಂದ ನಾಗರಿಕರನ್ನು ಸ್ಥಳಾಂತರಿಸುವುದಕ್ಕಾಗಿ ಕೆಲವು ನಗರಗಳಲ್ಲಿ ಕದನವಿರಾಮ ಘೋಷಣೆ ಮಾಡಿದ್ದರೂ, ಶೆಲ್ಲಿಂಗ್ ಮತ್ತು ಕ್ಷಿಪಣಿ ದಾಳಿ ಮುಂದುವರಿದ ಕಾರಣ ನಾಗರಿಕರ ಸ್ಥಳಾಂತರ ಕಾರ್ಯಕ್ಕೆ ಹಿನ್ನಡೆ ಆಗಿದೆ. ಹೆಸರಿಗಷ್ಟೆ ಕದನ ವಿರಾಮ ಘೋಷಣೆ ಆದ ಕಾರಣ ಇನ್ನೂ 3600ಕ್ಕೂ ಹೆಚ್ಚು ಭಾರತೀಯರನ್ನು ವಾಪಸ್ ಕರೆತರುವುದು ವಿಳಂಬವಾಗಿದೆ. ಯೂಕ್ರೇನ್​ನಲ್ಲಿದ್ದ 20,000ಕ್ಕೂ ಭಾರತೀಯರ ಪೈಕಿ ಈವರೆಗೆ 16,000ದಷ್ಟು ಭಾರತೀಯರನ್ನು ಭಾರತಕ್ಕೆ ಸ್ಥಳಾಂತರಿಸಲಾಗಿದೆ. ಇನ್ನೂ 3000 ಭಾರತೀಯರು ಯೂಕ್ರೇನ್ ನೆರೆ ರಾಷ್ಟ್ರಗಳಲ್ಲಿದ್ದು ಅವರನ್ನು ಕರೆತರಬೇಕಷ್ಟೆ. ಯೂಕ್ರೇನ್ ಸಮರ ಪೀಡಿತ ಸುಮಿ ಪಟ್ಟಣದಲ್ಲಿ ಇನ್ನೂ 600 ಭಾರತೀಯರಿದ್ದಾರೆ. ಇವರ ಪೈಕಿ ಬಹುತೇಕರು ವಿದ್ಯಾರ್ಥಿಗಳಾಗಿದ್ದು, ಅವರನ್ನು ಅಲ್ಲಿಂದ ಕರೆತರುವ ಪ್ರಯತ್ನ ಜಾರಿಯಲ್ಲಿದೆ ಎಂದು ವಿದೇಶಾಂಗ ಖಾತೆಯ ರಾಜ್ಯ ಸಚಿವ ವಿ.ಮುರಳೀಧರನ್ ತಿಳಿಸಿದ್ದಾರೆ.

    ಗಾಯಾಳು ಹರ್​ಜ್ಯೋತ್ ಭಾರತಕ್ಕೆ: ಕಿಯೆವ್​ನಿಂದ ಲೆವಿವ್​ಗೆ ಆಗಮಿಸಿದ ಭಾರತದ ವಿದ್ಯಾರ್ಥಿ ಹರ್​ಜ್ಯೋತ್ ಸಿಂಗ್​ಗೆ ಗುಂಡೇಟು ತಗುಲಿತ್ತು. ಕಿಯೆವ್​ನಲ್ಲಿ ಶಸ್ತ್ರ ಚಿಕಿತ್ಸೆ ನಡೆಸಿ 5 ಬುಲೆಟ್​ಗಳನ್ನು ಹರ್​ಜ್ಯೋತ್ ಶರೀರದಿಂದ ಹೊರತೆಗೆಯಲಾಗಿತ್ತು. ಲೆವಿವ್​ನಿಂದ ಬುಡೋಮೀರ್ಜ್ ದಾಟಿ ಪೋಲೆಂಡ್ ತಲುಪಿದ್ದರು. ಬಳಿಕ ಝೆಝೋವ್ ವಿಮಾನ ನಿಲ್ದಾಣದಿಂದ ಭಾರತೀಯ ವಾಯುಪಡೆಯ ವಿಮಾನದಲ್ಲಿ ಸೋಮವಾರ ಸಂಜೆ ದೆಹಲಿಗೆ ಕರೆತರಲಾಗಿದೆ. ಅವರ ಆರೋಗ್ಯ ಸ್ಥಿರವಾಗಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

    ಸ್ಥಳಾಂತರಕ್ಕೆ ನೆರವಾಗಿ: ಯೂಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್​ಸ್ಕಿಗೆ ದೂರವಾಣಿ ಕರೆ ಮಾಡಿದ ಭಾರತದ ಪ್ರಧಾನಿ ನರೇಂದ್ರ ಮೋದಿ, 35 ನಿಮಿಷ ಮಾತುಕತೆ ನಡೆಸಿದರು. ಯೂಕ್ರೇನ್ ಸ್ಥಿತಿಗತಿಯ ಬಗ್ಗೆ ಉಭಯ ನಾಯಕರು ರ್ಚಚಿಸಿದರು. ರಷ್ಯಾ ಮತ್ತು ಯೂಕ್ರೇನ್ ಸಮರದ ಮಧ್ಯೆಯೂ ಮಾತುಕತೆಯನ್ನು ಜಾರಿಯಲ್ಲಿಟ್ಟ ಬಗ್ಗೆ ಝೆಲೆನ್​ಸ್ಕಿ ಅವರನ್ನು ಪ್ರಶಂಸಿದ ಪ್ರಧಾನಿ ಮೋದಿ, ಸುಮಿಯಲ್ಲಿ ಸಿಲುಕಿಕೊಂಡಿರುವ 600ಕ್ಕೂ ಹೆಚ್ಚು ಭಾರತೀಯರ ಸ್ಥಳಾಂತರಕ್ಕೆ ನೆರವಾಗುವಂತೆ ಕೋರಿದರು. ಯುದ್ಧ ಆರಂಭವಾದ ನಂತರದಲ್ಲಿ ಇದು ಎರಡನೇ ಬಾರಿಗೆ ಪ್ರಧಾನಿ ಮೋದಿ ಅವರು ಝೆಲೆನ್​ಸ್ಕಿ ಅವರ ಜತೆಗೆ ಮಾತನಾಡಿರುವಂಥದ್ದು.

    ನೇರ ಮಾತುಕತೆ ನಡೆಸಲು ಆಗ್ರಹ: ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಅವರಿಗೆ ಕರೆ ಮಾಡಿ 50 ನಿಮಿಷ ಮಾತುಕತೆ ನಡೆಸಿದರು. ಇದೇ ವೇಳೆ, ಶುಮಿ ಪ್ರದೇಶದಿಂದ 600ಕ್ಕೂ ಹೆಚ್ಚು ಭಾರತೀಯರ ಸುರಕ್ಷಿತ ಸ್ಥಳಾಂತರಕ್ಕೆ ನೆರವು ನೀಡುವಂತೆ ಮನವಿ ಮಾಡಿದರು. ಅದೇ ರೀತಿ, ಪುತಿನ್ ಅವರಿಂದ ಸಮರ ಸನ್ನಿವೇಶದ ಮಾಹಿತಿಯನ್ನು ಪಚಡೆದುಕೊಂಡರು. ಶಾಂತಿ ಮಾತುಕತೆ ಜಾರಿಯಲ್ಲಿಟ್ಟ ಬಗ್ಗೆ ಪುತಿನ್ ಅವರನ್ನು ಪ್ರಶಂಸಿಸಿದರು. ಚಾಲ್ತಿಯಲ್ಲಿರುವ ರಾಜತಾಂತ್ರಿಕ ಮಾತುಕತೆಯ ಹೊರತಾಗಿ, ಝೆಲೆನ್​ಸ್ಕಿ ಜತೆಗೆ ನೇರ ಮಾತುಕತೆ ನಡೆಸುವಂತೆ ಪ್ರಧಾನಿ ಮೋದಿ ಪುತಿನ್ ಅವರನ್ನು ಆಗ್ರಹಿಸಿದರು ಎಂದು ಮೂಲಗಳು ತಿಳಿಸಿವೆ.

    ಭಾರತದ ಪ್ರಧಾನಿಗೆ ಮಾಹಿತಿ ನೀಡಿದೆ…: ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ವಸ್ತುಸ್ಥಿತಿಯನ್ನು ವಿವರಿಸಿದ್ದೇನೆ. ಶಾಂತಿ ಸ್ಥಾಪನೆಗಾಗಿ ಮಾತುಕತೆ ನಡೆಸುವ ಯೂಕ್ರೇನ್ ಬದ್ಧತೆಯ ಬಗ್ಗೆ ಪ್ರಧಾನಿ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದರು. ರಷ್ಯಾದ ಆಕ್ರಮಣಕಾರಿ ಪ್ರವೃತ್ತಿಯ ವಿವರವನ್ನೂ ಅವರಿಗೆ ನೀಡಿದ್ದೇನೆ. ಭಾರತೀಯರ ಸುರಕ್ಷಿತ ವಾಪಸಾತಿಗೆ ಯೂಕ್ರೇನ್ ನೀಡುತ್ತಿರುವ ಸಹಕಾರಕ್ಕೆ ಕೃತಜ್ಞತೆಯನ್ನು ಅವರು ಸಲ್ಲಿಸಿದ್ದಾರೆ. ಯೂಕ್ರೇನ್ ಜನರಿಗೆ ನೀಡುತ್ತಿರುವ ಬೆಂಬಲಕ್ಕೆ ಕೃತಜ್ಞರಾಗಿದ್ದೇವೆ ಎಂದು ಯೂಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝುಲೆನ್​ಸ್ಕಿ ಟ್ವೀಟ್ ಮಾಡಿದ್ದಾರೆ.

    ಕಾರಿಡಾರ್ ಪ್ರಸ್ತಾವನೆ ತಿರಸ್ಕರಿಸಿದ ಯೂಕ್ರೇನ್: ಮಾನವೀಯ ನೆಲೆಯಲ್ಲಿ ಯೂಕ್ರೇನ್​ನಲ್ಲಿರುವ ನಾಗರಿಕರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವುದಕ್ಕೆ ಬೆಲರೂಸ್ ಮತ್ತು ರಷ್ಯಾಕ್ಕೆ ‘ಸ್ಥಳಾಂತರ ಕಾರಿಡಾರ್’ ತೆರೆಯುವ ರಷ್ಯಾದ ಪ್ರಸ್ತಾವನೆಯನ್ನು ಯೂಕ್ರೇನ್ ಸರ್ಕಾರ ತಿರಸ್ಕರಿಸಿರುವುದಾಗಿ ಡೆಪ್ಯೂಟಿ ಪ್ರೖೆಮಿನಿಸ್ಟರ್ ಇರಿನಾ ವೆರೆಶ್​ಚುಕ್ ತಿಳಿಸಿದ್ದಾರೆ. ರಷ್ಯಾ ಸರ್ಕಾರ ಈಗಾಗಲೆ ನಾಗರಿಕರ ಸ್ಥಳಾಂತರಕ್ಕಾಗಿ 8 ಕಾರಿಡಾರ್​ಗಳನ್ನು ಪ್ರಸ್ತಾಪಿಸಿದೆ. ಇದರಲ್ಲಿ ಮರಿಯುಪೋಲ್​ನ ಬಂದರು ಮಾರ್ಗ ಕೂಡ ಒಳಗೊಂಡಿದೆ. ಈ ಕಾರಿಡಾರ್​ಗಳಲ್ಲಿ ರಷ್ಯಾ ದಾಳಿ ನಡೆಯುತ್ತಿಲ್ಲ ಎಂದು ವೆರೆಶ್​ಚುಕ್ ವಿವರಿಸಿದರು. ಫ್ರಾನ್ಸ್, ಚೀನಾ, ಟರ್ಕಿ ಮತ್ತು ಭಾರತದ ವಿಶ್ವಾಸವನ್ನು ಪರಿಸ್ಥಿತಿಯ ಲಾಭ ಪಡೆಯುವುದಕ್ಕಾಗಿ ರಷ್ಯಾ ಸರ್ಕಾರ ಬಳಸಿಕೊಳ್ಳುತ್ತಿದೆ. ಇಂತಹ ಪ್ರಯತ್ನ ಸಲ್ಲದು ಎಂದು ವೆರೆಶ್​ಚುಕ್ ಎಚ್ಚರಿಸಿದರು.

    ದೆಹಲಿಗೆ 160 ವಿದ್ಯಾರ್ಥಿಗಳು: ಯೂಕ್ರೇನ್​ನಲ್ಲಿದ್ದ ಭಾರತದ 160 ವಿದ್ಯಾರ್ಥಿ ಗಳು ಸೋಮವಾರ ಬೆಳಗ್ಗೆ 4-4.30ರ ವೇಳೆಗೆ ದೆಹಲಿ ವಿಮಾನ ನಿಲ್ದಾಣ ತಲುಪಿದ್ದಾರೆ. ಹಂಗೇರಿಯ ಬುಡಾಪೆಸ್ಟ್​ನಿಂದ ಏರ್ ಏಷ್ಯಾ ವಿಮಾನದಲ್ಲಿ ಅವರು ಆಗಮಿಸಿದ್ದರು.

    ನಮ್ಮದು ಗಟ್ಟಿ ಸ್ನೇಹ: ರಷ್ಯಾ ತಮ್ಮ ದೇಶದ ಪ್ರಮುಖ ವ್ಯೂಹಾತ್ಮಕ ಪಾಲುದಾರ ರಾಷ್ಟ್ರ. ಅಂತಾರಾಷ್ಟ್ರೀಯ ಲೆಕ್ಕಾಚಾರ ಏನೇ ಇದ್ದರೂ ಚೀನಾ-ರಷ್ಯಾ ಪಾಲುದಾರಿಕೆಗೆ ಅಡ್ಡಿ ಆಗಲ್ಲ. ಹೊಸ ಯುಗವನ್ನು ಆರಂಭಿಸಲು ನಾವು ಮುಂದಾಗಿದ್ದೇವೆ ಎಂದು ಚೀನಾ ವಿದೇಶಾಂಗ ಸಚಿವ ವಾಂಗ್ ಯೀ ಸೋಮವಾರ ಹೇಳಿದ್ದಾರೆ.

    ಚಿರತೆಗಳನ್ನು ಬಿಟ್ಟು ಬರಲಾರೆ!: ಯೂಕ್ರೇನ್ ಸಮರಾಂಗಣವಾಗಿದ್ದು, ಬಹುತೇಕರು ಅಲ್ಲಿಂದ ಪಲಾಯನಗೈ ಯುತ್ತಿದ್ದರೆ ಭಾರತ ಮೂಲದ ಡಾಕ್ಟರ್ ಒಬ್ಬರು ತಾವು ಸಾಕಿದ ಚಿರತೆಗಳನ್ನು ಬಿಟ್ಟು ಬರುವುದಿಲ್ಲ ಎಂದು ಜಗತ್ತಿನ ಗಮನಸೆಳೆದಿದ್ದಾರೆ. ಆಂಧ್ರಪ್ರದೇಶದ ಪಶ್ಚಿಮ ಗೋದಾವರಿಯ ತನುಕು ಮೂಲದ ಡಾ.ಗಿರಿಕುಮಾರ್ ಪಾಟೀಲ್ ಈ ರೀತಿ ಮಾಡಿದವರು. ಅವರು ಎರಡು ಚಿರತೆಗಳನ್ನು ಮತ್ತು ಮೂರು ನಾಯಿ ಗಳನ್ನು ಸಾಕಿದ್ದಾರೆ. ಅವುಗಳನ್ನು ಕೊನೆಯ ಉಸಿರಿನ ತನಕ ಕಾಪಾಡುವೆ. ಇಲ್ಲಿಂದ ನಾನು ಹೊರಟರೆ ಅವುಗಳಿಗೆ ಆಹಾರ ಕೊಡುವವರು ಯಾರೂ ಇಲ್ಲ ಎಂದು ಪಾಟೀಲ್ ಹೇಳಿದ್ದಾಗಿ ವರದಿಯಾಗಿದೆ.

    ಮುಂದುವರಿದ ದಾಳಿ, ಸ್ಥಳಾಂತರಕ್ಕೆ ಹಿನ್ನಡೆ; ಪುತಿನ್, ಝೆಲೆನ್​ಸ್ಕಿ ಜತೆಗೆ ಮೋದಿ ಚರ್ಚೆ
    ನವದೆಹಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಭಾರತೀಯ ವಿದ್ಯಾರ್ಥಿಗಳು.

    ನಾಲ್ಕು ಪಟ್ಟಣಗಳಲ್ಲಿ ಕದನ ವಿರಾಮ: ಯೂಕ್ರೇನ್​ನ ನಾಗರಿಕರ ಸ್ಥಳಾಂತರಕ್ಕೆ ಅನುಕೂಲ ವಾಗುವಂತೆ ರಷ್ಯಾ ಸೋಮವಾರ ಕಿಯೆವ್, ಮರಿಯೊಪೋಲ್, ರ್ಖಾವ್, ಸುಮಿ ಎಂಬ ನಾಲ್ಕು ಪಟ್ಟಣಗಳಲ್ಲಿ ಕದನ ವಿರಾಮ ಘೋಷಿಸಿದೆ. ಫ್ರಾನ್ಸ್ ಅಧ್ಯಕ್ಷ ಇಮ್ಯಾನುವೆಲ್ ಮ್ಯಾಕ್ರನ್ ಭಾನುವಾರ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಅವರಿಗೆ ಕರೆ ಮಾಡಿ ಈ ಕುರಿತು ಮನವಿ ಮಾಡಿದ್ದರು. ಮರಿಯೊಪೋಲ್​ನಲ್ಲಿ 2 ಲಕ್ಷ ಜನರು ಸಿಲುಕಿದ್ದು, ಯುದ್ಧಭೂಮಿಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾರೆ.

    ಪ್ರಮುಖ ವಿದ್ಯಮಾನ

    • ಯೂಕ್ರೇನ್ ಮೇಲೆ ರಷ್ಯಾ ದಾಳಿ 12ನೇ ದಿನ ಪೂರೈಸಿದೆ. ಅಮೆರಿಕ ಮತ್ತು ನ್ಯಾಟೋ ಪಡೆ ಇದುವರೆಗೆ ಯೂಕ್ರೇನ್​ಗೆ 17000 ಟ್ಯಾಂಕ್ ನಿರೋಧಕ ಯುದ್ಧೋಪಕರಣಗಳನ್ನು ಪೂರೈಸಿದೆ.
    • ಅಕಸ್ಮಾತ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್​ಸ್ಕಿ ಅವರನ್ನು ರಷ್ಯಾ ಸೇನೆ ಹತ್ಯೆ ಮಾಡಿದರೆ, ಆಡಳಿತ ಚಾಲ್ತಿಯಲ್ಲಿಡುವುದಕ್ಕೆ ಅಗತ್ಯವಾದ ಪ್ಲ್ಯಾನ್ ಬಿ ಯನ್ನು ಯೂಕ್ರೇನ್ ಸರ್ಕಾರ ಸಿದ್ಧವಾಗಿ ಇಟ್ಟುಕೊಂಡಿದೆ ಎಂದು ಅಮೆರಿಕದ ಸೆಕ್ರೆಟರಿ ಆಫ್ ಸ್ಟೇಟ್ ಆಂಟನಿ ಬ್ಲಿನ್​ಕೆನ್ ಹೇಳಿದ್ದಾರೆ.
    • ಕಿಯೆವ್ ಕಡೆಗೆ ರಷ್ಯಾದ ಸಶಸ್ತ್ರ ಪಡೆ ವಾಹನಗಳು ಸಾಗುತ್ತಿರುವ 40 ಮೈಲಿ ಉದ್ದದ ದೃಶ್ಯವನ್ನು ಮ್ಯಾಕ್ಸರ್ ಉಪಗ್ರಹ ಚಿತ್ರ ಬಹಿರಂಗಪಡಿಸಿದೆ. ಈ ವಾಹನಗಳು ಬೆಲರೂಸ್ ಗಡಿಯಿಂದ ಕಿಯೆವ್ ಕಡೆಗೆ ಸಂಚರಿಸುವುದು ದೃಢಪಟ್ಟಿದೆ.

    ಸಮರಾಂಗಣವೇ ಮದುವೆ ಮನೆ!: ಯೂಕ್ರೇನ್ ಸಮರದಲ್ಲಿ ಸಾವಿರಾರು ಜನ ಹತರಾಗಿದ್ದಾರೆ. ಅನೇಕರು ನಿರಾಶ್ರಿತರಾಗಿದ್ದಾರೆ. ಇವೆಲ್ಲದರ ನಡುವೆ, ಯೂಕ್ರೇನ್​ನ ಟೆರಿಟೋರಿಯಲ್ ಆರ್ವಿುಯ ಲೆಸ್ಯಾ ಮತ್ತು ವಲೆರಿಯಿ ಜೋಡಿ ಕಿಯೆವ್ ಸಮೀಪ ದಾಂಪತ್ಯ ಜೀವನ ಪ್ರವೇಶಿಸಿದೆ. ಈ ವಿರಳ ಮದುವೆಯ ವಿಡಿಯೋ ವೈರಲ್ ಆಗಿದೆ.

    ಸಾವಿರ ಕಿಲೋ ಮೀಟರ್ ಒಂಟಿಯಾಗಿ ಪ್ರಯಾಣಿಸಿದ 11 ವರ್ಷದ ಬಾಲಕ: ಯೂಕ್ರೇನ್​ನ ಝುಪೋರಿಝå್ಝಿಯಾದಿಂದ ಒಂಟಿಯಾಗಿ ಹೊರಟ 11 ವರ್ಷದ ಬಾಲಕ ಸಾವಿರ ಕಿಮೀ ಕ್ರಮಿಸಿ ಸ್ಲೊವಾಕಿಯಾದ ತನ್ನ ಸಂಬಂಧಿಕರ ಮನೆಗೆ ಸುರಕ್ಷಿತವಾಗಿ ತಲುಪಿದ್ದಾನೆ. ಇದನ್ನು ಸ್ಲೊವಾಕಿಯಾ ಸರ್ಕಾರ ಟ್ವೀಟ್ ಮೂಲಕ ಖಚಿತ ಪಡಿಸಿದೆ. ಬಾಲಕ ಬಳಿ ತಾಯಿ ಕಳುಹಿಸಿದ ಟಿಪ್ಪಣಿ, ಕೈಯಲ್ಲಿ ಬರೆದ ಫೋನ್​ನಂಬರ್ ಮತ್ತು ಅಗತ್ಯ ಆಹಾರ ವಸ್ತು, ಪಾಸ್​ಪೋರ್ಟ್ ಅನಾರೋಗ್ಯ ಪೀಡಿತ ಸಂಬಂಧಿಯ ಆರೈಕೆಗಾಗಿ ತಾವು ಇಲ್ಲೇ ಇರಬೇಕಾಗಿದೆ ಎಂದು ಬಾಲಕನ ಪಾಲಕರು ತಿಳಿಸಿದ್ದರು.

    ತಲೆಗೆ ಗನ್ ಇಟ್ಟಿದ್ದ ರಷ್ಯಾ ಯೋಧರು

    ಬಳ್ಳಾರಿ: ಯೂಕ್ರೇನ್​ನಲ್ಲಿ ಸಿಲುಕಿದ್ದ ಗಣಿನಾಡಿನ ವಿದ್ಯಾರ್ಥಿಗಳ ತಲೆಗೆ ರಷ್ಯಾ ಯೋಧರು ಗನ್ ಇಟ್ಟಿದ್ದ ವಿಚಾರ ಬೆಳಕಿಗೆ ಬಂದಿದೆ. ಕೊನೆಗೆ ತಾವು ಭಾರತೀಯ ವಿದ್ಯಾರ್ಥಿಗಳು ಎಂದು ಹೇಳಿಕೊಂಡು ಪಾಸ್​ಪೋರ್ಟ್ ತೋರಿಸಿದ ಬಳಿಕ ಯೋಧರು ವಿದ್ಯಾರ್ಥಿಗಳನ್ನು ಬಿಟ್ಟು ಕಳುಹಿಸಿದ್ದಾರೆ. ಯೂಕ್ರೇನ್​ನಿಂದ ವಾಪಸಾದ ವಿದ್ಯಾರ್ಥಿಗಳ ಮನೆಗೆ ಭೇಟಿ ನೀಡಿದ್ದ ಸಚಿವ ಬಿ.ಶ್ರೀರಾಮುಲು ಎದುರು ವಿದ್ಯಾರ್ಥಿನಿ ಸಭಾ ಕೌಸರ್ ಭಾನುವಾರ ಈ ವಿಷಯ ಬಿಚ್ಚಿಟ್ಟಿದ್ದಾರೆ. ನಾವು ಬಂಕರ್ ನಿಂದ ರೈಲ್ವೆ ಸ್ಟೇಷನ್​ಗೆ ಹೋದಾಗ ನಮ್ಮ ತಲೆಗೆ ಗನ್ ಇಟ್ಟಿದ್ದ ರಷ್ಯಾ ಸೈನಿಕರು, ಎಲ್ಲಿಯವರು ಎಂದು ವಿಚಾರಿಸಿದರು. ಇಂಡಿಯನ್ಸ್ ಅಂತಾ ಪಾಸ್​ಪೋರ್ಟ್ ತೋರಿಸಿದ್ದಕ್ಕೆ ನಮ್ಮನ್ನು ಬಿಟ್ಟರು ಎಂದು ವಿದ್ಯಾರ್ಥಿನಿ ಹೇಳಿದ್ದಾರೆ.

    ಭಾರತ ಧ್ವಜ ನಮ್ಮನ್ನು ರಕ್ಷಿಸಿತು

    ಹುಬ್ಬಳ್ಳಿ: ಯೂಕ್ರೇನ್ ಗಡಿಯಿಂದ ಹಂಗೇರಿ ಗಡಿ ಭಾಗದಲ್ಲಿ ಭಾರತ ಧ್ವಜ ಹಿಡಿದು ಸುಮಾರು 8 ಕಿಮೀ ನಡೆದುಕೊಂಡು ಹೋದೆವು. ಭಾರತ ಧ್ವಜ ಮತ್ತು ಭಾರತ ಸರ್ಕಾರ ನಮ್ಮನ್ನು ರಕ್ಷಿಸಿತು. ತ್ರಿವರ್ಣ ಧ್ವಜ ಹಿಡಿದು ಹೊರಟವರಿಗೆ ಯಾರೂ ತೊಂದರೆ ಕೊಡಲಿಲ್ಲ ಎಂದು ಹುಬ್ಬಳ್ಳಿ ಬೆಂಗೇರಿಯ ನಾಜಿಲ್ಲಾ ಗಾಜಿಪುರ ಹೆಮ್ಮೆ ವ್ಯಕ್ತಪಡಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts