More

    ಯುಪಿಎಸ್​ಸಿ ಪರೀಕ್ಷೆಯಲ್ಲಿ ಪ್ರಾದೇಶಿಕ ಭಾಷೆಗಳಿಗೆ ಕಂಟಕ

    ಬೆಂಗಳೂರು: ದೇಶದ ಶೇ.90 ಜನರಿಗೆ ಓದಲು-ಬರೆಯಲು ಬಾರದ ಭಾಷೆಯೊಂದರಲ್ಲಿ ಪರೀಕ್ಷೆ ಬರೆದವರೇ ಐಎಎಸ್, ಐಪಿಎಸ್​ನಂತಹ ಅಖಿಲ ಭಾರತೀಯ ಸೇವೆಗಳಿಗೆ ಆಯ್ಕೆಯಾಗುತ್ತಿದ್ದು, ಕನ್ನಡ ಸೇರಿ ಎಲ್ಲ ಭಾರತೀಯ ಭಾಷೆಗಳೂ ಬಹುತೇಕ ಶೂನ್ಯದತ್ತ ಸಾಗಿವೆ.

    ಹಿಂದಿ, ಕನ್ನಡ ಸೇರಿ ಭಾರತೀಯ ಭಾಷೆಗಳಲ್ಲಿ ಪರೀಕ್ಷೆ ಬರೆಯಲು, ಸಂದರ್ಶನ ಎದುರಿಸಲು ಅವಕಾಶವಿದೆ ಎಂಬುದು ಮೇಲ್ನೋಟಕ್ಕೆ ಸರಿಯಾದರೂ ಇಂಗ್ಲಿಷ್ ಆಯ್ಕೆ ಮಾಡಿಕೊಂಡರೆ ಮಾತ್ರ ಸಫಲತೆ ಪ್ರಮಾಣ ಎಂಬುದನ್ನು ಪದೇಪದೆ ಯುಪಿಎಸ್​ಸಿ ನಿರೂಪಿಸುತ್ತಿದೆ. ಕನ್ನಡದಲ್ಲಿ ಆಯ್ಕೆ ಆಗುತ್ತಿರುವ ಅಭ್ಯರ್ಥಿಗಳ ಸಂಖ್ಯೆಯಂತೂ ಅಪರೂಪ.

    ಇಂಗ್ಲಿಷ್ ಹೊರತಾದ ಭಾಷೆ ಬಳಸುವ ದೇಶದ ಆಡಳಿತ ನಡೆಸಲು ಮೇಲ್ಪದರದ ಹಾಗೂ ಇಂಗ್ಲಿಷ್ ಭಾಷೆ ಗೊತ್ತಿರುವವರು ಮಾತ್ರ ಆಯ್ಕೆ ಆಗುತ್ತಿದ್ದಾರೆ. ಹಿಂದಿಗೆ ಕೇಂದ್ರ ಸರ್ಕಾರದಿಂದ ಸಿಗುವ ಪ್ರೋತ್ಸಾಹದಿಂದಾಗಿ ಕೆಲ ಫಲಿತಾಂಶ ಕಂಡುಬರುತ್ತಿದೆಯಾದರೂ ಕನ್ನಡ ಸೇರಿ ಇನ್ನಿತರೆ ಭಾರತೀಯ ಭಾಷೆಗಳು ಹೆಸರಿಲ್ಲದಂತಾಗುತ್ತಿವೆ

    ಕನ್ನಡ ಲೆಕ್ಕಕ್ಕಿಲ್ಲ: ಯುಪಿಎಸ್​ಸಿ ಪರೀಕ್ಷೆಯಲ್ಲಿ ಭಾಷಾ ಮಾಧ್ಯಮವಾರು ಆಯ್ಕೆಯಾದ ಅಭ್ಯರ್ಥಿಗಳ ಪಟ್ಟಿ ನೋಡಿದರೆ, 1990ರಲ್ಲಿ ಇಂಗ್ಲಿಷ್ ಮಾಧ್ಯಮದ ಶೇ.45, ಹಿಂದಿ ಶೇ.25 ಹಾಗೂ ಇನ್ನಿರೆ ಭಾರತೀಯ ಭಾಷೆಗಳ ಶೇ.30 ಜನರು ಆಯ್ಕೆಯಾಗಿದ್ದರು. 2008ರಲ್ಲಿ ಈ ಸಂಖ್ಯೆ ಕ್ರಮವಾಗಿ ಶೇ.50, ಶೇ.45, ಶೇ.5ಕ್ಕೆ ಇಳಿಯಿತು. 2011-14ರ ಅವಧಿಯಲ್ಲಂತೂ ಶೇ.82 ಅಭ್ಯರ್ಥಿಗಳು ಇಂಗ್ಲಿಷ್ ಮಾಧ್ಯಮದಿಂದ ಆಯ್ಕೆಯಾದರೆ ಹಿಂದಿಯಲ್ಲಿ ಆಯ್ಕೆಯಾಗಿದ್ದು ಶೇ.16. ಇನ್ನಿತರ ಭಾಷೆ ಅಭ್ಯರ್ಥಿಗಳ ಸಂಖ್ಯೆ ಕೇವಲ ಶೇ.2. ಈ 2ರ ಪೈಕಿ ತೆಲುಗು ಶೇ.0.2, ತಮಿಳು ಶೇ.0.1, ಕನ್ನಡ ಮಾಧ್ಯಮದಲ್ಲಿ ಆಯ್ಕೆಯಾಗಿದ್ದು ಶೇ.0.04. ಹಿಂದಿ ಬಿಟ್ಟು ಭಾರತೀಯ ಭಾಷೆಗಳ ಸ್ಥಿತಿ ಚಿಂತಾಜನಕವಾಗಿದೆ.

    ಕೇವಲ 6 ಕನ್ನಡಿಗರು: ಆಪ್ಟಿಟ್ಯೂಡ್ ಪರೀಕ್ಷೆ ನೆಪದಲ್ಲಿ 2001ರಿಂದ 2014ರವರೆಗೆ 200 ಅಂಕಗಳಿಗೆ ಪರೀಕ್ಷೆಯನ್ನು ಯುಪಿಎಸ್​ಸಿ ನಡೆಸಿತು. ಹೆಸರಿಗೆ ಆಪ್ಟಿಟ್ಯೂಡ್ ಎಂದಿದ್ದರೂ ಅಸಲಿಗೆ ಅಭ್ಯರ್ಥಿಗಳ ಇಂಗ್ಲಿಷ್ ಹಾಗೂ ಗಣಿತ ಜ್ಞಾನ ಪರೀಕ್ಷೆ ಮಾಡುವ ರೀತಿ ರೂಪಿಸಲಾಗಿತ್ತು. ಗ್ರಾಮೀಣ ಹಾಗೂ ಭಾರತೀಯ ಭಾಷೆಗಳ ಅಭ್ಯರ್ಥಿಗಳಿಗೆ ಆಗುತ್ತಿದ್ದ ಅನ್ಯಾಯವನ್ನು ದೇಶಾದ್ಯಂತ ಪ್ರತಿಭಟಿಸಿದ ಬಳಿಕ 2014ರಲ್ಲಿ ರದ್ದು ಪಡಿಸಲು ನಿರ್ಧರಿಸಲಾಯಿತು. 2015ರಿಂದ ಶೇ.33 ಅಂಕಕ್ಕೆ ಅರ್ಹತಾ ಪರೀಕ್ಷೆಯನ್ನಾಗಿ ಬದಲಾಯಿಸಲಾಯಿತು. ಆಪ್ಟಿಟ್ಯೂಡ್ ಪರೀಕ್ಷೆ ನಡೆದ 2011-14ರ ಅವಧಿಯಲ್ಲಿ ಕನ್ನಡ ಮಾಧ್ಯಮ ಆಯ್ಕೆ ಮಾಡಿಕೊಂಡಿದ್ದ ಒಬ್ಬ ಅಭ್ಯರ್ಥಿಯೂ ತೇರ್ಗಡೆ ಹೊಂದಲಿಲ್ಲ. 2015ರಲ್ಲಿ ಪದ್ಧತಿ ಸರಿಪಡಿಸಿದ ನಂತರ ಇಲ್ಲಿವರೆಗೆ ಕರ್ನಾಟಕದಿಂದ ಆಯ್ಕೆ ಯಾದ 59 ಅಭ್ಯರ್ಥಿಗಳಲ್ಲಿ ಕನ್ನಡ ಮಾಧ್ಯಮ ಆಯ್ಕೆ ಮಾಡಿಕೊಂಡಿದ್ದವರು 6 ಮಂದಿ.

    ತಾಂತ್ರಿಕ ಶಿಕ್ಷಣಕ್ಕೆ ಆದ್ಯತೆ : ಯುಪಿಎಸ್​ಸಿ ಪರೀಕ್ಷೆಗೆ ಪ್ರಶ್ನೆಪತ್ರಿಕೆ ಸಿದ್ಧಪಡಿಸುವಿಕೆ ಹಾಗೂ ಸಂದರ್ಶನದ ಸ್ವರೂಪವೇ ಇಂಗ್ಲಿಷ್ ಜತೆಗೆ ತಾಂತ್ರಿಕ ಶಿಕ್ಷಣಕ್ಕೆ ಮಾತ್ರ ಉತ್ತೇಜನ ನೀಡುವಂತಿದೆ. ಮಾನವೀಯ ಶಾಸ್ತ್ರಗಳಾದ ಕಲೆ, ವಾಣಿಜ್ಯ, ಕಾನೂನು, ಸಾಹಿತ್ಯ ಸೇರಿ ಇನ್ನಿತರ ಕ್ಷೇತ್ರದ ಅಭ್ಯರ್ಥಿಗಳಿಗೆ ಯುಪಿಎಸ್​ಸಿ ತೇರ್ಗಡೆಯಾಗುವುದೇ ಕಷ್ಟ ಎನ್ನುವಂತಾಗಿದೆ. 80ರ ದಶಕದಲ್ಲಿ ಐಯಟಿ, ಐಐಎಂ, ಇಂಜಿನಿಯರಿಂಗ್, ಎಂಬಿಬಿಎಸ್ ಹಾಗೂ ವಿಜ್ಞಾನ ಕ್ಷೇತ್ರದ ಶಿಕ್ಷಿತರು ಶೇ.25 ಹಾಗೂ ಮಾನವೀಯ ಶಾಸ್ತ್ರಗಳ ಶೇ.75 ಅಭ್ಯರ್ಥಿಗಳು ಆಯ್ಕೆಯಾಗಿದ್ದರು. 2011-14ರ ಅವಧಿಯಲ್ಲಿ ಈ ಪ್ರಮಾಣ ಶೇ.75 ಹಾಗೂ ಶೇ.25ಕ್ಕೆ ವ್ಯತ್ಯಾಸವಾಗಿದೆ. ಇದರಲ್ಲೂ ಸರ್ಕಾರಿ ಉದ್ಯೋಗಸ್ಥರ ಹಾಗೂ ಉದ್ಯಮಿಗಳ ಮಕ್ಕಳೇ ಪ್ರಾಶಸ್ಱ ಪಡೆದಿದ್ದಾರೆ. 2011-14ರ ಅವಧಿಯಲ್ಲಿ ಆಯ್ಕೆಯಾದ ಶೇ.55 ಅಭ್ಯರ್ಥಿಗಳು ಸರ್ಕಾರಿ ಅಧಿಕಾರಿಗಳ ಮಕ್ಕಳು. ಶೇ.35 ಅಭ್ಯರ್ಥಿಗಳ ಪಾಲಕರು ಉದ್ಯಮಿಗಳು.ಕೃಷಿ ಸೇರಿ ಇನ್ನಿತರ ಕ್ಷೇತ್ರದವರ ಮಕ್ಕಳು ತೇರ್ಗಡೆ ಹೊಂದಿದ್ದು ಶೇ.10. ಇಂಗ್ಲಿಷ್ ಭಾಷೆಗೇ ಪ್ರಾಮುಖ್ಯತೆ ನೀಡುತ್ತಿರುವ ಪರಿಣಾಮ ಗ್ರಾಮೀಣ ಹಾಗೂ ನಗರ ಪ್ರದೇಶದಲ್ಲೂ ಈ ವ್ಯತ್ಯಾಸ ಕಾಣುತ್ತಿದೆ.1980ರಿಂದ ಇಂದಿನವರೆಗೆ ಯುಪಿಎಸ್​ಸಿ ಪರೀಕ್ಷೆ ಪಾಸ್ ಮಾಡಿದವರ ಪೈಕಿ ಶೇ.70 ನಗರ ಪ್ರದೇಶದವರು, ಶೇ.30 ಗ್ರಾಮೀಣರು.

    ಬ್ರಿಟಿಷರು ದೇಶ ಬಿಟ್ಟು ಹೋದ ನಂತರ ಭಾಷಾಧಾರಿತ ರಾಜ್ಯಗಳು ರಚನೆಯಾದರೂ ಕೇಂದ್ರ ಸರ್ಕಾರ ಮಾತ್ರ ಇಂಗ್ಲಿಷ್ ಭಾಷೆಯನ್ನೇ ಆಡಳಿತದಲ್ಲಿ ಮುಂದುವರಿಸುತ್ತಿದೆ ಹಾಗೂ ಭಾರತೀಯರ ಮೇಲೆ ಹೇರಿಕೆ ಮಾಡುತ್ತಿದೆ. ಈ ವ್ಯವಸ್ಥೆ ಬದಲಾವಣೆಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಸಾಹಿತ್ಯ ಪರಿಷತ್ತು, ಸರ್ಕಾರಗಳಿಗೆ ಪತ್ರ ಬರೆಯಲಾಗಿದೆ.

    | ಮನು ಕುಮಾರ್ ರಾಜೇ ಅರಸ್, ಯುಪಿಎಸ್​ಸಿ ಸುಧಾರಣೆ ಕಾರ್ಯಕರ್ತ

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts